ಬೆಂಗಳೂರು,ಮೇ 27- ಅನಧಿಕೃತ ವಿಡಿಯೋ ಗೇಮ್ಸ್ ಕೇಂದ್ರಗಳ ಮೇಲೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು , ಮತ್ತೆ ಮೂರು ಕೇಂದ್ರಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿ 71 ಮಂದಿಯನ್ನು ಬಂಧಿಸಿ ಪಣಕ್ಕಿಟ್ಟಿದ್ದ 90,160 ನಗದು ಹಾಗೂ ಇತರೆ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಹಲವು ಭಾಗಗಳಲ್ಲಿ ದಿನೇ ದಿನೇ ಅನಧಿಕೃತವಾಗಿ ವಿಡಿಯೋ ಗೇಮ್ಸ್ ಕೇಂದ್ರಗಳು ಪ್ರಾರಂಭಗೊಂಡು, ಈ ಕೇಂದ್ರಗಳಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ವಿಡಿಯೋ ಗೇಮ್ಸ್ ಎಂಬ ಅದೃಷ್ಟದ ಜೂಜಾಟ ನಡೆಸುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ದೊರೆತಿದೆ. ಮಾಹಿತಿ ಆಧಾರದ ಮೇಲೆ ಇತ್ತೀಚೆಗೆ ಉಪ್ಪಾರಪೇಟೆ ಹಾಗೂ ಚಿಕ್ಕಪೇಟೆ ವ್ಯಾಪ್ತಿಯಲ್ಲಿನ ಎರಡು ವಿಡಿಯೋ ಗೇಮ್ಸ್ ಕೇಂದ್ರಗಳ ಮೇಲೆ ಕಾರ್ಯಾಚರಣೆ ನಡೆಸಿ 53 ಮಂದಿಯನ್ನು ಬಂಧಿಸಲಾಗಿತ್ತು.
ಬಂಧಿತರಿಂದ 80790 ನಗದು, ಎರಡು ಸಿಸಿಟಿವಿ, ಡಿವಿಆರ್ ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿ ಈ ದಾಳಿಯನ್ನು ಮುಂದುವರೆಸಿದ್ದರು.
ಅದರಂತೆ ನಿನ್ನೆ ಚಾಮರಾಜಪೇಟೆ, ಶಂಕರಪುರ ಮತ್ತು ಕೆಂಪೇಗೌಡನಗರ ವ್ಯಾಪ್ತಿಯಲ್ಲಿನ ವಿಡಿಯೋಗೇಮ್ಸ್ ಎಂಬ ಜೂಜಾಟದ ಅಡ್ಡೆ ಮೇಲೆ ದಾಳಿ ಮಾಡಿ 11 ಮಂದಿಯನ್ನು ಬಂಧಿಸಿ 90160 ನಗದು ವಶಪಡಿಸಿಕೊಳ್ಳಲಾಗಿದೆ. ಮೊದಲು ಈ ಸಿಸಿಬಿ ತಂಡ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸ್ಟಾರ್ ಗೋಲ್ಡ್ ಗೇಮ್ಸ್ ಎಂಬ ಅಂಗಡಿ ಮೇಲೆ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ ಸೈಮನ್(37), ಅಶೋಕ(33) ಮತ್ತು ಚಂದ್ರಪ್ಪ(36) ಸೇರಿದಂತೆ 15 ಮಂದಿಯನ್ನು ಬಂಧಿಸಿ ಪಣಕ್ಕಿಟ್ಟಿದ್ದ 34,860 ನಗದು, ಡಿವಿಆರ್ ಹಾಗೂ 23 ವಿಡಿಯೋ ಗೇಮ್ಸ್ ಮಿಷಿನ್‌ಗಳ ಕೀಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ವಿಡಿಯೋ ಗೇಮ್ಸ್ ಮಾಲೀಕ ಮಂಜುನಾಥ್ ತಲೆಮರೆಸಿಕೊಂಡಿದ್ದು , ಆರೋಪಿಗಳ ವಿರುದ್ಧ ಚಾಮರಾಜಪೇಟೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತದನಂತರ ಶಂಕರಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ವೆಲ್‌ಕಮ್ ವಿಡಿಯೋ ಗೇಮ್ಸ್ ಎಂಬ ಅಂಗಡಿ ಮೇಲೆ ದಾಳಿ ಮಾಡಿ ಸುರೇಶ್, ಸತೀಶ್, ಧನಂಜಯ್ಯ, ಮೋಹನ ಮತ್ತು ಜಿ.ಶಂಕರ್ ಸೇರಿದಂತೆ 24 ಮಂದಿಯನ್ನು ಬಂಧಿಸಿ ಪಣಕ್ಕಿಟ್ಟಿದ್ದ 24,050 ನಗದು, 68 ವಿಡಿಯೋ ಗೇಮ್ಸ್ ಮೆಷಿನ್ ಕೀಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಕೊನೆಯದಾಗಿ ಕೆಂಪೇಗೌಡನಗರ ವ್ಯಾಪ್ತಿಯಲ್ಲಿ ಎಂ.ಪಿ.ಮಂಜುನಾಥ ಅಸೋಸಿಯೇಟ್ಸ್ ಎಂಬ ವಿಡಿಯೋಗೇಮ್ಸ್ ಅಂಗಡಿ ಮೇಲೆ ದಾಳಿ ನಡೆಸಿ ಮನು, ನಂದೀಶ, ರಾಜು ಸೇರಿದಂತೆ 26 ಮಂದಿಯನ್ನು ಬಂಧಿಸಿ ಪಣಕ್ಕಿಟ್ಟಿದ್ದ 31,250 ನಗದು, ಡಿವಿಆರ್, 56 ವಿಡಿಯೋ ಗೇಮ್ಸ್ ಮೆಷಿನ್ ಕೀಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಮಾಲೀಕ ಮಂಜುನಾಥ್ ಪರಾರಿಯಾಗಿದ್ದು , ಆರೋಪಿಗಳ ವಿರುದ್ಧ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
