ಕರ್ನಾಟಕ

ಸಿದ್ಧಗಂಗಾಶ್ರೀಗಳಿಗೆ ಪದ್ಮಭೂಷಣ ಪ್ರದಾನ

Pinterest LinkedIn Tumblr

Siddaganga-shree

ತುಮಕೂರು, ಮೇ 13: ನಡೆದಾಡುವ ದೇವರೆಂದೇ ಹೆಸರಾಗಿರುವ ಶತಾಯುಷಿ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಶ್ರೀಗಳಿಗೆ ಮಠದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಭಕ್ತರ ಹರ್ಷೋದ್ಘಾರಗಳ ಮಧ್ಯೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಏ.8ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರದಾನ ಸಮಾರಂಭದಲ್ಲಿ ಶಿವಕುಮಾರ ಶ್ರೀಗಳು ಭಾಗವಹಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿ ಪಿ.ಉಮೇಶ್ ಹಾಗೂ ಶಿಷ್ಟಾಚಾರದ ವಿಭಾಗದ ಜಯವಿಭವ ಸ್ವಾಮಿ ನೇತೃತ್ವದಲ್ಲಿ ಪ್ರದಾನ ಮಾಡಲಾಯಿತು.

ಜಿಲ್ಲಾಧಿಕಾರಿ ಸತ್ಯಮೂರ್ತಿ, ಪೆÇಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಜಿಪಂ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ ಗೋವಿಂದರಾಜು, ಉಪವಿಭಾಗಾಧಿಕಾರಿ ಆನಂದ್, ಅಪರ ಜಿಲ್ಲಾಧಿಕಾರಿ ಅನುರಾಧ ಮತ್ತಿತರರು ಸಮಾರಂಭದಲ್ಲಿದ್ದರು.

ಭಕ್ತರ ಹರ್ಷ:
ಶ್ರೀ ಶಿವಕುಮಾರ ಶ್ರೀಗಳಿಗೆ ಪದ್ಮಭೂಷಣ ಪ್ರಶಸ್ತಿ ನೀಡಿದ ಹಿನ್ನೆಲೆಯಲ್ಲಿ ಭಕ್ತರು ಅತೀವ ಸಂತಸ ವ್ಯಕ್ತಪಡಿಸಿದ್ದಾರಲ್ಲದೆ, ಮಠದ ಆವರಣದಲ್ಲಿ ಹಬ್ಬದ ವಾತಾವರಣ ಉಂಟಾಗಿತ್ತು. ಶಿವಕುಮಾರ ಶ್ರೀಗಳು ಲಕ್ಷಾಂತರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಅನ್ನದಾಸೋಹ ಮಾಡುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.

ನಾನೆಂದು ಪ್ರಶಸ್ತಿಗೆ ಅಪೇಕ್ಷೆ ಪಟ್ಟವನಲ್ಲ

ನಾನೆಂದು ಪ್ರಶಸ್ತಿಗೆ ಅಪೇಕ್ಷೆ ಪಟ್ಟವನಲ್ಲ. ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ನಂಬಿಕೆ ಇಟ್ಟವನು. ಮಾನವ ಜನ್ಮ ಶ್ರೇಷ್ಠವಾದುದು. ಅದನ್ನು ನಮ್ಮ ಕಾಯಕದಲ್ಲಿ ಆಚರಣೆಗೆ ತರಬೇಕೆಂದು ಸಿದ್ಧಗಂಗಾಶ್ರೀಗಳು ಹೇಳಿದರು.

ಪದ್ಮಭೂಷಣ ಪ್ರಶಸ್ತಿ ಪ್ರದಾನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರ ಕಣ್ಣೀರನ್ನು ಹಾಗೂ ಹಸಿವನ್ನು ನೀಗಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಹೆಚ್ಚು ಹೆಚ್ಚು ಆಧ್ಯಾತ್ಮಿಕ ಚಿಂತನೆಗಳು ನಡೆಯಬೇಕು. ಬಡಜನ ಉದ್ಧಾರಕ್ಕಾಗಿ ಪ್ರತಿಯೊಬ್ಬರು ಶ್ರಮಿಸಬೇಕೆಂದರು. ತಮಗೆ ಭಾರತರತ್ನ ನೀಡಬೇಕೆಂದು ರಾಜ್ಯ ಹಾಗೂ ರಾಷ್ಟ್ರದ ಒತ್ತಾಯ ಬರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಆ ಪ್ರಶಸ್ತಿಯ ಆಕಾಂಕ್ಷಿಯಲ್ಲ. ಮನುಷ್ಯರಿಗೆ ಪ್ರಶಸ್ತಿ ಮುಖ್ಯವಲ್ಲ. ಪ್ರಶಸ್ತಿಗಳು ಬಂದಾಕ್ಷಣ ಮನುಷ್ಯನ ಘನತೆ, ಗೌರವ ಹೆಚ್ಚುವುದಿಲ್ಲ ಎಂದರು.

Write A Comment