ಕರ್ನಾಟಕ

ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ಸಲ್ಲ; ರಾಜ್ಯಕ್ಕೆ ಸ್ವಾಮಿ ಬೆಂಬಲ

Pinterest LinkedIn Tumblr

subramanian_swamy

ರಾಯಚೂರು: ‘ಮೇಕೆದಾಟು ಬಳಿ ಅಣೆಕಟ್ಟು ಕಟ್ಟುವುದಕ್ಕೆ ತಮಿಳುನಾಡಿನ ವಿರೋಧ ಸಲ್ಲದು’ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಶನಿವಾರ ಹೇಳಿದರು.

‘ಹಿಂದುತ್ವಕ್ಕಾಗಿ ವಕೀಲರು’ ಕಾರ್ಯಕ್ರಮದಲ್ಲಿ ಸಿಂಧನೂರಿಗೆ ಹೊರಟಿದ್ದ ಅವರು ಮಧ್ಯೆ ರಾಯಚೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಬ್ರಿಟಿಷರ ಕಾಲದಲ್ಲಿ ಕರ್ನಾಟಕ ಅನ್ಯಾಯಕ್ಕೆ ಒಳಗಾಗಿದೆ. ಈ ರಾಜ್ಯದಲ್ಲಿ ಆಗ ಸಾಕಷ್ಟು ನೀರಾವರಿ ಸೌಕರ್ಯ ಅಭಿವೃದ್ಧಿ ಆಗಲಿಲ್ಲ. ಅದೇ ತಮಿಳುನಾಡಿನಲ್ಲಿ ಬ್ರಿಟಿಷರ ಪ್ರೆಸಿಡೆನ್ಸಿ ಇದ್ದ ಕಾರಣ ಸಾಕಷ್ಟು ಅನುಕೂಲಗಳು ಆಗಿವೆ. ಆದ್ದರಿಂದ ತಮಿಳುನಾಡು ನೀರಿಗಾಗಿ ಕರ್ನಾಟಕದ ಜೊತೆಗೆ ಜಗಳವಾಡುವುದರಲ್ಲಿ ಅರ್ಥವಿಲ್ಲ. ತಮಿಳುನಾಡಿಗೆ ಸಾಕಷ್ಟು ನೀರಿನ ಮೂಲ ಇದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಸಮುದ್ರದ ನೀರಿನಿಂದ ಉಪ್ಪನ್ನು ಪ್ರತ್ಯೇಕಿಸುವ ಆರು ಸಂಸ್ಕರಣಾ ಘಟಕಗಳನ್ನು ತಮಿಳುನಾಡಿನಲ್ಲಿ ಸ್ಥಾಪಿಸದರೆ ಸಾಕು, ಕಾವೇರಿ ನದಿಗೆ ವಿರುದ್ಧ ದಿಕ್ಕಿನಲ್ಲಿ ಹರಿಸುವಷ್ಟು ನೀರು ಸಿಗುತ್ತದೆ’ ಎಂದು ಹೇಳಿದರು.

‘ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ನ್ಯಾಯಾಲಯಗಳನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿರುವುದೇಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಈ ವಿವಾದ ಇತ್ಯರ್ಥವಾಗಬೇಕಿದ್ದರೆ ತಮಿಳುನಾಡು ಪರ್ಯಾಯ ನೀರಿನ ಮೂಲಗಳನ್ನು ಹುಡುಕಿಕೊಳ್ಳಬೇಕು’ ಎಂದು ಸ್ವಾಮಿ ಸಲಹೆ ನೀಡಿದರು.

ಹೆಚ್ಚಿನ ಮುಖಂಡರು ಜೈಲಿಗೆ: ‘ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಭ್ರಷ್ಟೆ. ಆಕೆಯ ಗೆಳೆತಿ ಶಶಿಕಲಾ ಅತಿ ಭ್ರಷ್ಟೆ. ಇವರಿಬ್ಬರು ಪುನಃ ಜೈಲಿಗೆ ಹೋಗುತ್ತಾರೆ. ಭ್ರಷ್ಟಾಚಾರದ ವಿರುದ್ಧ ತಮಿಳುನಾಡಿನಲ್ಲಿ ಹೋರಾಟ ನಡೆದರೆ ಎಐಎಡಿಎಂಕೆ ಮತ್ತು ಡಿಎಂಕೆ ಎರಡೂ ಪಕ್ಷಗಳ ಹೆಚ್ಚಿನ ಮುಖಂಡರು ಜೈಲಿಗೆ ಹೋಗುತ್ತಾರೆ’ ಎಂದರು.

ಹಾಗೆ ನೋಡಿದರೆ ತಮಿಳುನಾಡು ಕಾವೇರಿ ನೀರನ್ನು ಕರ್ನಾಟಕದಿಂದ ಕೇಳಲೇಬಾರದು. ಸಮುದ್ರದ ನೀರನ್ನು ಸಂಸ್ಕರಿಸಿ ಬಳಸಿಕೊಳ್ಳಬೇಕು–ಸುಬ್ರಮಣಿಯನ್‌ ಸ್ವಾಮಿ, ಬಿಜೆಪಿ ಮುಖಂಡ

Write A Comment