ಹುಬ್ಬಳ್ಳಿ, ಮೇ 25: ಇಡೀ ರಾಜ್ಯದ ಸ್ವಾಸ್ಥ್ಯ ಕೆಡಿಸಿರುವ ಬಹುಕೋಟಿ ರೂಪಾಯಿಗಳ ಒಂದಂಕಿ ಲಾಟರಿ ಹಗರಣದಲ್ಲಿ ಹಲವು ಮಂದಿ ಉನ್ನತ ಅಧಿಕಾರಿಗಳು ಪಾಲುದಾರರಾಗಿದ್ದು, ಪ್ರಕರಣವನ್ನು ತಕ್ಷಣ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಇಂದಿಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಗರಣದಲ್ಲಿ ಕೇವಲ ಪೊಲೀಸರು ಮತ್ತು ಅಧಿಕಾರಿಗಳು ಮಾತ್ರವಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಕೆ.ಜೆ.ಜಾರ್ಜ್ ಅವರ ಕೈವಾಡವೂ ಇದ್ದು,ಅದನ್ನು ಮರೆಮಾಚಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀವ್ರ ಹದಗೆಟ್ಟಿದೆ. ಅರಾಜಕತೆ ಉಂಟಾಗಿದೆ. ಈ ಸರ್ಕಾರ ಯಾವುದೇ ಕ್ಷಣ ಪತನ ಹೊಂದಬಹುದು ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.
ಪದವಿಪೂರ್ವ ಕಾಲೇಜುಗಳ ಫಲಿತಾಂಶವನ್ನೂ ನಿರ್ವಹಿಸಲು ಸಾಧ್ಯವಾಗದ ಈ ಸರ್ಕಾರ ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ಅರ್ಹತೆಯನ್ನು ಹೊಂದಿಲ್ಲ. ಇದು ಅನಾಲಾಯಕ್ ಸರ್ಕಾರ ಎಂದು ಯಡಿಯೂರಪ್ಪ ಕಿಡಿಕಾರಿದರು. ರಾಜ್ಯಪಾಲರಿಗೆ ಮನವಿ: ಲಾಟರಿ ಅಕ್ರಮ ಕುರಿತಂತೆ ಸಮಗ್ರ ವರದಿ ನೀಡಲು ರಾಜ್ಯಪಾಲರು ಸದರ್ಕಾರಕ್ಕೆ ಸೂಚಿಸಿದ್ದಾರೆ.
ಈ ವರದಿ ಪಡೆದು ರಾಜ್ಯಪಾಲರು ಸರ್ಕಾರದ ವಿರುದ್ದ ಗಂಭೀರ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ರಾಜ್ಯಕ್ಕೆ ಕೇಂದ್ರ ಸರ್ಕಾರವು ಸಾಕಷ್ಟು ಅನುದಾನ ನೀಡಿದರೂ ಅದನ್ನು ಸದ್ಬಳಕೆ ಮಾಡಿಕೊಳ್ಳದೆ ಕೇಂದ್ರ ಅನುದಾನ ನೀಡಿಲ್ಲ ಎಂದು ಸಿದ್ಧರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಈ ಮೂಲಕ ಜನತೆಯನ್ನು ಅವರು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದರು.
