ಕರ್ನಾಟಕ

ಅತ್ಯಾಚಾರ ಆರೋಪ ಸಾಬೀತು; ರಾಘವೇಶ್ವರಶ್ರೀಗೆ ಬಂಧನದ ಭೀತಿ

Pinterest LinkedIn Tumblr

Raghaveshwara-shri

ಬೆಂಗಳೂರು, ಏ.25- ದೇಶ-ವಿದೇಶ ಸೇರಿದಂತೆ ಎಲ್ಲೆಡೆ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ  ವಿರುದ್ಧ ಕೇಳಿ ಬಂದಿದ್ದ ಆತ್ಯಾಚಾರ ಆರೋಪ  ಸಿಐಡಿ ಅಧಿಕಾರಿಗಳ ತನಿಖೆಯಿಂದ ದೃಢಪಟ್ಟಿದೆ.  ಪ್ರಕರಣದ ತನಿಖೆ ನಡೆಸಿರುವ ಸಿಐಡಿ ಅಧಿಕಾರಿಗಳು ಯಾವುದೇ ಕ್ಷಣ ನ್ಯಾಯಾಲಯ ಹಾಗೂ ಗೃಹ ಇಲಾಖೆಗೆ ಅಂತಿಮ ವರದಿ ಸಲ್ಲಿಸಲಿದ್ದಾರೆ. ವರದಿಯಲ್ಲಿ ರಾಘವೇಶ್ವರ ಸ್ವಾಮೀಜಿ ರಾಮಕಥಾ ಗಾಯಕಿ ಮೇಲೆ ಅತ್ಯಾಚಾರ

ನಡೆಸಿರುವುದು ಸಾಬೀತಾಗಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ. ಆರೋಪಿ ಸ್ಥಾನದಲ್ಲಿರುವ ರಾಘವೇಶ್ವರರ ವಿರುದ್ಧ ಐಪಿಸಿ ಸೆಕ್ಷನ್-376 (ಅತ್ಯಾಚಾರ), 353ಎ (ಲೈಂಗಿಕ ದೌರ್ಜನ್ಯ) ಮತ್ತು 506 (ಕ್ರಿಮಿನಲ್ ಬೆದರಿಕೆ)ರ ಪ್ರಕಾರ ದೂರು ದಾಖಲಿಸಲಾಗಿದೆ. ಒಂದು ವೇಳೆ ಇದು ಸಾಬೀತಾದರೆ ಕನಿಷ್ಟ 5 ರಿಂದ 10 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಾನೂನಲ್ಲಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ  ತನಿಖಾಧಿಕಾರಿಗಳು, ಎಸ್‌ಪಿ, ಡಿಐಜಿ, ಐಜಿ ಸಂಗ್ರಹಿಸಿರುವ ಮಾಹಿತಿಗಳನ್ನು ಸಿಐಡಿಯ ಡಿಜಿಪಿ ಅವರಿಗೆ ನೀಡಲಾಗುವುದು. ಇದನ್ನು ಕ್ರೋಢೀಕರಿಸಿ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಅತ್ಯಾಚಾರ ಆರೋಪದ ಮೇಲೆ ಜೈಲುಶಿಕ್ಷೆಗೆ ಗುರಿಯಾದ ನಾಡಿನ ಮೊಟ್ಟ ಮೊದಲ ಮಠಾಧೀಶರೆಂಬ ಕುಖ್ಯಾತಿಗೂ ರಾಘವೇಂದ್ರಶ್ರೀಗಳು ಪಾತ್ರರಾಗಲಿದ್ದಾರೆ.

ವೀರ್ಯ ಕಲೆ ಹೊಂದಿಕೆ:

ತಮ್ಮ ಮೇಲೆ ಸ್ವಾಮೀಜಿ ಅತ್ಯಾಚಾರ ನಡೆಸಿದ್ದರು ಎಂದು ರಾಮಕಥಾ ಗಾಯಕಿ ನೀಡಿದ್ದ ಒಳವಸ್ತ್ರದ ಮೇಲಿರುವ ವೀರ್ಯದ ಕಲೆ ಹೊಂದಿಕೆಯಾಗಿದೆ. ಈ ಅಂಶವನ್ನು  ಡಿಎನ್‌ಎ ವರದಿ ದೃಢಪಡಿಸಿದೆ ಎಂದು ಮೂಲಗಳು ಖಚಿತಪಡಿಸಿವೆ. ಆರೋಪಿ ಸ್ಥಾನದಲ್ಲಿರುವ ಸ್ವಾಮೀಜಿಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ನ್ಯಾಯಾಲಯದ ಸೂಚನೆಯಂತೆ ವೈದ್ಯರು 13 ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಅವರು ಮುಂದಾಗಿದ್ದರು. ಆದರೆ, ಕೆಲವು ಪರೀಕ್ಷೆಗಳನ್ನು ನಿರಾಕರಿಸಿದ್ದರಿಂದ ಐದು ಪರೀಕ್ಷೆಗಳಿಗೆ ಒಳಪಡಿಸಲಾಗಿತ್ತು. ತಮಗೆ  ಜನನಾಂಗದ ನಿಮಿರುವಿಕೆ ಪರೀಕ್ಷೆ ಮತ್ತು ಇದಕ್ಕೆ ಸಂಬಂಧಿಸಿದ ಒಟ್ಟು ಮೂರು ಉಪ ಪರೀಕ್ಷೆಗಳಿಗೆ ಒಳಪಡಲು ನಿರಾಕರಿಸಿದ್ದರು.  ಆದರೆ, ಇವುಗಳಲ್ಲಿ ಐದು ಪರೀಕ್ಷೆಗಳನ್ನು ಮಾತ್ರ ನಡೆಸಲು ಶ್ರೀಗಳು ಸಮ್ಮತಿಸಿದ್ದರು.

ಸಿಐಡಿ ಅಧಿಕಾರಿಗಳು ಯಾವುದೇ ಕ್ಷಣ ನ್ಯಾಯಾಲಯಕ್ಕೆ ಅಂತಿಮ ಆರೋಪ ಪಟ್ಟಿಯನ್ನು ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಈತನಕ ಕಲೆ ಹಾಕಿರುವ ಸಾಕ್ಷ್ಯಗಳ ಆಧಾರದ ಮೇಲೆ ಕಾನೂನು ರೀತ್ಯಾ ವರದಿ ಸಲ್ಲಿಸುವುದು ಬಹುತೇಕ ಖಚಿತವಾಗಿದೆ. ರಾಮಕಥಾ ಗಾಯಕಿಯಾಗಿದ್ದ ನಾಲ್ಕು ವರ್ಷಗಳ ಅವಧಿಯಲ್ಲಿ ಸ್ವಾಮೀಜಿ ನನ್ನ ಮೇಲೆ 154 ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು ಗಾಯಕಿ ದೂರು ನೀಡಿದ್ದರು. ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ವಿರುದ್ಧ ಗಿರಿನಗರ ಪೊಲೀಸ್  ಠಾಣೆಯಲ್ಲಿ ಐಪಿಸಿ ಸೆಕ್ಷನ್-376 ಮತ್ತು 506ರ ಅನುಸಾರ 2014ರ  ಆಗಸ್ಟ್ ತಿಂಗಳ 28ರಂದು  ಎಫ್‌ಐಆರ್ ದಾಖಲಿಸಲಾಗಿದೆ. ಸ್ವಾಮೀಜಿ ಸದ್ಯ ಷರತ್ತುಬದ್ಧ ನಿರೀಕ್ಷಣಾ ಜಾಮೀನಿನ ಮೇಲಿದ್ದಾರೆ.

ಪ್ರಕರಣದ ಹಿನ್ನೆಲೆ:

ರಾಮಚಂದ್ರಪುರ ಮಠದ ರಾಮಕಥಾ ಗಾಯಕಿಯಾಗಿದ್ದ ಪ್ರೇಮಲತಾ ಅವರು ಸ್ವಾಮೀಜಿ ವಿರುದ್ಧ ಅತ್ಯಾಚಾರ ಆರೋಪ ದೂರು ನೀಡಿದ್ದರು.  ಮಠದ ಭಕ್ತರಾಗಿದ್ದ ಪ್ರೇಮಲತಾ ಮತ್ತು ಪತಿ ದಿವಾಕರ್‌ಶಾಸ್ತ್ರಿ ವಿಶೇಷ ಸಂದರ್ಭಗಳಲ್ಲಿ ರಾಮಕಥಾ ಪ್ರವಚನ ನಡೆಸಿಕೊಡುತ್ತಿದ್ದರು. ಈ ವೇಳೆ ತಮ್ಮ ಮೇಲೆ ಶ್ರೀಗಳು ಅತ್ಯಾಚಾರ ನಡೆಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು. ಇದರಿಂದ ಕೆರಳಿದ ಮಠದ ಭಕ್ತರು ಪ್ರೇಮಲತಾ ಮತ್ತು ದಿವಾಕರ್‌ಶಾಸ್ತ್ರಿ ಮೇಲೆ ಹಲ್ಲೆ ನಡೆಸಿ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕು ಪೊಲೀಸ್ ಠಾಣೆಯಲ್ಲಿ ಕಳೆದ ಆ.15ರಂದು ದೂರು ನೀಡಿದ್ದರು. ಸ್ವಾಮೀಜಿಯನ್ನು ಪ್ರೇಮಲತಾ ದಂಪತಿಗಳು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಿದ್ದರು.
ಅಂತಿಮವಾಗಿ ಹೊನ್ನಾವರ ಪೊಲೀಸರು ಪ್ರೇಮಲತಾ ಮತ್ತು ದಿವಾಕರ್‌ಶಾಸ್ತ್ರಿಯನ್ನು ಬಂಧಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮಲತಾ ಪುತ್ರಿ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ಭಕ್ತರಿಂದ ನಮ್ಮ ಪೋಷಕರಿಗೆ ನನಗೂ ಮತ್ತು ತಂಗಿಗೆ ಜೀವಬೆದರಿಕೆ ಇದೆ. ದೂರು ಹಿಂತೆಗೆದುಕೊಳ್ಳುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ನಮಗೆ ರಕ್ಷಣೆ ಬೇಕೆಂದು ಕೋರಿದ್ದರು. ಮಾನವ ಹಕ್ಕುಗಳ ಆಯೋಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಆಯೋಗ ಹಾಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದು ಶ್ರೀಗಳ ವಿರುದ್ಧ ದೂರು ದಾಖಲಿಸಲಾಗಿತ್ತು. ಪ್ರಕರಣ ಗಂಭೀರವಾಗಿದ್ದರಿಂದ ಸಿಐಡಿ ತನಿಖೆಗೆ ಆದೇಶ ಮಾಡಲಾಗಿತ್ತು. ಹೈಕೋರ್ಟ್‌ನಲ್ಲಿ ಸುದೀರ್ಘ ವಿಚಾರಣೆ ನಡೆದರೂ ಶ್ರೀಗಳ ವಿರುದ್ಧ ವಿಚಾರಣೆ ನಡೆಸಲು ಐದು ಮಂದಿ ನ್ಯಾಯಾಧೀಶರು ಹಿಂದೆ ಸರಿದಿದ್ದರು.

2 Comments

  1. New marketing trick… 1 st accuse famous person for rape and build popularity …. and then release their products ( CD).
    Hights of 3rd class marketing

  2. ಇದಕ್ಕೆ ಸರಿಯಾದ. ಆಧಾರ ಕೊಡಿ…… ಇಲ್ಲವಾದರೆ ಇದು ಸುಳ್ಳು ಸುದ್ದಿ ಅಥವಾ paid news ಎಂದು ಪರಿಗಣಿಸಲಾಗುವುದು.

Write A Comment