ಅಂತರಾಷ್ಟ್ರೀಯ

ನಮ್ಮ ಅದೃಷ್ಟ ಗಟ್ಟಿಯಾಗಿತ್ತು, ಬದುಕಿ ಬಂದೆವು ..!

Pinterest LinkedIn Tumblr

earth-quake-kannadiga

ತುಮಕೂರು, ಏ.26: ಇನ್ನೊಂದರ್ಧ ಗಂಟೆ ನಾವು ಹೊರಡುವುದು ತಡವಾಗಿದ್ದರೆ ಭೂಕಂಪಕ್ಕೆ ಬಲಿಯಾಗುತ್ತಿದ್ದೆವು. ನಮ್ಮ ಅದೃಷ್ಟ ಗಟ್ಟಿಯಾಗಿತ್ತು. 10.30ಕ್ಕೆ ನಾವು ಅಲ್ಲಿಂದ ತೆರಳಿದೆವು. ಕಟ್ಮಂಡುವಿನಿಂದ ಅಣತಿ ದೂರದಲ್ಲಿದ್ದ ಎಮೊಕಾವ್‌ಗೆ ಹಿಂದಿರುಗುತ್ತಿದ್ದ ವೇಳೆ ಭಾರೀ ಭೂಕಂಪ ಸಂಭವಿಸಿತು ಎಂಬ ಸುದ್ದಿ ಬಂತು. ಸದ್ಯ ಭಗವಂತ ಬದುಕಿಸಿದ ಎಂದು ನೇಪಾಳಕ್ಕೆ ಪ್ರವಾಸ ತೆರಳಿದ್ದ ತುಮಕೂರಿನ 36 ಜನರ ತಂಡ ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಹೀಗೆ.

ಈಗ ನೋಡುತ್ತಿರುವ ಘಟನೆಗಳನ್ನು ನೆನೆಸಿಕೊಂಡರೆ ಮೈ ಜುಮ್ಮೆನಿಸುತ್ತದೆ. ಘಟನೆ ನಡೆದಿರುವ ಸ್ವಲ್ಪ ದೂರದಲ್ಲೇ ನಾವು ಇದ್ದೆವು. ಸ್ವಲ್ಪದರದಲ್ಲೇ ಬಚಾವ್ ಆಗಿದ್ದೇವೆ ಎಂದು ಆತಂಕದಿಂದಲೇ ಹೇಳಿದರು.

ತುಮಕೂರು ತಾಲ್ಲೂಕಿನ ಊರ್ಡಿಗೆರೆ ಹೋಬಳಿಯ ಚಂದ್ರಶೇಖರ್ ನಿನ್ನೆ ಮಧ್ಯರಾತ್ರಿ ಮನೆಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಾವು ಮತ್ತು ತಂಡದ ಎಲ್ಲರೂ ಸುರಕ್ಷಿತವಾಗಿರುವುದಾಗಿ ಹೇಳಿದ್ದರಿಂದ ಕುಟುಂಬಗಳಲ್ಲಿ ಮನೆ ಮಾಡಿದ್ದ ಆತಂಕ ದೂರವಾಗಿದೆ.

ಕಳೆದ 7 ದಿನಗಳ ಹಿಂದೆ ತುಮಕೂರು ತಾಲ್ಲೂಕಿನ ಕಾಳೇನಳ್ಳಿ ಮತ್ತಿತರ ಕಡೆಗಳಿಂದ ಒಟ್ಟು 36 ಜನರ ತಂಡ ಕಲ್ಲೇಶ್ವರ ಟ್ರಾವಲ್ಸ್ ಮೂಲಕ ನೇಪಾಳ ಪ್ರವಾಸಕ್ಕೆ ತೆರಳಿತ್ತು. ನಿನ್ನೆ ಬೆಳಗ್ಗೆ ನೇಪಾಳದ ಕಠ್ಮುಂಡುವಿನಲ್ಲಿ ಬೆಳಗ್ಗೆ 10.30ವರೆಗೆ ಇದ್ದ ತಂಡ ಅಲ್ಲಿಂದ ಅನತಿ ದೂರದ ಯಮರೋವ್‌ಗೆ ಹಿಂದಿರುಗಿದ್ದ ವೇಳೆ ಕಠ್ಮುಂಡುವಿನಲ್ಲಿ ಭೀಕರ ಭೂಕಂಪ ಸಂಭವಿಸಿದೆ.

ಕೆಲವೇ ಗಂಟೆಗಳ ಅಂತರದಲ್ಲಿ ತಾವು ಅಪಾಯದಂಚಿನಿಂದ ಪಾರಾಗಿದ್ದು, ಕಠ್ಮುಂಡುವಿನಲ್ಲಿ ಭೂಕಂಪ ನಡೆದ ವೇಳೆ ತಾವೆಲ್ಲರೂ ಉಪಹಾರಕ್ಕಾಗಿ ಯಮರೋವ್‌ನಲ್ಲಿ ಇಳಿದಿದ್ದೆವು ಎಂದು ತಮ್ಮ ಮಗಳು ಚೇತನಾಳಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಇದಾದ ನಂತರ ದೂರವಾಣಿ ಸಂಪರ್ಕಗಳು ಕಡಿತಗೊಂಡಿದ್ದರಿಂದ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಆದರೆ, ಸಂಜೆ 6.30ರ ವೇಳೆಯಲ್ಲಿ ಚಂದ್ರಶೇಖರ್ ಮನೆಗೆ ಫೋನ್ ಮಾಡಿದವರಾದರು ಸಂಪರ್ಕ ಸಾಧ್ಯವಾಗದೇ ಹೋಗಿತ್ತು. ತದನಂತರ ರಾತ್ರಿ 2.30ರಲ್ಲಿ ಕರೆ ಮಾಡಿ ತಾವು ಹಾಗೂ ತಮ್ಮೊಂದಿಗೆ ತೆರಳಿದ್ದ 35 ಮಂದಿ ಸುರಕ್ಷಿತವಾಗಿದ್ದು, ಅವರ ಕುಟುಂಬಗಳಿಗೆ ತಿಳಿಸುವಂತೆ ಮಗಳಿಗೆ ಹೇಳಿದ್ದರು. ಇಂದು ಬೆಳಗ್ಗೆ ಈ ಸಂಜೆಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಚಂದ್ರಶೇಖರ್, ಹನುಮಂತರಾಯಪ್ಪ, ಕೃಷ್ಣಪ್ಪ, ನಾಗರತ್ನಮ್ಮ, ಎಚ್.ಎಸ್.ಜಗದೀಶ್ ಮತ್ತಿತರರು ತಾವು ಸುರಕ್ಷಿತ ಸ್ಥಳಕ್ಕೆ ತೆರಳಿರುವುದಾಗಿ ಹೇಳಿದ್ದಾರೆ.

ಪರ್ವತಾರೋಹಿ ಪ್ರವೀಣ್ ನಾಪತ್ತೆ: ಪೋಷಕರು ಆತಂಕ

ಬೆಂಗಳೂರು: ಪರ್ವತಾರೋಹಣಕ್ಕೆ ನೇಪಾಳಕ್ಕೆ ತೆರಳಿದ್ದ ಬೆಂಗಳೂರಿನ ಜಯನಗರದ ಪ್ರವೀಣ್ ನಾಪತ್ತೆಯಾಗಿದ್ದಾರೆ. ಕಳೆದ 3ರಂದು ನೇಪಾಳಕ್ಕೆ ತೆರಳಿದ್ದ ಅವರು ನಿನ್ನೆ ನೇಪಾಳದ ಕಟ್ಮಂಡುವಿನಲ್ಲಿ ಪ್ರಬಲ ಭೂಕಂಪವಾದ ನಂತರ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರನ್ನು ಸಂಪರ್ಕಿಸಲು ನೆರವಾಗಬೇಕೆಂದು ಭಾರತೀಯ ರಾಯಭಾರಿ ಕಚೇರಿಗೆ ಪ್ರವೀಣ್ ಪೋಷಕರು ಮೊರೆ ಇಟ್ಟಿದ್ದಾರೆ.

ಪರ್ವತಾರೋಹಣದ ಬೇಸ್ ಕ್ಯಾಂಪ್‌ನಲ್ಲಿ ನೂರಾರು ಪರ್ವತಾರೋಹಿಗಳು ಸಂಕಷ್ಟದಲ್ಲಿದ್ದಾರೆ. ನಿನ್ನೆ ಭೂಕಂಪದ ಸಂದರ್ಭದಲ್ಲಿ ಹಿಮ ಬಂಡೆ ಉರುಳಿ ಗೂಗಲ್ ಕಂಪನಿಯ 18 ಜನರ ತಂಡ ಮೃತಪಟ್ಟಿತ್ತು. ಕಟ್ಮಂಡುವಿನಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡರೆ, ಸಹಸ್ರಾರು ಮಂದಿ ನಿರಾಶ್ರಿತರಾಗಿದ್ದಾರೆ. ಪ್ರವೀಣ್ ಅವರ ಸಂಪರ್ಕ ಸಾಧ್ಯವಾಗದೇ ಇರುವುದು ಅವರ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ.

ಮೈಸೂರಿನವರು ಸುರಕ್ಷಿತ
ಮೈಸೂರು: ನಗರದಿಂದ ಪ್ರವಾಸಕ್ಕಾಗಿ ನೇಪಾಳಕ್ಕೆ ತೆರಳಿದ್ದ 18 ಮಂದಿ ಸುರಕ್ಷಿತವಾಗಿ ಇದ್ದಾರೆ. ಅವರೆಲ್ಲರೂ ಭಾರತದ ಗಡಿ ಭಾಗದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಶಿಖಾ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕ ಕಿಸಾನ್ ಸಂಘದ ಮುಖಾಂತರ ಪ್ರವಾಸಕ್ಕೆ ನೇಪಾಳಕ್ಕೆ ತೆರಳಿದ್ದ ಮೈಸೂರಿನ ಪಡುವಾರಹಳ್ಳಿಯ ಒಂದೇ ಕುಟುಂಬದ 9 ಮಂದಿ ಸುರಕ್ಷಿತವಾಗಿದ್ದಾರೆ. ಹಾಗೆಯೇ ಇನ್ನೂ 9 ಮಂದಿ ಕೂಡ ರಕ್ಷಿಸಲ್ಪಟ್ಟಿದ್ದಾರೆ ಎಂದು ಅವರು ಹೇಳಿದರು.

ದೂರವಾಣಿ ಸಹಾಯ:
ಮೈಸೂರಿನಿಂದ ನೇಪಾಳಕ್ಕೆ ಪ್ರವಾಸಿಗರು ತೆರಳಿದ್ದರೆ ಅವರ ಬಗ್ಗೆ ಮಾಹಿತಿಗಾಗಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಇಲ್ಲಿನ ದೂರವಾಣಿ ಸಂಖ್ಯೆಗಳನ್ನು ಕುಟುಂಬವರ್ಗದವರು ಸಂಪರ್ಕಿಸಿ ಮಾಹಿತಿ ಪಡೆಯ ಬಹುದೆಂದು ಜಿಲ್ಲಾಧಿಕಾರಿ ಶಿಖಾ ತಿಳಿಸಿದ್ದಾರೆ. ದೂ.ಸಂ.1077, 0821-2423800 ಸಂಪರ್ಕಿಸಿ ಮಾಹಿತಿ ಪಡೆಯಬಹುದು.

Write A Comment