ಕರ್ನಾಟಕ

ರಾಜ್ಯಾದ್ಯಂತ ವರನಟನ 87ನೆ ಹುಟ್ಟುಹಬ್ಬ ಆಚರಣೆ

Pinterest LinkedIn Tumblr

Dr.Rajkumar-Birth-day-2

ಬೆಂಗಳೂರು/ಹುಬ್ಬಳ್ಳಿ, ಏ.24-ವರನಟ, ಪದ್ಮಭೂಷಣ ಡಾ.ರಾಜ್‌ಕುಮಾರ್ ಅವರ 87ನೆ ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ಸಂಭ್ರಮದಿಂದ  ಆಚರಿಸಲಾಗುತ್ತಿದೆ. ವಿಶೇಷವಾಗಿ ಪರಿಸರ ಸಂರಕ್ಷಣೆಯ ಧ್ಯೇಯದೊಂದಿಗೆ ವಿಶಿಷ್ಟ ರೀತಿಯಲ್ಲಿ ಡಾ.ರಾಜ್ ಅವರಿಗೆ ನಮನ ಸಲ್ಲಿಸಲಾಯಿತು. ಇಂದು ಬೆಳಗ್ಗೆ ಹೆಜ್ಜಾಲದ ಬಳಿ ಇರುವ ಪುನೀತ್‌ಫಾರಂನಲ್ಲಿ ಡಾ.ರಾಜ್ ಅವರ ಸಮಾಧಿಯ ಮಣ್ಣನ್ನು ತೆಗೆದುಕೊಂಡು ಬೇವಿನ ಸಸಿಯೊಂದಿಗೆ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಪುಣ್ಯ ಭೂಮಿಗೆ ತರಲಾಯಿತು.  ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್,

ಶಿವರಾಜ್‌ಕುಮಾರ್, ರಾಘವೇಂದ್ರರಾಜ್‌ಕುಮಾರ್, ಪುನೀತ್‌ರಾಜ್‌ಕುಮಾರ್ ಸೇರಿದಂತೆ ಕುಟುಂಬ ಸದಸ್ಯರು, ಅಭಿಮಾನಿಗಳು ಸಸಿ ನೆಟ್ಟು ರಾಜ್ ಸಮಾಧಿಗೆ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಅಭಿಮಾನಿಗಳು ಸಿಹಿ ಹಂಚಿ, ರಕ್ತದಾನ ಮಾಡಿ ತಮ್ಮ ನೆಚ್ಚಿನ ಅಣ್ಣಾವ್ರಿಗೆ ಅಭಿಮಾನವನ್ನು ತೋರಿದರು. ಇದೇ ವೇಳೆ ದೂರದೂರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ರಾಜ್ ಅಭಿಮಾನಿಗಳು ನೆರೆದು ಜೈಕಾರ ಮೊಳಗಿಸಿದರು.

ಜನಸಾಗರವನ್ನು ತಡೆಯುವ ಸಲುವಾಗಿಯೇ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಕೂಡ ಸ್ಥಳದಲ್ಲಿ ಮಾಡಲಾಗಿತ್ತು. ರಾಜ್ ಕಟೌಟ್‌ಗಳು ರಾರಾಜಿಸುತ್ತಿದ್ದವು. ಪುಣ್ಯ ಭೂಮಿ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿತ್ತು.  ಬೆಂಗಳೂರಿನ ನಾನಾ ಭಾಗಗಳಲ್ಲಿ ರಾಜ್ ಪ್ರತಿಮೆ ಮುಂಭಾಗ ಕನ್ನಡ ಪರ ಸಂಘಟನೆಗಳು ಹಾಗೂ ಅಭಿಮಾನಿ ಸಂಘದವರು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ನಾಡ ಧ್ವಜಗಳಿಂದ ಸಿಂಗರಿಸಿ ರಾಜ್ ನಟನೆಯ ಚಿತ್ರಗಳ ಪೋಸ್ಟರ್‌ಗಳನ್ನು ವಿಶೇಷವಾಗಿ ಪ್ರದರ್ಶಿಸಲಾಯಿತು.  ಮೈಸೂರು, ತುಮಕೂರು, ಕೋಲಾರ, ರಾಮನಗರ ಸೇರಿದಂತೆ ಹಳೆ ಮೈಸೂರು ಭಾಗ ವ್ಯಾಪ್ತಿಯಲ್ಲಿ ಇಂದು ಹಬ್ಬದ ರೀತಿಯಲ್ಲಿ ರಾಜ್ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಹೈದರಾಬಾದ್ -ಕರ್ನಾಟಕ ಭಾಗದಲ್ಲೂ ಕರ್ನಾಟಕ ರಕ್ಷಣಾ ವೇದಿಕೆ, ನವ ನಿರ್ಮಾಣ ಸೇನೆ ಸೇರಿದಂತೆ ಹಲವು ಸಂಘಟನೆಗಳು ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದಲೇ ಆಚರಿಸಿದವು. ಹಲವು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ, ಅನಾಥಾಲಯದ ಮಕ್ಕಳಿಗೆ ಊಟದ ವ್ಯವಸ್ಥೆ ಸೇರಿದಂತೆ ಅಭಿಮಾನಿಗಳು ನೇತ್ರದಾನಕ್ಕೂ ಪ್ರಮಾಣ ಮಾಡಿದರು.
* ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ:
ಡಾ.ರಾಜ್‌ಕುಟುಂಬ ಪುಣ್ಯ ಭೂಮಿಗೆ ಆಗಮಿಸುತ್ತಿದ್ದಂತೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿಯಾಯಿತು…..! ಡಾ.ರಾಜ್ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ಹೆಲಿಕಾಪ್ಟರ್ ಮೂಲಕ ಇದೇ ಪ್ರಥಮ ಬಾರಿಗೆ ಹೂಗಳನ್ನು ಅಭಿಮಾನಿಗಳ ಮೇಲೆ ಹಾಕಲಾಯಿತು. 50 ಅಡಿ ಎತ್ತರದಲ್ಲಿ ಹಾರುತ್ತಾ ಬಂದ ಹೆಲಿಕಾಪ್ಟರ್‌ನಿಂದ ಟನ್‌ಗಟ್ಟಲೆ ಹೂಗಳ ಸುರಿಮಳೆ ಆಗುತ್ತಿದ್ದಂತೆ ಎಲ್ಲರೂ ಅಚ್ಚರಿಗೊಂಡರು. ಕನ್ನಡ ಕದಂಬ ಯುವಕರ ಸಂಘ ಈ ರೀತಿಯ ಹೊಸ ಆಲೋಚನೆಯನ್ನು ಮಾಡಿ ನೆರೆದಿದ್ದವರನ್ನು ರಂಜಿಸಿತು. ಪರಿಸರ ಸಂರಕ್ಷಣೆಗಾಗಿ ಈಗಾಗಲೇ ರಾಜ್ ಅಭಿಮಾನಿಗಳಿಗೆ ಬೇವಿನ ಸಸಿಗಳನ್ನು ನೆಡಲು ಸೂಚಿಸಲಾಗಿದೆ. ಅದರಂತೆ ನಾಡಿನಾದ್ಯಂತ ಹೊಸ ಆಂದೋಲನವೇ ನಡೆಯಲಿದೆ ಎಂದು ರಾಘವೇಂದ್ರರಾಜ್‌ಕುಮಾರ್ ಹೇಳಿದರು.

* ನೇತ್ರದಾನ ಮಾಡಿದ ಡಾ.ರಾಜ್‌ಕುಮಾರ್  ಹೊಸ ಯುಗಾರಂಭಕ್ಕೆ ನಾಂದಿ
ಅಭಿಮಾನಿ ದೇವರುಗಳ ಜನಪ್ರಿಯ ನಟ ಡಾ.ರಾಜ್‌ಕುಮಾರ್ ಬದುಕಿದ್ದಾಗಲೇ ತಮ್ಮ ನೇತ್ರದಾನ ಮಾಡುವ ಮೂಲಕ ರಾಜ್ಯದಲ್ಲಿ ಒಂದು ಹೊಸ ಯುಗಾರಂಭಕ್ಕೆ ನಾಂದಿ ಹಾಡಿದರು. ಅಲ್ಲಿಂದ ಆರಂಭವಾದ ನೇತ್ರದಾನದ ಯಾನ ಇಂದು ಬೃಹತ್ ಮಟ್ಟದಲ್ಲಿ ಬೆಳೆದು ನಿಂತಿದೆ. ಡಾ.ರಾಜ್‌ಕುಮಾರ್ ಅವರ ಹೆಸರಿನಲ್ಲಿ ನೇತ್ರದಾನ ಶಿಬಿರಗಳು ದಿನನಿತ್ಯ ರಾಜ್ಯದ ಯಾವುದೋ ಮೂಲೆಯೊಂದರಲ್ಲಿ ನಡೆಯುತ್ತಲೇ ಬಂದಿವೆ. ರಾಜಣ್ಣ ಎಂದೂ ತಮ್ಮ ಸ್ವಾರ್ಥಕ್ಕಾಗಿ ಬದುಕಿದವರಲ್ಲ ಎಂಬುದು ಅವರ ಅಪಾರ ಅಭಿಮಾನಿಗಳ ನಂಬಿಕೆ. ಅದು ವಾಸ್ತವದಲ್ಲಿ ಸತ್ಯವೂ ಹೌದು. ಅವರನ್ನು ತೀರಾ ಹತ್ತಿರದಿಂದ ಬಲ್ಲವರಿಗೆ ಅವರ ಅಂತರಾತ್ಮದ ಮನಸ್ಸು ಅರ್ಥವಾಗಿದೆ. ಅವರು ಸಾಯುವ ಮುನ್ನ ತಮ್ಮ ಮಕ್ಕಳನ್ನು ಎದುರಿಗೆ ಕೂರಿಸಿಕೊಂಡು ‘ಯಾವುದೇ ಕಾರಣಕ್ಕೂ ನನ್ನ ದೇಹವನ್ನು ಬೆಂಕಿಗೆ ಆಹುತಿ ಮಾಡಬೇಡಿ. ಅದನ್ನು ಮಣ್ಣು ಮಾಡಿ ಅದರ ಮೇಲೊಂದು ಸಸಿ ನೆಟ್ಟು ಮರವಾಗಿಸಿ ಸಾವಿರಾರು ಮಂದಿಗೆ ನೆರಳು ನೀಡಿ’ ಎಂದು ಕೇಳಿಕೊಂಡಿದ್ದರು.

ರಾಜ್ ನಡೆದು ಬಂದ ಹಾದಿ ಎಲ್ಲರಿಗೂ ಮಾದರಿಯಾಗಲಿ. ಅವರ ಹೆಸರಿನಲ್ಲಿ ಅದ್ಧೂರಿ ಸಭೆ-ಸಮಾರಂಭಗಳು ಬೇಕಿಲ್ಲ. ಸಮಾಜಕ್ಕೆ ಅನುಕೂಲವಾಗುವಂತಹ  ಅತ್ಯುತ್ತಮ ಕಾರ್ಯಗಳನ್ನು ಅಭಿಮಾನಿ ಸಂಘಗಳು ಮುನ್ನಡೆಸಿಕೊಂಡು ಹೋಗಬೇಕು ಎಂಬುದು ಇದೀಗ ಅವರ ಕುಟುಂಬದ ಆಶಯ ಆಗಿದೆ. ಇಂದು  ನೇತ್ರದಾನ ಮಹಾದಾನ ಎಂಬುದನ್ನು ನಾಡಿನ ಉದ್ದಗಲಕ್ಕೂ ಮನವರಿಕೆ ಮಾಡಿಕೊಟ್ಟ ಡಾ.ರಾಜ್‌ಕುಮಾರ್ ಅವರ 87ನೆ ಹುಟ್ಟುಹಬ್ಬದ ಸಂಭ್ರಮ. ಇದನ್ನು ಉಪಯುಕ್ತವಾಗಿ ಆಚರಿಸುವ ಮೂಲಕ ಅವರಂತಯೇ ಎಲ್ಲರೂ ಮಾದರಿಯಾದರೆ ನಮ್ಮ ನಡುವೆ ಇನ್ನು ಚಿರಂಜೀವಿಯಾಗಿಯೇ ಉಳಿದಿರುವ ಅವರಿಗೆ ನಾವು ಸಲ್ಲಿಸುವ ಗೌರವ ಅದಾಗಲಿ.

*ರಾಜ್ ನಡೆದು ಬಂದ ದಾರಿ ….
ಕನ್ನಡ ಚಿತ್ರರಂಗದ ಧೃವತಾರೆ ಎಂದೇ ಹೆಸರಾದ ಡಾ.ರಾಜ್‌ಕುಮಾರ್ ಐದು ದಶಕಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ ಸುಮಾರು 206ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.  ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್, ಹಂಪಿ ವಿಶ್ವವಿದ್ಯಾನಿಲಯದಿಂದ ನಾಡೋಜ, ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ, ಜೀವಮಾನದ ಸಾಧನೆಗಾಗಿ ದಾದಾ ಸಾಹೇಬ್ ಫಾಲ್ಕೆ ಹಾಗೂ ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಖ್ಯಾತಿ ಇವರದ್ದಾಗಿದೆ. ಕನ್ನಡ ರಂಗಭೂಮಿಯ ಹೆಸರಾಂತ ಪ್ರತಿಭೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ  ದಂಪತಿಗಳ ಹಿರಿಯ ಮಗನಾಗಿ ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡಗಾಜನೂರಿನಲ್ಲಿ 1929ರ ಏಪ್ರಿಲ್ 24ರಂದು ಡಾ.ರಾಜ್ ಜನಿಸಿದರು. ಅವರ ನಾಮಕರಣಗೊಂಡ ಹೆಸರು ಮುತ್ತುರಾಜ್ (ಮುತ್ತಣ್ಣ). ಡಾ.ರಾಜ್ ಅವರಿಗೆ ವರದರಾಜು ಎಂಬ ಸೋದರ, ಶಾರದಮ್ಮ ಎಂಬ ತಂಗಿಯೂ ಇದ್ದಾರೆ. 1953 ಜೂನ್ 25ರಂದು ಪಾರ್ವತಿಯವರೊಡನೆ ಇವರ ಲಗ್ನವಾಯಿತು.  ವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ಹಲವಾರು ಒಳ್ಳೆಯ ಕನ್ನಡ ಚಿತ್ರಗಳನ್ನು ನಿರ್ಮಿಸಿ ಕನ್ನಡಕ್ಕೆ ದೊಡ್ಡ ಕೊಡುಗೆಯನ್ನೇ ಡಾ.ರಾಜ್ ನೀಡಿದ್ದಾರೆ.

ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮುನ್ನ ಡಾ.ರಾಜ್ ಅವರ ಹೆಸರು ಮುತ್ತುರಾಜ್ ಎಂದು ಎಂದಿತ್ತು. ಮುತ್ತುರಾಜನ ತಂದೆ ಸಿಂಗಾನಲ್ಲರು ಪುಟ್ಟಸ್ವಾಮಯ್ಯ ಅವರು 1930-1950ರ ಕಾಲದಲ್ಲಿ ಕನ್ನಡ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದವರು.
ರೌದ್ರ ಪಾತ್ರಗಳಿಗೆ ಹೆಸರಾಗಿದ್ದ ಪುಟ್ಟಸ್ವಾಮಯ್ಯನವರು ಗುಬ್ಬಿ ಕಂಪೆನಿಯಲ್ಲಿ ಕಲಾವಿದರಾಗಿದ್ದರು. ಬಡತನದಿಂದಾಗಿ ಮುತ್ತುರಾಜು ವಿದ್ಯಾಭ್ಯಾಸ 4ನೆ ತರಗತಿಗೇ ನಿಂತುಬಿಟ್ಟಿತು. ಗುಬ್ಬಿ ಕಂಪೆನಿಯೇ ವಿಶ್ವವಿದ್ಯಾನಿಲಯವಾಯಿತು.  ತಂದೆಯನ್ನು ನೆರಳಿನಂತೆ ಹಿಂಬಾಲಿಸಿದ ಮುತ್ತುರಾಜುಗೆ ಅವರಿಂದಲೇ ತರಬೇತಿಯಾಯಿತು. ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದರು.  ಡಾ.ರಾಜ್ ಜೀವನದಲ್ಲಿ ತಂದೆಯವರ ಪ್ರಭಾವ ಅಪಾರ. ಫಾಲ್ಕೆ ಪ್ರಶಸ್ತಿ ಪ್ರಕಟವಾದಾಗ ಅವರು ಮೊದಲು ನೆನೆಸಿಕೊಂಡದ್ದು ತಂದೆ ಹೇಳಿದ ಮಾತುಗಳನ್ನೇ. ಇಂತಹ ಸಾಧನೆ ನಿನ್ನಿಂದ ಸಾಧ್ಯ ಎಂದು ಹೇಳಿದ ಪುಟ್ಟಸ್ವಾಮಯ್ಯನವರು ಹೇಳಿದ ಭವಿಷ್ಯ ನಿಜವಾಯಿತು.  1950ರಲ್ಲಿ ತಂದೆ ಪುಟ್ಟಸ್ವಾಮಯ್ಯನವರ ನಿಧನ. ಬಂದೆರಗಿದ ಆಘಾತದಿಂದ ತತ್ತರಿಸಿದ ಮುತ್ತುರಾಜ್ ಮತ್ತೆ ಗುಬ್ಬಿ ಕಂಪೆನಿ ಸೇರಿ ಭೂ ಕೈಲಾಸ ನಾಟಕದಲ್ಲಿ ಅಭಿನಯಿಸಿದರು.

ಚಿತ್ರರಂಗಕ್ಕೆ ಪಾದಾರ್ಪಣೆ:

1942ರಲ್ಲಿ ಬಿಡುಗಡೆಯಾದ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಬಾಲ ನಟನಾಗಿ, 1952ರಲ್ಲಿ ಬಿಡುಗಡೆಯಾದ ಶಂಕರ್‌ಸಿಂಗ್ ನಿರ್ದೇಶನದ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ  ಸಪ್ತರ್ಷಿಗಳಲ್ಲಿ ಒಬ್ಬರಾಗಿ ಅಭಿನಯಿಸಿದ್ದ ಮುತ್ತುರಾಜ್ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು.  ರಾಜ್‌ಕುಮಾರ್ ಬೇಡರ ಕಣ್ಣಪ್ಪ ಚಿತ್ರದ ನಾಯಕನಾಗಿ ನಟಿಸಿದರು. ಚಿತ್ರವು 1954ರ ಮೇ ತಿಂಗಳಲ್ಲಿ ಆಗಿನ ಮೈಸೂರು ರಾಜ್ಯದಲ್ಲಿ ಎಲ್ಲೆಡೆ ಬಿಡುಗಡೆಗೊಂಡಿತು. ಬೇಡರ ಕಣ್ಣಪ್ಪ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದ ಪ್ರಥಮ ಚಿತ್ರವಾಗಿ ಕನ್ನಡ ಚಿತ್ರರಂಗದಲ್ಲಿ ಒಂದು ಮೈಲುಗಲ್ಲಾಯಿತು. ಜೀವನ ಚೈತ್ರ ಚಿತ್ರದ ಮೂಲಕ ಸಾರಾಯಿ ಪಿಡುಗಿನ ವಿರುದ್ಧ, ಆಕಸ್ಮಿಕ ಚಿತ್ರದ ಮೂಲಕ ಹೆಣ್ಣಿನ ಶೋಷಣೆ ವಿರುದ್ಧ, ಶಬ್ದವೇದಿ ಚಿತ್ರದ ಮೂಲಕ ಮಾದಕ ವ್ಯಸನಿಗಳ ವಿರುದ್ಧ ಹೋರಾಡುವ ಪಾತ್ರದಲ್ಲಿ ಡಾ.ರಾಜ್ ಅಭಿನಯಿಸಿ ಜನಮನ್ನಣೆ ಗಳಿಸಿದರು. ಬೆಳ್ಳಿತೆರೆ ಮೇಲೆ ಡಾ.ರಾಜ್ ಅವರು ಕಡೆಯದಾಗಿ ಕಾಣಿಸಿಕೊಂಡ ಚಿತ್ರ ತಮ್ಮ ಪುತ್ರ ಶಿವರಾಜ್‌ಕುಮಾರ್ ನಾಯಕತ್ವದಲ್ಲಿನ ಜೋಗಿ ಚಿತ್ರ.  ಕೇವಲ ನಟನೆಯಲ್ಲದೆ, ಅತ್ಯುತ್ತಮ ಗಾಯಕರೂ ಆಗಿದ್ದ ಡಾ.ರಾಜ್ ಕನ್ನಡ ಗಾಯನ ಲೋಕಕ್ಕೂ ತಮ್ಮ ಅಪಾರ ಕೊಡುಗೆ ನೀಡಿದ್ದಾರೆ.
ಜಿ.ಕೆ.ವೆಂಕಟೇಶ್ ಹಾಗೂ ಉಪೇಂದ್ರಕುಮಾರ್ ಸಂಗೀತದಲ್ಲಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ಗೋಕಾಕ್ ಚಳವಳಿಯಲ್ಲಿ ಡಾ.ರಾಜ್:

ಗೋಕಾಕ್ ವರದಿ ಯಥಾವತ್ತಾಗಿ ಜಾರಿಗೆ ತರಬೇಕು, ಕನ್ನಡವನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಆಗ್ರಹಿಸಿ ಸಾಹಿತಿಗಳು ಹಮ್ಮಿಕೊಂಡ ಹೋರಾಟದಲ್ಲಿ ಡಾ.ರಾಜ್ ಧುಮುಕಿ ಚಳವಳಿಗೆ ಹೊಸ ರೂಪ ನೀಡಿದರು. ಇದರಿಂದ ಸರ್ಕಾರ ಎಚ್ಚೆತ್ತು ಗೋಕಾಕ್ ವರದಿಯನ್ನು ಜಾರಿಗೊಳಿಸಿತು.

ಪ್ರಶಸ್ತಿ ಪುರಸ್ಕಾರಗಳು:

ಡಾ.ರಾಜ್‌ಕುಮಾರ್ ಅವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ, ರಾಷ್ಟ್ರ ಪ್ರಶಸ್ತಿ, ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿ, ನಾಡೋಜ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.

ಐತಿಹಾಸಿಕ ಚಿತ್ರಗಳು:

ಡಾ.ರಾಜ್ ಮಯೂರ, ಶ್ರೀಕೃಷ್ಣ ದೇವರಾಯ, ರಣಧೀರ ಕಂಠೀರವ, ಇಮ್ಮಡಿ ಪುಲಿಕೇಶಿ, ಕವಿರತ್ನ ಕಾಳಿದಾಸ, ಭಕ್ತ ಕನಕದಾಸ ಸೇರಿದಂತೆ ಹಲವಾರು ಐತಿಹಾಸಿಕ ಹಾಗೂ ಭಕ್ತಿ ಪ್ರಧಾನ ಚಿತ್ರಗಳಲ್ಲಿ ನಟಿಸಿ ಮುಕ್ಕೋಟಿ ಕನ್ನಡಿಗರ ಮನಗೆದ್ದಿದ್ದಾರೆ. ಮಂತ್ರಾಲಯ ಮಹಾತ್ಮೆ, ಶ್ರೀನಿವಾಸ ಕಲ್ಯಾಣ, ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ ಸೇರಿದಂತೆ ಹಲವಾರು ದೇವರು ಪಾತ್ರಗಳಲ್ಲಿ ನಟಿಸಿದ ಶ್ರೇಯಸ್ಸು ಇವರದ್ದಾಗಿದೆ.  2000ದಲ್ಲಿ ದಂತಚೋರ ವೀರಪ್ಪನ್‌ನಿಂದ ಅಪಹರಣವಾಗಿದ್ದ ಡಾ.ರಾಜ್‌ಕುಮಾರ್, 108 ದಿನಗಳ ನಂತರ ಬಿಡುಗಡೆಯಾಗಿದ್ದರು. 2006 ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ನಿಧನರಾದರು.  ಕನ್ನಡ ಚಿತ್ರರಂಗದ ದಂತಕಥೆಯಾಗಿದ್ದ ಡಾ.ರಾಜ್ ಅವರ ಅಗಲಿಕೆಯಿಂದ ಒಂದು ಸುವರ್ಣ ಯುಗದ ಅಂತ್ಯವಾದಂತಾಗಿದೆ. ಡಾ.ರಾಜ್ ಅವರ ಸ್ವ ಇಚ್ಛೆಯಂತೆ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಯಿತು.

Write A Comment