ಕರ್ನಾಟಕ

ಮತದಾರರ ಪಟ್ಟಿಗೆ ಅಕ್ರಮ ವಲಸಿಗರ ಹೆಸರು ಸೇರ್ಪಡೆ: ಎಚ್‌ಡಿಕೆ

Pinterest LinkedIn Tumblr

HDKumaraswamy-Press-mEet

ಬೆಂಗಳೂರು, ಏ.16-ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಾಂಗ್ಲಾದಿಂದ ಬಂದಿರುವ ಅಕ್ರಮ ವಲಸಿಗರು ನೆಲೆಸಿದ್ದಾರೆ. ಬಿಬಿಎಂಪಿ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಸಲುವಾಗಿ ಇವರಿಗೂ ಗುರುತಿನ ಚೀಟಿ ನೀಡುವಂತಹ ಕೆಲಸ ನಡೆಯುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಸಾಮಾಜಿಕ ಕಾರ್ಯಕರ್ತ ಸುದೀಪ್ ಶೆಟ್ಟಿ ಅವರು ಅಕ್ರಮ ವಲಸಿಗರ ಕುರಿತಂತೆ ಹೊರತಂದಿರುವ ಸಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಸುಮಾರು

40 ರಿಂದ 50 ಸಾವಿರ ಅಕ್ರಮ ವಲಸಿಗರು ನೆಲೆಸಿದ್ದಾರೆ. ಕನ್ನಡಿಗರಿಗೆ ನೀರು ಇಲ್ಲದಿದ್ದರೂ, ಅವರಿಗೆ ನೀರು ಕೊಡಲಾಗುತ್ತಿದೆ. ಈ ವಲಸಿಗರಿಗೆ ಬಿಬಿಎಂಪಿ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಗುರುತಿನ ಚೀಟಿ ನೀಡಲಾಗುತ್ತಿದೆ ಎಂದು ಕಿಡಿಕಾರಿದರು.

ಖೋಟಾ ನೋಟು, ವೇಶ್ಯಾವಾಟಿಕೆ ದಂಧೆಗಳಲ್ಲಿ ಬಂಧಿತರಾಗುವವರಲ್ಲಿ ಈ ಅಕ್ರಮ ವಲಸಿಗರೇ ಇದ್ದಾರೆ. ರಾಮನಗರ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿ ನೆಲೆಸಿರುವ ಇವರು ರಾತ್ರಿ 2 ಗಂಟೆ ನಂತರ ಕೆಲಸ ಆರಂಭಿಸುತ್ತಾರೆ. ಗುಜರಿ ವಸ್ತು, ಪ್ಲಾಸ್ಟಿಕ್ ಸಂಗ್ರಹದಂತಹ ಮಾಫಿಯಾದಲ್ಲಿ ತೊಡಗಿದ್ದಾರೆ. ಅಸ್ಸೋಂನಲ್ಲಿ ಗಲಾಟೆಯಾದ ಬಳಿಕ ಕಳೆದ ಐದಾರು ವರ್ಷಗಳಿಂದ ಬೆಂಗಳೂರಿನ ದೇವರಬೀಚನಹಳ್ಳಿ, ಕಾಡುಬೀಚನಹಳ್ಳಿ, ಮೊನ್ನೆಕೊಳಲು, ಸೋಮಸಂದ್ರಪಾಳ್ಯ, ನೈಸ್ ರಸ್ತೆ, ವರ್ತುಲ ರಸ್ತೆಗಳಲ್ಲಿ ಇವರ ಕ್ಯಾಂಪ್ ಇವೆ. ಒಂದೊಂದು ಕ್ಯಾಂಪ್‌ನಲ್ಲಿ 3 ರಿಂದ 4 ಸಾವಿರ ಮಂದಿ ನೆಲೆಸಿದ್ದಾರೆ. ಇವರಲ್ಲಿ ಶೇ.70ರಷ್ಟು ಅಕ್ರಮ ವಲಸಿಗರೇ ತುಂಬಿದ್ದಾರೆ ಎಂದು ಮಾಹಿತಿ ನೀಡಿದರು.

ಗಡಿ ಭಾಗಗಳಲ್ಲಿ 2 ರಿಂದ 3 ಸಾವಿರ ರೂ. ನೀಡಿ ಅಕ್ರಮ ವಲಸೆ ಬರುತ್ತಿದ್ದಾರೆ. ಇದಕ್ಕೆ ಪುರಾವೆಗಳೂ ಇವೆ. ಮೋದಿ ಚುನಾವಣೆಗೂ ಮುನ್ನ ವಲಸಿಗರನ್ನು ವಾಪಸ್ ಕಳುಹಿಸುವುದಾಗಿ ಹೇಳಿದ್ದರು. ಆದರೆ ಬಾಂಗ್ಲಾ ದೇಶದಲ್ಲಿ ಒಂದು ಸರ್ವೆ ಪ್ರಕಾರ ಶೇ.9.5ರಷ್ಟು ಇದ್ದ ಜನಸಂಖ್ಯೆ 8.5ಕ್ಕೆ ಇಳಿದಿದೆ. ಕಡಿಮೆಯಾದ ಜನರು ಸತ್ತು ಹೋದರೆ ಅಥವಾ ವಲಸೆ ಹೋದರೇ ಎಂದು ಪ್ರಶ್ನಿಸಿದ ಅವರು, ರಾಜ್ಯಸರ್ಕಾರ ನಿದ್ದೆ ಮಾಡುತ್ತಿದೆ ಎಂದು ಹರಿಹಾಯ್ದರು. ವಾಜಪೇಯಿ ಸರ್ಕಾರವಿದ್ದಾಗ ವಲಸಿಗರಿಗಾಗಿ ಕಾಯ್ದೆ ತರಲು ಮುಂದಾಗಿದ್ದರು ಎಂದು ಹೇಳಿದ ಅವರು, ಬೆಂಗಳೂರಿನಲ್ಲಿ ಲಾಟರಿ, ಮಟ್ಕಾ ದಂಧೆ ಆತಂಕ ಸೃಷ್ಟಿಸಿದೆ. ವಲಸಿಗರ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಹೀಗಿದ್ದರೂ ಗುಪ್ತಚರ ಇಲಾಖೆ ಹಾಗೂ ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂದರು.  ಬೆಂಗಳೂರು ಮೂರ್ನಾವಲ್ಕು ಭಾಗ ಮಾಡಿ ಅದರಲ್ಲಿ 2-3 ವಾರ್ಡ್‌ಗಳನ್ನು ಅವರಿಗೇ ಮೀಸಲಿಡುವರೇ? ಕನ್ನಡಿಗರಿಗೆ ಅಲ್ಪಸಂಖ್ಯಾತರಾಗುತ್ತಿದ್ದಾರೆ ಎಂದ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿ ಮಾಡಿ ಚೆನ್ನೈ, ಕೋಲ್ಕತ್ತಾದಂತೆ ಕೇಂದ್ರದಿಂದ ಹೆಚ್ಚಿನ ಅನುದಾನ ಸಿಗುವಂತಾಗಲಿ ಎಂಬ ಆಶಯವಿತ್ತು. ಆದರೆ ಇದೀಗ ಬಿಬಿಂಎಪಿ ವಿಭಜನೆಯಿಂದ ಪುರಸಭೆ ಮಟ್ಟಕ್ಕೆ ಇಳಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂಬಂಧ ಅಕ್ರಮ ವಲಸಿಗರನ್ನು ತಡೆಗಟ್ಟಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ವಿ.ಆರ್.ವಾಲಾ ಅವರ ಗಮನಕ್ಕೆ ತರುವುದಾಗಿ ತಿಳಿಸಿದರು. ಸಂವಿಧಾನ ಬದ್ಧವಾಗಿ ಕೆಲಸ ನಿರ್ವಹಿಸದ ಸರ್ಕಾರವನ್ನು ವಜಾಗೊಳಿಸುವ ಅಧಿಕಾರ ರಾಜ್ಯಪಾಲರಿಗಿದೆ. ತಮ್ಮ ಮೂಗಿನ ನೇರಕ್ಕೆ ಕೆಲಸ ನಿರ್ವಹಿಸುತ್ತಿರುವ ಸರ್ಕಾರ ತಮ್ಮ ಲೋಪಗಳನ್ನು ಸರಿಪಡಿಸಿಕೊಳ್ಳಲು ಬಿಬಿಎಂಪಿಯನ್ನು ವಿಭಜನೆ ಮಾಡುವ ಮೂಲಕ ಪಾವಿತ್ರ್ಯತೆ ನಾಶಪಡಿಸುತ್ತಿದೆ ಎಂದು ಹೇಳಿದರು. ಈ ಸರ್ಕಾರಕ್ಕೆ ಚುನಾವಣೆ ಎದುರಿಸುವ ಶಕ್ತಿಯಿಲ್ಲ. ಬಿಬಿಎಂಪಿ ವಿಭಜನೆ ಕುರಿತಂತೆ ಉದ್ದೇಶಿತ ವಿಶೇಷ ಅಧಿವೇಶನವನ್ನು ನಾವು ಬಹಿಷ್ಕರಿಸುತ್ತೇವೆ. ಬಿಜೆಪಿಯು ಸದನದಲ್ಲಿ ಪಾಲ್ಗೊಳ್ಳದಂತೆ ಮನವಿ ಮಾಡುತ್ತೇವೆ. ಸದನದಲ್ಲಿ ಪಾಲ್ಗೊಳ್ಳದೆ ರಾಜ್ಯಪಾಲರಿಗೆ ಮನವಿ ಮಾಡುವ ಅವಕಾಶವನ್ನು ಬಳಸಿಕೊಳ್ಳಬೇಕಿದೆ. ಉದ್ದೇಶಿತ ವಿಶೇಷ ಅಧಿವೇಶನ ಸಂಬಂಧ ಇದೇ 18ರ ಶನಿವಾರ ಶಾಸಕಾಂಗ ಪಕ್ಷದ ಸಭೆ ಕರೆಯಲಾಗುತ್ತದೆ ಎಂದು ತಿಳಿಸಿದರು.

Write A Comment