ಕರ್ನಾಟಕ

ಶೆಟ್ಟರ್ ಸುಳ್ಳುಗಾರ : ಹುಬ್ಬಳ್ಳಿಯಲ್ಲಿ ಸಿಎಂ ಸಿದ್ದು ಗುಡುಗು

Pinterest LinkedIn Tumblr

Sidd-and-Shetter

ಹುಬ್ಬಳ್ಳಿ, ಏ.11-ಉತ್ತಮ ಕೆಲಸ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್  ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು. ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಹಾಗೂ ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಬಾಯಿ ಬಿಟ್ಟರೆ ಸುಳ್ಳು ಹೇಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

ಅವರೊಬ್ಬ ಮಹಾನ್ ಸುಳ್ಳುಗಾರ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಯಾವುದೇ ಹಗರಣಗಳನ್ನು ಮಾಡಿಲ್ಲ. ದಕ್ಷಿಣ ಭಾರತದಲ್ಲಿ  ತೆರಿಗೆ ಸಂಗ್ರಹದಲ್ಲಿ ಕರ್ನಾಟಕವೇ ನಂ.1 ಆಗಿದೆ. ಸಂಗ್ರಹವಾದ ತೆರಿಗೆಯಲ್ಲಿ ಶೇ.18ರಷ್ಟನ್ನು ಕೇಂದ್ರಕ್ಕೆ ನೀಡಬೇಕು.

ಹದಿನಾಲ್ಕನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಭಾರೀ ಅನ್ಯಾಯವಾಗಿದೆ. ಸುಮಾರು 10 ಸಾವಿರ ಕೋಟಿ ರೂ.ಗಳ ಅನುದಾನ ಕಡಿತವಾಗಿದೆ. ಈ ಬಗ್ಗೆ ಜಗದೀಶ್ ಶೆಟ್ಟರ್ ಚಕಾರವೆತ್ತುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.  ರಾಜ್ಯದ ವಿವಿಧ ಯೋಜನೆಗಳಿಗೆ ಕೇಂದ್ರದ ಅನುದಾನವನ್ನು ಕಡಿತ ಮಾಡಲಾಗಿದೆ. ಅನಗತ್ಯ ಆರೋಪಗಳನ್ನು ಮಾಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಪ್ರತಿಪಕ್ಷದ ನಾಯಕರು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಬಿಜೆಪಿ ಆಡಳಿತದ ಸಂದರ್ಭದಲ್ಲಿ ಕೈಗೊಂಡ ಕಾರ್ಯಕ್ರಮಗಳನ್ನು ಸಿದ್ದರಾಮಯ್ಯನವರು ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಮಾಡಿರುವ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರದ ಯುಪಿಎ ಸರ್ಕಾರದ ಹಲವು ಕಾರ್ಯಕ್ರಮಗಳಿಗೆ ಎನ್‌ಡಿಎ ಸರ್ಕಾರ ಚಾಲನೆ ನೀಡಿಲ್ಲವೇ? ನಮ್ಮ ಅಧಿಕಾರ ಇದೆ. ಕಾಮಗಾರಿಗಳು ಪೂರ್ಣಗೊಂಡಿವೆ. ಅವುಗಳನ್ನು ಲೋಕಾರ್ಪಣೆ ಮಾಡುತ್ತಿದ್ದೇವೆ ಎಂದು ಹೇಳಿದರು. ಹೈದರಾಬಾದ್-ಕರ್ನಾಟಕ, ಉತ್ತರಕರ್ನಾಟಕ  ಭಾಗದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

Write A Comment