ಕರ್ನಾಟಕ

ಬಿಬಿಎಂಪಿ ಮೀಸಲಾತಿ ಪಟ್ಟಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಿಲ್ಲ: ಎಚ್.ಡಿ.ದೇವೇಗೌಡ

Pinterest LinkedIn Tumblr

devegougouda

ಬೆಂಗಳೂರು, ಏ.14-ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರಕಟಿಸಿರುವ ವಾರ್ಡ್ ಮೀಸಲಾತಿ ಪರಿಷ್ಕೃತ ಪಟ್ಟಿಯನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.ರಾಜ್ಯ ಸರ್ಕಾರ ನಿನ್ನೆ ವಾರ್ಡ್ ಮೀಸಲಾತಿ ಪಟ್ಟಿಯನ್ನು ಪರಿಷ್ಕೃತಗೊಳಿಸಿ ಚುನಾವಣಾ ಆಯೊಗಕ್ಕೆ ಸಲ್ಲಿಸಿದೆ. ಇದರಲ್ಲಿ ಎಷ್ಟೆ ಲೋಪದೋಷಗಳಿದ್ದರೂ ನಮ್ಮ ಪಕ್ಷಕ್ಕಿರುವ ಶಕ್ತಿಯಿಂದಲೇ ಚುನಾವಣೆಯನ್ನು ಎದುರಿಸುತ್ತೇವೆ. ಆದರೆ, ಪರಿಷ್ಕೃತ ಪಟ್ಟಿಗೆ ತಡೆಯಾಜ್ಞೆ ನೀಡಬೇಕೆಂದು ನ್ಯಾಯಾಲಯಕ್ಕೆ

ಅರ್ಜಿ ಹಾಕುವುದು ಇಲ್ಲವೇ ಚುನಾವಣೆ ಮುಂದೂಡುವ ಪ್ರಯತ್ನವನ್ನು ನಮ್ಮ ಪಕ್ಷ ಮಾಡುವುದಿಲ್ಲ ಎಂದು ಪುನರುಚ್ಚರಿಸಿದರು.  ಪಕ್ಷದ ಕಚೇರಿಯಲ್ಲಿ ನಡೆದ  ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತ್ಯೋತ್ಸವ ಕಾರ್ಯಕ್ರಮದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸರ್ಕಾರ ನಿಗದಿಪಡಿಸಿರುವ ಮೀಸಲಾತಿ ಪಟ್ಟಿಯಂತೆ ನಮ್ಮ ಪಕ್ಷ ಚುನಾವಣೆ ಎದುರಿಸಲಿದೆ. ಪ್ರತಿಯೊಂದು ವಾರ್ಡ್‌ಗೂ ಅದೇ ಸಮುದಾಯದವರನ್ನು ನಿಲ್ಲಿಸಿ ಗೆಲ್ಲಿಸಲಾಗುವುದು. ಪಕ್ಷದ ಕಾರ್ಯಕರ್ತರು ಎದೆಗುಂದದೆ ಧೈರ್ಯವಾಗಿ ಚುನಾವಣೆ ಎದುರಿಸಿ ಎಂದು ಕರೆಕೊಟ್ಟರು.
ಬಿಬಿಎಂಪಿ ಚುನಾವಣೆಯಿಂದಲೇ ರಾಜ್ಯದ ಜನತೆಗೆ ಹೊಸ ಸಂದೇಶ ಕೊಡಲು ಮುಂದಾಗಬೇಕು. ಚುನಾವಣೆ ನಡೆಸಲು ನಮಗೆ ಯಾವುದೇ ಹೆದರಿಕೆ ಇಲ್ಲ ಎಂದು ಹೇಳುವವರು ನ್ಯಾಯಾಲಯದಲ್ಲಿ ಅರ್ಜಿ ಹಾಕುತ್ತಿರುವುದು ಏತಕ್ಕೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಪರಿಷ್ಕೃತ ಪಟ್ಟಿಯಲ್ಲಿ ಬಿಜೆಪಿಗೂ ಅನ್ಯಾಯವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೂ ಮೀಸಲಾತಿ ಅನ್ವಯವೇ ಚುನಾವಣೆ ಎದುರಿಸಲಾಗುತ್ತದೆ. ನಾನು ಎಲ್ಲ ವಾರ್ಡ್‌ಗಳಿಗೂ ತೆರಳಿ ಭಾಷಣ ಮಾಡಲು ಸಾಧ್ಯವಿಲ್ಲ. ಪಕ್ಷದ ಸಾಧನೆ ನೋಡಿಕೊಂಡು ಮತದಾರರು ಅರ್ಹ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ದೇವೇಗೌಡರು ಮನವಿ ಮಾಡಿದರು.

* ನ್ಯಾಯಾಂಗದ ಮೊರೆ : ಎನ್.ಆರ್.ರಮೇಶ್
ಬೆಂಗಳೂರು, ಏ.14-ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಮೀಸಲಾತಿ ಪಟ್ಟಿಯಲ್ಲಿ ರೋಸ್ಟರ್ ಪದ್ಧತಿಯನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದ್ದು, ಸರ್ಕಾರದ ಈ ತಾರತಮ್ಯ ನೀತಿಯ ವಿರುದ್ಧ ನಾಳೆ ನ್ಯಾಯಾಂಗದ ಮೊರೆ ಹೋಗಲಾಗುವುದು ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಸ್ಟರ್ ಪದ್ಧತಿಯ ಪ್ರಕಾರ 198 ವಾರ್ಡ್‌ಗಳ ಮೀಸಲಾತಿ ಕೂಡ ಬದಲಾವಣೆಯಾಗಬೇಕು. ಆದರೆ, ಸರ್ಕಾರ ಕೆಲವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 32 ವಾರ್ಡ್‌ಗಳಲ್ಲಿ ರೋಸ್ಟರ್ ಪದ್ಧತಿಯನ್ನು ಕೈ ಬಿಟ್ಟಿದ್ದಾರೆ ಎಂದು ದೂರಿದರು. ಹನುಮಂತನಗರ, ಬಸವನಗುಡಿ ಸೇರಿದಂತೆ 32 ಕಡೆ ತಮ್ಮವರಿಗೆ ಅನುಕೂಲವಾಗುವಂತೆ ಮೀಸಲಾತಿ ನೀಡಿ ಕಾನೂನನ್ನು ಉಲ್ಲಂಘಿಸಿದ್ದಾರೆ. ಈ 32 ವಾರ್ಡ್‌ಗಳಲ್ಲಿ ಐದೈದು ಬಾರಿ ಸಾಮಾನ್ಯ ವಾರ್ಡ್‌ಗಳಾಗಿ ಪ್ರಕಟ ಮಾಡಿದ್ದಾರೆ. ಇದು ರಾಜಕೀಯ ದುರುದ್ದೇಶದಿಂದ ಕೂಡಿದೆ. ತಮಗೆ ಬೇಕಾದವರಿಗೆ ಅನುಕೂಲ ಮಾಡಿಕೊಡುವುದು ಸರ್ಕಾರದ ಉದ್ದೇಶವಾಗಿದ್ದು, ಇತರೆ ಪಕ್ಷದ ಗೆಲ್ಲುವಂತಹ ಅಭ್ಯರ್ಥಿಗಳು ರಾಜಕೀಯ ಜೀವನ ಅಂತ್ಯಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು. ಹೀಗಾಗಿ 32 ವಾರ್ಡ್‌ಗಳಲ್ಲಿ ರೋಸ್ಟರ್ ಪದ್ಧತಿ ಮಾನದಂಡ ಉಲ್ಲಂಘಿಸಿರುವುದನ್ನು ಪ್ರಶ್ನಿಸಿ ನಾಳೆ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದರು.

Write A Comment