ಮೈಸೂರು,ಏ.7- ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ತಿಳಿಸಿದ್ದಾರೆ. ವಿವಿಧ ಕಾಮಗಾರಿಗಳ ಉದ್ಘಾಟನೆಗಾಗಿ ನಗರಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಲಲಿತ ಮಹಲ್‌ನ ಎಲಿಪ್ಯಾಡ್‌ನಲ್ಲಿ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಲಾಗಿದೆ. ಆದರೆ ಸದ್ಯಕ್ಕೆ ವಿಸ್ತರಣೆ ಇಲ್ಲ ಎಂದರು. ಡಿ.ಕೆ.ರವಿ ಸಾವು ಹನಿಟ್ರಾಪ್‌ನಿಂದ ಆಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,
ಇದೆಲ್ಲ ಸುಳ್ಳು ಸದ್ಯದಲ್ಲೇ ಸಿಬಿಐ ತನಿಖೆಯಿಂದ ಮಾಹಿತಿ ಹೊರಬರಲಿದೆ ಎಂದರು. ಕೇಂದ್ರದಿಂದ ಬಹಳಷ್ಟು ಅನುದಾನ ಕಡಿತಗೊಳಿಸಲಾಗಿದೆ. ಕೇಂದ್ರದಿಂದ ಬರಬೇಕಾದ 19 ಸಾವಿರ ಕೋಟಿ ರೂ.ಅನುದಾನ ಕಡಿಮೆಯಾಗಿದೆ. 5ನೇ ಹಣಕಾಸು ಆಯೋಗದಿಂದಲೂ 8,230 ಕೋಟಿ ರೂ. ಬರಬೇಕಿತ್ತು. ಅದು ಬಂದಿಲ್ಲ. ನರ್ಮ್ ಯೋಜನೆ ಹಣ ಸಹ ಕೇಂದ್ರ ಕಡಿತಗೊಳಿಸಿದೆ ಎಂದರು.
ಹೀಗಾಗಿ ರಾಜ್ಯದ ಹಲವಾರು ಕಾಮಗಾರಿಗಳು ಸ್ಥಗಿತಗೊಂಡಿದ್ದು, ಈ ಕಾಮಗಾರಿಗಳನ್ನು ರಾಜ್ಯ ಸರ್ಕಾರವೇ ಮಾಡಬೇಕಿರುವುದರಿಂದ ಸರ್ಕಾರಕ್ಕೆ 4,089 ಕೋಟಿ ರೂ. ಹೊರೆಯಾಗಲಿದೆ ಎಂದರು. ಐಐಟಿ ಸ್ಥಾಪನೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮೈಸೂರಿನ ಸಿಎಂ ಅಲ್ಲ. ರಾಜ್ಯದ ಯಾವುದೇ ಭಾಗದಲ್ಲಿ ಐಐಟಿ ಸ್ಥಾಪನೆಯಾದರೂ ಖುಷಿಯೇ ಎಂದರು. ಮೇಕೆದಾಟು ಯೋಜನೆ ಕುರಿತಂತೆ ನೀಲನಕ್ಷೆ ಸಿದ್ಧಪಡಿಸ ಲಾಗುತ್ತಿದೆ. ತದನಂತರ ಇದನ್ನು ಕೇಂದ್ರಕ್ಕೆ ಅನುಮತಿಗಾಗಿ ಕಳುಹಿಸಲಾಗುವುದು ಎಂದು ಸಿದ್ಧರಾಮಯ್ಯ ತಿಳಿಸಿದರು.