ಕರ್ನಾಟಕ

ಸಮೀಕ್ಷೆ : ಆದಾಯದ ಕುರಿತು ಉತ್ತರಿಸುವಾಗ ತಡಬಡಾಯಿಸಿದ ಸಿಎಂ

Pinterest LinkedIn Tumblr

siddu-in-tention

ಬೆಂಗಳೂರು, ಏ.16- ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಗಣತಿದಾರರಿಗೆ ಬಹುತೇಕ ಮಾಹಿತಿಗಳನ್ನು ನೀಡಿದರು. ಆದರೆ, ವಾರ್ಷಿಕ ಆದಾಯದ ವಿಷಯ ಬಂದಾಗ ಉತ್ತರಿಸಲಾಗದೆ ತಡ ಬಡಾಯಿಸಿದರು. ಏ.11ರಿಂದ ರಾಜ್ಯ ಸರ್ಕಾರ ಹಿಂದುಳಿದವರ್ಗಗಳ  ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆಯ ಅಂಗವಾಗಿ ಇಂದು ಮುಖ್ಯಮಂತ್ರಿ ಅವರಿಂದ ಮಾಹಿತಿ ಪಡೆಯಲು ಟಸ್ಕರ್‌ಟೌನ್ ಬಿಬಿಎಂಪಿ ಶಾಲೆಯ ಮುಖ್ಯಶಿಕ್ಷಕ ಎಂ.ಎಸ್.ಶಿವಕುಮಾರ್ ಇಂದು ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ ಕಾವೇರಿಗೆ

ಆಗಮಿಸಿ ಮಾಹಿತಿ ಕಲೆ ಹಾಕಿದರು. ಆರಂಭದಲ್ಲಿ ಅವರು ಕೇಳಿದ ಪ್ರಶ್ನೆಗಳಿಗೆ ಸಿಎಂ ಸಮಾಧಾನದಿಂದಲೇ ಉತ್ತರಿಸಿದರಾದರೂ ನಾನು ಎಷ್ಟು ಸಮಯ ಕುಳಿತುಕೊಳ್ಳಬೇಕೆಂದು ಪ್ರಶ್ನಿಸಿದರು. ಸಮೀಕ್ಷೆದಾರರು ಕೇಳಿದ ಪ್ರಶ್ನೆಗಳಿಗೆ ಹೆಸರು ಸಿದ್ದರಾಮಯ್ಯ, ಧರ್ಮ ಹಿಂದು, ಜಾತಿ ಕುರುಬ, ಉಪಜಾತಿ ಇಲ್ಲ, ಪರ್ಯಾಯ ಹೆಸರುಗಳಿಂದ ಗುರುತಿಸುತ್ತಾರೆ. ಆದರೆ ಅದು ಬೇಡ. ವಯಸ್ಸು 67, ಮಾತೃಭಾಷೆ ಕನ್ನಡ, ಪತ್ನಿಯ ಹೆಸರು ಪಾರ್ವತಿ, ಹಿರಿಯ ಮಗ ರಾಕೇಶ್ ಎಸ್., ಇನ್ನೊಬ್ಬ  ಮಗ ಡಾ.ಯತೀಂದ್ರ, ವಿವಾಹವಾದಾಗ ವಯಸ್ಸು 29, ಶಾಲೆ ಸೇರಿದ ವಯಸ್ಸು ಗೊತ್ತಿಲ್ಲ. ಐದನೇ ತರಗತಿಗೆ ಸೇರ್ಪಡೆಯಾದೆ. ಬಹುಶಃ 11 ವರ್ಷವಿರಬಹುದು ಎಂದು ಸಮೀಕ್ಷೆದಾರರ ಪ್ರಶ್ನೆಗೆ ಉತ್ತರಿಸಿದರು.

ವಿದ್ಯಾರ್ಹತೆ ಬಿಎಸ್‌ಸಿ, ಎಲ್‌ಎಲ್‌ಬಿ. ಕೆಲಸ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ ಹೌದು, ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ.  ಕುಲ ಕಸುಬು ವ್ಯವಸಾಯ, ಈ ಕಸುಬಿನಿಂದ ಯಾವುದೇ ಕಾಯಿಲೆಗಳು ಬಂದಿಲ್ಲ. ಜಂಟಿ ಕುಟುಂಬ ಎಂದು ಉತ್ತರಿಸಿದ ಅವರಿಗೆ  ವಾರ್ಷಿಕ ಆದಾಯ ಎಷ್ಟು  ಎಂದು ಮುಂದಿನ ಪ್ರಶ್ನೆಯನ್ನು ಸಮೀಕ್ಷೆದಾರರು ಕೇಳಿದರು. ಈ ಸಂದರ್ಭದಲ್ಲಿ ಗೊಂದಲಕ್ಕೊಳಗಾದ ಮುಖ್ಯಮಂತ್ರಿ, ಆದಾಯ ಯಾವ ರೀತಿ ಹೇಳಿವುದು ಎಂದು ಪ್ರಶ್ನಿಸಿಕೊಳ್ಳುತ್ತಿರುವಾಗ ಅಲ್ಲಿಯೇ ಇದ್ದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ಅವರು, ಮುಖ್ಯಮಂತ್ರಿ ವೇತನ ಆಧರಿಸಿ ಆದಾಯ ಹೇಳಿ ಎಂದು ಸಲಹೆ ನೀಡಿದರು.

ಸ್ವಲ್ಪ ಬಾಡಿಗೆಯೂ ಬರುತ್ತಿದೆ ಎಂದು ಮುಖ್ಯಮಂತ್ರಿ ಲೆಕ್ಕ ಹಾಕುತ್ತಿರುವಾಗ, ಅಲ್ಲೇ ಇದ್ದ ಜಂಟಿ ಕಾರ್ಯದರ್ಶಿ ರಾಮಯ್ಯ ಮತ್ತು ಆಪ್ತ ಸಹಾಯಕ ವೆಂಕಟೇಶ್ ಅವರುಗಳು ಆದಾಯವನ್ನು ಆಮೇಲೆ ಹೇಳುತ್ತೇವೆ ಎಂದು ಮುಂದಿನ ಪ್ರಶ್ನೆ ಕೇಳುವಂತೆ ಸಲಹೆ ನೀಡಿದರು.
ಅಲ್ಲಿಗೆ 33 ಪ್ರಶ್ನೆಗಳು ಮುಗಿದಿದ್ದವು. ಸಮೀಕ್ಷೆದಾರರಾದ ಶಿವಕುಮಾರ್ ಅವರು ಇನ್ನೂ ಪ್ರಶ್ನೆಗಳಿವೆ. ಆದರೆ, ನಿಮಗೆ ಸಮಯಾವಕಾಶ ಕಡಿಮೆ ಇರುವುದರಿಂದ ನಾನು ಇತರರಿಂದ ಮಾಹಿತಿ ಪಡೆಯುತ್ತೇನೆ ಎಂದು ಗಣತಿಯ ನಮೂನೆಗೆ ಸಿದ್ದರಾಮಯ್ಯ ಅವರ ಸಹಿ ಪಡೆದರು. ರಾಜಕೀಯ ಹಾಗೂ ಇತರೆ ಮಾಹಿತಿಗಳನ್ನು ಪಡೆಯುವುದಿಲ್ಲವೇ ಎಂದು ಸಿಎಂ ಗಣತೀದಾರರನ್ನು ಪ್ರಶ್ನಿಸಿದರು. ಸಮಯಾವಕಾಶದ ಕೊರತೆ ಇದೆ ಎಂದು ಸಮೀಕ್ಷೆದಾರರು ಹೇಳಿದಾಗ, ಯಾವ ಪ್ರಶ್ನೆಗಳನ್ನೂ ಬಿಡಬೇಡಿ.ಕೇಳಿ ಎಲ್ಲರಿಂದಲೂ ಇದೇ ರೀತಿ ಮಾಹಿತಿ ಪಡೆಯಬೇಕೆಂದು ಮುಖ್ಯಮಂತ್ರಿ ತಾಕೀತು ಮಾಡಿದರು.

ಮುಂದಿನ ಪ್ರಶ್ನೆಗಳಾಗಿ ಮೀಸಲಾತಿ ಸೌಲಭ್ಯ ಪಡೆಯಲಾಗಿದೆಯೇ ಎಂದಾಗ ಇಲ್ಲ ಎಂದರು. ರಾಜಕೀಯ ಸ್ಥಾನಮಾನದಲ್ಲಿ ಶಾಸಕನಾಗಿದ್ದೇನೆ, ಜಂಟಿ ಕುಟುಂಬದಲ್ಲಿ 73 ಎಕರೆ ಜಮೀನು ಇದೆ. ಬೆಂಗಳೂರು ಮತ್ತು ಹುಟ್ಟೂರಿನಲ್ಲಿ ಸ್ವಂತ ಮನೆಗಳಿವೆ. ಒಂದು ವಾಣಿಜ್ಯ ಸಂಕೀರ್ಣವಿದೆ. ಯಾವುದೇ ಫ್ಯಾಕ್ಟರಿ ಇಲ್ಲ. ಕಾರಿದೆ. ಸರ್ಕಾರಿ ಬಂಗಲೆಯಲ್ಲಿ ಸರ್ಕಾರ ನೀಡಿರುವ ರೆಫ್ರಿಜರೇಟರ್, ಮತ್ತಿತರ ಗೃಹೋಪಯೋಗಿ ಉಪಕರಣಗಳಿವೆ. ಸ್ವಂತ ಮನೆಯಲ್ಲೂ ಇವೆಲ್ಲ ಇವೆ ಎಂದು ಉತ್ತರಿಸಿದರು. ನಮ್ಮ ಮೇಲೆ ಸಾಲವೂ ಇದೆ ಎಂದು ಸಿಎಂ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ಒಟ್ಟು 55 ಪ್ರಶ್ನೆಗಳ ಪೈಕಿ ಮುಖ್ಯಮಂತ್ರಿ 45 ಪ್ರಶ್ನೆಗಳಿಗೆ ಉತ್ತರಿಸಿದರು.

Write A Comment