ಕರ್ನಾಟಕ

ಬಾಬಾ ಸಾಹೇಬರ ದಾರಿಯಲ್ಲಿ…

Pinterest LinkedIn Tumblr

mmmm

-ಅನಿತಾ ಈ.

ಇಂದು  (April 14) ಅಂಬೇಡ್ಕರ್‌ ಅವರ ಜನ್ಮ ದಿನಾಚರಣೆ. ಅವರ ಧ್ಯೇಯೋದ್ದೇಶಗಳ ಸಾಕಾರವನ್ನು ಗುರಿಯಾಗಿಟ್ಟುಕೊಂಡು ಪ್ರಾರಂಭವಾಗಿ ಬಡ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುತ್ತಿರುವ ಸಂಘದ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ…

ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಆದರ್ಶಗಳನ್ನೇ ಧ್ಯೇಯವನ್ನಾಗಿ ಇಟ್ಟುಕೊಂಡು ಪ್ರಾರಂಭವಾದ ‘ಕೆನರಾ ಬ್ಯಾಂಕ್‌ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ನೌಕರರ ಕ್ಷೇಮಾಭಿವೃದ್ಧಿ ಸಂಘ’ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸುತ್ತಿದೆ.

ನಗರದ ನ್ಯೂಮಿಷನ್‌ ರಸ್ತೆಯಲ್ಲಿರುವ ಪೂರ್ಣಿಮಾ ಥಿಯೇಟರ್‌ ಬಳಿ ಇರುವ ಈ ಸಂಘ 1994ರಲ್ಲಿ ಅಸ್ತಿತ್ವಕ್ಕೆ ಬಂತು. ಸಂಘ  ಪ್ರಾರಂಭವಾದಾಗ ಕೇವಲ ಸಂಘದಲ್ಲಿರುವ ನೌಕರರ ಕಲ್ಯಾಣ, ಅವರ ಹಕ್ಕುಗಳ ರಕ್ಷಣೆಗಾಗಿ ಹೋರಾಡುವುದು ಮತ್ತು ಹಕ್ಕುಗಳ ಬಗ್ಗೆ ಅರಿವು ಮೂಡಿಸುವತ್ತ ಗಮನ ಹರಿಸುತ್ತಿತ್ತು. ಆದರೆ ದಿನ ಕಳೆದಂತೆ ಬಡ ಕುಟುಂಬದ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಕೊಡಿಸಲು ಮುಂದಾಯಿತು. ಸದ್ಯಕ್ಕೆ ರಾಜ್ಯದಾದ್ಯಂತ ಸಂಘದ ಸಾವಿರಕ್ಕೂ ಹೆಚ್ಚಿನ ಸದಸ್ಯರಿದ್ದಾರೆ.

2008ರಲ್ಲಿ ಸಂಘದ ನೌಕರರು ನೀಡಿದ ನಿಧಿಯಿಂದ ಪೂರ್ಣಿಮಾ ರಸ್ತೆಯಲ್ಲಿ ಖಾಲಿ ನಿವೇಶನವನ್ನು ಖರೀದಿಸಿ ಸ್ವಂತ ಕಟ್ಟಡವನ್ನು ನಿರ್ಮಿಸಲಾಯಿತು.

ಉಚಿತ ಕಂಪ್ಯೂಟರ್‌ ತರಬೇತಿ
ಈಗ ಇಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಂಪ್ಯೂಟರ್‌ ಹಾಗೂ ಡಿಟಿಪಿ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ ಈ ತರಬೇತಿಯನ್ನು ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣ ಹಾಗೂ ಅನುತ್ತೀರ್ಣರಾಗಿರುವವರು ಪಡೆಯಬಹುದು.

‘ಸದ್ಯಕ್ಕೆ 15 ಮಂದಿಗೆ ಮಾತ್ರ ತರಬೇತಿ ಪಡೆದುಕೊಳ್ಳುತ್ತಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಬಂದಲ್ಲಿ ಅವರಿಗೂ ಅವಕಾಶ ಕಲ್ಪಿಸಲು ಸ್ಥಳಾವಕಾಶವಿದೆ. ಇದರೊಂದಿಗೆ ಸಿಇಟಿ, ಟ್ಯಾಲಿ, ಹಾರ್ಡ್‌ವೇರ್‌, ಬ್ಯಾಂಕಿಂಗ್‌,  ಸಿ.ಎ, ಕೆಎಎಸ್‌, ಐಎಎಸ್‌ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಚಿತ ತರಬೇತಿ ನೀಡುವ ಯೋಜನೆ ಇದೆ’ ಎನ್ನುತ್ತಾರೆ ಸಂಘದ ಅಧ್ಯಕ್ಷ ಪುರುಷೋತ್ತಮ ದಾಸ್‌.

ಸಂಘದಲ್ಲಿ ಆಯೋಜಿಸುವ ಸಭೆ ಸಮಾರಂಭಗಳನ್ನು ನಡೆಸುವ ಸಲುವಾಗಿ ‘ಜೈ ಭೀಮ್‌’ ಸಭಾಂಗಣವನ್ನು ನಿರ್ಮಿಸಲಾಗಿದೆ. ಸದ್ಯಕ್ಕೆ ಸಂಘದ ನೌಕರರು ಮಾತ್ರ ಇದನ್ನು ಬಳಸುತ್ತಿದ್ದಾರೆ. ಆದರೆ ಬಡ ವಿದ್ಯಾರ್ಥಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದವರು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಈ ಸಭಾಂಗಣವನ್ನು ಬಳಸಿಕೊಳ್ಳಲು ಅವಕಾಶವಿದೆ ಎಂದು ಸೂಚನೆ ನೀಡುತ್ತಾರೆ ಅವರು.

ಇಂದಿನ ಕಾಲಮಾನಕ್ಕೆ ಅಂಬೇಡ್ಕರ್‌ ಆದರ್ಶಗಳು ಅತಿ ಅವಶ್ಯ. ಅವರು ತೋರಿಸಿದ ಮಾರ್ಗದಲ್ಲಿ ಸಮಾಜವನ್ನು ರೂಪಿಸುವುದೇ ಸ್ವಸ್ಥ ಸಮಾಜ ನಿರ್ಮಾಣದ ಸರಿಯಾದ ಮಾರ್ಗ. ದಲಿತರು ಮತ್ತು ಕೆಳವರ್ಗದ ಜನರು ಸಮಾಜದಲ್ಲಿ ಪ್ರವರ್ಧಮಾನಕ್ಕೆ ಬರುವುದಕ್ಕೆ, ಮತ್ತು ಶೋಷಣೆಯನ್ನು ದಿಟ್ಟವಾಗಿ ಎದುರಿಸಲು ಶಿಕ್ಷಣ ಒಂದು ಪ್ರಮುಖ ಮಾರ್ಗವಾಗುತ್ತದೆ ಎಂಬುದು ಅಂಬೇಡ್ಕರ್‌ ಅವರ ನಂಬಿಕೆಯಾಗಿತ್ತು. ಈ ಸಂಸ್ಥೆಯೂ ತನ್ನ ಕಾರ್ಯ ಚಟುವಟಿಕೆಗಳನ್ನು ಇದೇ ನಂಬಿಕೆಯ ಅಡಿಪಾಯದ ಮೇಲೆ ನಡೆಸಿಕೊಂಡು ಬರುತ್ತಿದೆ ಎಂದು ಪುರುಷೋತ್ತಮ್‌ ವಿವರಿಸಿದ್ದಾರೆ.

ಅಂಬೇಡ್ಕರ್‌ ನೋವಿನ ನುಡಿಗಳು..
ಸದ್ಯ ‘ಕೆನರಾ ಬ್ಯಾಂಕ್‌ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ನೌಕರರ ಕ್ಷೇಮಾಭಿವೃದ್ಧಿ ಸಂಘ ಇರುವ ಸ್ಥಳದ ಸಮೀಪದಲ್ಲೇ ಇದ್ದ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಅಂಬೇಡ್ಕರ್‌ ಅವರು ಭೇಟಿ ನೀಡಿದ್ದರು. ಆಗ ಅವರನ್ನು ಕಂಡು, ಅವರ ಮಾತನ್ನು ಆಲಿಸಿದ್ದ ವಿದ್ಯಾರ್ಥಿ ಎಲ್‌. ಶಿವಲಿಂಗಯ್ಯ ಅವರ ಮಾಸದ ನೆನಪು ಇಲ್ಲಿದೆ.

ಲಾಲ್‌ಬಾಗ್‌ ರಸ್ತೆಯ ಸುತ್ತಮುತ್ತಲಿನ ಪ್ರದೇಶ ಹಿಂದೆ ಕ್ರಿಶ್ಚಿಯನ್‌ ಕಾಲೋನಿ ಎಂದೇ ಪ್ರಸಿದ್ಧವಾಗಿತ್ತು. ಇಲ್ಲಿ ಕ್ರೈಸ್ತರಿಗೆ ಸೇರಿದ ಖಾಸಗಿ ಕಟ್ಟಡದಲ್ಲಿ ಆಗ ನಗರದ ವಿವಿಧ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳು ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಅದಕ್ಕೆ ಯುನಿವರ್ಸಿಟಿ ಕಾಲೇಜು ಸ್ಟುಡೆಂಟ್‌ ಹಾಸ್ಟೆಲ್‌ ಎಂದು ಕರೆಯಲಾಗುತ್ತಿತ್ತು. 1954 ಆಗಸ್ಟ್‌ 8ರಂದು ಅಂಬೇಡ್ಕರ್‌ ಅವರು ಕೆಜಿಎಫ್‌ಗೆ ಕೆಲಸದ ನಿಮಿತ್ತ ಭೇಟಿ ನೀಡಿದ್ದಾಗ ಅಲ್ಲಿ ಕಾರಣಾಂತರಗಳಿಂದ ಬೇಸರಗೊಂಡ ಅವರು ಮರಳುವಾಗ ಬೆಂಗಳೂರಿಗೆ ಭೇಟಿ ನೀಡಿದ್ದರು.

ಆಗ ನಾನು ತಂಗಿದ್ದ ಹಾಸ್ಟೆಲ್‌ಗೂ ಬೇಟಿ ನೀಡಿ, ವಿದ್ಯಾರ್ಥಿಳನ್ನು ಉದ್ದೇಶಿಸಿ ಮಾತನಾಡಿದ್ದರು. ಆಗಷ್ಟೇ  ಎಂಜಿನಿಯರಿಂಗ್‌ ಮುಗಿಸಿದ್ದ ನಾನು, ಅವರನ್ನು ನೋಡಲೇಬೇಕೆಂದು ಅಂದು ಹಾಸ್ಟೆಲ್‌ಗೆ ಹೋಗಿದ್ದೆ.

ಅಂದು ಅಲ್ಲಿ ಅಂಬೇಡ್ಕರ್‌ ಅವರು ಬಹಳ ನೊಂದು ಮಾತನಾಡಿದ್ದರು. ನಾನು ವಿದ್ಯಾವಂತ ವರ್ಗಕ್ಕಾಗಿ ದುಡಿದಿದ್ದೇನೆ. ಆದರೆ ಅವಿದ್ಯಾವಂತ ವರ್ಗಕ್ಕೆ ಅಂದುಕೊಂಡಷ್ಟು ಮಾಡಲಾಗಲಿಲ್ಲ. ಆದರೆ ವಿದ್ಯಾವಂತ ವರ್ಗದವರು ಅವಿದ್ಯಾವಂತ ವರ್ಗದವರಿಗೆ ಏನಾದರೂ ಮಾಡಲಿ ಎಂದು ಆಶಿಸಿದ್ದೆ. ಆದರೆ ವಿದ್ಯಾವಂತ ವರ್ಗದವರು ತುಂಬಾ ಸ್ವಾರ್ಥಿಗಳಾಗಿದ್ದಾರೆ. ಇದರಿಂದ ನನಗೆ ತುಂಬಾ ನೋವಾಗಿದೆ ಎಂದಿದ್ದರು.

ಅಂದು ಅವರ ಮಾತನ್ನು ಕೇಳಿದ ನಾನು ಅವಿದ್ಯಾವಂತ ವರ್ಗಕ್ಕೆ ನನ್ನ ಕೈಲಾದ ಸಹಾಯ ಮಾಡಲೇಬೇಕು ಎಂದು ಪ್ರತಿಜ್ಞೆ ಮಾಡಿದೆ.

Write A Comment