ಫೋಟೋ: ಅಶೋಕ್ ಬೆಳ್ಮಣ್
ದುಬೈ, ಎ.18: ಕನ್ನಡದ ಹೆಸರಾಂತ ಹಿನ್ನೆಲೆ ಗಾಯಕಿ ಎಂ.ಡಿ. ಪಲ್ಲವಿಯವರ ಮಧುರ ಕಂಠದ ಹಾಡು ಒಂದೆಡೆಯಾದರೆ, ಇನ್ನೊಂದೆಡೆ ಖ್ಯಾತ ಹಾಸ್ಯಗಾರರಾದ ರಿಚರ್ಡ್ ಲೂವಿಸ್ ಹಾಗೂ ಕಿರ್ಲೋಸ್ಕರ್ ಸತ್ಯರ ಹಾಸ್ಯದ ಜುಗಲ್‌ಬಂಧಿ ನೆರೆದವರನ್ನು ಮಂತ್ರಮುಗ್ಧರನ್ನಾಗಿಸಿತು.
ದುಬೈಯ ಶೇಖ್ ಝಾಯಿದ್ ರಸ್ತೆಯಲ್ಲಿರುವ ಜೆಎಸ್‌ಎಸ್ ಶಾಲೆಯ ಸಭಾಂಗಣದಲ್ಲಿ ದುಬೈ ಕನ್ನಡಿಗರು ಆಯೋಜಿಸಿದ್ದ ‘ಸಂಗೀತ-ಹಾಸ್ಯ ಸೌರಭ’ ಕಾರ್ಯಕ್ರಮವು ನೆರೆದವರನ್ನು ಸಂಗೀತ-ಹಾಸ್ಯದ ಲೆಯಲ್ಲಿ ತೇಲಾಡುವಂತೆ ಮಾಡಿತು.

ಎಂ.ಡಿ.ಪಲ್ಲವಿಯವರ ಸುಮಧುರ ಗೀತೆಗಳಿಗೆ ಪ್ರೇಕ್ಷಕರು ತಲೆಬಾಗಿದರು. ಅವರ ಹಾಡಿನ ಮೋಡಿ ಎಲ್ಲರನ್ನು ಸಂಗೀತಲೋಕಕ್ಕೆ ಕರೆದೊಯ್ಯಿತು. ಅವರ ಹಾಡಿನ ಭಾವಲಹರಿಗೆ ದುಬೈಗರು ಮನಸೋತರು.
ಜೊತೆಗೆ ಹಾಸ್ಯಲೋಕದ ದಿಗ್ಗಜರೆಂದೇ ಖ್ಯಾತರಾಗಿರುವ ರಿಚರ್ಡ್ ಲೂವಿಸ್ ಹಾಗೂ ಕಿರ್ಲೋಸ್ಕರ್ ಸತ್ಯರ ಹಾಸ್ಯ ಚಟಾಕಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡುವಂತೆ ಮಾಡಿತು.
ಎಂ.ಡಿ.ಪಲ್ಲವಿಯವರು ಹಾಡಿನ ಸಂಗೀತಕ್ಕೆ ಅರುಣ್ ಕುಮಾರ್, ಉದಯ್ ಅಂಕೋಲಾ ಹಾಗೂ ಶ್ರೀ ಕೃಷ್ಣ ಉಡುಪರವರು ಸಾಥ್ ನೀಡಿದರು.
ಇದೇ ಸಂದರ್ಭದಲ್ಲಿ ಯುಎಇಯಲ್ಲಿ ಕನ್ನಡ ಭಾಷೆಗೆ ತನ್ನದೇ ಆದ ಕೊಡುಗೆ ನೀಡಿದ ಹರ್ಷದ್ ಹುಸೇನ್ ಹಾಗೂ ಮಲ್ಲಿಕಾರ್ಜುನ ಗೌಡರಿಗೆ ಸನ್ಮಾನಿಸಲಾಯಿತು.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಆ್ಯಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್‌ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಚಿಲ್ಲಿವಿಲ್ಲಿಯ ಸತೀಶ್ ವೆಂಕಟರಮಣ, ರೇಡಿಯೋ ಸ್ಪೈಸ್‌ನ ಹರ್ಮನ್ ಲೂಯಿಸ್, ಸಂಘದ ಅಧ್ಯಕ್ಷ ಸದನ್‌ದಾಸ್, ಉಮಾ ವಿದ್ಯಾಧರ್, ಮಲ್ಲಿಕಾರ್ಜುನ ಗೌಡ, ಬಸವರಾಜ್ ಸಾಲಿಮಠ್, ಸುರೇಖ ವಿ ಬಾಬು, ಶಿವಕುಮಾರ್, ನಟರಾಜ್, ಡಾ. ಮೋಹನ್ ಕುದೂರು, ವಿದ್ಯಾ ಶಿವಕುಮಾರ್, ಭಾಗ್ಯ ಸದನ್‌ದಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಈ ವೇಳೆ ಎಂ.ಡಿ. ಪಲ್ಲವಿ, ರಿಚರ್ಡ್ ಲೂವಿಸ್, ಕಿರ್ಲೋಸ್ಕರ್ ಸತ್ಯ, ಅರುಣ್ ಕುಮಾರ್, ಉದಯ್ ಅಂಕೋಲಾ ಹಾಗೂ ಶ್ರೀ ಕೃಷ್ಣ ಉಡುಪರನ್ನು ಸನ್ಮಾನಿಸಲಾಯಿತು.













































































