ಕರ್ನಾಟಕ

ಕೇಳುವವರಿಲ್ಲದ ಕೆಮ್ಮಣ್ಣುಗುಂಡಿ

Pinterest LinkedIn Tumblr

kdec14 dinesh1_0

-ದಿನೇಶ ಪಟವರ್ಧನ್
ನೈಸರ್ಗಿಕ ಸಂಪತ್ತು. ಅಪರೂಪದ ಶೋಲಾ ಅರಣ್ಯ, ಸಸ್ಯರಾಶಿ, ಅಪರೂಪದ ಝರಿ ಸಸ್ಯ, ಆರ್ಕಿಡ್ಸ್, ಆಳೆತ್ತರ ಬೆಳೆದ ಮರ, ನೂರಾರು ಬಣ್ಣಗಳ ಗುಲಾಬಿ. ಸುಡು ಬೇಸಿಗೆಯಲ್ಲೂ ತಣ್ಣನೆ ಬೀಸುವ ತಂಗಾಳಿಯಿಂದಾಗಿ ಸೂರ್ಯಾಸ್ತದ ಚೆಲುವನ್ನು ಸವಿಯಲು ಮುಗಿಬೀಳುವ ಪ್ರವಾಸಿಗರಿಂದ ಜಗತ್ಪ್ರಸಿದ್ಧಿ ಹೊಂದಿರುವ  ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿಯನ್ನು ಈಗ ಕೇಳುವವರೇ ಇಲ್ಲವಾಗಿದೆ.

ನಿತ್ಯ ಬದುಕಿನ ಜಂಜಾಟದಿಂದ ದೂರವಿದ್ದು, ಏಕಾಂತ ಬಯಸಿ ಅದೆಷ್ಟೋ ಜನ ಬಂದು ವಾಸ್ತವ್ಯ ಹೂಡುತ್ತಿದ್ದ ಈ ಪ್ರದೇಶವೀಗ ಮೂಲ ಸೌಲಭ್ಯಗಳಿಂದ ವಂಚಿತವಾಗಿ ಜನರನ್ನು ತನ್ನತ್ತ ಸೆಳೆಯುವಲ್ಲಿ ವಿಫಲವಾಗಿದೆ.

ಕೆಮ್ಮಣ್ಣುಗುಂಡಿ ಗಿರಿಧಾಮವನ್ನು ಊಟಿ, ಕೊಡೈಕೆನಾಲ್ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು ಹಾಗೂ ಮತ್ತಷ್ಟು ಸೌಲಭ್ಯ ಕಲ್ಪಿಸಿ, ಹೆಚ್ಚು ಪ್ರವಾಸಿಗರು ಇತ್ತ ಬರುವಂತೆ ಮಾಡಬೇಕೆಂಬ ಉದ್ದೇಶ ಹೊಂದಿದ್ದ ಅಂದಿನ ಜಿಲ್ಲಾಧಿಕಾರಿ ಡಾ.ಸುಬ್ರಹ್ಮಣ್ಯ ಇಲ್ಲಿ ಏರ್ಪಡಿಸಿದ್ದ ಮೂರುದಿಗಳ ಚೈತ್ರಶ್ರೀ ಉತ್ಸವ ಸ್ಮರಣೀಯ. ಆ ದಿನಗಳಲ್ಲಿ ಬಂದ ಪ್ರವಾಸಿಗರ ಸಂಖ್ಯೆ ದಾಖಲೆ ಪ್ರಮಾಣದ್ದು.

ಆದರೆ ಇವರ ಕನಸು ಈಡೇರಲೇ ಇಲ್ಲ. ನಂತರ ಬಂದ ಅಧಿಕಾರಿಗಳು, ಜನಪ್ರತಿನಿಧಿ ಗಳು ಇತ್ತ ಗಮನ ಹರಿಸಲಿಲ್ಲ. ಇದರ ಪರಿಣಾಮವಾಗಿ ಕೆಮ್ಮಣ್ಣುಗುಂಡಿ ಪರಿಸರ ದಿನದಿಂದ ದಿನಕ್ಕೆ ಕಳೆಗುಂದುತ್ತಾ ಹೋಗಿದೆ. ಮೂಲ ಸೌಕರ್ಯಗಳಿಲ್ಲದೆ ಬಣಗುಡುತ್ತಿದೆ.
ಪ್ರವಾಸಿಗರನ್ನು ಕಳೆದುಕೊಳ್ಳುತ್ತಿದೆ. ಬೆಂಗಳೂರು, ಮೈಸೂರಿನಿಂದ ನೇರವಾಗಿ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್ಸುಗಳು ನಿಂತು ಎಷ್ಟೋ ವರ್ಷಗಳು ಕಳೆದಿವೆ. ಖಾಸಗಿ ಬಸ್ಸುಗಳೂ ಬರುತ್ತಿಲ್ಲ. ಹಿಂದಿನ ಸರ್ಕಾರದಿಂದ ಇದರ ಅಭಿವೃದ್ಧಿಗೆ 12 ಕೋಟಿ ರೂಪಾಯಿಗಳ ಹಣ ಬಿಡುಗಡೆಗೊಂಡಿತ್ತು. ಪ್ರವೇಶದ್ವಾರದಿಂದ ರಾಜಭವನದವರೆಗೆ ಸಿಮೆಂಟ್ ರಸ್ತೆಯೂ ಆಯಿತು. ಆದರೆ ಹಲವಾರು ವರ್ಷ ಬಾಳಿಕೆ ಬರಬೇಕಾಗಿದ್ದ ರಸ್ತೆಯು ಕಳಪೆ ಕಾಮಗಾರಿಯಿಂದಾಗಿ ಆರು ತಿಂಗಳಿನಲ್ಲೇ ಕಿತ್ತು ಹೋಗಿದೆ.

ಕೇಳುವವರಿಲ್ಲದ ರಾಜಭವನ
ರಾಜಭವನ ಸೇರಿದಂತೆ ಹಳೆಯ ವಸತಿಗೃಹಗಳನ್ನು ಕೋಟ್ಯಂತರ ರೂಪಾಯಿ ವ್ಯಯಿಸಿ ನವೀಕರಿಸಲಾಗಿದೆ. ಆಧುನಿಕ ಪರಿಕರಗಳನ್ನೂ ತಂದಿಡಲಾಗಿದೆ.  ವಿಪರ್ಯಾಸ ಎಂದರೆ ಗಿರಿಧಾಮದ  ಉಸ್ತುವಾರಿ ನೋಡಿಕೊಳ್ಳುತ್ತಿರುವ ತೋಟಗಾರಿಕೆ ಇಲಾಖೆ ಕಟ್ಟಡ ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ವಸತಿಗೃಹಗಳ ಆಧುನೀಕರಣದ ರೂಪುರೇಷೆ ಸಿದ್ಧಪಡಿಸಿದ ಪ್ರವಾಸೋದ್ಯಮ ಇಲಾಖೆ ತಳೆದ ಮಲತಾಯಿ ಧೋರಣೆಗೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ. ಕಾಮಗಾರಿಯಲ್ಲಿನ ಸಣ್ಣಪುಟ್ಟ ದೋಷ, ಪ್ರವಾಸೋದ್ಯಮ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಶೀತಲ ಸಮರದಿಂದ ಇತ್ತೀಚಿನ ದಿನಗಳವರೆಗೂ ನವೀಕೃತ ಕಟ್ಟಡಗಳು ಹಸ್ತಾಂತರವಾಗಿರಲಿಲ್ಲ.

ಹೀಗಾಗಿ ಕಳೆದ ಎರಡು ವರ್ಷಗಳಿಂದ ಇಲ್ಲಿನ ರಾಜಭವನ, ಕಲ್ಲತ್ತಿ ಭವನ ಸೇರಿದಂತೆ ವಸತಿಗೃಹಗಳು ಪ್ರವಾಸಿಗರ ಪಾಲಿಗೆ ಮರೀಚಿಕೆ ಆಗಿವೆ. ಭವ್ಯ ಕಟ್ಟಡಗಳು ಕಂಗೊಳಿಸುತ್ತಿದ್ದರೂ ಇದರ ಬಳಕೆಯಾಗುತ್ತಿಲ್ಲ. ದೂರದಿಂದ ಬರುವ ಪ್ರವಾಸಿಗರಿಗೆ ಉಳಿದುಕೊಳ್ಳಲು ಸ್ಥಳವಿಲ್ಲ, ಜೊತೆಗೆ ಸರ್ಕಾರದ ಬೊಕ್ಕಸಕ್ಕೂ ಭಾರಿ ಪ್ರಮಾಣದ ನಷ್ಟವಾಗಿದೆ.

ಈಗ ತೋಟಗಾರಿಕೆ ಇಲಾಖೆ 10 ಕೊಠಡಿಗಳನ್ನು ಹಿಂದಿನ ದರದಲ್ಲಿ ನೀಡುತ್ತಿದ್ದರೂ ಕುಡಿಯುವ ನೀರು ಒಳಗೊಂಡಂತೆ ಇತರೆ ಸೌಲಭ್ಯಗಳು ಇಲ್ಲಿ ಸಿಗುತ್ತಿಲ್ಲ. ಲಿಂಗದಹಳ್ಳಿಯಿಂದ ಉತ್ತಮ ರಸ್ತೆ ಇದ್ದರೂ ಗಿರಿಧಾಮಕ್ಕೆ ಹೊಂದಿಕೊಂಡ ಸುಮಾರು 2 ಕಿ.ಮೀ ರಸ್ತೆ ಭದ್ರಾ ಅಭಯಾರಣ್ಯದ ನೆಪದಲ್ಲಿ ಅಭಿವೃದ್ಧಿ ಪಡಿಸಲು ಅರಣ್ಯ ಇಲಾಖೆ ಅಡ್ಡಗಾಲು ಹಾಕಿದೆ. ಇದೆಲ್ಲದರ ಫಲವಾಗಿ ಇಲ್ಲಿಗೆ ಬರುವವರ ಸಂಖ್ಯೆಯೂ ಕಡಿಮೆ ಆಗಿದೆ. ವಾರಾಂತ್ಯ, ಸಾಲು ರಜೆ ದಿನಗಳಲ್ಲಿ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಕೆಮ್ಮಣ್ಣುಗುಂಡಿ ಈಗ ಬಿಕೋ ಎನ್ನುತ್ತಿದೆ.

ರಾಜಭವನದ ಬಳಿ ಪ್ರಮುಖ ಆಷರ್ಕಣೆಯಾಗಿದ್ದ ಗುಲಾಬಿವನ ನಿರ್ವಹಣೆ ಇಲ್ಲದೆ ಪಾಳು ಸುರಿಯುತ್ತಿದೆ. ರಾಜಭವನದ ಸುತ್ತಮುತ್ತಲಿನ ಜಾಗಗಳೂ ಬೋಳು ಬೋಳಾಗಿವೆ. ಝಡ್‌ ಪಾಯಿಂಟ್‌ಗೆ ಹೋಗುವ ದಾರಿಯ ಇಕ್ಕೆಲ ಶಿಲೋದ್ಯಾನ ಕಾಡು ಗಿಡಗಂಟಿಗಳಿಂದ ಮುಚ್ಚಿ ಹೋಗಿದೆ.

ಅನೇಕ ವರ್ಷಗಳಿಂದ ದುಡಿಯುತ್ತಿರುವ ದಿನಗೂಲಿ ನೌಕರರೂ ಸೂಕ್ತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ತೋಟಗಾರಿಕೆ ಇಲಾಖೆಯಲ್ಲೂ ನಿರೀಕ್ಷಿತ ಸಂಖ್ಯೆಯಲ್ಲಿ ಸಿಬ್ಬಂದಿ ಇಲ್ಲ. ಇಲ್ಲಿನ ರಾಜಭವನಕ್ಕೆ ಬಂದು ಉಳಿದು ಮೋಜು-ಮಸ್ತಿಯಲ್ಲಿ ಕಾಲ ಕಳೆಯುವ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಕೆಮ್ಮಣ್ಣುಗುಂಡಿ ಅಭಿವೃದ್ಧಿ ಕುರಿತು ಕಿಂಚಿತ್ತೂ ಕಾಳಜಿಯಿಲ್ಲ.

ಇದಕ್ಕಿಂತಲೂ ಹೆಚ್ಚಿನ ವಿಪರ್ಯಾಸ ಎಂದರೆ ಸೌಲಭ್ಯಗಳೇ ಇಲ್ಲದಿದ್ದರೂ ಇಲ್ಲಿಗೆ ಬರುವವರು ಶುಲ್ಕ ಪಾವತಿಸಬೇಕಾಗಿದೆ! ಈಗಲೂ ಕಾಲ ಮಿಂಚಿಲ್ಲ. ಇಚ್ಛಾಶಕ್ತಿ ಬೇಕು. ಕೆಮ್ಮಣ್ಣುಗುಂಡಿ ಮತ್ತೆ ಕಂಗೊಳಿಸುವಂತೆ ಮಾಡಬೇಕು.

Write A Comment