ಬೆಂಗಳೂರು, ಏ.18: ಕಾವೇರಿ ನದಿ ತೀರದ ಮೇಕೆದಾಟು ಬಳಿ ಕುಡಿಯುವ ನೀರು ಮತ್ತು ವಿದ್ಯುತ್ ಯೋಜನೆಗೆ ಅಣೆಕಟ್ಟು ನಿರ್ಮಾಣಕ್ಕೆ ತಗಾದೆ ತೆಗೆದಿರುವ ತಮಿಳುನಾಡು ವಿರುದ್ಧ ಕನ್ನಡಪರ ಸಂಘಟನೆಗಳು ಇಂದು ಕರೆದಿದ್ದ ಕರ್ನಾಟಕ ಬಂದ್ ಯಶಸ್ವಿಯಾಗಿದ್ದು, ಕನ್ನಡಿಗರ ಒಗ್ಗಟ್ಟಿನ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಯಿತು. ಬಹುದಿನಗಳ ನಂತರ ಎಲ್ಲ ವೈಮನಸ್ಸುಗಳನ್ನು ಮರೆತು 600ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದವು. ಕುಡಿಯುವ ನೀರಿನ ವಿಷಯದಲ್ಲಿ ಪದೇ ಪದೇ ತಗಾದೆ ತೆಗೆದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ತಮಿಳುನಾಡಿಗೆ ಕನ್ನಡಿಗರು ಎಚ್ಚರಿಕೆ ನೀಡಿದರು. ಕಾವೇರಿ ನದಿ ನಮ್ಮದು. ಕುಡಿಯುವ ನೀರಿಗಾಗಿ ಅಣೆಕಟ್ಟು ನಿರ್ಮಿಸಲು ತಮಿಳುನಾಡಿನ ಅಪ್ಪಣೆ ಬೇಕಿಲ್ಲ. ಭಾವನಾತ್ಮಕ ವಿಷಯದಲ್ಲೂ ರಾಜಕಾರಣ ಮಾಡುವ ತಮಿಳುನಾಡಿನ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ವಿರುದ್ಧ ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಪನ್ನೀರ್ ಸೆಲ್ವಂ ಮತ್ತು ಜಯಲಲಿತಾ ಅವರ ಪ್ರತಿಕೃತಿಗಳನ್ನು ದಹನ ಮಾಡಿದ ಪ್ರತಿಭಟನಾಕಾರರು ಕೆಲವು ಕಡೆ ತಿಥಿ ಮಾಡಿ ಊಟ, ತಿಂಡಿಯನ್ನು ವಿತರಣೆ ಮಾಡಿದರು.
ಬಂದ್ ಯಶಸ್ವಿ: ಕನ್ನಡ ಪರ ಸಂಘಟನೆಗಳು ಇಂದು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗಿದೆ. ರಾಜಧಾನಿ ಬೆಂಗಳೂರು, ಕಾವೇರಿ ಜಲಾನಯನ ತೀರ ಪ್ರದೇಶಗಳಾದ ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಸೇರಿದಂತೆ ಮತ್ತಿತರ ಕಡೆ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.
ಮಧ್ಯ ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲೂ ಬಂದ್‌ಗೆ ಬೆಂಬಲ ಸೂಚಿಸಲಾಗಿತ್ತು. ಮುಂಬೈ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗದಲ್ಲೂ ಬಂದ್‌ಗೆ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿದವು. ಹೈದರಾಬಾದ್ ಕರ್ನಾಟಕದ ಗುಲ್ಬರ್ಗ, ಬೀದರ್, ಯಾದಗಿರಿ ಹೊರತುಪಡಿಸಿದರೆ ಬಳ್ಳಾರಿ, ಕೊಪ್ಪಳ, ರಾಯಚೂರಿನಲ್ಲೂ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ಕಂಡುಬಂದಿತ್ತು. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಂಪೂರ್ಣ ಸ್ತಬ್ಧ:
ಬೆಂಗಳೂರಿನಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಬಂದ್‌ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸದಾ ಜನಜಂಗುಳಿ, ಬಸ್ ಸಂಚಾರ, ಆಟೋ, ಟ್ಯಾಕ್ಸಿಗಳಿಂದ ಗಿಜಿಗುಡುತ್ತಿದ್ದ ಮಹಾನಗರಿಯಲ್ಲಿ ಬಿಕೋ ಎನ್ನುವ ದೃಶ್ಯ ಎಲ್ಲೆಡೆ ಕಂಡುಬಂದಿತ್ತು.
ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಬೆಂಗಳೂರು ಬಸ್ ನಿಲ್ದಾಣ, ಬಿಎಂಟಿಸಿ, ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್, ಪ್ರಮುಖ ರಸ್ತೆಗಳಾದ ವಿಮಾನ ನಿಲ್ದಾಣ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ, ಕೋರಮಂಗಲ ರಸ್ತೆ ಸೇರಿದಂತೆ ಎಲ್ಲ ರಸ್ತೆಗಳೂ ಖಾಲಿ ಖಾಲಿಯಾಗಿದ್ದವು. ಗಡಿಭಾಗದ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರಕ್ಕೆ ಆಗಮಿಸುತ್ತಿದ್ದ ಆಂಧ್ರ ಪ್ರದೇಶದ ಬಸ್‌ಗಳನ್ನು ಮಾರ್ಗಮಧ್ಯದಲ್ಲಿ ತಡೆಹಿಡಿಯಲಾಗಿತ್ತು. ಇತ್ತ ಹೊಸೂರಿನಿಂದ ಬರಬೇಕಾಗಿದ್ದ ಬಸ್‌ಗಳ ಸಂಚಾರವನ್ನು ಮಧ್ಯದಲ್ಲೇ ತಡೆಹಿಡಿಯಲಾಗಿತ್ತು. ಸರ್ಕಾರಿ ಮತ್ತು ಖಾಸಗಿ ಕಚೇರಿಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ನೀಡಲಾಗಿತ್ತು. ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದ ಕಾರಣ ಸ್ಮಶಾನಮೌನ ಆವರಿಸಿತ್ತು.
ಅಲ್ಲಲ್ಲಿ ಹಿಂಸಾಚಾರ:
ಬಂದ್ ಹಿನ್ನೆಲೆಯಲ್ಲಿ ಕೆಲವು ಕಡೆ ಅಹಿತಕರ ಘಟನೆಗಳು ನಡೆದಿರುವ ಬಗ್ಗೆಯೂ ವರದಿಯಾಗಿದೆ. ಬೆಂಗಳೂರಿನಲ್ಲಿ ಕೆಲವು ಕಡೆ ಕಿಡಿಗೇಡಿಗಳು ವಾಹನಗಳ ಮೇಲೆ ಕಲ್ಲೆಸೆದಿದ್ದಾರೆ. ರಾಮನಗರದ ಐಜೂರು ಸರ್ಕಲ್ ಬಳಿ ಕಸ್ತೂರಿ ಕನ್ನಡ ಜನಪರ ವೇದಿಕೆ ಕಾರ್ಯಕರ್ತರು ಟೈರ್‌ಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಮಡಿಕೇರಿಯಿಂದ ಹಾಸನಕ್ಕೆ ಹೊರಟಿದ್ದ ಬಸ್‌ಗೆ ಕೆಲ ಕಿಡಿಗೇಡಿಗಳು ಕಲ್ಲೆಸೆದು ಬಸ್‌ನ ಗಾಜುಗಳನ್ನು ಒಡೆದುಹಾಕಿದ್ದಾರೆ. ಚಾಮರಾಜನಗರದ ಭುವನೇಶ್ವರ ಸರ್ಕಲ್‌ನಲ್ಲಿ ಟೈರ್‌ಗೆ ಬೆಂಕಿ ಹಚ್ಚಿದ್ದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ತುಮಕೂರಿನಲ್ಲಿ ಪ್ರತಿಭಟನಾ ನಿರತರು ಕೆಲ ವಾಹನಗಳ ಮೇಲೆ ಕಲ್ಲೆಸೆದು ಜಖಂಗೊಳಿಸಿದ್ದಾರೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಎಲ್ಲೆಡೆ ಸ್ವಯಂಪ್ರೇರಿತವಾಗಿ ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಕೆಲವು ಕಡೆ ಸ್ವಯಂಪ್ರೇರಿತರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮಿಳುನಾಡಿನ ವಿರುದ್ಧ ಕಿಡಿಕಾರಿದರು.
ಭಾರೀ ಭದ್ರತೆ:
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಭಾರೀ ಬಿಗಿಭದ್ರತೆ ಕೈಗೊಳ್ಳಲಾಗಿತ್ತು. ಎಲ್ಲೆಡೆ ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸರ್ಕಾರಿ ಕಚೇರಿ, ನ್ಯಾಯಾಲಯಗಳು, ಖಾಸಗಿ ಕಟ್ಟಡಗಳು ಸೇರಿದಂತೆ ಧಾರ್ಮಿಕ ಮಂದಿರಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ವಾಹನಗಳಿಲ್ಲದೆ ಪರದಾಡುತ್ತಿದ್ದ ಪ್ರಯಾಣಿಕರಿಗೆ ಪೊಲೀಸರೇ ಮಾಹಿತಿ ನೀಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು. ಮಕ್ಕಳು, ಮಹಿಳೆಯರು, ಗರ್ಭಿಣಿಯರಿಗೆ ತುರ್ತು ಚಿಕಿತ್ಸೆ ನೀಡಲು ಆಂಬುಲೆನ್ಸ್, ಹೊಯ್ಸಳವನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿತ್ತು.
ಚಿತ್ರರಂಗ ಬಂದ್:
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಚಿತ್ರರಂಗ ಬಂದ್ ಮಾಡಲಾಗಿತ್ತು. ಬೆಂಗಳೂರು ಸೇರಿದಂತೆ ಎಲ್ಲ ಕಡೆಯೂ ಬೆಳಗಿನಿಂದಲೇ ಚಿತ್ರಪ್ರದರ್ಶನ ರದ್ದು ಮಾಡಲಾಗಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ನಿರ್ಮಾಪಕರ ಸಂಘ, ಕಾರ್ಮಿಕರ ಸಂಘ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ ಸೇರಿದಂತೆ ಅನೇಕ ಚಿತ್ರಸಂಘಟನೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿದವು. ಅಲ್ಲದೆ, ಅನೇಕ ಕಡೆ ಚಲನಚಿತ್ರ ನಟ-ನಟಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮಿಳುನಾಡಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಲಭ್ಯ: ಕನ್ನಡಪರ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದರೂ ಆಸ್ಪತ್ರೆ, ಔಷಧಿ ಅಂಗಡಿಗಳು, ಹಾಲು ಮತ್ತು ಔಷಧಿ ಸಾಗಣೆ ಮಾಡುವ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಕೆಲವು ಕಡೆ ಇವುಗಳಿಗೂ ಅಡ್ಡಿಪಡಿಸಲು ಮುಂದಾಗಿದ್ದ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಂಪೂರ್ಣ ಸ್ತಬ್ಧ: ಹೊಟೇಲ್‌ಗಳು, ಪೆಟ್ರೋಲ್ ಬಂಕ್‌ಗಳು, ಆಟೋ ಸಂಚಾರ, ಸಿಟಿ ಟ್ಯಾಕ್ಸಿಗಳು, ಮಾಲ್, ಮಾರುಕಟ್ಟೆಗಳು, ಅಡುಗೆ ಅನಿಲ, ಬಾರ್‌ಗಳು ಬಂದ್ ಹಿನ್ನೆಲೆಯಲ್ಲಿ ಸ್ತಬ್ಧಗೊಂಡಿದ್ದವು. ಬೆಂಗಳೂರು ಸೇರಿದಂತೆ ಎಲ್ಲ ಕಡೆಯೂ ದಿನದ ವಹಿವಾಟು ಸ್ಥಗಿತಗೊಂಡಿತ್ತು.
ಮುಖ್ಯಮಂತ್ರಿಗಳಿಗೆ ಮನವಿ :
ಫ್ರೀಡಂ ಪಾಕ್‌ನಲ್ಲಿ ಸಾರ್ವಜನಿಕ ಸಭೆಯ ನಂತರ ವಾಟಾಳ್ ನಾಗರಾಜ್ ಮತ್ತಿತರರು ಗೃಹ ಕಚೇರಿ ಕೃಷ್ಣಾಗೆ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಶೀಘ್ರದಲ್ಲೇ ಮೇಕೆದಾಟು ಯೋಜನೆಯನ್ನು ಪ್ರಾರಂಭಿಸುವಂತೆ ಕೋರಿದರು.
ಸರ್ಕಾರಕ್ಕೆ 9 ತಿಂಗಳ ಗಡುವು
ಬೆಂಗಳೂರು: ಇನ್ನು ಒಂಬತ್ತು ತಿಂಗಳಲ್ಲಿ ಮೇಕೆದಾಟು ಅಣೆಕಟ್ಟಿಗೆ ಶಂಕುಸ್ಥಾಪನೆ ನಡೆಯದಿದ್ದರೆ ಸರ್ಕಾರದ ವಿರುದ್ಧವೇ ಹೋರಾಟ ಮಾಡಲಾಗುವುದು ಎಂದು ವಾಟಾಳ್ ನಾಗರಾಜ್ ಇಂದಿಲ್ಲಿ ಎಚ್ಚರಿಸಿದ್ದಾರೆ. ಕನ್ನಡಿಗರು ಇಂದು ಸ್ವಯಂಪ್ರೇರಿತರಾಗಿ ಬಂದ್‌ನಲ್ಲಿ ಪಾಲ್ಗೊಂಡಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಕನ್ನಡಿಗರ ಹಕ್ಕನ್ನು ಕಸಿಯಲು ತಮಿಳುನಾಡು ನಡೆಸುವ ಕುತಂತ್ರವನ್ನು ಬಗ್ಗುಬಡಿಯಬೇಕಾಗಿದೆ. ಇದಕ್ಕೆ ಎಲ್ಲ ಸಂಘಟನೆಗಳು ಜತೆಗೂಡಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು. ರಾಜ್ಯಸರ್ಕಾರ ಯಾವುದೇ ಅಳುಕು-ಅಂಜಿಕೆ ಇಲ್ಲದೆ ಕುಡಿಯುವ ನೀರಿನ ವಿಷಯದಲ್ಲಿ ತಮಿಳುನಾಡಿನ ವಿರೋಧವನ್ನೂ ಲೆಕ್ಕಿಸದೆ ಮೇಕೆದಾಟು ಅಣೆಕಟ್ಟನ್ನು ನಿರ್ಮಿಸಲೇಬೇಕು. ಇದಕ್ಕೆ ನಾವು 9 ತಿಂಗಳ ಗಡುವು ನೀಡುತ್ತೇವೆ. ಅಷ್ಟರೊಳಗೆ ದಿಟ್ಟ ನಿರ್ಧಾರ ಕೈಗೊಂಡು ಅಣೆಕಟ್ಟು ನಿರ್ಮಾಣ ಆರಂಭಗೊಳ್ಳಬೇಕು ಎಂದು ಒತ್ತಾಯಿಸಿದರು. ಇದರಲ್ಲಿ ವಿಫಲವಾದರೆ ಸರ್ಕಾರದ ವಿರುದ್ಧವೇ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಹಲಸೂರು ಗೇಟ್‌ನಿಂದ ಪುರಭವನದವರೆಗೆ ಸೈಕಲ್‌ನಲ್ಲೇ ಬಂದು ವಾಟಾಳ್ ಎಲ್ಲರ ಗಮನ ಸೆಳೆದರು.
ಕನ್ನಡಿಗರ ಶಕ್ತಿ ಪ್ರದರ್ಶನ ಅನಾವರಣ
ಬೆಂಗಳೂರು: ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸು ತ್ತಿರುವ ತಮಿಳುನಾಡು ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ನಗರದ ಪುರಭವನದ ವೃತ್ತದಲ್ಲಿಂದು ಸಮಾವೇಶಗೊಂಡು ಸಾವಿರಾರು ಸಂಖ್ಯೆಯಲ್ಲಿ ಬೃಹತ್ ಮೆರವಣಿಗೆಯಲ್ಲಿ ತೆರಳಿದರು. ಕರ್ನಾಟಕ ಬಂದ್ ಅಂಗವಾಗಿ ಟೌನ್‌ಹಾಲ್‌ನಿಂದ ಮೈಸೂರು ಬ್ಯಾಂಕ್ ಮೆರವಣಿಗೆ ಮೂಲಕ ಫ್ರೀಡಂ ಪಾರ್ಕ್‌ವರೆಗೂ ಮೆರವಣಿಗೆ ತೆರಳಿದರು. ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಚಾಮರಾಜಪೇಟೆಯ ಕನ್ನಡ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಜಯಲಲಿತಾ ಅಣಕು ಶವ ಯಾತ್ರೆ ನಡೆಸಲಾಯಿತು. ಕನ್ನಡ ನಾಡಿನಲ್ಲಿ ಹುಟ್ಟಿದರೂ ತಮಿಳುನಾಡಿನಲ್ಲಿ ರಾಜಕಾರಣಕ್ಕಾಗಿ ಕಾವೇರಿ ಭಾಗದ ಪ್ರತಿಯೊಂದು ಯೋಜನೆಗೂ ಅಡ್ಡಿ ಪಡಿಸುತ್ತಿರುವ ಜಯಲಲಿತಾ ನಮ್ಮ ಪಾಲಿಗೆ ಇದ್ದು ಇಲ್ಲದಂತೆ ಎಂದು ಅಣುಕು ಪ್ರದರ್ಶನ ಮಾಡಿ ಕೆ.ವಿ. ಅಶ್ವಥನಾರಾಯಣ, ರಾಮಚಂದ್ರ ಕಿಡಿಕಾರಿದರು.
ಜಯಕರ್ನಾಟಕ, ಒಕ್ಕಲಿಗರ ಸಂಘ, ಜೆಡಿಯು, ರೈತ ಸಂಘ, ದಲಿತ ಸಂಘರ್ಷ ಸಮಿತಿ, ಹಸಿರುಸೇನೆ, ಟ್ಯಾಕ್ಸಿ ಮತ್ತು ಕ್ಯಾಬ್ ಮಾಲೀಕರ ಸಂಘ, ಲಾರಿಮಾಲೀಕರ ಸಂಘ, ವಾದ್ಯಗೋಷ್ಠಿ ಕಲಾವಿದರ ಸಂಘ ಸೇರಿದಂತೆ 400ಕ್ಕೂ ಹೆಚ್ಚು ಸಂಘಟನೆಗಳು ಪುರಭವನ ವೃತ್ತದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ಫ್ರೀಡಂ ಪಾರ್ಕ್‌ನವರೆಗೂ ತೆರಳಿದ ಮೆರವಣಿಗೆಯಲ್ಲಿ ಕನ್ನಡಪರ ಸಂಘಟನೆಗಳ ಅಧ್ಯಕ್ಷ ವಾಟಾಳ್ ನಾಗರಾಜ್, ಡಾ.ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ರೈತ ಸಂಘ ಅಧ್ಯಕ್ಷ ಕೋಡಿ ಚಂದ್ರಶೇಖರ್, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಸೇರಿದಂತೆ ನಾನಾ ಮುಖಂಡರು ಭಾಗವಹಿಸಿದ್ದರು. ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ತಮಿಳುನಾಡು ಸರ್ಕಾರ ಹಾಗೂ ಮಾಜಿ ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಬಂದ್ ಅಂಗವಾಗಿ ನಡೆದ ಪ್ರತಿಭಟನೆಯಲ್ಲಿ ನಾನಾ ರೀತಿಯ ವಿಶೇಷತೆಗಳು ಕಂಡುಬಂದವು. ಕನ್ನಡ ಪ್ರೇಮಿಗಳು ಕನ್ನಡ ಭಾಷಾ ಅಭಿಮಾನವನ್ನು ಪ್ರದರ್ಶಿಸುವ ಬಟ್ಟೆಗಳನ್ನು ತೊಟ್ಟುಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೆಲವರು ತಮ್ಮ ವಾಹನಗಳಿಗೆ ವಿಶೇಷ ಅಲಂಕಾರ ಮಾಡಿಕೊಂಡಿದ್ದರು. ಮೆರವಣಿಗೆಯ ಉದ್ದಕ್ಕೂ ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರಗಳು ಮೊಳಗಿದವು. ಪೊಲೀಸರು ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆಯಾಗಿ ಭಾರೀ ಬಂದೋಬಸ್ತ್ ಕೈಗೊಂಡಿದ್ದರು.
ಬಂದ್ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಇಲ್ಲದೆ ಇದ್ದರಿಂದ ವಾಹನ ಸಂಚಾರ ದಟ್ಟಣೆ ಕಂಡುಬರಲಿಲ್ಲ. ನಗರದ ನಾನಾ ಭಾಗಗಳಿಂದ ಟೌನ್‌ಹಾಲ್ ವರೆಗೂ ಮೆರವಣಿಗೆ ಬಂದು ನಂತರ ಬೃಹತ್ ರ್ಯಾ ಲಿ ಜೊತೆಗೂಡಿದವು.
ನಗರ ಶಾಂತಿಯುತ
ಬೆಂಗಳೂರು: ನಗರದಾದ್ಯಂತ ಕರ್ನಾಟಕ ಬಂದ್ ಸಂಪೂರ್ಣ ಶಾಂತಿಯುತವಾಗಿ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಇಂದಿಲ್ಲಿ ತಿಳಿಸಿದರು. ಈ ಸಂಜೆಯೊಂದಿಗೆ ಮಾತನಾಡಿದ ಅವರು, ನಗರದಾದ್ಯಂತ ಪರಿಸ್ಥಿತಿ ಸಂಪೂರ್ಣ ಶಾಂತಿಯುವಾಗಿದೆ. ಎಲ್ಲಿಯೂ ಸಣ್ಣಪುಟ್ಟ ಘಟನೆಗಳು ನಡೆದಿಲ್ಲ. ನಾವು ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದೇವೆ ಎಂದರು. ಸ್ಥಳೀಯ ಪೊಲೀಸರ ಜೊತೆ ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಡಿಸಿಪಿ, ಎಸಿಪಿಗಳು ಗಸ್ತಿನಲ್ಲಿದ್‌ದಾರೆ. ಅಲ್ಲದೆ ಕೆಎಸ್‌ಆರ್‌ಪಿ, ಸಿಎಆರ್ ಪ್ಲಟೂನ್‌ಗಳನ್ನು ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿದೆ, ಸೂಕ್ತ ಬಂದೋಬಸ್ತ್ ಮಾಡಿದ್ದೇವೆ ಎಂದು ಹೇಳಿದರು. ಇದುವರೆಗೂ ಬಂದ್ ಶಾಂತಿಯುತವಾಗಿ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ವಶಕ್ಕೆ ಪಡೆದಿದ್ದೇವೆ ಎಂದು ಹೇಳಿದರು.
ಇನ್ನು ಒಂಬತ್ತು ತಿಂಗಳಲ್ಲಿ ಶಂಕುಸ್ಥಾಪನೆ ನಡೆಯದಿದ್ದರೆ ಸರ್ಕಾರದ ವಿರುದ್ಧವೇ ಹೋರಾಟ
ಬೆಂಗಳೂರು: ಇನ್ನು ಒಂಬತ್ತು ತಿಂಗಳಲ್ಲಿ ಮೇಕೆದಾಟು ಅಣೆಕಟ್ಟಿಗೆ ಶಂಕುಸ್ಥಾಪನೆ ನಡೆಯದಿದ್ದರೆ ಸರ್ಕಾರದ ವಿರುದ್ಧವೇ ಹೋರಾಟ ಮಾಡಲಾಗುವುದು ಎಂದು ವಾಟಾಳ್ ನಾಗರಾಜ್ ಇಂದಿಲ್ಲಿ ಎಚ್ಚರಿಸಿದ್ದಾರೆ. ಕನ್ನಡಿಗರು ಇಂದು ಸ್ವಯಂಪ್ರೇರಿತರಾಗಿ ಬಂದ್‌ನಲ್ಲಿ ಪಾಲ್ಗೊಂಡಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಕನ್ನಡಿಗರ ಹಕ್ಕನ್ನು ಕಸಿಯಲು ತಮಿಳುನಾಡು ನಡೆಸುವ ಕುತಂತ್ರವನ್ನು ಬಗ್ಗುಬಡಿಯಬೇಕಾಗಿದೆ. ಇದಕ್ಕೆ ಎಲ್ಲ ಸಂಘಟನೆಗಳು ಜತೆಗೂಡಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು. ರಾಜ್ಯಸರ್ಕಾರ ಯಾವುದೇ ಅಳುಕು-ಅಂಜಿಕೆ ಇಲ್ಲದೆ ಕುಡಿಯುವ ನೀರಿನ ವಿಷಯದಲ್ಲಿ ತಮಿಳುನಾಡಿನ ವಿರೋಧವನ್ನೂ ಲೆಕ್ಕಿಸದೆ ಮೇಕೆದಾಟು ಅಣೆಕಟ್ಟನ್ನು ನಿರ್ಮಿಸಲೇಬೇಕು. ಇದಕ್ಕೆ ನಾವು 9 ತಿಂಗಳ ಗಡುವು ನೀಡುತ್ತೇವೆ. ಅಷ್ಟರೊಳಗೆ ದಿಟ್ಟ ನಿರ್ಧಾರ ಕೈಗೊಂಡು ಅಣೆಕಟ್ಟು ನಿರ್ಮಾಣ ಆರಂಭಗೊಳ್ಳಬೇಕು ಎಂದು ಒತ್ತಾಯಿಸಿದರು. ಇದರಲ್ಲಿ ವಿಫಲವಾದರೆ ಸರ್ಕಾರದ ವಿರುದ್ಧವೇ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಹಲಸೂರು ಗೇಟ್‌ನಿಂದ ಪುರಭವನದವರೆಗೆ ಸೈಕಲ್‌ನಲ್ಲೇ ಬಂದು ವಾಟಾಳ್ ಎಲ್ಲರ ಗಮನ ಸೆಳೆದರು.
ಸಾವಿರಾರು ಸಂಖ್ಯೆಯಲ್ಲಿ ಬೃಹತ್ ಮೆರವಣಿಗೆ
ಬೆಂಗಳೂರು: ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸು ತ್ತಿರುವ ತಮಿಳುನಾಡು ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ನಗರದ ಪುರಭವನದ ವೃತ್ತದಲ್ಲಿಂದು ಸಮಾವೇಶಗೊಂಡು ಸಾವಿರಾರು ಸಂಖ್ಯೆಯಲ್ಲಿ ಬೃಹತ್ ಮೆರವಣಿಗೆಯಲ್ಲಿ ತೆರಳಿದರು. ಕರ್ನಾಟಕ ಬಂದ್ ಅಂಗವಾಗಿ ಟೌನ್‌ಹಾಲ್‌ನಿಂದ ಮೈಸೂರು ಬ್ಯಾಂಕ್ ಮೆರವಣಿಗೆ ಮೂಲಕ ಫ್ರೀಡಂ ಪಾರ್ಕ್‌ವರೆಗೂ ಮೆರವಣಿಗೆ ತೆರಳಿದರು. ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಚಾಮರಾಜಪೇಟೆಯ ಕನ್ನಡ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಜಯಲಲಿತಾ ಅಣಕು ಶವ ಯಾತ್ರೆ ನಡೆಸಲಾಯಿತು. ಕನ್ನಡ ನಾಡಿನಲ್ಲಿ ಹುಟ್ಟಿದರೂ ತಮಿಳುನಾಡಿನಲ್ಲಿ ರಾಜಕಾರಣಕ್ಕಾಗಿ ಕಾವೇರಿ ಭಾಗದ ಪ್ರತಿಯೊಂದು ಯೋಜನೆಗೂ ಅಡ್ಡಿ ಪಡಿಸುತ್ತಿರುವ ಜಯಲಲಿತಾ ನಮ್ಮ ಪಾಲಿಗೆ ಇದ್ದು ಇಲ್ಲದಂತೆ ಎಂದು ಅಣುಕು ಪ್ರದರ್ಶನ ಮಾಡಿ ಕೆ.ವಿ. ಅಶ್ವಥನಾರಾಯಣ, ರಾಮಚಂದ್ರ ಕಿಡಿಕಾರಿದರು.
ಸ್ಥಬ್ದವಾದ ಬೆಂಗಳೂರು ..!
ಬೆಂಗಳೂರು: ನಾಡಿನ ನೆಲ-ಜಲಕ್ಕಾಗಿ ಇಂದು ಬೆಂಗಳೂರಿನ ನಾಗರಿಕರು ಸಂಪೂರ್ಣವಾಗಿ ಒಂದಾಗಿ ಕರ್ನಾಟಕ ಬಂದ್‌ಗೆ ವ್ಯಾಪಕ ಬೆಂಬಲ ಸೂಚಿಸಿದ್ದಾರೆ. ಇಂದು ಬೆಳಗ್ಗೆ ಬಹುತೇಕ ಎಲ್ಲ ಕಡೆ ಅಂಗಡಿ-ಮುಂಗಟ್ಟುಗಳು ತೆರೆಯಲಿಲ್ಲ. ವಾಹನಗಳ ಸಂಚಾರವು ಕೂಡ ವಿರಳವಾಗಿತ್ತು ಮತ್ತು ಅಲ್ಲಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ನೆರೆಯ ತಮಿಳುನಾಡು ಸರ್ಕಾರದ ಧೋರಣೆಯ ವಿರುದ್ಧ ಕಿಡಿಕಾರಿದವು. ಅಗತ್ಯ ವಸ್ತುಗಳಾದ ಹಾಲು, ಔಷಧಿ ಅಂಗಡಿಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿತ್ತು. ಆದರೂ 10 ಗಂಟೆ ನಂತರ ಎಲ್ಲ ಡೈರಿಗಳ ಬಾಗಿಲನ್ನು ಮುಚ್ಚಲಾಯಿತು. ಪ್ರಮುಖವಾಗಿ ಬೆಂಗಳೂರಿನ ಹೃದಯ ಭಾಗದ ಗಾಂಧಿನಗರದಲ್ಲಿ ಬಂದ್‌ನ ಬಿಸಿ ಜೋರಾಗಿತ್ತು. ಪ್ರತಿದಿನ ಜನಸಂದಣಿಯಿಂದ ಗಿಜಿಗುಡುತ್ತಿದ್ದ ಬಿವಿಕೆ ಅಯ್ಯಂಗಾರ್ ರಸ್ತೆ, ಕೆಂಪೇಗೌಡ ರಸ್ತೆ, ಚಿಕ್ಕಪೇಟೆ, ಮೆಜಸ್ಟಿಕ್‌ನಲ್ಲಿ ವ್ಯಾಪಾರ-ವಹಿವಾಟು ಸಂಪೂರ್ಣ ಸ್ತಬ್ಧಗೊಂಡಿತ್ತು. ಜನರ ಓಡಾಟ ಕೂಡ ವಿರಳವಾಗಿತ್ತು. ಪ್ರಮುಖವಾಗಿ ಸಾರಿಗೆ ಸಂಸ್ಥೆಯ ಬಿಎಂಟಿಸಿ, ಟ್ಯಾಕ್ಸಿ, ಆಟೋಗಳು ಇಂದು ರಸ್ತೆಗಿಳಿಯದ ಕಾರಣ ಬಂದ್ ಸಂಪೂರ್ಣ ಯಶಸ್ವಿಯಾಗಿತ್ತು.
ಮುಂಜಾಗ್ರತಾ ಕ್ರಮವಾಗಿ 500 ಮಂದಿ ವಶಕ್ಕೆ
ಬೆಂಗಳೂರು: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 500ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್ ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ನಿನ್ನೆಯಿಂದಲೇ ಕೆಲವರನ್ನು ವಶಕ್ಕೆ ತೆಗೆದುಕೊಳ್ಳುವ ಕಾರ್ಯ ಮಾಡಲಾಯಿತು. ಬಂದ್ ವೇಳೆ ಶಾಂತಿ ಕದಡದಂತೆ ಮುನ್ನೆಚ್ಚರಿಕೆಯಾಗಿ ಹಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು. ಬಂದ್ ವೇಳೆ ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದಲ್ಲದೆ, ಬಂದ್ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಅವರ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟುಮಾಡಿದರೆ ಅಂತಹವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಒಟ್ಟಾರೆ ನಗರದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ. ನಾವು ಎಲ್ಲ ಕಡೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿದ್ದೇವೆ. ಬಹುತೇಕ ಮಾರ್ಕೆಟ್‌ಗಳು, ಅಂಗಡಿಗಳು ಮುಚ್ಚಿವೆ. ವಾಹನಗಳ ಸಂಖ್ಯೆ ಬಹಳಷ್ಟು ಕಡಿಮೆಯಿದೆ ಎಂದು ಅವರು ವಿವರಿಸಿದರು.