ಬೆಂಗಳೂರು,ಏ.24- ಬಿಬಿಎಂಪಿ ಚುನಾವಣೆ ಮುಂದೂಡಲ್ಪಟ್ಟಿರುವ ಹಿನ್ನೆಲೆಯಲ್ಲಿ ಮತ್ತೆ ವಿಭಜನೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದ್ದು , ಬೆಂಗಳೂರು ಮಹಾನಗರ ಮೂರು ಪಾಲಿಕೆಗಳಾಗಿ ವಿಭಜನೆಗೊಳ್ಳಲಿದೆ. ತ್ರಿಭಜನೆಗೊಂಡ ಪ್ರದೇಶಗಳಿಗೆ ಕೆಂಪೇಗೌಡ, ರಾಯಣ್ಣ ಹಾಗೂ ಅಂಬೇಡ್ಕರ್ ಮಹಾನಗರ ಪಾಲಿಕೆ ಎಂದು ನಾಮಕರಣ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಆಡಳಿತಾತ್ಮಕ ದೃಷ್ಟಿಯಿಂದ ಬಿಬಿಎಂಪಿಯನ್ನು ವಿಭಜಿಸುವ ತೀರ್ಮಾನಕ್ಕೆ ಬಂದ ಸರ್ಕಾರ ಈ ಕುರಿತಂತೆ ವರದಿ ಸಲ್ಲಿಸುವಂತೆ ಸರ್ಕಾರದ ಮಾಜಿ ಮುಖ್ಯ
ಕಾರ್ಯದರ್ಶಿ ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿ ರಚನೆ ಮಾಡಿತ್ತು. ವಿಭಜನೆ ಕುರಿತಂತೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿದ ಸಮಿತಿ ಆಡಳಿತಾತ್ಮಕ ದೃಷ್ಟಿಯಿಂದ ಬಿಬಿಎಂಪಿಯನ್ನು ತ್ರಿಭಜನೆ ಮಾಡುವುದು ಸೂಕ್ತ ಎಂದು ಮಧ್ಯಂತರ ವರದಿ ಸಲ್ಲಿಸಿದೆ.
ಪಾಟೀಲ್ ಸಮಿತಿ ವರದಿಯನ್ನಾಧರಿಸಿ ಬಿಬಿಎಂಪಿಯನ್ನು ಬೆಂಗಳೂರು ಕೇಂದ್ರ, ಪೂರ್ವ ಹಾಗೂ ಪಶ್ಚಿಮ ಮಹಾನಗರ ಪಾಲಿಕೆಗಳನ್ನಾಗಿ ತ್ರಿಭಜನೆಗೊಳಿಸಲು ಸರ್ಕಾರ ಕಾರ್ಯೋನ್ಮುಖವಾಗಿದೆ. ಸಕಾಲಕ್ಕೆ ಬಿಬಿಎಂಪಿ ಚುನಾವಣೆ ನಡೆಸುವಂತೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ವಿಭಾಗೀಯ ಪೀಠ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ವಿಭಜನೆ ಪ್ರಕ್ರಿಯೆ ಸರಾಗವಾಗಿದೆ. ತ್ರಿಭಜನೆಗೊಂಡ ನಂತರ ಕೇಂದ್ರ ಮಹಾನಗರ ಪಾಲಿಕೆಗೆ ನಾಡಪ್ರಭು ಕೆಂಪೇಗೌಡ ಪಾಲಿಕೆ ಎಂದು, ಪೂರ್ವ ವಲಯವನ್ನು ಅಂಬೇಡ್ಕರ್ ಪಾಲಿಕೆ ಹಾಗೂ ಪಶ್ಚಿಮ ವಲಯವನ್ನು ರಾಯಣ್ಣ ಪಾಲಿಕೆ ಎಂದು ನಾಮಕರಣ ಮಾಡಲು ಸರ್ಕಾರ ತೀರ್ಮಾನಿಸಿದೆ ಎನ್ನಲಾಗಿದೆ. ಆದರೆ ಬಿಬಿಎಂಪಿ ವಿಭಜನೆಗೆ ಜೆಡಿಎಸ್ ಹಾಗೂ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿವೆ. ವಿಭಜನೆ ಕುರಿತಂತೆ ಕರೆಯಲಾಗಿರುವ ವಿಶೇಷ ಅಧಿವೇಶನದಲ್ಲಿ ಸರ್ಕಾರ ಮಂಡಿಸಿರುವ ವಿಧೇಯಕಕ್ಕೆ ಅಂಗೀಕಾರ ನೀಡಲು ಪ್ರತಿಪಕ್ಷಗಳು ನಿರಾಕರಿಸಿವೆ.
ಈಗಾಗಲೇ ಕೆಳಮನೆಯಲ್ಲಿ ವಿಧೇಯಕಕ್ಕೆ ಸರ್ಕಾರ ಒಪ್ಪಿಗೆ ಪಡೆದುಕೊಂಡಿದೆ. ಆದರೆ ಮೇಲ್ಮನೆಯಲ್ಲಿ ಪ್ರತಿಪಕ್ಷಗಳ ಪ್ರಾಬಲ್ಯ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ಒಪ್ಪಿಗೆ ದೊರೆಯುವ ಸಾಧ್ಯತೆ ಕ್ಷೀಣಿಸಿದೆ. ಹೀಗಾಗಿ ಮತ್ತೆ ಕೆಳಮನೆಯಲ್ಲಿ ವಿಧೇಯಕಕ್ಕೆ ಒಪ್ಪಿಗೆ ಪಡೆದು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡುವ ಸರ್ಕಾರದ ನಿರ್ಧಾರಕ್ಕೆ ಸೆಡ್ಡು ಹೊಡೆದಿರುವ ಪ್ರತಿಪಕ್ಷಗಳು ವಿಧೇಯಕ ಜಾರಿಗೆ ಸದನ ಸಮಿತಿ ರಚಿಸುವಂತೆ ಪಟ್ಟು ಹಿಡಿಯುವ ಮೂಲಕ ವಿಧೇಯಕ ವಾಪಸ್ ಕೆಳಮನೆಗೆ ಹೋಗದಂತೆ ತಂತ್ರ ರೂಪಿಸಿವೆ. ಸೋಮವಾರ ಮತ್ತೆ ಅಧಿವೇಶನ ನಡೆಯಲಿದ್ದು, ಅಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ವಾದ-ವಿವಾದ ನಡೆಯಲಿದೆ. ಪ್ರತಿಪಕ್ಷಗಳು ಮಂಡಿಸುವ ಸದನ ಸಮಿತಿ ಬೇಡಿಕೆಗೆ ಸಭಾಪತಿಗಳು ಸಮ್ಮತಿಸಿದರೆ ಸರ್ಕಾರ ಇಕ್ಕಟ್ಟಿಗೆ ಸಿಲುಕಲಿದೆ. ಒಂದು ವೇಳೆ ವಿಧೇಯಕವನ್ನು ಸದನ ಸಮಿತಿ ವ್ಯಾಪ್ತಿಗೆ ತರದೆ ವಾಪಸ್ ಕಳುಹಿಸಿದರೆ ಸರ್ಕಾರಕ್ಕೆ ಅದು ವರದಾನವಾಗಲಿದೆ. ಹೀಗಾಗಿ ಸರ್ಕಾರ ಮತ್ತು ಪ್ರತಿಪಕ್ಷಗಳು ಯಾವ ಯಾವ ತಂತ್ರ, ಪ್ರತಿ ತಂತ್ರ ರೂಪಿಸುತ್ತಿವೆ ಎಂಬುದಕ್ಕೆ ಸೋಮವಾರದವರೆಗೂ ಕಾಯಬೇಕಾಗಿದೆ.