ಕರ್ನಾಟಕ

ಮೋದಿ ಕಾರ್ಯವೈಖರಿ ಟೀಕಿಸಿದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ

Pinterest LinkedIn Tumblr

MOdin-In-New-York-times

ಬೆಂಗಳೂರು, ಮೇ 27- ಮಂತ್ರಕ್ಕಿಂತ ಉಗುಳೇ ಜಾಸ್ತಿ ಎಂದು ಪ್ರಧಾನ ಮಂತ್ರಿ ನರೇಂದ್ರಮೋದಿ ಅವರ ಕಾರ್ಯವೈಖರಿಯನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವಿಶ್ಲೇಷಿಸಿದೆ. ಭಾರಿ ಪ್ರಚಾರ ಪಡೆಯುವ ಬಿಜೆಪಿ ನಾಯಕರಿಗೆ ಇದರಿಂದ ಮುಖಭಂಗವಾದಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಲೇವಡಿ ಮಾಡಿದ್ದಾರೆ.

ಮಾಜಿ ಪ್ರಧಾನಿ ದಿ.ಜವಹರಲಾಲ್ ನೆಹರು ಅವರ 51ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಬರಿ ಪ್ರಚಾರದಲ್ಲೇ ಕಾಲ ಕಳೆಯುತ್ತಿದ್ದಾರೆ. ಅಭಿವೃದ್ಧಿ ಶೂನ್ಯವಾಗಿದೆ. ಇದನ್ನು ನಾವು ಹೇಳುತ್ತಿಲ್ಲ. ನ್ಯೂಯಾರ್ಕ್ ಪತ್ರಿಕೆ ಭಾರತೀಯ ಭಾಷೆಯಲ್ಲೇ ವಿಶ್ಲೇಷಣೆ ಮಾಡಿ ಮಂತ್ರಕ್ಕಿಂತ ಉಗುಳೇ ಜಾಸ್ತಿ ಎಂಬರ್ಥದ ವರದಿ ಮಾಡಿದೆ ಎಂದು ಹೇಳಿದರು.

ಮೋದಿ ಅವರು ಪ್ರಧಾನಿ ಆದ ನಂತರ ಅಭಿವೃದ್ಧಿ ಶೂನ್ಯವಾಗಿದೆ. ಹಿಂದೆ ನೆಹರು ಅವರು ಪ್ರಧಾನಿಯಾದಾಗ ನಾನು ದೇಶದ ಪ್ರಥಮ ಪ್ರಧಾನ ಸೇವಕ ಎಂದು ಹೇಳಿಕೊಂಡಿದ್ದರು. ಅದೇ ಹೇಳಿಕೆಯನ್ನು ನಕಲು ಮಾಡಿರುವ ಮೋದಿ ಅವರ ಪರವಾಗಿ ಬಿಜೆಪಿಯವರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ ಎಂದು ಪರಮೇಶ್ವರ್ ಕಿಡಿಕಾರಿದರು. ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಎಲ್ಲಾ ಸಚಿವರುಗಳು ನಮ್ಮ ಜನಪರ ಯೋಜನೆಗಳ ಕುರಿತು ಜಿಲ್ಲಾ ಮಟ್ಟದಲ್ಲಿ ಪತ್ರಿಕಾಗೋಷ್ಠಿಗಳನ್ನು ನಡೆಸಿ ಮಾಹಿತಿ ನೀಡಬೇಕೆಂದು  ಅವರು ಸೂಚಿಸಿದರು. ಇಲ್ಲದೇ ಹೋದರೆ ಯುಪಿಎ ಸರ್ಕಾರದ ಆರ್‌ಟಿಇ, ಆರ್‌ಟಿಐ,  ಆಹಾರ ಭದ್ರತೆಯಂತಹ ಮಹತ್ವದ ಯೋಜನೆಗಳ ಹೆಸರು ಬದಲಾವಣೆ ಮಾಡಿ ಬಿಜೆಪಿಯವರು ನಮ್ಮ ಯೋಜನೆಗಳು ಎಂದು ಪ್ರಚಾರ ಮಾಡಿಕೊಳ್ಳುವ ಆತಂಕವಿದೆ. ಹೀಗಾಗಿ ಎಲ್ಲಾ ಸಚಿವರು ರಾಜ್ಯ ಸರ್ಕಾರದ ಮತ್ತು ಹಿಂದಿನ ಯುಪಿಎ ಸರ್ಕಾರದ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಬೇಕೆಂದು ತಾಕೀತು ಮಾಡಿದರು.

ನೆಹರು ಅವರು ದೇಶದ ಸುಭದ್ರತೆಗೆ ಅಡಿಪಾಯ ಹಾಕಿದರು. ಅಣುಶಕ್ತಿ ಶಾಂತಿ ರೂಪದಲ್ಲಿ ಬಳಕೆಯಾಗಬೇಕೆಂದು ವಿಶ್ವಕ್ಕೆ ಸಂದೇಶ ಸಾರಿದ್ದರು ಎಂದು ಹೇಳಿದರು. ಕಾಂಗ್ರೆಸ್‌ನ ಹಿರಿಯ ನಾಯಕ ಎಂ.ವಿ.ರಾಜಶೇಖರನ್ ಮಾತನಾಡಿ, ರಾಹುಲ್‌ಗಾಂಧಿ ಪಕ್ಷದ ಅಧ್ಯಕ್ಷರಾಗಬೇಕೆಂಬ ಬೇಡಿಕೆಗೆ ನಮ್ಮ ಬೆಂಬಲವಿದೆ ಎಂದು ಹೇಳಿದರು.  ಬಿ.ಎಲ್.ಶಂಕರ್ ಮಾತನಾಡಿ, ಒಂದು ಪಕ್ಷದ ಅಧಿಕಾರ ಬದಲಾವಣೆಯಾಗಿ ಬೇರೊಂದು ವಿಚಾರಧಾರೆಯ ಪಕ್ಷ ಅಧಿಕಾರಕ್ಕೆ ಬರುವಾಗಲೂ ದೇಶದಲ್ಲಿ ಶಾಂತಿಯುತ ವಾತಾವರಣವಿರುತ್ತದೆ. ಬೇರೆ ರಾಷ್ಟ್ರಗಳಲ್ಲಿ ರಕ್ತಪಾತ ನಡೆಯುತ್ತದೆ. ನಮ್ಮಲ್ಲಿ ಇಂತಹ ವಾತಾವರಣ ನಿರ್ಮಾಣವಾಗಲು ನೆಹರು ಅವರು ಹಾಕಿದ ಸುಭದ್ರ ಪ್ರಜಾಪ್ರಭುತ್ವದ ಅಡಿಪಾಯವೇ ಕಾರಣ ಎಂದು ಹೇಳಿದರು. ಮಾಜಿ ಸಚಿವೆ ರಾಣಿ ಸತೀಶ್, ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Write A Comment