ಕರ್ನಾಟಕ

15ನೇ ಅಖಿಲ ಭಾರತ ಜನವಿಜ್ಞಾನ ಸಮ್ಮೇಳನ ಉದ್ಘಾಟಿಸಿದ ಉಪರಾಷ್ಟ್ರಪತಿ

Pinterest LinkedIn Tumblr

Jnana-Jyothi.jpg-2

ಬೆಂಗಳೂರು, ಮೇ. 22 – ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಆದರೆ ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ವಿಚಾರಗಳ ಚರ್ಚೆಯಿಂದ  ದೂರ ಸರಿಯುವ ಪ್ರವೃತ್ತಿ ಹೆಚ್ಚುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ತಿಳಿಸಿದರು.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ  ಇಂದಿನಿಂದ ಆರಂಭಗೊಂಡ 15ನೇ ಅಖಿಲ ಭಾರತ ಜನವಿಜ್ಞಾನ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ವೈಜ್ಞಾನಿಕ ವಿಚಾರಗಳ ಚರ್ಚೆ ಬಗೆಗಿನ ನಿರ್ಲಕ್ಷ್ಯತನಕ್ಕೆ ಅಂತ್ಯ ಹಾಡಬೇಕು ಇದರಿಂದ ಅಭಿವೃದ್ಧಿಯ ಪಥ ನಮ್ಮದಾಗಲಿದೆ ಎಂದು ಅಭಿಪ್ರಾಯಪಟ್ಟರು.  ಜನರಲ್ಲಿ ರಾಜಕೀಯಕ್ಕಿಂತ ವೈಜ್ಞಾನಿಕ ಅರಿವು ಮುಖ್ಯವಾಗಬೇಕು. ವಿಜ್ಞಾನ ವೈಜ್ಞಾನಿಕ ಬೆಳವಣಿಗೆ ಪ್ರತಿಯೊಬ್ಬ ನಾಗರೀಕರ ಕರ್ತವ್ಯ. ಪ್ರಗತಿಪರರಾಗಿ ಹೊರಹೊಮ್ಮಲು ವಿಜ್ಞಾನ ಅತ್ಯಗತ್ಯ ಎಂದರು.

ಸಮಾಜದಲ್ಲಿ ಬಡತನ, ಹಸಿವು, ರೋಗ, ದಡ್ಡತನ, ಮೂಢನಂಬಿಕೆ, ಅತಿಯಾಗಿ ಬೇರೂರಿದೆ. ಇದನ್ನು ಹೋಗಲಾಡಿಸಲು ಅರಿವು ಅಗತ್ಯ. ಅರಿವಿಗೆ ಶಿಕ್ಷಣ ಮೂಲ ಹಾಗಾಗಿ ಶಿಕ್ಷಣ ಹಾಗೂ ವಿಜ್ಞಾನದ ಬೆಳವಣಿಗೆಗೆ ಹೆಚ್ಚು ಒತ್ತು ನೀಡಬೇಕು ಎಂದು ಕರೆ ನೀಡಿದರು. ಮಾನವೀಯತೆ ಮತ್ತು ಸುಧಾರಣಾ ಮನೋ ಭೂಮಿಕೆಯನ್ನು ಮೂಡಿಸಬೇಕು. ಸಂವಿಧಾನದಲ್ಲಿ ಹೇಳಿದಂತೆ ಪ್ರತಿಯೊಬ್ಬರಿಗೂ ನ್ಯಾಯ, ಸಮಾನತೆ, ಸ್ವಾತಂತ್ರ್ಯ ನೀಡಬೇಕು. ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಸಂಶೋಧನೆ ಅತ್ಯಗತ್ಯ. ವೈಜ್ಞಾನಿಕ ಸಂಶೋಧನೆಗಳಿಂದ ಉತ್ತಮ ಸಾಧನೆ ಸಾಧ್ಯ ಎಂದು ಹೇಳಿದರು. ದೇಶಗಳ ನಡುವಿನ ವಿಕಾಸಕ್ಕೆ ಜ್ಞಾನಸಾಧನೆ ಮಹತ್ತರವಾದದ್ದು. ವಿಜ್ಞಾನದ ಜೊತೆಗೆ ಸ್ನೇಹ ಬೆಳೆಸಿಕೊಂಡರೆ ಭವಿಷ್ಯದ ದಾರಿ ಉಜ್ವಲವಾಗಿರುತ್ತದೆ. ಆಧುನಿಕ ಕಾಲದಲ್ಲಿ ವೈಚಾರಿಕ ಮನೋಭಾವದಿಂದ ಕೈಗಾರಿಕೆ ಸೇರಿದಂತೆ ಇನ್ನಿತರ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಪ್ರತಿಪಾದಿಸಿದರು.

ವಿಜ್ಞಾನ ವ್ಯಕ್ತಿಗತ ಮತ್ತುಜಾತ್ಯಾತೀತ ತಿಳುವಳಿಕೆಗೆ ಒತ್ತು ನೀಡುತ್ತದೆ. ಸಾಮಾಜಿಕ ಸಹಿಷ್ಣುತೆ ಪರವಾಗಿ ಅಸಹಿಷ್ಣುತೆ ವಿರುದ್ಧ ವಿಜ್ಞಾನ ಹೋರಾಡುತ್ತದೆ ಎಂದ ಅವರು ಮಾನವ ಹಾಗೂ ಸಮಾಜದ ಬಹಳಷ್ಟು ಸಮಸ್ಯೆಗಳಿಗೆ ವಿಜ್ಞಾನದಿಂದ ತಾರ್ಕಿಕ ಉತ್ತರ ಸಂಶೋಧನೆಗಳಿಂದ ಸಾಂಕಿಕ ಉತ್ತರ ದೊರೆಯುತ್ತದೆ ಎಂದು ತಿಳಿಸಿದರು. ಆರ್ಕೆಮಿಡಿಸ್ ಕಾಲದಿಂದಲೂ ಸಾಮಾಜಿಕ ಬದಲಾವಣೆಯಾಗಿದೆ. ಇದಕ್ಕೆ ವಿಜ್ಞಾನ ಹಾಗೂ ಸಂಶೋಧನೆ ಹೆಚ್ಚು ಕಾರಣವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ತಿಳುವಳಿಕೆ ಕಡಿಮೆಯಾಗಿರುವುದು ವಿಷಾದಕರ ಎಂದರು.  ಭಾರತರತ್ನ ಪ್ರೊ.ಸಿ.ಎನ್.ಆರ್.ರಾವ್ ಮಾತನಾಡಿ, ದೇಶದಲ್ಲಿನ ಬಡತನ ನಿರ್ಮೂಲನೆ, ಆರೋಗ್ಯ ಸುಧಾರಣೆಗೆ ವೈಜ್ಞಾನಿಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ವೈಜ್ಞಾನಿಕ ಸಾಕ್ಷರತೆ, ಶಿಕ್ಷಣ ವ್ಯವಸ್ಥೆ ಸುಧಾರಣೆ ಹಾಗೂ ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ಸಮಾಜದ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಸರ್ಕಾರದ ಆದ್ಯತೆಗಳು ಬದಲಾಗಬೇಕು. ಮುಂದಿನ 20 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ. ಶಾಲೆಗಳಲ್ಲಿ ಉತ್ತಮ ಶಿಕ್ಷಣ ಹಾಗೂ ಶಿಕ್ಷಕರ ಅಗತ್ಯವಿದೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಬೇಕು. ಒಂದು ಸಂಶೋಧನೆ ಇಡೀ ಮನುಕುಲದ ಭವಿಷ್ಯವನ್ನೇ ಬದಲಾಯಿಸುತ್ತದೆ. ಸಮಾಜದ ಸಮಸ್ಯೆಗೆ ವಿಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು. ಪತ್ರಿಕೆಗಳಲ್ಲಿ ಕೊಲೆ, ಅತ್ಯಾಚಾರದಂತಹ ವಿಚಾರಗಳಿಗೆ ಆದ್ಯತೆ ಕೊಟ್ಟು ಮೊದಲ ಪುಟದಲ್ಲೇ ಪ್ರಕಟ ಮಾಡುವುದರಿಂದ ಯಾವುದೇ ಲಾಭವಿಲ್ಲ. ವಿಜ್ಞಾನದ ಆವಿಷ್ಕಾರಗಳನ್ನು ಪ್ರಕಟಿಸುವುದರಿಂದ ಹೆಚ್ಚು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

Write A Comment