ಕರ್ನಾಟಕ

ತಾಯಿ-ಮಗನ ಕೊಲೆ ಮಾಡಿದ್ದ 10 ಮಂದಿ ಬಂಧನ

Pinterest LinkedIn Tumblr

Arrester-for-murder

ಬೆಂಗಳೂರು, ಮೇ 28: ಮನೆಗೆ ನುಗ್ಗಿ ತಾಯಿ-ಮಗನನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ 10 ಮಂದಿಯ ತಂಡವನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಮಂಗಮ್ಮನ ಪಾಳ್ಯದ ಮದೀನಾ ನಗರದ ಮೆಕ್ಕಾಂ ಮಸೀದಿ ಬಳಿಯ ನಿವಾಸಿ ಮಹಮ್ಮದ್ ಇರ್ಫಾನ್ ಎಂಬುವರು ಸಿಟಿ ಮಾರ್ಕೆಟ್‌ನಲ್ಲಿ ಎನ್‌ಆರ್ ಸ್ಟೀಲ್ಸ್ ಎಂಬ ಗುಜರಿ ಅಂಗಡಿ ನಡೆಸುತ್ತಿದ್ದು, ಜನವರಿ 15ರಂದು ಇರ್ಫಾನ್ ಸಂಶಯಾಸ್ಪದವಾಗಿ ಮೃತಪಟ್ಟಿದ್ದರು. ತದನಂತರ ಈ ವ್ಯವಹಾರವನ್ನು ಇರ್ಫಾನ್ ಪತ್ನಿ ಅಸ್ಮಾತಾಜ್ ನೋಡಿಕೊಳ್ಳುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಮೇ 25ರಂದು ಮಗಳು ಕಾಲೇಜಿಗೆ ಹೋಗಿದ್ದಾಗ ಮನೆಯಲ್ಲಿ ತಾಯಿ ಮತ್ತು ಮಗ ರುಮಾನುಲ್ಲಾ ಮನೆಯಲ್ಲಿದ್ದರು. ಈ ವೇಳೆ ದುಷ್ಕರ್ಮಿಗಳು ಮನೆಗೆ ನುಗ್ಗಿ ಅಸ್ಮಾತಾಜ್ ಮತ್ತು ರುಮಾನುಲ್ಲಾನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಡಿವಾಳ ಪೊಲೀಸರು ತನಿಖೆ ಚುರುಕುಗೊಳಿಸಿ ಕಾರ್ಯಾಚರಣೆಗಿಳಿದು ಇರ್ಫಾನ್‌ರವರ ಅಣ್ಣ ಮಹಮ್ಮದ್ ಇಷಾನುಲ್ಲಾ ಸೇರಿ 10 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಹಮ್ಮದ್ ಇಷಾನುಲ್ಲಾ (42), ಸೈಯದ್ ಅಬ್ಬಾಸ್ (38), ವಸೀಂಖಾನ್ (27), ಮಹಮ್ಮದ್ ಸಲ್ಮಾನ್ (22) ಸೈಯದ್ ಅಜ್ಮತುಲ್ಲಾ (24), ಇರ್ಫಾನ್ (23), ಮಹಮ್ಮದ್ ಫರಾಜ್ (20), ಅಕ್ರಮ್ ಷರೀಫ್ (22), ಮಹಮ್ಮದ್ ಸಲೀಂ (23), ಸೈಯ್ ಆಲಿ (20) ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಮಹಮ್ಮದ್ ಇಷಾನುಲ್ಲಾ ಹೊರತುಪಡಿಸಿ ಉಳಿದ ಒಂಬತ್ತು ಮಂದಿ ಅಸ್ಮಾತಾಜ್ ನಡೆಸುತ್ತಿದ್ದ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ಕೆಲಸದಿಂದ ತೃಪ್ತರಾಗದ ಅಸ್ಮಾತಾಜ್ ಇವರೆಲ್ಲರನ್ನೂ ಕೆಲಸದಿಂದ ಬಿಡಿಸಿದ್ದರು ಎನ್ನಲಾಗಿದೆ.

ಇದರಿಂದ ದ್ವೇಷ ಸಾಧಿಸುತ್ತಿದ್ದ ಒಂಬತ್ತು ಮಂದಿ ಅಸ್ಮಾತಾಜ್ ಅವರ ಕೊಲೆಗೆ ಸಂಚು ರೂಪಿಸಿ ಹಲವಾರು ಬಾರಿ ಕೊಲೆಗೂ ಯತ್ನಿಸಿ ತದನಂತರ ಮಹಮ್ಮದ್ ಇಷಾನುಲ್ಲಾ ಅವರೊಂದಿಗೆ ಸೇರಿ ಮೇ 25ರಂದು ಅವರ ಮನೆಗೆ ನುಗ್ಗಿ ಮನೆಯಲ್ಲಿದ್ದ ಅಸ್ಮಾತಾಜ್ ಹಾಗೂ ಮಗ ರುಮಾನುಲ್ಲಾನನ್ನು ಕೊಲೆ ಮಾಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಈ ಪ್ರಕರಣ ಭೇದಿಸುವಲ್ಲಿ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ಅಪರ ಪೊಲೀಸ್ ಆಯುಕ್ತ ಹರಿಶೇಖರನ್, ಜಂಟಿ ಪೊಲೀಸ್ ಆಯುಕ್ತ ಚಂದ್ರಶೇಖರ್ ಮತ್ತು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ.ರೋಹಿಣಿ ಸಪಟ್ ಮಾರ್ಗದರ್ಶನದಲ್ಲಿ ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ವೆಂಕಟೇಶ್, ಇನ್ಸ್‌ಪೆಕ್ಟರ್ ನಾಗರಾಜ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

Write A Comment