ಕರ್ನಾಟಕ

27ನೇ ಮೈಸೂರು ಮಹಾರಾಜನ ಪಟ್ಟ ಅಲಂಕರಿಸಿದ ಯದುವೀರ

Pinterest LinkedIn Tumblr

66

ಮೈಸೂರು, ಮೇ 28: ಸಾಂಸ್ಕೃತಿಕ, ಐತಿಹಾಸಿಕ ನಗರಿ ಮೈಸೂರಿನ ಅರಮನೆಯ ಕಲ್ಯಾಣಮಂಟಪದಲ್ಲಿಂದು ನಡೆದ ಅಭೂತಪೂರ್ವ ಸಮಾರಂಭದಲ್ಲಿ ಯದುವಂಶದ 27ನೇ ಮಹಾರಾಜರಾಗಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟಾಭಿಷಕ್ತರಾದರು.

ನಿನ್ನೆ ಮುಂಜಾನೆಯಿಂದಲೇ ಪಟ್ಟಾಭಿಷೇಕದ ಧಾರ್ಮಿಕ ವಿಧಿವಿಧಾನಗಳು ರಾಜಗುರು ಅಭಿನವ ವಾಗೀಶ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠಾಧೀಶರ ನೇತೃತ್ವದಲ್ಲಿ ನೆರವೇರಿದ್ದವು. ಇಂದು ಮುಂಜಾನೆ ಅರಮನೆ ಆವರಣದಲ್ಲಿರುವ ಸೋಮೇಶ್ವರ ದೇವಸ್ಥಾನದಿಂದ ತರಲಾಗಿದ್ದ ಪವಿತ್ರ ಜಲ ಸೇರಿದಂತೆ ವಿವಿಧ ದೇವಾಲಯಗಳಿಂದ ತರಿಸಲಾಗಿದ್ದ ಜಲ ಹಾಗೂ ಸಪ್ತ ನದಿಗಳ ಜಲದಿಂದ ಋತ್ವಿಕರು ಯದುವೀರರಿಗೆ ಪ್ರೋಕ್ಷಣೆ ಮಾಡಿದರು. ನಂತರ ಅರಮನೆ ಒಳ ಭಾಗದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಯದುವೀರರು ವಿಶೇಷ ಪೂಜೆ ಸಲ್ಲಿಸಿ 9 ಗಂಟೆ 3 ನಿಮಿಷಕ್ಕೆ ಕಲ್ಯಾಣ ಮಂಟಪ ಪ್ರವೇಶ ಮಾಡಿದರು.

6621

666

662

ಆನಂತರ ಅರಮನೆ ಕಲ್ಯಾಣ ಮಂಟಪದಲ್ಲಿ ಪಟ್ಟಾಭಿಷೇಕದ ಕಾರ್ಯಕ್ರಮಗಳು ರಾಜಮಾತಾ ಪ್ರಮೋದಾದೇವಿ ಒಡೆಯರ್ ಸಮ್ಮುಖದಲ್ಲಿ ಪ್ರಾರಂಭವಾದವು. ರಾಮತಾರಕ ಹೋಮ, ಲಕ್ಷ್ಮೀನಾರಾಯಣ ಹೋಮ, ಉಮಾ ಮಹೇಶ್ವರ ಹೋಮ, ವಾಣಿಬ್ರಹ್ಮ ಹೋಮಗಳನ್ನು ನೆರವೇರಿಸಿ ಪೂರ್ಣಾಹುತಿ ಮಾಡಿದ ನಂತರ ಯದುವೀರರು ರಜತ ಭದ್ರಾಸನಕ್ಕೆ ಪೂಜೆ ಸಲ್ಲಿಸಿ ಮೂರು ಪ್ರದಕ್ಷಿಣೆ ಹಾಕಿ ಗೌರವ ಸಲ್ಲಿಸಿ ರಾಜ ಗಾಂಭೀರ್ಯದಿಂದ ನಮಸ್ಕರಿಸಿ ನಂತರ ಬಲಗಾಲಿಟ್ಟು ಆಸೀನರಾದರು.

ರಾಜಪೋಷಾಕಿನಲ್ಲಿ ಕಂಗೊಳಿಸುತ್ತಿದ್ದ ಯದುವೀರ್ 9.35ರಿಂದ 10.28ರೊಳಗೆ ಸಲ್ಲುವ ಶುಭ ಕರ್ಕಾಟಕ ಲಗ್ನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಿದರು. ಸರಿಯಾಗಿ 10 ಗಂಟೆ 2 ನಿಮಿಷಕ್ಕೆ ಯದುವೀರರ ಹಣೆಗೆ ಚಿನ್ನದ ಬಾಸಿಂಗವನ್ನು ಕಟ್ಟುವ ಮೂಲಕ ಪಟ್ಟಾಭಿಷೇಕ ನೆರವೇರಿಸಲಾಯಿತು.

ಪಟ್ಟಾಭಿಷೇಕದ ನಂತರ ಪರಕಾಲ ಮಠದ ರಾಜಗುರುಗಳ ಶಿಷ್ಯರು ಸೇರಿದಂತೆ ಅರ್ಚಕ ವೃಂದ ಗಂಗಾಜಲ ಪ್ರೋಕ್ಷಣೆ ಮಾಡಿ ಆಶೀರ್ವದಿಸಿದರು. ಪಟ್ಟಾಭಿಷೇಕ ಪೂರ್ಣಗೊಂಡ ನಂತರ ರಾಜವಂಶಸ್ಥರು, ಅರಸು ಕುಟುಂಬದವರು ಯದುವೀರರಿಗೆ ಹಾರ ಅರ್ಪಿಸಿ ನಜರು ಒಪ್ಪಿಸಿದ್ದುದು ವಿಶೇಷವಾಗಿತ್ತು. ಪಟ್ಟಾಭಿಷೇಕ ಕಾರ್ಯ ಪೂರ್ಣಗೊಂಡ ನಂತರ ಒಡೆಯರ್ ವಂಶದ ಕುಲದೇವತೆ ಶ್ರೀ ಚಾಮುಂಡೇಶ್ವರಿದೇವಿ ಪ್ರಸಾದ ಸೇರಿದಂತೆ ನಂಜನಗೂಡಿನ ಶ್ರೀಕಂಠೇಶ್ವರ, ಶ್ರೀರಂಗಪಟ್ಟಣದ ಶ್ರೀರಂಗನಾಥ, ಶೃಂಗೇರಿ ಶಾರದಾಂಬೆ, ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಮತ್ತಿತರ ದೇವಸ್ಥಾನಗಳ ಪ್ರಸಾದವನ್ನು ಯದುವೀರರಿಗೆ ನೀಡಲಾಯಿತು. ನಂತರ ಹೊಗಳುಭಟ್ಟರು ಮಹಾರಾಜರಿಗೆ ಬಹುಪರಾಕ್ ಹೇಳಿದುದು ವಿಶೇಷವಾಗಿತ್ತು.

ಪಟ್ಟಾಭಿಷೇಕ ಪೂರ್ಣಗೊಂಡ ನಂತರ ಮಧ್ಯಾಹ್ನ ಅರಮನೆ ಆವರಣದಲ್ಲಿರುವ ಭುವನೇಶ್ವರಿ, ತ್ರಿನೇಶ್ವರ, ಸೋಮೇಶ್ವರ, ಗಾಯತ್ರಿ, ವರಾಹ, ಆಂಜನೇಯ, ಕೃಷ್ಣ, ಖಿಲ್ಲೆ ವೇಂಕಟರಮಣ ದೇವಸ್ಥಾನ ಸೇರಿದಂತೆ 16 ದೇವಾಲಯಗಳಿಗೆ ಮಹಾರಾಜ ಯದುವೀರರು ತೆರಳಿ ವಿಶೇಷ ಪೂಜೆ ಸಲ್ಲಿಸಿ ಅರಮನೆ ಪುರೋಹಿತರುಗಳಿಂದ ಆಶೀರ್ವಾದ ಪಡೆದರು. 16.10.1974ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪಟ್ಟಾಭಿಷೇಕ ನಡೆದ ನಂತರ ಇದೀಗ ಯದುವೀರರ ಪಟ್ಟಾಭಿಷೇಕ ನೆರವೇರಿದ್ದು, ಇಂದಿನ ಯುವಪೀಳಿಗೆಗೆ ಇದನ್ನು ವೀಕ್ಷಿಸುವ ಸೌಭಾಗ್ಯ ಸಿಕ್ಕಿರುವುದು ವಿಶೇಷ.

ಸಮಾರಂಭದಲ್ಲಿ ಗಣ್ಯಾತಿಗಣ್ಯರು

ಮೈಸೂರು, ರಾಜಸ್ಥಾನ, ಜೈಪುರ ಸೇರಿದಂತೆ ವಿವಿಧ ರಾಜವಂಶಸ್ಥರು, ಅರಸು ಕುಟುಂಬದವರು, ಯದುವೀರರ ಭಾವೀಪತ್ನಿ ತ್ರಿಷಿಕಾ ಹಾಗೂ ಅವರ ಕುಟುಂಬದವರು ಪಾಲ್ಗೊಂಡಿದ್ದರು. ಹಲವಾರು ವಿದೇಶಿ ಗಣ್ಯರು, ಯದುವೀರರ ಸಹಪಾಠಿಗಳು ಭಾಗವಹಿಸಿದ್ದರು.

ರಾಜಕೀಯ ವ್ಯಕ್ತಿಗಳ ಆಗಮನ

ಸಚಿವರಾದ ವಿ.ಶ್ರೀನಿವಾಸ್‌ಪ್ರಸಾದ್, ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ರೋಷನ್‌ಬೇಗ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಶಾಸಕರಾದ ವಾಸು, ಎಚ್.ಡಿ.ರೇವಣ್ಣ, ಸಂಸದ ಪ್ರತಾಪ್ ಸಿಂಹ, ಕಂಠೀರವ ಸ್ಟುಡಿಯೋ ಅಧ್ಯಕ್ಷೆ ವಿಜಯಲಕ್ಷಿ ಅರಸು, ಲೋಕಾಯುಕ್ತ ಭಾಸ್ಕರ್‌ರಾವ್, ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ, ಮೈಸೂರು ಜಿಲ್ಲಾಧಿಕಾರಿ ಶಿಖಾ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.

ಬಿಗಿ ಬಂದೋಬಸ್ತ್
ಪಟ್ಟಾಭಿಷೇಕ ಹಿನ್ನೆಲೆಯಲ್ಲಿ ಅರಮನೆಗೆ ಅತ್ಯಂತ ಬಿಗಿ ಭದ್ರತೆ ಒದಗಿಸಲಾಗಿತ್ತು. ಅರಮನೆಯ ಎಲ್ಲಾ ದ್ವಾರಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಅರಮನೆ ಆವರಣಕ್ಕೆ ಪ್ರವೇಶಿಸುವ ಪ್ರತಿಯೊಂದು ವಾಹನವನ್ನು ಪೂರ್ಣ ತಪಾಸಣೆಗೊಳಪಡಿಸಿ ಒಳಗೆ ಬಿಡಲಾಯಿತು.

ಪ್ರತ್ಯೇಕ ಪ್ರವೇಶದ್ವಾರಗಳು:
ಭದ್ರತೆ ಹಿನ್ನೆಲೆಯಲ್ಲಿ ಆಹ್ವಾನ ಪತ್ರ ನೀಡಿದವರಿಗೆ ಮಾತ್ರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ವಿವಿಐಪಿಗಳಿಗೆ ಪ್ರತ್ಯೇಕ ಬ್ಯಾರಿಕೇಡ್, ಮೈಸೂರಿನ ಅರಸು ಕುಟುಂಬದವರಿಗೆ, ಬೆಂಗಳೂರಿನ ಅರಸು ಕುಟುಂಬದವರಿಗೆ ಪ್ರತ್ಯೇಕ ಬ್ಯಾರಿಕೇಡ್ ಹಾಕಲಾಗಿತ್ತು. ರಾಜಕೀಯ ವ್ಯಕ್ತಿಗಳಿಗೆ ನೇರ ಪ್ರವೇಶ ಕಲ್ಪಿಸಲಾಗಿತ್ತು. ಪತ್ರಕರ್ತರಿಗೆ ಪ್ರತ್ಯೇಕ ಬ್ಯಾರಿಕೇಡ್, ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿತ್ತು. ವಿಶೇಷ ಆಹ್ವಾನಿತರಿಗೂ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಆಹ್ವಾನ ಪತ್ರ ಇಲ್ಲದವರನ್ನು ಒಳಗೆ ಬಿಡಲೇ ಇಲ್ಲ. ಆಹ್ವಾನ ಪತ್ರಿಕೆಯಲ್ಲೇ ಯಾರು ಯಾವ ದ್ವಾರದ ಮೂಲಕ ಹೋಗಬೇಕೆಂದು ನಮೂದಿಸಿದ್ದರಿಂದ ಆಯಾ ಮಾರ್ಗದಲ್ಲೇ ಪ್ರವೇಶಿಸಿದರು. ಹಾಗಾಗಿ ಯಾವುದೇ ಗೊಂದಲಗಳು ಉಂಟಾಗಲಿಲ್ಲ. ಎಲ್ಲಾ ಕಾರ್ಯಕ್ರಮಗಳು ಶಾಂತವಾಗಿ, ಸುಗಮವಾಗಿ ನೆರವೇರಿದವು. ಎಲ್ಲೆಡೆ ಸಂಭ್ರಮ-ಸಡಗರ ಮನೆ ಮಾಡಿತ್ತು. ಐತಿಹಾಸಿಕ ಕ್ಷಣವನ್ನು ನೇರವಾಗಿ ವೀಕ್ಷಿಸಲು ಸಾಧ್ಯವಾಗದ ನೂರಾರು ಮಂದಿ ಅರಮನೆಯ ಹೊರಭಾಗದ ದ್ವಾರದ ಬಳಿ ಕಾಯುತ್ತಿದ್ದರು. ಸಂಜೆ 6.30ಕ್ಕೆ ದರ್ಬಾರ್ ಹಾಲ್‌ನಲ್ಲಿ ನಡೆಯಲಿರುವ ಆರತಕ್ಷತೆಗೆ ಸಾರ್ವಜನಿಕರಿಗೆ ಪ್ರವೇಶಾವಕಾಶ ಕಲ್ಪಿಸಿರುವುದರಿಂದ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಅರಮನೆಗೆ ಬರಲು ಉತ್ಸುಕರಾಗಿರುವುದು ಕಂಡು ಬಂದಿತು.

ಅರಮನೆ ಆಸ್ತಿ ವಿಚಾರದಲ್ಲಿ ಸಂಘರ್ಷ ಇಚ್ಛಿಸುವುದಿಲ್ಲ: ರಾಣಿ

ಮೈಸೂರು: ಅರಮನೆ ಆಸ್ತಿ ವಿಚಾರದಲ್ಲಿ ಯಾವುದೇ ಸಂಘರ್ಷ ಮಾಡಿಕೊಳ್ಳಲು ಇಚ್ಛಿಸುವುದಿಲ್ಲ. ಈ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ ಎಂದು ಮಹಾರಾಣಿ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.

ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪಟ್ಟಾಭಿಷೇಕ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದಾ ದೇವಿ, ನಮ್ಮ ಹಾಗೂ ಸರ್ಕಾರದ ನಡುವೆ ಯಾವುದೇ ಸಂಘರ್ಷ ಇಲ್ಲ. ಆದರೆ ನಮ್ಮ ಆಸ್ತಿ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯ ಎಂದರು. ಆಸ್ತಿ ವಿವಾದ ಕುರಿತು ಕುಳಿತು ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ. ಸರ್ಕಾರ ಇದಕ್ಕೆ ಮುಂದೆ ಬರಬೇಕು ಎಂದು ಮನವಿ ಮಾಡಿದರು. ಅಗ್ರಿಮೆಂಟ್‌ನಲ್ಲಿ ಏನಿದೆಯೋ ಅದನ್ನು ಅನುಸರಿಸಿದರೆ ಸಾಕು ಎಂದರು.

ಮೈಸೂರು ಜನತೆಯಿಂದಾಗಿ ನಾವು ಇನ್ನೂ ರಾಜರಾಗಿ ಉಳಿದಿದ್ದೇವೆ. ಜನರ ಸಹಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ. ನಾಡಿನ ಪರಂಪರೆ, ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುತ್ತೇವೆ ಎಂದು ಮಹಾರಾಣಿ ತಿಳಿಸಿದರು. ಇದೇ ವೇಳೆ ಯದುವೀರ ಸಹ ರಾಜಮನೆತನದ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.

ಸರ್ಕಾರ-ಅರಮನೆ ಮಧ್ಯೆ ಸಮಸ್ಯೆ : ಕೂತು ಬಗೆಹರಿಸಿಕೊಳ್ಳಬೇಕು

ಮೈಸೂರು: ಸರ್ಕಾರ-ಅರಮನೆ ಮಧ್ಯೆ ಏನೇ ಸಮಸ್ಯೆಯ ವಿವಾದವಿದ್ದರೂ ಅದನ್ನು ಕೂತು ಬಗೆಹರಿಸಿಕೊಳ್ಳಬೇಕು ಎಂದು ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಇಂದಿಲ್ಲಿ ಸಲಹೆ ನೀಡಿದ್ದಾರೆ. ಈಗಾಗಲೇ ಕಾನೂನು ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಕಷ್ಟು ಸಮಯ ಹಿಡಿದಿದೆ. ಇನ್ನಾದರೂ ಕೂತು ಮಾತುಕತೆ ನಡೆಸಿ ಎಲ್ಲವನ್ನೂ ಇತ್ಯರ್ಥಪಡಿಸಿಕೊಳ್ಳುವ ಅವಕಾಶವಿದೆ ಎಂದು ಅವರು ಹೇಳಿದ್ದಾರೆ. ರಾಜಮಾತೆ ಪ್ರಮೋದಾದೇವಿ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರವರು ಒಪ್ಪಿ ಬಂದರೆ ಸರ್ಕಾರದ ಜತೆ ಮಾತುಕತೆ ನಡೆಸಲು ಯಾವುದೇ ಅಭ್ಯಂತರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ನಮಗೆ ರಾಜವಂಶಸ್ಥರ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ, ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಇದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಅವರು ತಿಳಿಸಿದರು.

Write A Comment