ಬೆಂಗಳೂರು, ಏ.22-ನಾನು ರಣರಂಗದಲ್ಲಿ ಎದೆ ಕೊಟ್ಟು ಹೋರಾಡುತ್ತೇನೆ. ತೆರೆಮರೆಯಲ್ಲಿ ಆಟವಾಡುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ದೇವೇಗೌಡರ ಕುಟುಂಬದ ವಿರುದ್ದ ಹರಿಹಾಯ್ದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಕುಟುಂಬದ ಮೇಲೆ ನನಗೆ ಯಾವುದೇ ದ್ವೇಷವಿಲ್ಲ. ಅವರೇ ನನಗೆ ಕಿರುಕುಳ ನೀಡುತ್ತಿದ್ದರೆ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನನ್ನ ತಂಗಿ ಹಾಗೂ ಪತ್ನಿ ಮೇಲೆ ಕೇಸ್ ಹಾಕಿಸಿದ್ದರು.
ನನ್ನ ವಿರುದ್ಧ ಸಮರ ಸಾರಿದ್ದರು. ಈಗ ಎಸ್.ಆರ್.ಹಿರೇಮಠ್ ಹಾಗೂ ದೊರೆಸ್ವಾಮಿ ಮೂಲಕ ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಹೇಳಿದರು. ದೊರೆಸ್ವಾಮಿ ಅವರ ಪತ್ರಕ್ಕೆ ಮುಖ್ಯಮಂತ್ರಿ ಉತ್ತರ ನೀಡಲಿಲ್ಲ ಎಂದು ದೇವೇಗೌಡರೇ ವಕ್ತಾರರಂತೆ ಹೇಳುತ್ತಿದ್ದಾರೆ. ಅವರೇ ಸಿಬಿಐಯನ್ನು ಭೇಟಿ ಮಾಡಿದ್ದಾರೆ. ಅಲ್ಲದೆ ಎಸ್.ಆರ್.ಹಿರೇಮಠ್‌ರಿಂದ ಸಿಬಿಐಗೆ ಪತ್ರ ಬರೆಸಿದ್ದಾರೆ ಎಂದು ಆರೋಪಿಸಿದರು.
ಕನಕಪುರ, ಸಾತನೂರು, ರಾಮನಗರಕ್ಕೆ ಬಂದು ನನ್ನ ವಿರುದ್ಧ ಹೋರಾಟ ಮಾಡಿದ್ದರು. ಆದರೆ ನಾನು ಹೆದರಲಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ನಾನು ನನ್ನ ಅಪ್ಪ-ಅಮ್ಮನಿಗೆ ಹುಟ್ಟಿಲ್ಲ ಎಂದು ಆರೋಪಿಸಿದ್ದಲ್ಲದೆ, ಎರಡು ಸಾವಿರ ಮಂದಿ ಪೊಲೀಸರ ಮಧ್ಯೆ ಚರ್ಚೆ ನಡೆಸುವಂತಾಗಿತ್ತು ಎಂದರು. ಅಧಿವೇಶನದಲ್ಲಿ ನನ್ನ ನಡೆಯನ್ನು ಅಸಂಸದೀಯ ನಡೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ನಾನು ನಡೆದುಕೊಂಡ ರೀತಿ ಸರಿಯಾಗಿಯೇ ಇದೆ. ನಾನು ಒಕ್ಕಲಿಗ ನಾಯಕ ಮಾತ್ರನಲ್ಲ, ಕಾಂಗ್ರೆಸ್ ನನಗೆ ಮುಖ್ಯ. ಅವರಿಗೆ ಜೆಡಿಎಸ್ ಮುಖ್ಯ ಎಂದು ತಿಳಿಸಿದರು.