ಕರ್ನಾಟಕ

ಕರ್ನಾಟಕದಲ್ಲೂ ಇವೆ ಭೂಕಂಪ ಸೂಕ್ಷ್ಮ ವಲಯಗಳು

Pinterest LinkedIn Tumblr

Karnataka-Map

ಬೆಂಗಳೂರು, ಏ.28- ನೇಪಾಳದಲ್ಲಿ ಉಂಟಾಗಿರುವ ಸರಣಿ ಭೂಕಂಪದಿಂದ ಜನರು ಆತಂಕಕ್ಕೀಡಾಗಿದ್ದು, ಕರ್ನಾಟಕವೂ ಕೂಡ ಭೂಕಂಪ ಮುಕ್ತವಾಗಿಲ್ಲ. ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡಗಳಿಗೆ  ಭೂಕಂಪ ನಿರೋಧಕ ಶಕ್ತಿ ಅಳವಡಿಕೆ ಕಡ್ಡಾಯಗೊಳಿಸಿದ್ದರೂ ಪರಿಣಾಮಕಾರಿ ಅನುಷ್ಠಾನ ಆಗುತ್ತಿಲ್ಲ. ರಾಜ್ಯದಲ್ಲೂ ಕೂಡ ಭೂಕಂಪ ಸೂಕ್ಷ್ಮ ವಲಯಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ ಬೆನ್ನಲ್ಲೇ ಭೂಕಂಪ ನಿರೋಧಕ ಶಕ್ತಿಯನ್ನು ಕಟ್ಟಡಗಳಿಗೆ ಅಳವಡಿಸಿಕೊಳ್ಳುವಂತೆ ಸಲಹೆ ಮಾಡಿದ್ದಾರೆ.

ತಮಿಳುನಾಡು ಹಾಗೂ ಕರ್ನಾಟಕ ಗಡಿ ಹೊಂದಿಕೊಂಡಂತಿರುವ ಕೊಳ್ಳೇಗಾಲ ಭಾಗದಲ್ಲಿ ಭೂಕಂಪ ಸೂಕ್ಷ್ಮ ಪ್ರದೇಶವನ್ನು ಗುರುತಿಸಲಾಗಿದೆ ಎಂದು ಹವಾಮಾನ ತಜ್ಞ ವಿ.ಎಸ್.ಪ್ರಕಾಶ್  ಈ ಸಂಜೆಗೆ ತಿಳಿಸಿದ್ದಾರೆ. ಕರಾವಳಿ ಪ್ರದೇಶ ಹಾಗೂ ಬಿಜಾಪುರ, ಬಾಗಲಕೋಟೆ ಜಿಲ್ಲೆಗಳ ಗಡಿ ಭಾಗ ಭೂಕಂಪ ಸೂಕ್ಷ್ಮ ವಲಯವಾಗಿವೆ. ಕೊಳ್ಳೇಗಾಲ ಭಾಗದಲ್ಲಿ 4 ಮ್ಯಾಗ್ನಿಟ್ಯೂಡ್ ಪ್ರಮಾಣದಷ್ಟು ಭೂಕಂಪ ಸಂಭವಿಸಬಹುದು.

ಬಿಜಾಪುರ, ಬಾಗಲಕೋಟೆ, ಗುಲ್ಬರ್ಗ ಭಾಗಗಳಲ್ಲಿ 5 ಮ್ಯಾಗ್ನಿಟ್ಯೂಡ್‌ವರೆಗೂ ಭೂಕಂಪ ಸಂಭವಿಸುವ ಸಾಧ್ಯತೆ ಇದೆ. ಇದು ಲಘು ಪ್ರಮಾಣದ ಭೂಕಂಪವಾಗಿದ್ದು, ಹಾನಿಯ ಪ್ರಮಾಣ ತೀರಾ ಕಡಿಮೆ ಎಂದು ಹೇಳಿದರು. ಕರ್ನಾಟಕ ಭೂಕಂಪ ಮುಕ್ತವಲ್ಲ ಎಂಬುದು ದೃಢಪಟ್ಟ ನಂತರ ಬೆಂಗಳೂರಿನಲ್ಲಿ  ಕಟ್ಟಡ ನಿರ್ಮಿಸುವ ಮುನ್ನ ನಕ್ಷೆ ಮಂಜೂರಾತಿ ಸಂದರ್ಭದಲ್ಲಿ  ಭೂಕಂಪ ನಿರೋಧಕ ಶಕ್ತಿ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸುವ ಮೊದಲು ಲಘುಕಂಪನಗಳು ಉಂಟಾಗಿದ್ದವು. ದೆಹಲಿಯಲ್ಲಿ ಲಘುಕಂಪನವಾದ ಕೂಡಲೇ ವಿದ್ಯುತ್ ಪೂರೈಕೆ ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುತ್ತದೆ. ಅಂತಹ ತಂತ್ರಜ್ಞಾನವನ್ನು ದೆಹಲಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಆನಂತರ ಪ್ರಬಲ ಭೂಕಂಪವಾದರೂ ವಿದ್ಯುತ್‌ನಿಂದ  ಆಗುವ ಅವಘಡಗಳು ತಪ್ಪುತ್ತವೆ.

ದಕ್ಷಿಣ ಪ್ರಸ್ಥಭೂಮಿಯನ್ನು ಭೂಕಂಪ ಮುಕ್ತ ಪ್ರದೇಶವೆಂದು ಪರಿಗಣಿಸಲಾಗಿತ್ತು. ಆದರೆ, ಕೊಯಮತ್ತೂರು, ಲಾಥೂರು, ಕೊಯ್ನಾ ಹಾಗೂ ಬಳ್ಳಾರಿಯಲ್ಲಿ ಭೂಕಂಪ ಸಂಭವಿಸಿದ ಮೇಲೆ ಕೇಂದ್ರ ಸರ್ಕಾರ ಅಧ್ಯಯನಕ್ಕಾಗಿ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಆ ಸಮಿತಿ ಮಾಡಿದ ಶಿಪಾರಸನ್ನು  ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಯಾವ ರಾಜ್ಯವು ಕೂಡ ಅನುಷ್ಠಾನ ಮಾಡಲಿಲ್ಲ.  ಆದರೆ, ಕರ್ನಾಟಕ ಮಾತ್ರ ಆಸಕ್ತಿ ವಹಿಸಿ ಸುಮಾರು 5 ಕೋಟಿ ರೂ. ವೆಚ್ಚ ಮಾಡಿ ತಿಪ್ಪಗೊಂಡನಹಳ್ಳಿ, ಕೆಆರ್‌ಎಸ್, ಹಾರಂಗಿ, ಹೇಮಾವತಿ, ತುಂಗಭದ್ರಾ, ಲಿಂಗನಮಕ್ಕಿ, ಆಲಮಟ್ಟಿ ಜಲಾಶಯಗಳು ಸೇರಿದಂತೆ ರಾಜ್ಯದಲ್ಲಿ 13 ಭೂಕಂಪ ಮಾಪಕಗಳನ್ನು ಸ್ಥಾಪನೆ ಮಾಡಿದೆ. ಇದರಿಂದ ಭೂಕಂಪವಾದ ಸ್ಥಳ, ಆಳ, ಉದ್ದ-ಅಗಲ, ಪ್ರಮಾಣ, ವ್ಯಾಪಕತೆ ಅರಿಯಲು ಸಾಧ್ಯವಾಗುತ್ತದೆ.

ಕನಿಷ್ಠ 50 ವರ್ಷಗಳ ಮಾಹಿತಿ ಲಭ್ಯವಾದಾಗ ಭೂಕಂಪದಿಂದ ಉಂಟಾಗಬಹುದಾದ ಅನಾಹುತ ತಪ್ಪಿಸುವ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಈಗ ನಮ್ಮಲ್ಲಿ ಅಷ್ಟು ವರ್ಷಗಳ ಮಾಹಿತಿ ಲಭ್ಯವಿಲ್ಲದಿರುವುದರಿಂದ ಅಸಹಾಯಕ ಪರಿಸ್ಥಿತಿಯಲ್ಲಿರಬೇಕಾಗಿದೆ.

ಗುಲ್ಬರ್ಗ ಜಿಲ್ಲೆಯ ಚಿಂಚೋಳಿಯಲ್ಲೂ ಪದೇ ಪದೇ ಲಘು ಭೂಕಂಪನಗಳು ಉಂಟಾಗುವುದು ಸಾಮಾನ್ಯವಾಗಿದೆ. ಅಲ್ಲಿ ರಾಜ್ಯ ಸರ್ಕಾರ ಭೂಕಂಪ ನಿರೋಧಕ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಕಟ್ಟಡಗಳಿಗೆ ಭೂಕಂಪ ನಿರೋಧಕ ಶಕ್ತಿ ಅಳವಡಿಕೆ ಮಾಡಿಕೊಳ್ಳಬಹುದು. ಆದರೆ, ಅತಿವೃಷ್ಟಿ ಪ್ರವಾಹ ತಡೆಯುವಷ್ಟು ಶಕ್ತಿ ಕಟ್ಟಡಗಳಿಗೆ ಇರುವುದಿಲ್ಲ. ಬೆಂಗಳೂರು, ಕೋಲಾರ ಭಾಗದಲ್ಲಿ ಭೂಕಂಪ ಸಂಭವಿಸಿರುವ ನಿದರ್ಶನಗಳಿದ್ದರೂ ಅವು ಲಘು ಪ್ರಮಾಣದ್ದಾಗಿದ್ದು, ಅನಾಹುತ ವಿರಳವಾಗಿವೆ. ಇದವರೆಗಿನ ಮಾಹಿತಿ ಪ್ರಕಾರ ರಾಜ್ಯದಲ್ಲಿ ಲಘು ಭೂಕಂಪಗಳು ಮರುಕಳಿಸಿವೆ. ಆದರೆ, ಭಾರಿ ಪ್ರಮಾಣದ ಭೂಕಂಪವಾಗಿಲ್ಲ. ಆದರೂ ಕಟ್ಟಡಗಳಿಗೆ ಭೂಕಂಪ ನಿರೋಧಕ ಶಕ್ತಿ ಅಳವಡಿಸಿಕೊಳ್ಳುವುದು ಸೂಕ್ತ ಎಂದು ಪ್ರಕಾಶ್ ವಿವರಿಸಿದರು.

-ಕೃಪೆ: ಈ ಸಂಜೆ

Write A Comment