ಕರ್ನಾಟಕ

ಡಿಕೆ ರವಿ ಸಹೋದ್ಯೋಗಿಗೆ ಕಾಲ್ ಮಾಡಿದ್ದು ಕೇವಲ 1 ಬಾರಿ, 44 ಬಾರಿ ಅಲ್ಲ: ಸಿಬಿಐ

Pinterest LinkedIn Tumblr

DKRavi-CBI

ನವದೆಹಲಿ: ನಿಗೂಢವಾಗಿ ಸಾವನ್ನಪ್ಪಿದ ಐಎಎಸ್ ಅಧಿಕಾರಿ ತಮ್ಮ ಸಹೋದ್ಯೋಗಿ ಮಹಿಳಾ ಐಎಎಸ್ ಅಧಿಕಾರಿಗೆ ಕಾಲ್ ಮಾಡಿದ್ದು ಕೇವಲ ಒಂದು ಬಾರಿ, 44 ಬಾರಿ ಅಲ್ಲ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಹೇಳಿದೆ. ರವಿ ನಿಗೂಢ ಸಾವಿನ ಹಿಂದಿರುವ ಸತ್ಯಾಂಶಗಳನ್ನು ಉದ್ದೇಶಪೂರ್ವಕವಾಗಿಯೇ ತಿರುಚಲಾಗಿದೆ ಎಂದಿರುವ ಸಿಬಿಐ, ರಾಜ್ಯ ಸರ್ಕಾರದತ್ತ ಬೊಟ್ಟು ಮಾಡಿದೆ.

ಆರಂಭದಿಂದಲೂ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಮೂಲಕ ರವಿ ಹೆಸರಿಗೆ ಮಸಿ ಬಳಿಯಲು ಯತ್ನಿಸಲಾಗಿದೆ ಎಂದು ಸಿಬಿಐ ಆರೋಪಿಸಿದೆ. ಅಲ್ಲದೆ ಈ ಸುಳ್ಳು ಸುದ್ದಿ ಹರಡಿದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯೂ ಇದೆ.

ಮಹಿಳಾ ಐಎಎಸ್ ಅಧಿಕಾರಿ ಬಗ್ಗೆ ರವಿ ಅವರಿಗೆ ಒಲವಿತ್ತು ಎಂಬ ಸುದ್ದಿ ಹಾಗೂ ಇನ್ನಿತರ ವದಂತಿಗಳು ಸೇರಿದಂತೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಸಿಬಿಐ ಮೂಲಗಳು ತಿಳಿಸಿವೆ.

ಇನ್ನು ರವಿ ಸಾವಿಗೂ ಮುನ್ನ ಮಹಿಳಾ ಐಎಎಸ್ ಅಧಿಕಾರಿಗೆ 44 ಬಾರಿ ಕರೆ ಮಾಡಿದ್ದರು ಎಂದು ಹೇಳಲಾಗಿತ್ತು. ಆದರೆ ಸಿಬಿಐ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ರವಿ ನಿಧನರಾಗುವ ದಿನ ಕೇವಲ ಒಂದು ಬಾರಿ ಮಾತ್ರ ಅವರ ಮೊಬೈಲ್‌ನಿಂದ ಮಹಿಳಾ ಐಎಎಸ್‌ ಅಧಿಕಾರಿಯ ಮೊಬೈಲ್‌ಗೆ ಕರೆ ಮಾಡಲಾಗಿದೆ. ರವಿ ಅವರ ಮೊಬೈಲ್‌ ಕರೆಗಳ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಸಿಬಿಐ ಈ ಮಾಹಿತಿಯನ್ನು ನೀಡಿದೆ.

ರವಿ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಹೈದರಾಬಾದ್ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

Write A Comment