ಚಿಕ್ಕಮಗಳೂರು: ಪ್ರೀತಿಸಿದ್ದವಳು ಬೇರೆಯವನನ್ನು ವರಿಸುತ್ತಿದ್ದಾಳೆ ಎಂಬ ಕಾರಣಕ್ಕೆ ಖಿನ್ನತೆಗೊಳಗಾದ ಪ್ರೇಮಿಯೊಬ್ಬ ಆಕೆಗೆ ವಿಷ ಉಣಿಸಿ ಕೊಲೆ ಮಾಡಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಕಲ್ಲುದೊಡ್ಡಿಯ ನಿವಾಸಿ ಬಷೀರ್ ಅಹ್ಮದ್ ಅವರ ಪುತ್ರಿ ಆಯಿಶಾ ಮರಿಯಂ (18) ಕೊಲೆಯಾದ ದುರ್ದೈವಿಯಾಗಿದ್ದಾಳೆ.
ಪ್ರಥಮ ಪಿಯುಸಿ ಓದುತ್ತಿದ್ದ ಆಯಿಶಾ ತಮ್ಮದೇ ಗ್ರಾಮದ ನಿವಾಸಿ ಸಲ್ಮಾನ್ ಎಂಬುವನನ್ನು ಕಳೆದ 6 ತಿಂಗಳಿಂದ ಪ್ರೀತಿಸುತ್ತಿದ್ದಳು. ಈ ವಿಷಯ ಆಕೆಯ ಮನೆಯವರಿಗೆ ತಿಳಿದು ಆಕೆಗೆ ಸಂಬಂಧಿಕನೊಬ್ಬನ ಜತೆ ಮದುವೆಯನ್ನು ನಿಶ್ಚಯಿಸಿದ್ದಾರೆ. ಜತೆಗೆ ಸಲ್ಮಾನ್‌ಗೆ ಕರೆದು ಬುದ್ಧಿ ನೀಡಿದ್ದಾರೆ. ಆದರೆ ಕಳೆದ ಶನಿವಾರ ಆಯಿಶಾ ಜಿಲ್ಲಾಸ್ಪತ್ರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ತನ್ನ ಮಗಳ ಸಾವಿಗೆ ಸಲ್ಮಾನ್ ಕಾರಣ. ಆತನೇ ಅವಳಿಗೆ ವಿಷ ಉಣಿಸಿದ್ದಾನೆ ಎಂದು ಆಕೆಯ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪ್ರೀತಿಸಿದವಳು ತನ್ನಿಂದ ದೂರಾಗುತ್ತಿದ್ದಾಳೆ ಎಂದು ಕೋಪಗೊಂಡ ಸಲ್ಮಾನ್ ಕಳೆದ ಶನಿವಾರ ಆಕೆಯನ್ನು ಬಾಬಾ ಬುಡನ್‌ಗಿರಿಗೆ ಕರೆದೊಯ್ದು, ನಿನ್ನನ್ನು ಬಿಟ್ಟಿರಲು ಸಾಧ್ಯವಿಲ್ಲ. ನಿಮ್ಮ ಮನೆಯವರು ನಮ್ಮನ್ನು ದೂರ ಮಾಡುತ್ತಿದ್ದಾರೆ. ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಪುಸಲಾಯಿಸಿದ್ದಾನೆ. ಅದಕ್ಕೊಪ್ಪಿದ ಆಕೆಗೆ ವಿಷ ಉಣಿಸಿದ ಆತ ತಾನು ವಿಷ ಕುಡಿದಿಲ್ಲ. ಆಕೆ ಮೃತಪಟ್ಟ ಬಳಿಕ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಆಕೆಯನ್ನು ಸೇರಿಸಿ ಪರಾರಿಯಾಗಿದ್ದಾನೆ ಎಂದು ಬಷೀರ್ ಆರೋಪಿಸಿದ್ದಾರೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆಯನ್ನು ಕೈಗೊಂಡಿದ್ದಾರೆ.