ಕರ್ನಾಟಕ

ಚಿನ್ನದ ನಾಡಿಗೆ ಒಂದು ದಿನದ ಪಯಣ…

Pinterest LinkedIn Tumblr

psmec11suttanakoti2

– ನಾಗೇಶ ತಳವಾರ
ಸಿಲಿಕಾನ್ ಸಿಟಿ ಸದಾ ಎಚ್ಚರವಿರುವ ನಗರ. ಇಲ್ಲಿ ಎಲ್ಲರೂ ರೌಂಡ್ ದಿ ಕ್ಲಾಕ್ ದುಡಿಯುವವರು! ಸದಾ ಅವಸರ, ಜಂಜಾಟ.
ನಿತ್ಯದ ಬದುಕಿಗಾಗಿ ನಡೆಸುವ ಪೀಕಲಾಟದ ನಡುವೆಯೇ ಖುಷಿ, ಸಂತೋಷ ಹುಡಕಿಕೊಳ್ಳಬೇಕಾಗಿದೆ. ಅದಕ್ಕಾಗಿ ನಗರಿಗರಿಗೆ ಸಿಗುವುದು ವಾರಾಂತ್ಯ.

ಆ ವಾರಾಂತ್ಯದ ಒಂದು ದಿನದಲ್ಲಿ ಹಾಯಾಗಿ ಕಾಲ ಕಳೆದು ಮನಸ್ಸನ್ನು ಸಾಧ್ಯವಾದಷ್ಟು ಹಗುರ ಮಾಡಿಕೊಂಡು ಬರಬಹುದಾದ ಸ್ಥಳಕ್ಕಾಗಿ ಅವರ ಮನಸ್ಸು ಸದಾ ಹುಡುಕುತ್ತಿರುತ್ತದೆ. ಬೆಂಗಳೂರಿಗರು ಒಂದು ದಿನದಲ್ಲಿ ಹೋಗಿ ಬರಬಹುದಾದ ಅನೇಕ ಸುಂದರ ಸ್ಥಳಗಳು ಕೋಲಾರ ಜಿಲ್ಲೆಯಲ್ಲಿವೆ. ದೇವ ದರ್ಶನದ ಜೊತೆಗೆ ಪ್ರಕೃತಿಯ ಸೊಬಗನ್ನೂ ಕಣ್ಣತುಂಬಿಕೊಳ್ಳಬಹುದು.

ನೋಡಬನ್ನಿ ಕೋಟಿಲಿಂಗೇಶ್ವರ
ಸಿಟಿಯಿಂದ ಕೇವಲ 97 ಕಿಲೋ ಮೀಟರ್ ದೂರದಲ್ಲಿ ಕೋಟಿಲಿಂಗೇಶ್ವರವಿದೆ. ಬಂಗಾರ ಪೇಟೆಯಿಂದ 10 ನಿಮಿಷಗಳ ಪಯಣ. ತನ್ನದೇ ಆದಂತಹ ಐತಿಹ್ಯ ಹೊಂದಿರುವ ಕೋಟಿಲಿಂಗೇಶ್ವರ ಇರುವುದು ಕಮ್ಮಸಂದ್ರದಲ್ಲಿ. ಈಶ್ವರನ ಸನ್ನಿದಿಗೆ ತಲುಪಿದಾಕ್ಷಣ ಮನಸ್ಸಿಗೆ ಏನೋ ಆನಂದ.  ತ್ರೇತಾಯುಗದಿಂದಲೂ  ಪುಣ್ಯ ಕ್ಷೇತ್ರವೆಂದು ಪ್ರಸಿದ್ಧಿ ಪಡೆದಿದೆ ಈ ತಾಣ. ಇಲ್ಲಿ 90 ಲಕ್ಷ ಲಿಂಗಗಳು ಇವೆ. 108 ಅಡಿ ಎತ್ತರದ ಬೃಹತ್ ಶಿವಲಿಂಗವಿದೆ. ಆತನ ಎದುರು 32 ಅಡಿ ಎತ್ತರದ ನಂದಿ ವಿಗ್ರಹ ಇದೆ.

ಸಾಂಬಶಿವಮೂರ್ತಿ ಶ್ರೀಗಳ ಮಾರ್ಗದರ್ಶನದಲ್ಲಿ ಇಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಅದು ದೇಗುಲದಲ್ಲಿ ರಾರಾಜಿಸುತ್ತಿದೆ. ಇನ್ನು ದೇಗುಲದ ಪ್ರಾಂಗಣದಲ್ಲಿ ವಿಷ್ಣು, ಆಂಜನೇಯ, ಮಹೇಶ್ವರ, ಲಕ್ಷ್ಮಿ, ನವಗ್ರಹ ಸೇರಿದಂತೆ ಅನೇಕ ದೇವಾನುದೇವತೆಗಳ ದರ್ಶನ ಭಾಗ್ಯ.

ಸಾಮಾನ್ಯವಾಗಿ ಬ್ರಹ್ಮನನ್ನು ಯಾರೂ ಪೂಜಿಸುವುದಿಲ್ಲ. ಅದಕ್ಕೆ ಕಾರಣ, ಅವನು ತನ್ನ ಸ್ವಂತ ಮಗಳನ್ನ ಮದುವೆಯಾದ ಎನ್ನುವ ಕಾರಣಕ್ಕೆ. ಆದರೆ ಇಲ್ಲಿ ಬ್ರಹ್ಮದೇವನನ್ನೂ ಸಹ ಪೂಜಿಸಲಾಗುತ್ತದೆ. ಇಲ್ಲಿರುವ ಒಂದೊಂದು ಲಿಂಗ ಒಂದೊಂದು ರೂಪದಲ್ಲಿದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರತಿಷ್ಠಾಪಿಸಿರುವ ಲಿಂಗಗಳ ಸಂಖ್ಯೆ 90 ಲಕ್ಷವಾಗಿದೆ.

ಕೋಲಾರಮ್ಮನಿಗೊಮ್ಮೆ ನಮಿಸಿ..
ಇನ್ನು ಕೋಲಾರ ನಗರದಲ್ಲಿ ಕೋಲಾರಮ್ಮನ ದೇವಸ್ಥಾನವಿದೆ. ಚೋಳರಿಂದ ಈ ದೇಗುಲ ನಿರ್ಮಾಣಗೊಂಡಿದೆ.

ಗೋಲ್ಡ್‌ಫೀಲ್ಡ್‌ ಎಂಬ ಸ್ವರ್ಗ
ಚಾರಣ ಮಾಡುವವರಿಗಂತೂ ಹೇಳಿ ಮಾಡಿಸಿದ ಜಾಗ ಗೋಲ್ಡ್ ಫೀಲ್ಡ್. ಈ ಜಾಗವನ್ನು ಮಿನಿ ಇಂಗ್ಲೆಂಡ್ ಎಂದು ಕರೆಯಲಾಗುತ್ತದೆ. ಇದು ಸಮುದ್ರ ಮಟ್ಟದಿಂದ 3195 ಅಡಿ ಎತ್ತರದಲ್ಲಿದೆ. ರಮ್ಯವಾದ ತಾಣ, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಭೂಮಿ ಮೇಲಿನ ಸ್ವರ್ಗ ಅಂದರೂ ತಪ್ಪಾಗಲಿಕಿಲ್ಲ. ಒಮ್ಮೆ ಈ ಬೆಟ್ಟವನ್ನು ಹತ್ತಿದರೆ ಆಕಾಶಕ್ಕೆ ಲಗ್ಗೆ ಇಡುತ್ತಿದ್ದೇನೆ ಎನ್ನುವ ಅನುಭವವಾಗುತ್ತೆ.

ಸೀತೆಯ ಮನೆಗೊಮ್ಮೆ ಹೋಗಿ ಬನ್ನಿ
ಇದನ್ನು ನೋಡಿಕೊಂಡು ಹಾಗೇ 10 ಕಿಲೋ ಮೀಟರ್ ಸಾಗಿದರೆ ಅವನಿ ಗ್ರಾಮ ಸಿಗುತ್ತೆ. ಇಲ್ಲಿ ಸೀತೆಗಾಗಿ ಒಂದು ದೇವಾಲಯವನ್ನು ಕಟ್ಟಲಾಗಿದೆ. ಅವನಿ ಗ್ರಾಮದಲ್ಲಿಯೇ ಸೀತೆ ಲವ-ಕುಶರಿಗೆ ಜನ್ಮ ನೀಡಿದಳು ಎನ್ನುವ ಪ್ರತೀತಿಯೂ ಇದೆ. ಅವಳು ವಾಸವಿದ್ದಳು ಎಂಬ ಐತಿಹ್ಯವಿರುವ ಮನೆ ಸಹ ಇಲ್ಲಿ ಕಾಣಸಿಗುತ್ತೆ. ಅಷ್ಟೇ ಅಲ್ಲ, ರಾಮಾಯಣ ಎನ್ನುವ ಮಹಾಗ್ರಂಥ ರಚಿಸಿದ ಮಹರ್ಷಿ ವಾಲ್ಮೀಕಿ ಸಹ ಇಲ್ಲಿ ಕೆಲ ಕಾಲ ತಂಗಿದ್ದನಂತೆ. ಹೀಗಾಗಿ ಇದನ್ನು ದಕ್ಷಿಣದ ಗಯಾ ಎಂದು ಕರೆಯಲಾಗುತ್ತದೆ.

ಅಂತರಗಂಗೆ ಹರಿಯುವುದು ಹೆಂಗೆ?
ಕೋಲಾರ ನಗರದಿಂದ ನಾಲ್ಕು ಕಿಲೋ ಮೀಟರ್ ಸಾಗಿದರೆ ಅಂತರಗಂಗೆ ಸಿಗುತ್ತೆ. ಇದನ್ನು ಶತಶೃಂಗ ಪರ್ವತ ಎಂದೂ ಕರೆಯಲಾಗುತ್ತದೆ. ಬೆಟ್ಟದ ತುದಿಯಲ್ಲಿ ಅಂತರಗಂಗೆ ದೇವಾಲಯವನ್ನ ನಿರ್ಮಿಸಲಾಗಿದೆ. ಹಚ್ಚ ಹಸಿರಿನ ತಪ್ಪಲಿನ ನಡುವೆ ಈ ಬೆಟ್ಟವನ್ನ ಹತ್ತುವುದೇ ಒಂದು ಸಾಹಸ. ಬೆಟ್ಟದ ಪೂರ್ವ ಭಾಗದಲ್ಲಿ ನಿರಂತರವಾಗಿ ಹರಿಯವ ನೀರಿನ ಬುಗ್ಗೆ ಇದೆ.

ಈ ಅಂತರಗಂಗೆ ಹುಟ್ಟಿನ ಬಗ್ಗೆ ಅನೇಕ ನಂಬಿಕೆಗಳಿವೆ. ಇದರ ಕುರಿತು ಒಬ್ಬೊಬ್ಬರು ಒಂದೊಂದು ರೀತಿಯ ಕಥೆಗಳನ್ನು ಹೇಳುತ್ತಾರೆ. ಆದರೆ, ಇಲ್ಲಿನ ನೀರು ಎಲ್ಲಿಂದ ಬರುತ್ತೆ ಎನ್ನುವುದು ಮಾತ್ರ ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಜಿಲ್ಲೆಯಲ್ಲಿ ಬರಗಾಲ ಬಂದರೂ ಈ ಅಂತರಗಂಗೆ ನಿರಂತರವಾಗಿ ಹರಿಯುತ್ತಾಳೆ.

ಇಷ್ಟು ಮಾತ್ರವಲ್ಲದೆ ಇಲ್ಲಿ ಕಾಶಿ ವಿಶ್ವೇಶ್ವರನ ಲಿಂಗ, ಗಣಪತಿ ದೇಗುಲ, ನಂದಿ ವಿಗ್ರಹಗಳು ಹಾಗೂ ಆಂಜನೇಯ ಮೂರ್ತಿ ಮನಮೋಹಕವಾಗಿವೆ. ಇಷ್ಟೊಂದು ಸುಂದರವಾದ ಬೆಟ್ಟವನ್ನು ಹತ್ತಿ ಅಂತರಗಂಗೆ ನೀರನ್ನು ಕುಡಿದರೆ ನಮ್ಮ ಆಯಾಸ ತಾನಾಗಿಯೇ ಕಡಿಮೆಯಾಗುತ್ತದೆ.

ಹೀಗೆ ಹತ್ತು ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಚಿನ್ನದ ನಾಡು ಕೋಲಾರ ತನ್ನ ಒಡಲಲ್ಲಿ ತುಂಬಿಕೊಂಡಿದೆ. ಸದಾ ಕೆಲಸದ ಜಂಜಡದಲ್ಲಿ ಒದ್ದಾಡುವ ಮಹಾನಗರದ ಮನಸ್ಸುಗಳು ಇಲ್ಲಿಗೆ ಒಂದು ಸಾರಿ ಭೇಟಿ ಕೊಟ್ಟರೆ ದೇವರ ದರ್ಶನದ ಜೊತೆಗೆ ಪ್ರಕೃತಿ ಸೌಂದರ್ಯವನ್ನ ಸವಿದು ಹಗುರಗೊಳ್ಳಬಹುದು.

ಒಂದೇ ದಿನದಲ್ಲಿ ಹೋಗಿ ಬನ್ನಿ
ಈ ಎಲ್ಲ ಸುಂದರ ಹಾಗೂ ಪ್ರೇಕ್ಷಣಿಯ ಸ್ಥಳಗಳನ್ನೂ ಒಂದು ದಿನದಲ್ಲಿ ನೋಡಿಕೊಂಡು ಬರಬಹುದು. ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದಿಂದ ಬಂಗಾರಪೇಟೆಗೆ ಹೋಗಲು ರೈಲು ಸೌಲಭ್ಯವಿದೆ. ಕೇವಲ ಎರಡು ಗಂಟೆಗಳ ಪಯಣ. ಬಸ್ ಸೌಕರ್ಯವೂ ಇದೆ. ಅಲ್ಲಿಂದ ನಿಮ್ಮ ಪಯಣ ಕೇವಲ ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ಮತ್ತೊಂದು ಸುಂದರ ತಾಣದಲ್ಲಿರುತ್ತೀರಿ.

Write A Comment