ಕರ್ನಾಟಕ

ಇದಕ್ಕಿಂತ ಕೆಟ್ಟ ಆಡಳಿತ ನಾನು ನೋಡಿಲ್ಲ: ಕಾಗೋಡು ತಿಮ್ಮಪ್ಪ; ಮತ್ತೆ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ ಸ್ಪೀಕರ್

Pinterest LinkedIn Tumblr

speaker-kagodu

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಮತ್ತೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು, ಇದಕ್ಕಿಂತ ಕೆಟ್ಟ ಆಡಳಿತ ಇನ್ನೊಂದಿಲ್ಲ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಕಾಗೋಡು ತಿಮ್ಮಪ್ಪ ಅವರು, ಬೆಂಗಳೂರು ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಒತ್ತುವರಿ ವಿಚಾರದಲ್ಲಿ ಸರ್ಕಾರ ತಪ್ಪು ಇಟ್ಟುಕೊಂಡು ಜನರನ್ನು ಶಿಕ್ಷಿಸುವುದು ಸರಿಯಲ್ಲ. ಕಾನೂನು ಎನ್ನುವುದು ಎಲ್ಲರಿಗೂ ಒಂದೇ. ಸಾಮಾನ್ಯ ಜನರಿಗೂ ಆಕಾಶದ ಮೇಲೆ ಇದ್ದವರಿಗೂ ಒಂದೇ ಕಾನೂನು ಇರಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

“ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಮಾಡಿ ಬಿಡಿಎ ಬಡಾವಣೆ ಮಾಡುವುದು ಸರಿಯಲ್ಲ. ನಮಗೂ ಡಾಲರ್ಸ್ ಕಾಲೋನಿಯಲ್ಲಿ ಸೈಟ್ ಕೊಟ್ಟಿದ್ದಾರೆ, ಶಾಸಕರ ಲೆಜಿಸ್ಲೇಟಿವ್ ಸೊಸೈಟಿಯಿಂದ ಸೈಟ್ ನೀಡಿದ್ದು, ಕಾಲಕಾಲಕ್ಕೆ ರೆಗ್ಯುಲರೈಸ್ ಮಾಡಬೇಕಾಗಿದ್ದು ಸರ್ಕಾರದ ಕರ್ತವ್ಯ. ಡಾಲರ್ಸ್ ಕಾಲೋನಿ ಕೆರೆ ಭೂಮಿಯನ್ನು ಬಿಡಿಎ ಕಾನೂನು ಬದ್ಧವಾಗಿ ಮಾಡಿದೆ. ಸರ್ಕಾರ ಹಾಗೂ ಬಿಡಿಎ ನಿಯಮದಿಂದ ಜನಸಾಮಾನ್ಯರಿಗೆ ಅನ್ಯಾಯ ಆಗುತ್ತಿದೆ. ಈ ವಿಚಾರವನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುತ್ತೇನೆ” ಎಂದು ಕಾಗೋಡು ತಿಮ್ಮಪ್ಪ ಅವರು ಹೇಳಿದ್ದಾರೆ.

ಇದೇ ವೇಳೆ ಸದನ ಸಮಿತಿ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಕಾಗೋಡು ತಿಮ್ಮಪ್ಪ ಅವರು, “ಸದನ ಸಮಿತಿ ರಚಿಸಿ ವರದಿ ಕೊಡಲು ಕಾಲಾವಕಾಶ ನೀಡಿದ್ದೇವೆ. ಉದ್ದೇಶದಂತೆ ಸಮಿತಿ ಕಾರ್ಯಗತವಾಗುತ್ತಿಲ್ಲ ಎಂಬ ಯೋಚನೆ ಆರಂಭವಾಗಿದ್ದು, ಸಮಿತಿ ಅಧ್ಯಕ್ಷರನ್ನು ಕರೆಸಿ ಬೇಗ ವರದಿ ಕೊಡಲು ಸೂಚಿಸುತ್ತೇನೆ ಎಂದರು.

ಸ್ಪೀಕರ್ ಕಾಗೋಡು ನಿವಾಸಕ್ಕೆ ಜಾರ್ಖಂಡ್ ಸ್ಪೀಕರ್ ದಿನೇಶ್ ಓರಾನ್ ಭೇಟಿ ನೀಡಿದ್ದರು. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಗೋಡು ನಿವಾಸದಲ್ಲಿ ಜಾರ್ಖಂಡ್ ಸ್ಪೀಕರ್ ದಿನೇಶ್ ಓರಾನ್ ಅವರಿಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಉಪಹಾರ ಕೂಟ ಏರ್ಪಡಿಸಿದ್ದರು. ಈ ವೇಳೆ ಉಭಯ ರಾಜ್ಯ ಸ್ಪೀಕರ್ ಗಳು ಕೆಲಹೊತ್ತು ಸೌಹಾರ್ಧಯುತ ಚರ್ಚೆ ನಡೆಸಿದರು.

-ಕನ್ನಡಪ್ರಭ

Write A Comment