ಕರ್ನಾಟಕ

ಬಿಸಿಲ ಧಗೆಗೆ ಉತ್ತರ ಕರ್ನಾಟಕದ ಜನರು ತತ್ತರ; ಮಜ್ಜಿಗೆ, ಎಳನೀರು, ತಂಪು ಪಾನೀಯಗಳ ಮೊರೆ

Pinterest LinkedIn Tumblr

sunlight

ಹುಬ್ಬಳ್ಳಿ,ಮೇ 25: ಉತ್ತರ ಕರ್ನಾಟಕ ರಣಬಿಸಲಿನಿಂದ ತತ್ತರಗೊಂಡಿದೆ. ಹುಬ್ಬಳ್ಳಿ-ಧಾರವಾಡ, ಗದಗದಲ್ಲಿ ಜನ ಮನೆಯಿಂದ ಹೊರಬರಲಾಗದಷ್ಟು ಬಿಸಿಲು ನೆತ್ತಿ ಸುಡುತ್ತಿದೆ. ಹಗಲಲ್ಲಿ ಛತ್ರಿಗಳನ್ನು ಹಿಡಿದು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೈದರಾಬಾದ್ ಕರ್ನಾಟಕದ ಕಲ್ಬುರ್ಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ , ಬಳ್ಳಾರಿ ಜಿಲ್ಲೆಗಳಲ್ಲಿ ಭಾರೀ ಬಿಸಿಲು ಜನರನ್ನು ಕಾಡುತ್ತಿದ್ದು, ಎರಡು ದಿನಗಳಿಂದ ಉಷ್ಣಾಂಶದ ಪ್ರಮಾಣ ಕೊಂಚ ಕಡಿಮೆಯಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ 38 ಡಿಗ್ರಿ ಸೆಲ್ಸಿಯಸ್‌ನಿಂದ 39ರಷ್ಟು ಉಷ್ಣಾಂಶವಿದ್ದು ಇಲ್ಲಿನ ಜನ ತತ್ತರಿಸಿದ್ದಾರೆ.

ವ್ಯಾಪಾರ ವಹಿವಾಟು ಕುಸಿತವಾಗಿದೆ. ಬಿಸಿಲಿನಿಂದ ಪರಿತಪಿಸುತ್ತಿರುವ ಜನ ಮಜ್ಜಿಗೆ, ಎಳನೀರು, ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಕಚೇರಿಗಳಲ್ಲಿ ಫ್ಯಾನ್, ಏಸಿ ಇಲ್ಲದೆ ಕೆಲಸ ಮಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರೀ ನಿರೀಕ್ಷೆಯಿಂದ ಧಾರವಾಡದಲ್ಲಿ ಪ್ರಾರಂಭಗೊಂಡ ಮಾವು ಮೇಳ ಬಿಸಿಲ ಏರಿಕೆಗೆ ಜನರಿಲ್ಲದೆ, ವ್ಯಾಪಾರ ವಹಿವಾಟು ಇಲ್ಲದೆ ಕಳೆಗುಂದಿದೆ.

ಪೊಲೀಸರು ಮರಗಳ ಆಶ್ರಯ ಪಡೆದು ಸಂಚಾರ ನಿಯಂತ್ರಣ ಮಾಡುತ್ತಿದ್ದಾರೆ. ಬೆಳಗ್ಗೆ 10 ಗಂಟೆಯಿಂದಲೇ ಬಿಸಿಲು ಭಾರೀ ಪ್ರಮಾಣದಲ್ಲಿ ಏರತೊಡಗಿರುವುದು ಜನರನ್ನು ಕಂಗೆಡೆಸಿದೆ. ಉತ್ತರಭಾರತ, ಒಡಿಶಾ, ದಕ್ಷಿಣ ಭಾರತದ ಆಂಧ್ರದಲ್ಲಿ ಉಷ್ಣಾಂಶದ ಏರಿಕೆಯಿಂದ ನೂರಾರು ಜನರು ಸಾವನ್ನಪ್ಪಿದ್ದಾರೆ. ಈಗ ಉತ್ತರ ಕರ್ನಾಟಕದಲ್ಲಿ ಉಷ್ಣಾಂಶ ಏರಿಕೆ ಯಾಗುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

Write A Comment