ಕರ್ನಾಟಕ

ಗುರುಸಿದ್ದ ರಾಜಯೋಗಿ ಶ್ರೀಗಳಿಗೆ ಭವ್ಯ ಸ್ವಾಗತ

Pinterest LinkedIn Tumblr

Muru-Savira-Mutt-Hubli

ಹುಬ್ಬಳ್ಳಿ, ಏ.16-  ಪೀಠತ್ಯಾಗ ಮಾಡುವುದಾಗಿ ಘೋಷಿಸಿ ಇಲ್ಲಿಯ ಪ್ರಸಿದ್ಧ ಮೂರುಸಾವಿರ ಮಠದ ಜಗದ್ಗುರು ಪೀಠವನ್ನು ತೊರೆದು ಹಾನಗಲ್‌ಗೆ ತೆರಳಿದ್ದ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಇಂದು ಮತ್ತೆ ಮಠಕ್ಕೆ ಮರಳಲು ಸಮ್ಮತಿ ಸೂಚಿಸಿದ್ದು, 145 ದಿನಗಳ ಬಿಕ್ಕಟ್ಟು ಪರಿಹಾರವಾದಂತಾಗಿದೆ. ಶ್ರೀಗಳು ಭಕ್ತರ ಜತೆಗೆ ಹುಬ್ಬಳ್ಳಿಗೆ ಮಧ್ಯಾಹ್ನ ಪ್ರಯಾಣ ಬೆಳೆಸಿದ್ದು, ಗಬ್ಬೂರು ಕ್ರಾಸ್‌ನಿಂದ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಗುವುದು. ಸಾವಿರಾರು ಬೈಕ್‌ಗಳು ನಗರಾದ್ಯಂತ ರ್ಯಾ ಲಿ ನಡೆಸಲಿವೆ.

ಮಠಕ್ಕೆ ಬಂದ ಮೇಲೂ ಭಕ್ತರ ಸಭೆ ಜರುಗಲಿದೆ. ಇದೇ 21ರಂದು ಜರುಗಲಿರುವ ಬಸವ ಜಯಂತಿ ಕಾರ್ಯಕ್ರಮವನ್ನು ಶ್ರೀಗಳೇ ನಡೆಸಿಕೊಡಲಿದ್ದಾರೆ.

ಶ್ರೀಗಳನ್ನು ಮರಳಿ ಕರೆತರಲು ಇಂದು ನಸುಕಿನಲ್ಲಿ ಸಾವಿರಾರು ಭಕ್ತರು ಹಾನಗಲ್‌ಗೆ ತೆರಳಿದ್ದರು. ಸಂಸದ ಪ್ರಹ್ಲಾದ ಜೋಶಿ, ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಮೋಹನ ಲಿಂಬಿಕಾಯಿ ಮೊದಲಾದವರು ಮಾಜಿ ಸಚಿವ ಸಿ.ಎಂ.ಉದಾಸಿ ಅವರ ಜತೆ ಪೂರ್ವಭಾವಿ ಮಾತುಕತೆ ನಡೆಸಿದ ನಂತರ ಹಾನಗಲ್ ಕುಮಾರೇಶ್ವರ ಮಠದಲ್ಲಿ ಹುಬ್ಬಳ್ಳಿ ಹಾಗೂ ಹಾನಗಲ್ ಭಕ್ತರ ಸಮಾವೇಶವು ನಡೆಯಿತು. ಶ್ರೀಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳು ಮಾತನಾಡಿ, ಹುಬ್ಬಳ್ಳಿಯಲ್ಲಿ ಅತಂತ್ರವಾಗಿರುವ ಮೂರು ಸಾವಿರ ಮಠದ ಆಡಳಿತ ನಡೆಸಲು ತಾವು ತೆರಳುವುದಾಗಿ ತಿಳಿಸಿದರು. ಹಾನಗಲ್ ಭಕ್ತರು ಆತ್ಮಸಂತೋಷದಿಂದ ಹುಬ್ಬಳ್ಳಿಗೆ ತೆರಳಲು ಸಮ್ಮತಿಸಿದ್ದಾರೆ. ಇಲ್ಲಿಯ ಕುಮಾರೇಶ್ವರ ಮಠ ಬೇರೆ ಅಲ್ಲ, ಹುಬ್ಬಳ್ಳಿಯ ಮೂರು ಸಾವಿರ ಮಠ ಬೇರೆ ಅಲ್ಲ, ಎರಡೂ ಒಂದು ನಾಣ್ಯದ ಎರಡು ಮುಖಗಳು ಎಂದರಲ್ಲದೇ ಎರಡೂ ಮಠಗಳನ್ನು ನೋಡಿಕೊಂಡು ಹೋಗುವುದಾಗಿ ಹೇಳಿದರು.

ನೀವು ಹುಬ್ಬಳ್ಳಿಯವರು ಶ್ರೀಗಳಿಗೆ ತುಂಬಾ ತೊಂದರೆ ನೀಡಿದ್ದೀರಿ, ಮಾನಸಿಕವಾಗಿ ಯಾತನೆ ಕೊಟ್ಟಿದ್ದೀರಿ, ಇದು ಮುಂದುವರೆದರೆ ಶ್ರೀಗಳನ್ನು ಕಳುಹಿಸಿಕೊಡುವುದಿಲ್ಲ. ಅವರನ್ನು ಜೋಪಾನವಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದರೆ ಮಾತ್ರ ಕರೆದುಕೊಂಡು ಹೋಗಿ ಎಂದು ಮಾಜಿ ಸಚಿವ ಸಿ.ಎಂ.ಉದಾಸಿ ಹೇಳಿದರು. ಅದಕ್ಕೆ ಉತ್ತರವಾಗಿ ಜಗದೀಶ ಶೆಟ್ಟರ್ ಮಾತನಾಡಿ, ಇನ್ನು ಮೇಲೆ ಶ್ರೀಗಳು  ಹೇಳಿದಂತೆ ಮಠದ ಆಡಳಿತ ನಡೆಯಲಿದೆ. ಯಾರೂ ಹಸ್ತಕ್ಷೇಪ ಮಾಡುವುದಿಲ್ಲ, ಅವರಿಗೆ ತೊಂದರೆ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ನಡುವೆ ಹಾನಗಲ್‌ನ ಕೆಲವು ಭಕ್ತರು ಶ್ರೀಗಳು ಹುಬ್ಬಳ್ಳಿಗೆ ಹೋಗುವುದೇ ಬೇಡ. ಇಲ್ಲಿಯೇ ಇದ್ದು ಆಧ್ಯಾತ್ಮಿಕ ಮಾರ್ಗದರ್ಶನ ಮಾಡಲಿ ಎಂದು ಹೇಳಿದರು.

ಹುಕ್ಕೇರಿ ಮಠದ ಶ್ರೀಗಳು, ಶಾಸಕರಾದ ಅರವಿಂದ ಬೆಲ್ಲದ, ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ,ಕಾಡಯ್ಯ ಹಿರೇಮಠ, ಶಂಕರಣ್ಣ ಮುನವಳ್ಳಿ, ರಾಜಶೇಖರ ಮೆಣಸಿನಕಾಯಿ, ಕುಮಾರ ಕುಂದನಹಳ್ಳಿ, ಸಿ ಎಚ್.ಗೊಬ್ಬಿ, ಅಮರೇಶ ಹಿಪ್ಪರಗಿ, ಚನ್ನಬಸಪ್ಪ ಧಾರವಾಡ ಶೆಟ್ರು, ಬಂಗಾರೇಶ ಹಿರೇಮಠ, ಮಹೇಶ ಟೆಂಗಿನಕಾಯಿ, ವೀರಣ್ಣ ಸವಡಿ, ವೀರಣ್ಣ ಹಂಜಿ, ಮಲ್ಲಿಕಾರ್ಜುನ ಸಾವಕಾರ,ಅಂದಾನೆಪ್ಪ ಸಜ್ಜನರ  ಮೊದಲಾದವರಿದ್ದರು.

* ಯಾರ ಆಸ್ತಿಯೂ ಅಲ್ಲ
ಹುಬ್ಬಳ್ಳಿ, ಏ.16- ಮೂಜಗಂ ಮಠ ಯಾರ ಆಸ್ತಿಯೂ ಅಲ್ಲ, ಈ ಮಠಕ್ಕೆ ಯಾರು ಬೇಕಾದರೂ ಬರಬಹುದು, ಹೋಗಬಹುದು. ಯಾರನ್ನೂ ಯಾರೂ ತಡೆಯುವುದು ಸೂಕ್ತವಲ್ಲ ಎಂದು ತಿಪಟೂರಿನ ಶ್ರೀ ರುದ್ರಮುನಿ ಸ್ವಾಮೀಜಿ ಹೇಳಿದರು. ಹುಬ್ಬಳ್ಳಿಯ ಮೂಜಗಂ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಕ್ತರು ಅವರನ್ನು ತಡೆದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ನನ್ನನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗಿದೆ. ನಾನು ವಿವಿಧ ಮಠಾಧೀಶರ ಆಶಯದಂತೆ ನಡೆದುಕೊಳ್ಳುತ್ತಿದ್ದು, ನ್ಯಾಯಾಲಯದ ಆದೇಶಕ್ಕೆ ತಲೆ ಬಾಗುತ್ತೇನೆ ಎಂದು ತಿಳಿಸಿದರು. ಮೂಜಗಂ ಮಠಾಧೀಶರು ಮೂರು ಸಾವಿರ ಮಠ ನಿರ್ವಹಣೆ ಮಾಡಲು ಸಮರ್ಥರಿದ್ದಾರೆ. ಸ್ವಾಮೀಜಿಯವರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

Write A Comment