ಕರ್ನಾಟಕ

ಗಾಂಧಿ ಮೊದಲ ಹೆಜ್ಜೆ ಶತಮಾನೋತ್ಸವ: ಪ್ರತಿ ಜಿಲ್ಲೆಯಲ್ಲಿ ಗಾಂಧಿ ಭವನ

Pinterest LinkedIn Tumblr

ga

ಬೆಂಗಳೂರು, ಮೇ 8: ಮಹಾತ್ಮಾ ಗಾಂಧೀಜಿಯವರ ವಿಚಾರಧಾರೆಗಳನ್ನು ಯುವ ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಗಾಂಧಿ ಭವನವನ್ನು ನಿರ್ಮಿಸಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗಾಂಧಿ ಸ್ಮಾರಕ ನಿಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ನಗರದ ಜ್ಞಾನಜ್ಯೋತಿ ಆವರಣದಲ್ಲಿ ಆಯೋಜಿಸಿದ್ದ ‘ಕರ್ನಾಟಕದಲ್ಲಿ ಗಾಂಧಿ ಮೊದಲ ಹೆಜ್ಜೆ ಶತಮಾನೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿ ತಮ್ಮ ಇಡೀ ಬದುಕಿನಲ್ಲಿ ಸತ್ಯ ಹಾಗೂ ಅಹಿಂಸೆಯನ್ನು ಪ್ರತಿಪಾದಿಸಿದ್ದರು. ಈ ಚಿಂತನೆಗಳು ಪ್ರಸ್ತುತ ಸಮಾಜಕ್ಕೆ ತೀರ ಅಗತ್ಯವಾಗಿವೆ. ಹೀಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಿಸಿ, ಅವರ ವಿಚಾರಧಾರೆಯನ್ನು ಹರಡ ಲಾಗುವುದೆಂದು ಹೇಳಿದರು.

ವಿಶ್ವದಲ್ಲಿ ಸತ್ಯ, ಶಾಂತಿ ಹಾಗೂ ಕೋಮುಸಾಮರಸ್ಯವನ್ನು ಸ್ಥಾಪಿಸುವುದು ಗಾಂಧೀಜಿಯವರ ಆಶಯವಾಗಿತ್ತು ಹಾಗೂ ಗಾಂಧೀಜಿ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್, ಬೌದ್ಧ, ಸಿಖ್ ಸೇರಿದಂತೆ ಎಲ್ಲ ಧರ್ಮಗಳನ್ನು ಪ್ರೀತಿಸುತ್ತಿದ್ದರು.ಹೀಗಾಗಿ ಇಂತಹ ಚಿಂತನೆಗಳನ್ನು ಇಂದಿನ ಯುವಕರು ಮೈಗೂಡಿಸಿಕೊಂಡು, ಆ ದಾರಿಯಲ್ಲಿ ನಡೆಯಬೇಕೆಂದು ಅವರು ತಿಳಿಸಿದರು.

ಗಾಂಧೀಜಿ ಕರ್ನಾಟಕದ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದು, 18 ಬಾರಿ ಇಲ್ಲಿಗೆ ಭೇಟಿ ನೀಡಿದ್ದರು. ಹೀಗಾಗಿಯೇ ರಾಜ್ಯದಲ್ಲಿ ಗಾಂಧಿವಾದಿಗಳ ಸಂಖ್ಯೆ ಹೆಚ್ಚಿದೆ. ಇದು ರಾಜ್ಯ ಕೋಮು ಸೌಹಾರ್ದತೆಯಿಂದ ಇರಲು ಸಾಧ್ಯವಾಗಿದೆ. ಇದನ್ನು ಮುಂದುವರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಗಾಂಧೀಜಿ ವಿಚಾರಧಾರೆಗಳನ್ನು ಬಿತ್ತುವಂತಹ ಶಿಬಿರಗಳು ನಡೆಯಲಿ. ಇದಕ್ಕೆ ಅಗತ್ಯವಿರುವ ನೆರವನ್ನು ನೀಡಲು ಸರಕಾರ ಸಿದ್ಧವಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಗಾಂಧೀಜಿ ಗ್ರಾಮಸ್ವರಾಜ್ಯಕ್ಕೆ ಹೆಚ್ಚು ಒತ್ತು ಕೊಟ್ಟವರು. ಗ್ರಾಮಗಳಲ್ಲಿರುವ ಕಟ್ಟಕಡೆಯ ವ್ಯಕ್ತಿ ಸ್ವಾವಲಂಬನೆಯಿಂದ ಜೀವನ ನಡೆಸಬೇಕು. ಆಗ ಮಾತ್ರ ದೇಶದ ನಿಜವಾದ ಅಭಿವೃದ್ಧಿ ಎಂದು ಭಾವಿಸಿದ್ದರು. ಹೀಗಾಗಿ ರಾಜ್ಯ ಸರಕಾರ ಗಾಂಧೀಜಿಯವರ ಸರ್ವೋದಯ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದರು.
ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಮಹಾತ್ಮಾ ಗಾಂಧೀಜಿಯವರ ವಿಚಾರಧಾರೆ ಹಾಗೂ ಹೋರಾಟಗಳಿಂದ ದೇಶಕ್ಕೆ ಸ್ವಾತಂತ್ರ ಸಿಕ್ಕಿತು. ಆದರೆ, ಸ್ವಾತಂತ್ರನಂತರದ ಜನಪ್ರತಿನಿಧಿಗಳು ಗಾಂಧೀಜಿಯ ವಿಚಾರಧಾರೆಗಳಿಗೆ ಸಂಪೂರ್ಣ ತಿಲಾಂಜಲಿಯಿಟ್ಟ ಪರಿಣಾಮ ದೇಶವು ಕೊಳ್ಳುಬಾಕ ಸಂಸ್ಕೃತಿಯತ್ತ ಧಾವಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತವನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸುಮಾರು ಮುನ್ನೂರಕ್ಕೂ ಹೆಚ್ಚು ವರ್ಷ ಆಳ್ವಿಕೆ ಮಾಡಿ, ಇಡೀ ಸಂಪತ್ತು ಲೂಟಿ ಮಾಡಿತು. ಆದರೆ, ಈಗ ಸಾವಿರಾರು ವಿದೇಶಿ ಕಂಪನಿಗಳು ಅಳಿದುಳಿದಿರುವ ಸಂಪತ್ತನ್ನು ಲೂಟಿ ಮಾಡುತ್ತಿವೆ. ಈ ವಿದೇಶಿ ಕಂಪನಿಗಳಿಗೆ ನಮ್ಮ ಜನಪ್ರತಿನಿಧಿಗಳು ತೆರಿಗೆ ವಿನಾಯಿತಿ ಕೊಟ್ಟು ಸಹಕರಿಸುತ್ತಿದ್ದಾರೆ. ಇದಕ್ಕಿಂತ ಘೋರ ಪಾಪ ಮತ್ತೊಂದಿಲ್ಲವೆಂದು ಅವರು ಕಿಡಿಕಾರಿದರು. ದೇಶವನ್ನು ಸರ್ವತೋಮುಖ ಅಭಿವೃದ್ಧಿಯೆಡೆಗೆ ತರಲು ಸುಮಾರು 12ಕ್ಕೂ ಹೆಚ್ಚು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತರಲಾಯಿತು. ಆದರೂ, ಬಡತನ ಸಂಪೂರ್ಣ ನಿವಾರಣೆಯಾಗಿಲ್ಲ. ಹೀಗಾಗಿ ಮುಂದೆ 2 ಪಂಚವಾರ್ಷಿಕ ಯೋಜನೆಗಳನ್ನು ಕೇವಲ ಬಡತನ ನಿವಾರಣೆಗೆ ಮೀಸಲಿಟ್ಟು, ದೇಶವನ್ನು ಬಡತನದಿಂದ ಮುಕ್ತಗೊಳಿಸಬೇಕಾದ ಅಗತ್ಯವಿದೆ ಎಂದವರು ತಿಳಿಸಿದರು.

ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆ ಸಚಿವ ರೋಷನ್ ಬೇಗ್, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಯುವ ಸಬಲೀಕರಣ ಇಲಾಖೆ ಕಾರ್ಯದರ್ಶಿ ಡಾ.ನಾಗಾಂಬಿಕಾದೇವಿ, ವಿವಿ ಕುಲಪತಿ ತಿಮ್ಮೇಗೌಡ, ಹಿರಿಯ ಸ್ವಾತಂತ್ರ ಹೋರಾಟಗಾರ ಪಾಟೀಲ ಪುಟ್ಟಪ್ಪ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಹೊ.ಶ್ರೀನಿವಾಸಯ್ಯ ಮತ್ತಿತರರಿದ್ದರು.

Write A Comment