ಕರ್ನಾಟಕ

ಮೈಸೂರು- ಶಿರಡಿ ಎಕ್ಸ್‌ಪ್ರೆಸ್ ರೈಲ್‌ನಲ್ಲಿ ಲಕ್ಷಾಂತರ ರೂ. ದರೋಡೆ

Pinterest LinkedIn Tumblr

train_650x400_41423755629

ಶಿರಡಿ/ಮೈಸೂರು, ಮೇ 27: ಶಿರಡಿಯಿಂದ ಮೈಸೂರು ಕಡೆಗೆ ರಾತ್ರಿ ಹೊರಟಿದ್ದ ಎಕ್ಸ್‌ಪ್ರೆಸ್ ರೈಲಿಗೆ ನುಗ್ಗಿದ ಡಕಾಯಿತರ ಗುಂಪು ಪ್ರಯಾಣಿಕರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ನಗ-ನಾಣ್ಯ ಲೂಟಿ ಮಾಡಿರುವ ಘಟನೆ ಇಂದು ಮುಂಜಾನೆ ಮಹಾರಾಷ್ಟ್ರದ ಬಾಲಾಪುರ ಬಳಿ ನಡೆದಿದೆ.

ರೈಲು ನಿಲ್ದಾಣ ಬಿಟ್ಟ ಒಂದು ಗಂಟೆಯ ಬಳಿಕ, 30 ಮಂದಿ ಡಕಾಯಿತರ ಗುಂಪು ಕಾರ್ಯಾಚರಣೆ ಆರಂಭಿಸಿದ್ದು, 14 ಬೋಗಿಗಳಲ್ಲಿ ಪ್ರಯಾಣಿಕರನ್ನು ಬೆದರಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಿತ್ತುಕೊಂಡು ರೈಲಿನ ತುರ್ತು ನಿಲುಗಡೆಯ ಚೈನ್ ಎಳೆದು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವುದೇ ಹಲ್ಲೆಯಾಗಿಲ್ಲ ಎಂದು ತಿಳಿದು ಬಂದಿದ್ದು , ಮಾರ್ಗ ಮಧ್ಯೆ ರೈಲು ನಿಂತಾಗ ಡಕಾಯಿತರು ಪರಾರಿಯಾಗಿದ್ದಾರೆಂದು ವರದಿಯಾಗಿದೆ.

ಕಳೆದ ರಾತ್ರಿ 12.30ಕ್ಕೆ ಹೊರಟ್ಟಿದ್ದ ರೈಲು ನಾಳೆ ಬೆಳಗ್ಗೆ 6ಗಂಟೆಗೆ ಮೈಸೂರು ತಲುಪಬೇಕಾಗಿತ್ತು. ಡಕಾಯಿತಿ ನಡೆದ ಬಳಿಕ ಬಾಲಾಪುರ ನಿಲ್ದಾಣದಲ್ಲಿರುವ ರೈಲ್ವೆ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ 10ಕೆ.ಜಿ.ಗೂ ಹೆಚ್ಚು ಚಿನ್ನಾಭರಣ ಹಾಗೂ ಎರಡು ಮೂರು ಲಕ್ಷ ರೂ. ನಗದು ದೋಚಲಾಗಿದೆ ಎಂದು ಹೇಳಲಾಗಿದೆ.

ಆತಂಕಗೊಂಡಿದ್ದ ಪ್ರಯಾಣಿಕರು ದೂರು ನೀಡುವವರೆಗೂ ಅಂದರೆ ಸುಮಾರು ಐದು ತಾಸುಗಳ ಕಾಲ ರೈಲು ನಿಲ್ದಾಣದಲ್ಲೇ ನಿಲ್ಲಬೇಕಾಯಿತು. ಈ ಬಗ್ಗೆ ರೈಲ್ವೆ ಅಧಿಕಾರಿಗಳು ಹಾಗೂ ಆರ್‌ಪಿಎಪ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ವೃತ್ತಿಪರ ರೈಲು ಡಕಾಯಿತರೇ ಈ ಕೃತ್ಯ ನಡೆಸಿದ್ದಾರೆಂದು ಶಂಕಿಸಿದ್ದಾರೆ. ಹಣ, ಆಭರಣ ಕಳೆದುಕೊಂಡವರಲ್ಲಿ ಬೆಂಗಳೂರು ಹಾಗೂ ಮೈಸೂರಿನವರೇ ಹೆಚ್ಚಾಗಿದ್ದಾರೆಂದು ಹೇಳಲಾಗಿದೆ. ಇಂದು ಸಂಜೆ ಬೆಂಗಳೂರಿಗೆ ರೈಲು ತಲುಪಲಿದ್ದು, ಆ ಬಳಿಕ ನಿಖರವಾದ ಮಾಹಿತಿ ದೊರೆಯಲಿದೆ.

ಮಹಾರಾಷ್ಟ್ರದ ಜುಹು ಬಳಿ ಬರುವ ದಟ್ಟಾರಣ್ಯದ ಬಳಿ ಎಲ್ಲ ರೈಲುಗಳು ನಿಯಮಿತ ವೇಗದಲ್ಲಿ ಚಲಿಸುತ್ತದೆ. ಇದರಿಂದ ಕೆಲ ದುಷ್ಕರ್ಮಿಗಳು ರೈಲಿಗೆ ಹತ್ತಿ ಸುಲಿಗೆ ಮಾಡುವುದು ಇಲ್ಲಿ ಸಾಮಾನ್ಯವಾಗಿದೆ ಎಂದು ಹೇಳಲಾಗಿದೆ. ರೈಲಿನ ಕೊನೆಯ ಭೋಗಿ ಅಥವಾ ಮಧ್ಯದಲ್ಲಿ ರೈಲ್ವೆ ಸುರಕ್ಷತಾ ಪಡೆಯ ಯೋಧರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿರುತ್ತದೆ. ಆದರೆ ಅವರ ಬಳಿ ಸರಿಯಾದ ಶಸ್ತ್ರಾಸ್ತ್ರಗಳಿರುವುದಿಲ್ಲ ಮತ್ತು ಸಿಬ್ಬಂದಿಗಳ ಕೊರತೆಯೂ ಕೂಡ ಕಡಿಮೆಯಿದೆ. ಇದಲ್ಲದೆ ರೈಲ್ವೆ ಪೊಲೀಸರು ಹಾಗೂ ಸ್ಥಳೀಯ ಸಿವಿಲ್ ಪೊಲೀಸ್ ಠಾಣೆಗಳ ಸಿಬ್ಬಂದಿಗಳ ಸಮನ್ವಯತೆ ಕೊರತೆಯಿಂದಾಗಿ ಇಂತಹ ಘಟನೆ ನಡೆದಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ನಡೆದಂತಹ ದೊಡ್ಡ ರೈಲು ಡಕಾಯಿತಿ ಇದಾಗಿದೆ.

Write A Comment