ಬೆಂಗಳೂರು,ಮೇ 29- ಹಂತಕರಿಗೆ ಅದೇನ್ ದ್ವೇಷವಿತ್ತೋ ಗೊತ್ತಿಲ್ಲ… ವಿಕಲಚೇತನನೆಂದೂ ನೋಡದೆ ಬಾಡಿಗೆಗೆ ಮನೆ ಪಡೆಯುವ ನೆಪದಲ್ಲಿ ಬಂದು ಕತ್ತು ಕೊಯ್ದು ಭೀಕರವಾಗಿ ಕೊಂದಿದ್ದಾರೆ. ಈ ಘಟನೆ ನಡೆದಿರುವುದು ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಯ್ಯ ಲೇಔಟ್ನಲ್ಲಿ.
ಬಾಡಿಗೆಗೆ ಮನೆ ನೋಡುವ ನೆಪದಲ್ಲಿ ಬಂದ ಮೂವರು ದುಷ್ಕರ್ಮಿಗಳು ಮನೆ ಮಾಲೀಕರಾದ ವಿಕಲಚೇತನ ರಾಜು(40) ಎಂಬುವರನ್ನು ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ರಾಮಯ್ಯ ಲೇಔಟ್ನಲ್ಲಿ ರಾಜು ಅವರಿಗೆ ಸೇರಿದ 4 ಅಂತಸ್ತಿನ ಕಟ್ಟಡವಿದ್ದು, ಒಂದು ಮನೆಯಲ್ಲಿ ಇವರು ವಾಸವಿದ್ದರೆ ಉಳಿದ ಮನೆಗಳನ್ನು ಬಾಡಿಗೆಗೆ ನೀಡಲಾಗಿತ್ತು. ಮೂರನೇ ಮಹಡಿಯ ಮನೆ ಖಾಲಿ ಇದ್ದುದ್ದರಿಂದ ಈ ಮನೆಯನ್ನು ಬಾಡಿಗೆಗೆ ಪಡೆಯುವ ನೆಪದಲ್ಲಿ ರಾತ್ರಿ 10 ಗಂಟೆಯಲ್ಲಿ ಮೂವರು ಬಂದಿದ್ದಾರೆ. ಮನೆಯಲ್ಲಿದ್ದ ವಿಕಲಚೇತನರಾದ ರಾಜು ಮನೆ ತೋರಿಸಲು ಮಹಡಿ ಮೇಲೆ ಹೋಗುತ್ತಿದ್ದಂತೆ ವಿಕಲಚೇತನರೆಂಬುದೂ ನೋಡದೆ ಕ್ರೂರವಾಗಿ ಈ ಮೂವರು ಸೇರಿ ರಾಜು ಅವರ ಬಾಯಿಗೆ ಪ್ಲಾಸ್ಟರ್ ಸುತ್ತಿ ಚಾಕುವಿನಿಂದ ಕುತ್ತಿಗೆ ಇರಿದು ಕೊಲೆ ಮಾಡಿ ಇಬ್ಬರು ಅದಾಗಲೇ ಪರಾರಿಯಾಗಿದ್ದರು.
ತುಂಬಾ ಹೊತ್ತಾದರೂ ಪತಿ ಕೆಳಗೆ ಬಾರದಿರುವುದನ್ನು ಗಮನಿಸಿದ ಪತ್ನಿ ಹೊರಗೆ ಬಂದು ಕೂಗಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ಕೆಳಗೆ ಇಳಿದು ಹೋಗುತ್ತಿರುವುದನ್ನು ಗಮನಿಸಿ ಯಾರು ನೀನು ಎಂದು ಕೇಳಿದಾಗ, ಮನೆ ಸ್ವಚ್ಚ ಮಾಡಲು ಹೋಗಿದ್ದೆ ಎಂದು ಹೇಳಿಕೊಂಡೇ ಮತ್ತೊಬ್ಬ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈತನ ವರ್ತನೆಯಿಂದ ಗಾಬರಿಯಾಗಿ ಮೇಲೆ ಹೋಗಿ ನೋಡಿದಾಗ ಪತಿ ಕೊಲೆಯಾಗಿದುದ್ದು ಕಂಡು ಕಿರುಚಿ ನೆರೆಹೊರೆಯವರನ್ನು ಕರೆದಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬಾಣಸವಾಡಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ರಾಜು ಮೊದಲ ಪತ್ನಿಗೆ ವಿಚ್ಛೇಧನ ನೀಡಿ 6 ತಿಂಗಳ ಹಿಂದೆಯಷ್ಟೇ ಮತ್ತೊಂದು ಮದುವೆಯಾಗಿದ್ದರು. ಇನ್ನು ಆಸ್ತಿ ವಿಷಯದಲ್ಲಿ ಮೊದಲ ಹೆಂಡತಿಗೂ, ಈತನಿಗೂ ತಕರಾರು ಇತ್ತು ಎನ್ನಲಾಗಿದ್ದು, ಇದು ಕೊಲೆಗೆ ಕಾರಣವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.