ಕರ್ನಾಟಕ

ಕಡಿಮೆ ಖರ್ಚಿನಲ್ಲಿ ಬೆಳೆಯಿರಿ ಪಪ್ಪಾಯ: ಗಳಿಸಿ ಅಧಿಕ ಆದಾಯ

Pinterest LinkedIn Tumblr

pappaya-new-photo

ವಿಟಮಿನ್ ಸಿ ಜೊತೆಗೆ ಅಧಿಕ ಕಾರ್ಬೋಹೈಡ್ರೇಟ್ ಹಾಗೂ ಔಷಧೀಯ ಗುಣ ಹೊಂದಿರುವ ಪಪ್ಪಾಯ ಆರೋಗ್ಯಕ್ಕೂ ಉತ್ತಮ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಸಂಪಾದಿಸಬಹುದಾದಂತ ಬೆಳೆ.  ಅಲ್ಪ ಸಮಯದಲ್ಲಿ ಬೆಳೆಯುವ ಪಪ್ಪಾಯ ದೀರ್ಘಕಾಲದ ಫಸಲನ್ನು ನೀಡುತ್ತದೆ.

ಪಪ್ಪಾಯವನ್ನು ಮೂಲತಃ ದಕ್ಷಿಣ ಮೆಕ್ಸಿಕೋ ಮತ್ತು ಕೋಸ್ಟರಿಕಾ ದಲ್ಲಿ ಮಾತ್ರ ಬೆಳೆಯಲಾಗುತ್ತಿತ್ತು. ನಂತರ ಪಪ್ಪಾಯ ಕೃಷಿ ಭಾರತಕ್ಕೂ ಹಬ್ಬಿತು. ಪ್ರಪಂಚಾದ್ಯಂತ ಪ್ರತಿ ವರ್ಷ ಆರು ಮಿಲಿಯನ್ ಟನ್ ಪಪ್ಪಾಯ ಬೆಳೆಯಲಾಗುತ್ತದೆ, ಅದರಲ್ಲಿ ಭಾರತವೊಂದೇ 3 ಮಿಲಿಯನ್ ಟನ್ ಪಪ್ಪಾಯ ಬೆಳೆಯುತ್ತದೆ  ಎಂದು ಅಂದಾಜಿಸಲಾಗಿದೆ. ಬ್ರೆಜಿಲ್, ಮೆಕ್ಸಿಕೋ, ನೈಜಿರೀಯಾ, ಇಂಡೋನೇಶಿಯ. ಚೀನಾ, ಪೆರು, ಥೈಲ್ಯಾಂಡ್ ಮತ್ತು ಪಿಲಿಪ್ಪೈನ್ಸ್ ಗಳಲ್ಲಿಯೂ ಪಪ್ಪಾಯವನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತದೆ.

ಭಾರತದಲ್ಲಿ ಕರ್ನಾಟಕ, ಆಂಧ್ರ, ಗುಜರಾತ್, ಒರಿಸ್ಸಾ, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪಪ್ಪಾಯ ಬೆಳೆಯಲಾಗುತ್ತದೆ. ಹಿಂದೆ ಎಂದರೆ 1991 ರಲ್ಲಿ ಶೇ.63 ರಷ್ಟು ಪಪ್ಪಾಯ ಬೆಳೆಯಲಾಗುತ್ತಿತ್ತು.  ಆದರೆ  2001-2001 ರ ವೇಳೆಗೆ 73. 7 ರಷ್ಟು ಪಪ್ಪಾಯ ಬೆಳೆ ಬೆಳೆಯುವ ಪ್ರಮಾಣದಲ್ಲಿ ಏರಿಕೆಯಾಗಿದೆ.

ಹಿಂದೆಲ್ಲಾ ಕೇವಲ ಮನೆ ಬಳಕೆಗೆ ಮಾತ್ರ ಬೆಳೆಯುತ್ತಿದ್ದ ಪಪ್ಪಾಯವನ್ನು ಈಗ ವಾಣಿಜ್ಯ ಬೆಳೆಯನ್ನಾಗಿ ಬೆಳೆಯಲಾಗುತ್ತಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸುವ ಬೆಳೆ ಇದಾಗಿರುವುದರಿಂದ ರೈತರು ಸಹಜವಾಗಿಯೇ ಪಪ್ಪಾಯ ಬೆಳೆಯೆಡೆಗೆ ಆಕರ್ಷಿತರಾಗುತ್ತಿದ್ದಾರೆ.

ಎಲ್ಲಾ ರೀತಿಯ ಮಣ್ಣಿನಲ್ಲೂ ಪಪ್ಪಾಯ ಬೆಳೆಯಬಹುದು. ಆದರೆ ಕಪ್ಪು ಮಣ್ಣು  ಅತ್ಯಂತ ಸೂಕ್ತ. ಹೆಚ್ಚು ಬಿಸಿಲು ಇರುವ ಪ್ರದೇಶದಲ್ಲಿ ಪಪ್ಪಾಯ ಬೆಳೆದರೆ ಅನುಕೂಲವಾಗುತ್ತದೆ. ವರ್ಷದ ಎಲ್ಲಾ ಋತುಗಳಲ್ಲಿಯೂ ಎಲ್ಲಾ ಕಾಲಮಾನದಲ್ಲೂ ಪಪ್ಪಾಯ ಬೆಳೆಯಬಹುದಾದ್ದರಿಂದ ಇದು ರೈತರಿಗೆ ಅತಿ ಹೆಚ್ಚಿನ ವರಮಾನ ತಂದು ಕೊಡುತ್ತದೆ. ಕಡಿಮೆ ಖರ್ಚಿನಲ್ಲಿ ಅತಿ ಹೆಚ್ಚು ಇಳುವರಿ ಪಡೆಯಬಹುದಾಗಿದೆ. ಭೂಮಿಯ ಮೇಲ್ಬಾಗ ಅಂದರೆ ಸುಮಾರು 5 ರಿಂದ 6 ಅಡಿ ಎತ್ತರದವರೆಗೆ ಪಪ್ಪಾಯ ಗಿಡ ಬೆಳೆಯುತ್ತದೆ. ಹೀಗಾಗಿ ಕೆಳಭಾಗದಲ್ಲಿ ಮತ್ತೊಂದು ಬೆಳೆ ಬೆಳೆದು ಆದಾಯ ಗಳಿಸಬಹುದಾಗಿದೆ. ಮೂರರಿಂದ 6 ತಿಂಗಳೊಳಗೆ ಬೆಳೆಯುವ ಪಪ್ಪಾಯ ಗಿಡ,  ಕನಿಷ್ಠ ಪಕ್ಷ 3 ರಿಂದ 4 ವರ್ಷ ಫಸಲು ನೀಡುತ್ತದೆ.

ಪಪ್ಪಾಯ ಗಿಡ ಬೆಳೆಸುವುದು ಅತಿ ಸುಲಭ. ಹೇಗೆಂದರೆ ಚೆನ್ನಾಗಿ ಬಲಿತ ಹಾಗೂ ಮಾಗಿದ ಪಪ್ಪಾಯ ಹಣ್ಣಿನ ಬೀಜ ತೆಗೆದುಕೊಂಡು ತೊಳೆಯಬೇಕು. ನಂತರ ನೆರಳಿನಲ್ಲಿ ಒಣಗಿಸಬೇಕು. ಆಮೇಲೆ ಅವುಗಳನ್ನು ಟೈಟ್ ಮುಚ್ಚಳವಿರುವ ಡಬ್ಬಿಯಲ್ಲಿ ಮುಚ್ಚಿ ಇಡಬೇಕು. ನಂತರ ತೇವಾಂಶ ಇರುವ ಮಣ್ಣಿನಲ್ಲಿ ಪಪ್ಪಾಯ ಬೀಜವನ್ನು ಹಾಕಿದರೆ ಮೊಳಕೆ ಹೊಡೆದು ಸಸಿ ಬೆಳೆಯುತ್ತವೆ.

ಪಪ್ಪಾಯ ಗಿಡ ಬೆಳೆಸಲು ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ. ಕಡಿಮೆ ನೀರಿನಲ್ಲೇ ಪಪ್ಪಾಯ ಬೆಳೆಯಬಹುದಾಗಿದೆ. ಬೇಸಿಗೆ ಕಾಲದಲ್ಲಿ ವಾರಕ್ಕೆ 2 ದಿನ ನೀರು ಹಾಕಿದರೆ ಸಾಕಾಗುತ್ತದೆ. ಒಂದು ವೇಳೆ ಗಿಡಕ್ಕೆ ನೀರು ಸಿಗದಿದ್ದರೆ ಹೂವುಗಳು ಉದುರುಲು ಶುರುವಾಗುತ್ತದೆ. ನೀರು ವ್ಯರ್ಥವಾಗುವುದನ್ನು ತಡೆಯಲು ಹನಿ ನೀರಾವರಿ ಪದ್ಧತಿ ಪಪ್ಪಾಯ ಬೆಳೆಗೆ ಹೆಚ್ಚು ಉಪಯುಕ್ತ.

ಇನ್ನು ಪಪ್ಪಾಯ ಬೆಳೆಗೆ ಹೆಚ್ಚಿನ ಗೊಬ್ಬರದ ಅವಶ್ಯಕತೆ ಇದೆ. ವರ್ಷದಲ್ಲಿ ಮೂರು ಬಾರಿ  ಪಪ್ಪಾಯ ಗಿಡಗಳಿಗೆ ಗೊಬ್ಬರ ಹಾಕಬೇಕು. ಸೆಪ್ಟಂಬರ್, ನವೆಂಬರ್ ಹಾಗೂ ಜನವರಿ ತಿಂಗಳಲ್ಲಿ ಗೊಬ್ಬರ ಹಾಕಿದರೆ ಹೆಚ್ಚು ಉಪಯುಕ್ತ.  ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬಾರದು. ಸಾವಯವ ಗೊಬ್ಬರದಿಂದ ಪಪ್ಪಾಯ ಬೆಳೆದರೆ ಆರೋಗ್ಯಕ್ಕೂ ಒಳ್ಳೆಯದು. ಜೊತೆಗೆ ಹಣ್ಣು ತಿನ್ನಲು ರುಚಿಯಾಗಿರುತ್ತದೆ.

ಪಪ್ಪಾಯಕ್ಕೂ ರೋಗ ತಗುಲುತ್ತದೆ. ಎಲೆಯ ಮೇಲೆ ಸಣ್ಣಸಣ್ಣ ಕಪ್ಪು ಚುಕ್ಕೆಗಳು ಮೂಡುತ್ತವೆ. ಒಂದು ವೇಳೆ ಗಿಡಕ್ಕೆ ರೋಗಕ್ಕೆ ಬಂದರೆ ಸೂಕ್ತ ಔಷಧಿ ಸಿಂಪಡಿಸಬೇಕಾಗುತ್ತದೆ.

ಪಪ್ಪಾಯಕ್ಕೆ ದೇಶದಲ್ಲೇ ಅತಿ ಹೆಚ್ಚು ಬೇಡಿಕೆ ಇರುವುದರಿಂದ ಕೇವಲ 0.08 ರಷ್ಟು ಮಾತ್ರ ರಪ್ತು ಮಾಡಲಾಗುತ್ತದೆ.  ಭಾರತದಿಂದ ಬಹ್ರೈನ್, ಕುವೈತ್, ಖತಾರ್, ಸೌದಿ  ಅರೇಬಿಯಾ ಹಾಗೂ ನೆದರ್ ಲ್ಯಾಂಡ್ ಗೆ ರಪ್ತು ಮಾಡಲಾಗುತ್ತದೆ. ಪಪ್ಪಾಯದಲ್ಲಿ ವಿವಿಧ ತಳಿಗಳಿವೆ. ಅವುಗಳಲ್ಲಿ ಕರ್ನಾಟಕದಲ್ಲಿ ಕೂರ್ಗ್ ಹನಿ ಡ್ಯೂ, ಹನಿ ಡ್ಯೂ, ಪುಸಾ ನಹ್ನಾ, ಮತ್ತು ಪುಸಾ ಡಿಲಿಶಿಯಸ್ ಪ್ರಬೇಧದ ಪಪ್ಪಾಯ ಬೆಳೆಯಲಾಗುತ್ತದೆ.

ದೆಹಲಿ ಮತ್ತು ಮುಂಬಯಿ ಪಪ್ಪಾಯಕ್ಕೆ ಪ್ರಮುಖ ಮಾರುಕಟ್ಟೆ ಇರುವ ಪ್ರದೇಶಗಳು. ವರ್ಷದ ಎಲ್ಲಾ ಸೀಸನ್ ನಲ್ಲೂ ಈ ಮಾರುಕಟ್ಟೆಗೆ ಪಪ್ಪಾಯ ಹಣ್ಣು ಪೂರೈಕೆಯಾಗುತ್ತದೆ. ಪಪ್ಪಾಯ ಮೊದಲು ಹಸಿರು ಬಣ್ಣದಲ್ಲಿರುತ್ತದೆ. ಮಾರುಕಟ್ಟೆಯಲ್ಲಿ ಪಪ್ಪಾಯ ಹಣ್ಣಿನ ಗಾತ್ರ, ಬಣ್ಣ ತೂಕದ ಮೇಲೆ ಮೂರು ರೀತಿ ವಿಭಾಗಿಸಿ ಮಾರಾಟ ಮಾಡಲಾಗುತ್ತದೆ. ಹಳದಿ ಬಣ್ಣ ಬಂದರೆ ಅದು ಹಣ್ಣಾಗಿದೆ ಎಂದು ತಿಳಿಯುತ್ತದೆ. ಇನ್ನು ಪಪ್ಪಾಯ ಹಣ್ಣು ತುಂಬಾ ಮೃದುವಾಗಿರುವುದರಿಂದ ಹಣ್ಣನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವಾಗ ಹೆಚ್ಚಿನ ಜಾಗೃತೆ ವಹಿಸಬೇಕಾಗುತ್ತದೆ. ಬಿದಿರು ಬೊಂಬಿನಲ್ಲಿ ಮಾಡಿದ ಬಾಕ್ಸ್ ಗಳಲ್ಲಿ ಬಾಳೆ ಎಲೆಯ ಮೇಲೆ  ಪಪ್ಪಾಯ ಹಾಕಿ ಸಾಗಿಸಬಹುದಾಗಿದೆ.

ಒಂದು ಎಕರೆಯಲ್ಲಿ ಪಪ್ಪಾಯ ಬೆಳೆಯಲು ಕನಿಷ್ಠ 1 ಲಕ್ಷದ 25 ಸಾವಿರ ರೂಪಾಯಿ ಬೇಕಾಗುತ್ತದೆ. ಇಳುವರಿ ಆರಂಭವಾದ ಮೇಲೆ ಮೊದಲ ವರ್ಷ 30 ಟನ್, ಎರಡನೇ ವರ್ಷ, 25 ಟನ್, ಹಾಗೂ ಮೂರನೇ ವರ್ಷ 20 ಟನ್ ಬೆಳೆ ತೆಗೆಯಬಹುದಾಗಿದೆ. ಪ್ರತಿ ಟನ್ ಗೆ ಮಾರುಕಟ್ಟೆಯಲ್ಲಿ 4500-5000 ರೂ ಬೆಲೆ ಇರುತ್ತದೆ.

ಇನ್ನು ಪಪ್ಪಾಯ ಬೆಳೆಯಲು ಅಗ್ರಿಕಲ್ಚರ್ ಬ್ಯಾಂಕ್ ಗಳು ಲೋನ್ ಸಹ ನೀಡಲು ಮುಂದಾಗಿವೆ. ಬೆಳೆ ಸಾಲ ಪಡೆದು ಪಪ್ಪಾಯ ಬೆಳೆ ಬೆಳೆಯಬಹುದಾಗಿದೆ.

ಶಿಲ್ಪ.ಡಿ ಚಕ್ಕೆರೆ.

Write A Comment