ಕರ್ನಾಟಕ

ಲಾಟರಿ ಹಗರಣದಲ್ಲಿ ಶಾಮೀಲಾಗಿರುವವರು ಯಾರೇ ಆದರೂ ಮುಲಾಜಿಲ್ಲದೆ ಕ್ರಮ : ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

siddaramaiah

ಬೆಂಗಳೂರು, ಮೇ 25: ಅಕ್ರಮ ಲಾಟರಿ ಹಗರಣದಲ್ಲಿ ಶಾಮೀಲಾಗಿರುವವರು ಎಷ್ಟೇ ದೊಡ್ಡ ಅಧಿಕಾರಿಗಳಾಗಿದ್ದರೂ, ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುವುದು ಮತ್ತು ಸಿಐಡಿಯ ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಕುರಿತು ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಅಧಿಕೃತ ನಿವಾಸ ಕಾವೇರಿಯಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಲಾಟರಿ ಹಗರಣ ತಮ್ಮ ಗಮನಕ್ಕೆ ಬಂದ ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ. ಇಬ್ಬರು ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಸಿಐಡಿ ತನಿಖೆಗೆ ವಹಿಸಲಾಗಿದೆ. ಜಾತಿ ತಾರತಮ್ಯ ಮಾಡದೆ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದು ಶತಸಿದ್ಧ . ನಮ್ಮ ಸರ್ಕಾರ ಯಾರನ್ನೂ ರಕ್ಷಣೆ ಮಾಡುವ ಉದ್ದೇಶ ಹೊಂದಿಲ್ಲ. ರಕ್ಷಿಸುವ ಇರಾದೆ ನಮಗಿಲ್ಲ ಎಂದು ಹೇಳಿದರು.

ರಾಜ್ಯಪಾಲರಿಗೆ ವರದಿ:
ಲಾಟರಿ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಕೇಳಿರುವ ವರದಿಯನ್ನು ಮುಖ್ಯ ಕಾರ್ಯದರ್ಶಿಯವರು ರಾಜಭವನಕ್ಕೆ ಮಾಹಿತಿ ನೀಡಲಿದ್ದಾರೆ ಎಂದು ಸುದ್ದಿಗಾರರಿಗೆ ಹೇಳಿದರು.

ಎಚ್‌ಡಿಕೆಗೆ ತಿರುಗೇಟು:
ಲಾಟರಿ ಹಗರಣ ಬೆಳಕಿಗೆ ಬರುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವರು ದನ ಕಾಯುತ್ತಿದ್ದರೇ ಎಂಬ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಖಾರವಾಗಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಮಾಜಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರಿಗೆ ಎಂತಹ ಪದಗಳನ್ನು ಬಳಸಬೇಕು ಎಂಬ ಅರಿವಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅಂತಹ ಸಂಸ್ಕೃತಿ ಇರುವವರಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಅವರ ಪದ ಬಳಕೆಗಳನ್ನು ನೋಡಿದರೆ ದನ ಕಾಯುವ ಸಂಸ್ಕೃತಿ ಅವರದಾಗಿತ್ತು ಎಂದು ಕಿಡಿಕಾರಿದರು.

ಅಕ್ರಮ ಲಾಟರಿ ಹಗರಣ ನಮ್ಮ ಗಮನಕ್ಕೆ ಬರುತ್ತಿದ್ದಂತೆ ಕ್ರಮ ಕೈಗೊಂಡಿದ್ದೇನೆ. ಕುಮಾರಸ್ವಾಮಿಯವರಿಂದ ಪಾಠ ಕಲಿಯಬೇಕಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ತಿರುಗೇಟು ನೀಡಿದರು. ಲಾಟರಿ ಹಗರಣದಲ್ಲಿ ಹೆಸರು ಕೇಳಿ ಬಂದಿರುವ ಇನ್ನೊಬ್ಬ ಅಧಿಕಾರಿ ಚಂದ್ರಕಾಂತ್ ಸಿದ್ದರಾಮಯ್ಯ ಅವರ ಸಂಬಂಧಿ. ಹೀಗಾಗಿ ದಲಿತ ಧರಣೇಶನನ್ನು ಅಮಾನತು ಮಾಡಿ ಕುರುಬ ಜಾತಿಗೆ ಸೇರಿದ ಚಂದ್ರಕಾಂತನನ್ನು ರಕ್ಷಿಸಲಾಗುತ್ತಿದೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಹೇಳಿದ ತಕ್ಷಣ ಎಲ್ಲರನ್ನು ಅಮಾನತು ಮಾಡಲಾಗುವುದಿಲ್ಲ. ಚಂದ್ರಕಾಂತ್ ವಿರುದ್ಧ ಸಾಕ್ಷ್ಯಾಧಾರಗಳು ದಾಖಲೆಗಳಿವೆಯೇ ಎಂದು ಪ್ರಶ್ನಿಸಿದರು.

ಚಂದ್ರಕಾಂತ್ ಕುರುಬನಿರಬಹುದು. ಕುರುಬರೆಲ್ಲಾ ನಮ್ಮ ನೆಂಟರುಗಳಲ್ಲಾ. ಚಂದ್ರಕಾಂತ್ ನನ್ನ ನೆಂಟನಲ್ಲ. ತಪ್ಪು ಮಾಡಿದ್ದರೇ ಯಾವ ಜಾತಿಯಾದರೂ ತಾರತಮ್ಯ ಮಾಡುವುದಿಲ್ಲ. ಸಿಐಡಿ ವರದಿಯಲ್ಲಿ ಚಂದ್ರಕಾಂತ್ ಪಾತ್ರ ಸಾಬೀತಾದರೆ ಅವರಾದರೂ ಸರಿ ಅವರ ತಾತನಾದರೂ ಸರಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಿದ್ದರಾಮಯ್ಯ ಗುಡುಗಿದರು.

ಕುಮಾರಸ್ವಾಮಿ ಹತಾಶೆಯಿಂದ ಮಾತನಾಡುತ್ತಿದ್ದಾರೆ. ನಾವು ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಸಿಐಡಿ ತನಿಖೆ ನಂತರ ಲಾಟರಿ ಹಗರಣದಲ್ಲಿ ಶಾಮೀಲಾಗಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಪರಿಶೀಲನೆ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಹಗರಣ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಸದಾನಂದಗೌಡರ ಒತ್ತಾಯವನ್ನು ತಳ್ಳಿ ಹಾಕಿದ ಸಿದ್ದರಾಮಯ್ಯ ಅವರು, ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಒಂದು ಪ್ರಕರಣವನ್ನು ಸಿಬಿಐಗೆ ಒಪ್ಪಿಸಿರಲಿಲ್ಲ. ಈಗ ಒತ್ತಾಯ ಮಾಡುವ ನೈತಿಕತೆ ಏನಿದೆ ಎಂದು ಪ್ರಶ್ನಿಸಿದರು. ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಿದರೆ ನಮ್ಮ ಪೊಲೀಸರಿಂದ ಯಾವ ಕೆಲಸ ಮಾಡಿಸಬೇಕು ಎಂದು ಅವರು ಪ್ರಶ್ನೆ ಮಾಡಿದರು.

Write A Comment