ಕರ್ನಾಟಕ

ಆರು ಅಂತರರಾಜ್ಯ ಕಳ್ಳರ ಬಂಧನ: ಗಮನ ಬೇರೆಡೆ ಸೆಳೆದು ಹಣ ಕಳವು ಮಾಡುತ್ತಿದ್ದ ದುಷ್ಕರ್ಮಿಗಳು

Pinterest LinkedIn Tumblr

police

ಬೆಂಗಳೂರು: ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಆರು ಮಂದಿ ಅಂತರರಾಜ್ಯ ಕಳ್ಳರನ್ನು ಬಂಧಿಸಿರುವ ವಿದ್ಯಾರಣ್ಯಪುರ ಪೊಲೀಸರು, 17 ಲಕ್ಷ ನಗದು, ರೂ 3 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 20 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದ ಪಿ.ದಾಸ್‌ (35), ಡಿಲ್ಲಿ (40), ವೆಂಕಟರಮಣ (28), ಮೋಹನ್‌ರಾವ್‌ (34), ಬಾಲರಾಜ್‌ (45), ರಮೇಶ್ (40) ಬಂಧಿತ ಆರೋಪಿಗಳು.

ನಾಲ್ಕು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿಗಳು, ರಾಮಮೂರ್ತಿನಗರದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ವಾಸವಾಗಿದ್ದರು. ಆರೋಪಿಗಳು ಬ್ಯಾಂಕ್‌ ಬಳಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದರು ಎಂದು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್.ರೆಡ್ಡಿ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ತಂಡ ಏಪ್ರಿಲ್‌ 12ರಂದು ವಿದ್ಯಾರಣ್ಯಪುರ ಸಮೀಪದ ಎಚ್ಎಂಟಿ ಲೇಔಟ್‌ನಲ್ಲಿ ಗಾಯತ್ರಿ ಹಮೀದ್‌ ಎಂಬುವರ ಕಾರಿನ ಗಾಜು ಒಡೆದು ಕಾರಿನಲ್ಲಿದ್ದ ರೂ 14 ಲಕ್ಷ ದೋಚಿತ್ತು. ಕಲ್ಕೆರೆಯಲ್ಲಿ ತಲೆಮರೆಸಿಕೊಂಡಿದ್ದ ಅರೋಪಿಗಳನ್ನು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಲಾಯಿತು ಎಂದು ಅವರು ಹೇಳಿದರು. ಆರೋಪಿಗಳು ದೆಹಲಿ, ಮುಂಬೈ, ಪುಣೆ, ಚೆನ್ನೈಗಳಲ್ಲಿ ಕೃತ್ಯ ನಡೆಸಿರುವುದು ವಿಚಾರಣೆ ವೇಳೆಗೆ ಬೆಳಕಿಗೆ ಬಂದಿದೆ ಎಂದರು.

ಹೇಗೆ ಕೃತ್ಯ: ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಬರುವವರನ್ನು ಗುರಿಯಾಗಿಸಿಕೊಂಡು ಆರೋಪಿಗಳು ಕೃತ್ಯ ಎಸಗುತ್ತಿದ್ದರು.
ಗ್ರಾಹಕರ ಸೋಗಿನಲ್ಲಿ ಬ್ಯಾಂಕಿಗೆ ಹೋಗುತ್ತಿದ್ದ ಆರೋಪಿಗಳು, ಹೆಚ್ಚು ಹಣ ಡ್ರಾ ಮಾಡುವವರನ್ನು ಗಮನಿಸುತ್ತಿದ್ದರು. ಬಳಿಕ ಮೊಬೈಲ್ ಮೂಲಕ ಹೊರಗಡೆ ನಿಂತಿರುತ್ತಿದ್ದ ಗುಂಪಿನ ಇತರ ಸದಸ್ಯರಿಗೆ ಮಾಹಿತಿ ನೀಡುತ್ತಿದ್ದರು.

ಆರೋಪಿಗಳು, ಹಣ ತೆಗೆದುಕೊಂಡು ಹೋಗುವ ಗ್ರಾಹಕರ ಕಾರಿನ ಬಳಿ ಚಿನ್ನದ ನಾಣ್ಯ ಅಥವಾ ರೂ 10 ನೋಟು ಎಸೆದು, ‘ನಿಮ್ಮ ಹಣ ಬಿದ್ದಿದೆ’ ಎಂದು ಗಮನ ಸೆಳೆಯುತ್ತಿದ್ದರು. ಅದನ್ನು ಎತ್ತಿಕೊಳ್ಳಲು ಹೋದಾಗ ಹಣ ದೋಚುತ್ತಿದ್ದರು.

ಅದು ಸಾಧ್ಯವಾಗದಿದ್ದರೆ ಆರೋಪಿಗಳು ಬ್ಯಾಂಕ್‌ ಗ್ರಾಹಕರನ್ನು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಹೋಗಿ ವಿಳಾಸ ಕೇಳುವ ನೆಪದಲ್ಲಿ ಅಡ್ಡ ಹಾಕುತ್ತಿದ್ದರು. ಈ ವೇಳೆ ಇನ್ನೊಂದು ಬೈಕ್‌ನಲ್ಲಿ ಬರುತ್ತಿದ್ದ ಆರೋಪಿಗಳು ಕಾರಿನಲ್ಲಿ ಇಟ್ಟಿದ್ದ ಹಣ ಕಳವು ಮಾಡುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.

Write A Comment