ಕರ್ನಾಟಕ

ಕಸದಿಂದ ಕರೆಂಟು!

Pinterest LinkedIn Tumblr

psmec22bio_0

– ರಮೇಶ ಕೆ.
ಬೆಂಗಳೂರಿಗೆ ‘ಗಾರ್ಬೇಜ್‌ ಸಿಟಿ’ ಎಂದು ಜಾಗತಿಕ ಮಟ್ಟದಲ್ಲಿ ಕುಖ್ಯಾತಿ ತಂದುಕೊಟ್ಟ ತ್ಯಾಜ್ಯ ನಿರ್ವಹಣಾ ಸಮಸ್ಯೆಗೆ ಪರಿಹಾರ ಒದಗಿಸಲು ಬಿಬಿಎಂಪಿ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ. ಹಸಿ ತ್ಯಾಜ್ಯದಿಂದ ವಿದ್ಯುತ್‌ ತಯಾರಿಸುವ ಯೋಜನೆಯನ್ನು ಕುರಿತು ರಮೇಶ ಕೆ. ಬರೆದಿದ್ದಾರೆ.

ದಿನದಿಂದ ದಿನಕ್ಕೆ ನಗರದ ತ್ಯಾಜ್ಯ ದ್ವಿಗುಣಗೊಳ್ಳುತ್ತಿದೆ. ಹೆಚ್ಚುತ್ತಿರುವ ತ್ಯಾಜ್ಯವನ್ನು ಎಲ್ಲಿಗೆ ಹಾಕಬೇಕು ಎಂಬುದೇ ದೊಡ್ಡ ತಲೆನೋವಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಪರಿಣಮಿಸಿದೆ. ಇಂಥ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಸಲುವಾಗಿ ಪಾಲಿಕೆಯು ಹಸಿ ತ್ಯಾಜ್ಯವನ್ನು ನಗರದ ಬಡಾವಣೆಗಳಲ್ಲೇ ಒಂದು ಕಡೆ ಸಂಗ್ರಹಿಸಿ ಅದರಿಂದ ಜೈವಿಕ ಅನಿಲ ಉತ್ಪಾದಿಸಿ, ನಂತರ ವಿದ್ಯುತ್‌ ಉತ್ಪಾದಿಸುವ ಕಾರ್ಯಕ್ಕೆ ಮುಂದಾಗಿದೆ.

ನಾಗಪುರ ವಾರ್ಡ್‌,  ಮಹಾಲಕ್ಷ್ಮೀಪುರಂನಲ್ಲಿ ಒಂದು ಎಕರೆ ಜಾಗದಲ್ಲಿ ಜೈವಿಕ ಅನಿಲ ಘಟಕ ಕಳೆದ ಒಂದೂವರೆ ತಿಂಗಳಿಂದ ಕಾರ್ಯೋನ್ಮುಖವಾಗಿದೆ. ಮಹಾಲಕ್ಷ್ಮೀಪುರಂ, ನಾಗಪುರ, ಬೋವಿಪಾಳ್ಯ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ, ರಾಜಾಜಿನಗರ 1ನೇ ಬ್ಲಾಕ್‌, 1ನೇ ಆರ್‌ ಬ್ಲಾಕ್‌ ಬಡಾವಣೆಗಳಿಂದ ಬರುವ ಹಸಿ ತ್ಯಾಜ್ಯವನ್ನು ಈ ಘಟಕದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಐದು ಟನ್‌ ಹಸಿತ್ಯಾಜ್ಯವನ್ನು ಜೈವಿಕ ಅನಿಲವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ. ಆದರೆ ಸದ್ಯ ದಿನಕ್ಕೆ ಎರಡು ಟನ್‌ ಮಾತ್ರ ಪೂರೈಕೆ ಆಗುತ್ತಿದೆ.

ಹಸಿ ತ್ಯಾಜ್ಯವೆಲ್ಲಾ ಬಳಕೆಯಾಗಲ್ಲ
‘ಇಲ್ಲಿಗೆ ಬರುವ ಹಸಿತ್ಯಾಜ್ಯವನ್ನು ಮೊದಲು ತೂಕ ಮಾಡುತ್ತೇವೆ. ಬರುವ ಎಲ್ಲಾ ಹಸಿ ತ್ಯಾಜ್ಯವನ್ನೂ ಬಳಸೋದಿಲ್ಲ. ಅದರಲ್ಲಿ ನಿಂಬೆ ಹಣ್ಣು, ಹಾಗಲಕಾಯಿ, ಕಬ್ಬಿನ ಸಿಪ್ಪೆ, ತೆಂಗಿನ ಚಿಪ್ಪು, ಹಲಸಿನ ತೊಳೆ ಹಾಗೂ ಕೆಲವು ಹೂಗಳ ತ್ಯಾಜ್ಯವನ್ನು ತೆಗೆದುಹಾಕುತ್ತೇವೆ (ಕಾರಣ– ಈ ತ್ಯಾಜ್ಯವು ಬ್ಯಾಕ್ಟೀರಿಯಾವನ್ನು ಸಾಯಿಸಿ, ಅನಿಲವನ್ನು ಬರ್ನ್‌ ಮಾಡುತ್ತದೆ).

ನಂತರ ವಿಂಗಡಣೆ ಮಾಡುತ್ತೇವೆ. ವಿಂಗಡಣೆಯಾದ ತ್ಯಾಜ್ಯ ಮಿಶ್ರಣ ಪ್ರಕ್ರಿಯೆಗೆ ಒಳಪಡುತ್ತದೆ.  ಅಲ್ಲಿಂದ ಸೆಮಿ ಡೈಜೆಸ್ಟರ್‌ ಪ್ರಕ್ರಿಯೆಗೊಳಪಡುತ್ತದೆ. ಆಗ ನೀರು ಹಾಗೂ ಗಾಳಿಯನ್ನು ಸೇರಿಸಲಾಗುತ್ತದೆ. ಅಲ್ಲಿ ಒಂದರಿಂದ ಎರಡು ದಿನ ಬಿಡಲಾಗುತ್ತದೆ. ನಂತರ ಮೈನ್‌ ಡೈಜೆಸ್ಟರ್‌   ತಲುಪುತ್ತದೆ. ಅಲ್ಲಿ ಜೈವಿಕ ಅನಿಲ ಉತ್ಪಾದನೆಯಾಗುತ್ತದೆ. ದೊಡ್ಡ ಟ್ಯಾಂಕ್‌ ನೀರಿನಿಂದ ಮೇಲೆ ಬರುತ್ತಿದ್ದಂತೆ ಜೈವಿಕ ಅನಿಲ ಉತ್ಪಾದನೆ ಆಗಿದೆ ಎಂಬುದು ಗೊತ್ತಾಗುತ್ತದೆ.

ಆ ಜೈವಿಕ ಅನಿಲವನ್ನು ನೇರವಾಗಿ ಕೊಠಡಿಯೊಳಗಿನ ಬೃಹತ್‌ ಬಲೂನ್‌ನೊಳಗೆ ಸಂಗ್ರಹಿಸುತ್ತೇವೆ. ಸಂಗ್ರಹವಾದ ಜೈವಿಕ ಅನಿಲವನ್ನು ಜನರೇಟರ್ (ಡಿಜಿ) ಮೂಲಕ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಸದ್ಯ ಎರಡು ಟನ್‌ ಹಸಿತ್ಯಾಜ್ಯದಿಂದ 3 ಗಂಟೆ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ’ ಎನ್ನುತ್ತಾರೆ ಇಲ್ಲಿನ ತಾಂತ್ರಿಕ ಸಿಬ್ಬಂದಿ.

ಉದ್ಯಾನಕ್ಕೆ ವಿದ್ಯುತ್‌ ಬಳಕೆ
‘ನಗರದಲ್ಲಿ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ತಲೆದೋರಿದೆ. ಹೀಗಿರುವಾಗ ಸಮಸ್ಯೆಗೆ ಪರಿಹಾರವೆಂದರೆ ಕಸದಿಂದ ರಸ ಮಾಡುವ ಕೆಲಸ. ಮನೆಯಲ್ಲೇ ಹಸಿ ಹಾಗೂ ಒಣ ತ್ಯಾಜ್ಯವಾಗಿ ವಿಂಗಡಣೆ ಮಾಡುವಂತೆ ನಾಗರಿಕರಲ್ಲಿ ಅರಿವು ಮೂಡಿಸಲಾಗಿದೆ.   ಅದರಂತೆ ಎಲ್ಲಾ ಕಡೆ ವಿಂಗಡಣೆ ಮಾಡುತ್ತಿದ್ದಾರೆ. ಆದರೆ ಕಸ ವಿಂಗಡಣೆ ಮಾಡುವಲ್ಲಿ (ಶೇ 87) ನಮ್ಮ ವಾರ್ಡ್‌ ಯಶಸ್ವಿಯಾಗಿದೆ.

ನಾಗಪುರ ವಾರ್ಡ್‌ ವ್ಯಾಪ್ತಿಯಲ್ಲಿ ದಿನಕ್ಕೆ ಒಂದೂವರೆಯಿಂದ ಎರಡು ಟನ್‌ ಹಸಿ ತ್ಯಾಜ್ಯ ಬರುತ್ತಿದೆ. ಈ ಘಟಕ ಐದು ಟನ್‌ ಸಾಮರ್ಥ್ಯದ್ದು. ಈ ಘಟಕದಿಂದ ಉತ್ಪಾದನೆಯಾಗುವ ವಿದ್ಯುತ್‌ ಅನ್ನು ‘ಲೈನ್‌ ಪಾರ್ಕ್‌’ಗೆ ಬಳಸಿಕೊಳ್ಳುತ್ತಿದ್ದೇವೆ. ಈ ಉದ್ಯಾನದಲ್ಲಿ 60 ದೀಪಗಳಿವೆ. ಅಲ್ಲದೇ ಒಣ ತ್ಯಾಜ್ಯ ಘಟಕದ ಯಂತ್ರಗಳಿಗೂ ಈ ವಿದ್ಯುತ್‌ ಬಳಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಹಸಿ ತ್ಯಾಜ್ಯ ಬಂದರೆ ವಾರ್ಡ್‌ನ ಎರಡು ಸಾವಿರ ಬೀದಿ ದೀಪಗಳಿಗೂ ಇಲ್ಲಿನ ವಿದ್ಯುತ್‌ ಬಳಸುವ ಉದ್ದೇಶವಿದೆ’ ಎನ್ನುತ್ತಾರೆ ಪಾಲಿಕೆ ಸದಸ್ಯ ಎಸ್‌.ಹರೀಶ್‌.

‘ನಗರದಲ್ಲಿ ಇಂಥ ಎರಡು ಘಟಕಗಳಿವೆ. ಇನ್ನೊಂದು ಕೆ.ಆರ್‌. ಮಾರುಕಟ್ಟೆಯಲ್ಲಿದೆ. ಅದು 50 ಟನ್‌ ಸಾಮರ್ಥ್ಯವನ್ನು ಹೊಂದಿದೆ. ನಾನು ಉಪ ಮೇಯರ್‌ ಆಗಿದ್ದಾಗ ಪುಣೆಗೆ ಹೋಗಿ ಇಂಥ ಜೈವಿಕ ಅನಿಲ ಘಟಕಗಳನ್ನು ನೋಡಿಕೊಂಡು ಬಂದಿದ್ದೆ. ನಂತರ ಇಲ್ಲೂ ಆರಂಭಿಸುವ ಮೂಲಕ ಅದರ ಉಪಯೋಗ ಪಡೆಯುತ್ತಿದ್ದೇವೆ. ಈ ಘಟಕಕ್ಕೆ 87 ಲಕ್ಷ ವೆಚ್ಚವಾಗಿದೆ’ ಎಂದು ಹೇಳುತ್ತಾರೆ ಹರೀಶ್‌. ಅಡುಗೆ ಮನೆಯಲ್ಲಿನ ತ್ಯಾಜ್ಯದಿಂದ ಗ್ಯಾಸ್ ಉತ್ಪಾದಿಸಿ, ಅದರಿಂದ ವಿದ್ಯುತ್‌ ಉತ್ಪಾದಿಸುವ ಮೂಲಕ ಕಸ ವಿಲೇವಾರಿ ಸಮಸ್ಯೆಗೆ ಸ್ವಲ್ಪ ಮಟ್ಟಿನ ಪರಿಹಾರ ಕಂಡುಹಿಡಿಯುವ ಕೆಲಸ ಮಾಡಿದೆ ಪಾಲಿಕೆ.

Write A Comment