ಕರ್ನಾಟಕ

ವನ್ಯಲೋಕದ ಅಮಿತ ಪ್ರೇಮಿ

Pinterest LinkedIn Tumblr

kbec23amit 1

–  ಸಂಧ್ಯಾ ಹೆಗಡೆ ಆಲ್ಮನೆ​
ಅಮಿತ್ ಹೆಗಡೆ ಅವರಿಗೆ ಹಾವು ಮತ್ತು ಸಣ್ಣ ನೀರುನಾಯಿಗಳ ಬಗ್ಗೆ ಇನ್ನಿಲ್ಲದ ಕುತೂಹಲ. ಇದೇ ಕುತೂಹಲ ಅವರನ್ನು ಈ ಕುರಿತು ಅಧ್ಯಯನದಲ್ಲಿ ತೊಡಗುವಂತೆ ಪ್ರೇರೇಪಿಸಿದ್ದು. ಅವರ ಶೋಧನೆಯ ಹಾದಿಯಲ್ಲಿ ರೋಚಕ ಅನುಭವಗಳನ್ನೂ  ದಕ್ಕಿಸಿಕೊಂಡಿದ್ದಾರೆ. ಅಮಿತ್ ಅವರ ‘ಹಾವಿನ ಆಕಳಿಕೆ’ ಚಿತ್ರಕ್ಕೆ ಅಂತರರಾಷ್ಟ್ರೀಯ ಮನ್ನಣೆಯೂ ಸಿಕ್ಕಿದೆ. ಅಮಿತ್ ಅವರ ಪಯಣದ ಹಾದಿ ಮತ್ತು ಅವರ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ ಸಂಧ್ಯಾ ಹೆಗಡೆ ಆಲ್ಮನೆ​

‘ಹೀಗೆ ಒಂದು ದಿನ ವಾನಳ್ಳಿ ಕಡೆ ಕಾಡು ಸುತ್ತಲು ಹೋಗಿದ್ದೆ. ಕಪ್ಪು ಮಣ್ಣಿನ ಮೇಲೆ ಸ್ಫುಟವಾದ ಒಂದು ಹೆಜ್ಜೆ ಕಂಡಿತು. ಅಮ್ಮನ ಪಾದದ ಗುರುತಿನ ಮೇಲೆ ಪುಟಾಣಿ ಹೆಜ್ಜೆಯ ಅಚ್ಚು. ಆ ಹೆಜ್ಜೆ ನನ್ನಲ್ಲಿ ಒಂದು ರೀತಿಯ ವಿಚಿತ್ರ ಕುತೂಹಲವನ್ನು ಹುಟ್ಟಿಸಿತು. ಹೀಗೆ ಹೆಜ್ಜೆಯೂರಿ ಕಣ್ಮರೆಯಾದ ಜೀವಿ ಯಾವುದಪ್ಪ? ತಲೆ ತುಂಬ ಪ್ರಶ್ನೆ. ಆ ಜೀವಿಯ ಹುಡುಕಾಟದಲ್ಲೇ ಆರು ತಿಂಗಳು ಕಳೆಯಿತು.

ಈ ನಡುವೆಯೇ ಬೆಂಗಳೂರಿನಲ್ಲಿ ನಡೆದ ಒಂದು ವಿಚಾರ ಸಂಕಿರಣದಲ್ಲಿ ಮಾತನಾಡುವ ಅವಕಾಶ ಸಿಕ್ಕಿತು. ಅಮ್ಮ–ಮಗುವಿನ ಹೆಜ್ಜೆ ಗುರುತಿನ ಚಿತ್ರವಿಟ್ಟುಕೊಂಡು 20 ನಿಮಿಷ ಮಾತನಾಡಿದೆ. ಆ ಮಾತುಗಳಿಗೆ ಸ್ಫೂರ್ತಿ ಆ ಹೆಜ್ಜೆಗಳು! ಛಲ ಬಿಡಿದ ತ್ರಿವಿಕ್ರಮನಂತೆ ನದಿ ಅಂಚಿನಲ್ಲಿ ಸಂಚಾರ ಮುಂದುವರಿಸಿದೆ. ಕೊನೆಗೂ ಒಂದು ದಿನ ಮಿಂಚಿನಂತೆ ಬಂದು ಮರೆಯಾದವು ಆ ತಾಯಿ–ಮಗು!’

ಬಿ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿ ಅಮಿತ್‌ ಹೆಗಡೆ ಈ ಕಥೆಯನ್ನು ವಿವರಿಸಿದರು. ಈ ಕಥೆಯ ಒಟ್ಟಿಗೆ ಅವರ ಆಸಕ್ತಿ ಮತ್ತು ಹುಡುಕಾಟವೂ ತೆರೆದುಕೊಂಡಿತು. ಅಂದಹಾಗೆ ಅವರು ಕಂಡ ಹೆಜ್ಜೆ ನೀರು ನಾಯಿಗಳದ್ದು. ಪಶ್ಚಿಮಘಟ್ಟದ ಜೀವಿ ವೈವಿಧ್ಯಗಳಲ್ಲಿ ಒಂದಾಗಿರುವ ‘ಸಣ್ಣ ನೀರುನಾಯಿ’ (small clawed otter) ವಿನಾಶದ ಅಂಚಿನಲ್ಲಿದೆ.

ಸಣ್ಣ ನೀರುನಾಯಿಯ ಇರುವಿಕೆ ಕಂಡು ಕೊಳ್ಳಲು ಅಮಿತ್‌ ಮೂರು ತಿಂಗಳ ಕಾಲ ಹಟಯೋಗಿ ಯಂತೆ ಕಾಡು ಸುತ್ತಿದ್ದಾರೆ. ವಾರಕ್ಕೆ ಕನಿಷ್ಠವೆಂದರೂ 2–3 ದಿನ ಕಗ್ಗಾಡಿನ ರಾತ್ರಿ ಕಳೆದಿದ್ದಾರೆ. ಮುಖ್ಯವಾಗಿ ಅಮಿತ್ ಹಾವುಗಳು ಮತ್ತು ಸಣ್ಣ ನೀರುನಾಯಿಗಳ ಬಗ್ಗೆ ಗಂಭೀರವಾದ ಅಧ್ಯಯನದಲ್ಲಿ ತೊಡಗಿರುವು ವಿಶೇಷ.

ಅಮಿತ್ ಚಹರೆ
ಶಿರಸಿ ತಾಲ್ಲೂಕಿನ ವರ್ಗಾಸರ ಬೆಣ್ಣೆಮನೆಯ ಹುಡುಗ ಅಮಿತ್‌ ಹೆಗಡೆ. ದೊಡ್ಡಪ್ಪನ ಜತೆ ಕಾಡಿನ ತಿರುಗಾಟ ಆರಂಭಿಸಿದಾಗ ಈ ಪೋರನಿಗೆ ಎಂಟು ವರ್ಷ. ಆ ನಡಿಗೆಯಲ್ಲಿ ನಿತ್ಯ ಒಂದೊಂದು ವಿಷಯದ ಬಗ್ಗೆ ಮಾತು ಶುರುವಾಗುತ್ತಿತ್ತು. ಅದೊಂದು ದಿನ ಹಾವಿನ ವಿಷಯ. ‘ಜನರು ಕೆಟ್ಟ ಹಾವು ಕಂಡರೆ ಕೊಲ್ಲುತ್ತಾರೆ. ಅದು ಮನುಷ್ಯನಿಗೆ ಕಚ್ಚಿದರೆ ಮನುಷ್ಯ ಸಾಯುತ್ತಾನೆ…’ ಹೀಗಿ ಆತನ ದೊಡ್ಡಪ್ಪನ ಮಾತು ಮುಂದುವರಿದಿತ್ತು.

ಥಟ್ಟನೆ ‘ಕೆಟ್ಟ ಹಾವು ಎಂದರೆ ಯಾವುದು? ಜನ ಅದನ್ನು ಕೆಟ್ಟ ಹಾವೆಂದು ಹೇಗೆ ಗುರುತಿಸುತ್ತಾರೆ’ ಎನ್ನುವ ಕುತೂಹಲ ಅಮಿತ್‌ ತಲೆಯಲ್ಲಿ ತುಂಬಿಕೊಳ್ಳುತ್ತಿತ್ತು. 10ನೇ ತರಗತಿ ಓದುತ್ತಿದ್ದಾಗ ಅಮಿತ್ ನೆಂಟರ ಮನೆಗೆ ಹೋಗಿದ್ದರು. ಅಲ್ಲೊಂದು ಹಾವು ಬಂದಿತ್ತು. ಜನರೆಲ್ಲ ಸೇರಿ ಆ ಹಾವನ್ನು ಸಾಯಿಸಲು ಸಿದ್ಧವಾದರು. ‘ಹಾವನ್ನು ಹೊಡೆಯಬೇಡಿ’ ಎಂದ ಅಮಿತ್ ದುಸ್ಸಾಹಸ ಮಾಡಿ ಹಾವು ಹಿಡಿದು ಮನೆಯಿಂದ ಹೊರಗೆ ಬಿಟ್ಟಿದ್ದ. ಆಮೇಲೆ ಗೊತ್ತಾಗಿದ್ದು ಅದು ಅತ್ಯಂತ ವಿಷಕಾರಿ ‘ಕ್ರೇಟ್‌’ ಹಾವು ಎಂದು.

ಹಾವಿನ ಆಕಳಿಕೆ
‘ಪಶ್ಚಿಮ ಘಟದಲ್ಲಿರುವ ಹಾವುಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡಬೇಕೆನಿಸಿತು. ಗ್ರಂಥಾಲಯದಲ್ಲಿ ಪುಸ್ತಕ ಓದಿದೆ. ಆಗುಂಬೆಯ ಮಳೆಕಾಡು ಸಂಶೋಧನಾ ಕೇಂದ್ರದಲ್ಲಿ ತರಬೇತಿ ಪಡೆದೆ. ‘ವನಸ್ತ್ರೀ’, ‘ನಿತ್ಯತ ಮೈಸೂರು ಸಂಘಟನೆ’ ಜೊತೆ ಕೆಲಸ ಮಾಡಿದೆ. ಇಲ್ಲಿವರೆಗೂ 100ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಜೋಪಾನವಾಗಿ ಕಾಡಿಗೆ ಬಿಟ್ಟಿದ್ದೇನೆ.

ಅದೂ ದೂರದಲ್ಲಲ್ಲ. ಹಾವು ಕಂಡ ಪ್ರದೇಶದಿಂದ 300 ಮೀಟರ್‌ ಒಳಗೆ. ಹಾವು ಹಿಡಿಯುವ ಅನೇಕರು ಅವನ್ನು ಎಲ್ಲೋ ದೂರದ ಕಾಡಿಗೆ ಬಿಡುತ್ತಾರೆ. ಹಾವಿಗೂ ಸರಹದ್ದು ಇರುತ್ತದೆ. ಅಪರಿಚಿತ ಹಾವು ಬಂದರೆ ಅವು ಸಹಿಸುವುದಿಲ್ಲ. ಅದಕ್ಕಾಗಿ ಹಾವನ್ನು ದೂರ ಬಿಡಬಾರದು. ಅವುಗಳ ಸರಹದ್ದಿನಲ್ಲೇ ಬಿಟ್ಟರೆ ಬದುಕಿಕೊಳ್ಳುತ್ತವೆ’ ಎನ್ನುತ್ತಾರೆ ಅಮಿತ್.

ಅಮಿತ್‌ ಕ್ಲಿಕ್ಕಿಸಿರುವ ‘ಹಾವಿನ ಆಕಳಿಕೆ’ ಚಿತ್ರವು ಶಿಕಾಗೋದ ಹರ್ಪೆಟಾಲಾಜಿಕಲ್‌ ಸೊಸೈಟಿಯ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ 9ನೇ ರ್‍ಯಾಂಕ್‌ ಹಾಗೂ ಭಾರತದಲ್ಲಿ 2ನೇ ಸ್ಥಾನದಲ್ಲಿದೆ. ಅಂತಿಮ 10ರ ಪಟ್ಟಿಯಲ್ಲಿರುವ ಒಂಬತ್ತು ಚಿತ್ರಗಳು 15 ಲಕ್ಷ ರೂಪಾಯಿ ಮೌಲ್ಯದ ಕ್ಯಾಮೆರಾಗಳಲ್ಲಿ ಸೆರೆಯಾದವು. ಆದರೆ 15,000 ರೂಪಾಯಿ ಮೌಲ್ಯದ ನನ್ನ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ಹಾವಿನ ಆಕಳಿಕೆ ಚಿತ್ರವೂ ಅದೇ ಗುಣಮಟ್ಟದಲ್ಲಿದೆ.

ಈ ಚಿತ್ರ ಸೆರೆ ಹಿಡಿಯಲು 3 ತಿಂಗಳು ಸತತ ಪ್ರಯತ್ನ ಮಾಡಿದ್ದೇನೆ. ಮನೆ ಸಮೀಪವೇ ಇದ್ದ ಈ ಬೆಕ್ಕಿನ ಕಣ್ಣಿನ ಹಾವಿನ (Foresten’s cat snake) ಸ್ವಭಾವ ಅಧ್ಯಯನ ಮಾಡಲು ನಿತ್ಯ ರಾತ್ರಿ ಕಾದು ಕುಳಿತುಕೊಳ್ಳುತ್ತಿದ್ದೆ. ಸರಿಯಾಗಿ 90ನೇ ದಿನ ಹಾವು ಆಕಳಿಕೆ ತೆಗೆಯುವುದಕ್ಕೂ ಕ್ಯಾಮೆರಾ ಗುಂಡಿ ಒತ್ತುವುದಕ್ಕೂ ಸಮಯ ಕೂಡಿಬಂತು’ ಎಂದು ತಮಗೆ ಮನ್ನಣೆ ತಂದುಕೊಟ್ಟ ‘ಹಾವಿನ ಆಕಳಿಕೆ’ ಬಗ್ಗೆ ಬಿಚ್ಚು ಮಾತನಾಡುವರು.

ನಾಯಿಬೇಟೆ
ಉರಗಗಳ ಬೆನ್ನು ಹತ್ತಿದಂತೆಯೇ ಸಣ್ಣ ನೀರುನಾಯಿಗಳ ಬಗ್ಗೆ ಅಧ್ಯಯನ ನಡೆಸಲು ರಾತ್ರಿಗಳನ್ನು ವ್ಯಯಿಸಿದ್ದಾರೆ ಅಮಿತ್. ಜಗತ್ತಿನಲ್ಲಿ 13 ಜಾತಿಯ ನೀರುನಾಯಿಗಳಿವೆ. ಇವುಗಳಲ್ಲಿ ಸಣ್ಣ ನೀರುನಾಯಿ ಬಗ್ಗೆ ಅಮಿತ್‌ ಆಸಕ್ತರು. ಸಣ್ಣ ಝರಿ, ಉಪನದಿಗಳು, ಹೊಳೆಗಳಲ್ಲಿ ವಾಸಿಸುವ  ಸಣ್ಣ ನೀರುನಾಯಿಗಳು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಬೇಡ್ತಿ ನದಿ, ಶಾಲ್ಮಲಾ ನದಿ, ಇದರ ಉಪನದಿಗಳ ಅಂಚಿನಲ್ಲಿ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುತ್ತವೆ. ಆಡುಭಾಷೆಯಲ್ಲಿ ಇದಕ್ಕೆ ‘ನೀರುಗುನ್ನಿ’ ಹೆಸರಿದೆ.

‘ಸಂದೇಶ ರವಾನೆಗೆ ಸಣ್ಣ ನೀರು ನಾಯಿಗಳು 12 ವಿವಿಧ ಬಗೆಗಳಲ್ಲಿ ಸೀಟಿ ಹೊಡೆಯುತ್ತವೆ. ಒಂದೊಂದಕ್ಕೂ ಬೇರೆಯದೇ ಸಂಜ್ಞೆ. ಸಾಮಾನ್ಯವಾಗಿ ಇವು ತಂಡದಲ್ಲಿರುತ್ತವೆ. ಆದರೆ ನಾನು ಕಂಡಿದ್ದೆಲ್ಲ ಒಂಟಿ ಜೀವಿಯನ್ನೇ’ ಎನ್ನುವ ಅಮಿತ್ ಮಾತುಗಳಲ್ಲಿ ಈ ನಾಯಿಗಳಿಗೆ ಎದುರಾಗುತ್ತಿರುವ ಸಂಕಷ್ಟಗಳೂ ತೆರೆದುಕೊಳ್ಳುತ್ತವೆ.

9 ತಿಂಗಳಿಂದ ನೀರುನಾಯಿಗಳ ಬಗ್ಗೆ ಅಧ್ಯಯನದಲ್ಲಿ ತೊಡಗಿರುವ ಅವರಲ್ಲಿ ಇವುಗಳ ಬದುಕಿನ ಕ್ರಮ–ಅಲೆದಾಟ ಇತ್ಯಾದಿಗಳ ಬಗ್ಗೆ ಬಗೆ ಬಗೆಯ ಚಿತ್ರಗಳಿವೆ. ಸೂಕ್ಷ್ಮವಾದ ಈ ಪಾತ್ರಗಳ ಚಿತ್ರವನ್ನು ಸೆರೆ ಹಿಡಿಯಲು ಅವರು ಪಟ್ಟ ಪಡಿಪಾಟಲು ಅಪಾರ. ಅಮಿತ್ ಇಷ್ಟಕ್ಕೆ ತಮ್ಮ ಆಸಕ್ತಿಯನ್ನು ಮಿತಿಗೊಳಿಸಿಲ್ಲ.

250ಕ್ಕೂ ಹೆಚ್ಚು ಹಕ್ಕಿಗಳನ್ನು ಅವರು ಧ್ವನಿಯ ಮೇಲೆ ಗುರುತಿಸಬಲ್ಲರು. ವನ್ಯಜೀವಿ ವಿಜ್ಞಾನಿಯಾಗುವುದು ಅವರ ಮಹಾತ್ವಾಕಾಂಕ್ಷೆ. ‘ಪಶ್ಚಿಮಘಟ್ಟಕ್ಕೆ ಹೊರಗಿನವರು ಬಂದು ಅಧ್ಯಯನ ನಡೆಸುವರು. ಆದರೆ ಇಲ್ಲಿನ ಪಾರಂಪರಿಕ ಕೊಂಡಿಯ ನೆರಳಿನಲ್ಲಿ ಬೆಳೆದ ಪ್ರಾದೇಶಿಕ ಯುವಜನರು ಇಲ್ಲಿನ ವೈವಿಧ್ಯ ಅಧ್ಯಯನ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಬಲ್ಲದು’ ಎನ್ನುವುದು ಅಮಿತ್‌ ಅಭಿಪ್ರಾಯ.
*
‘ಕಾಳಿಂಗ ಸರ್ಪವು ತರಗೆಲೆಗಳ ಗೂಡುಕಟ್ಟಿ ಒಮ್ಮೆ 30ರಷ್ಟು ಮೊಟ್ಟೆ ಇಡುತ್ತದೆ. ಅವುಗಳಲ್ಲಿ ಅರ್ಧದಷ್ಟು ಮಾತ್ರ ಮರಿಯಾಗಿ ಹೊರಬರುತ್ತವೆ. ವಾನಳ್ಳಿ ಸಮೀಪ ಹೀಗೆ ಮೊಟ್ಟೆ ಇಟ್ಟು ಕಾವು ಕೊಡುತ್ತಿದ್ದ ಕಾಳಿಂಗ ಸರ್ಪದ ಗೂಡಿಗೆ ಕಟುಕನೊಬ್ಬ ಬೆಂಕಿ ಇಟ್ಟಿದ್ದ. ಇಡೀ ಕುಟುಂಬ ಮನುಷ್ಯನ ಅಟ್ಟಹಾಸಕ್ಕೆ ಆಹುತಿಯಾಯಿತು.

6–8 ವರ್ಷಗಳ ಹಿಂದಿನ ಈ ಘಟನೆಯನ್ನು ಸ್ಥಳೀಯರೊಬ್ಬರು ನನಗೆ ಹೇಳಿದ್ದರು. ಇಂದಿಗೂ ಇದು ಹಸಿರಾದ ಕಹಿ ನೆನಪು. ನದಿಯಂಚಿಗೆ ಟೆಂಟ್‌ ಹಾಕಿ ಕಾಡಿನಲ್ಲಿ ರಾತ್ರಿ ಕಳೆಯುವ ಕ್ಷಣ ಅದ್ಭುತ ಅನುಭವ. ಮೌನವೇ ವನ್ಯಪ್ರಾಣಿಗಳ ಅಧ್ಯಯನಕ್ಕೆ ಸೂಕ್ತ ಸಾಧನ’ ಎಂದು ತಮಗೆ ಇಲ್ಲಿವರೆಗೂ ಕಂಡು ಕೇಳಿದ ಪ್ರಾಕೃತಿಕ ಅಚ್ಚರಿಗಳನ್ನು ವಿವರಿಸುವರು ಅಮಿತ್.

Write A Comment