ಕರ್ನಾಟಕ

ಮೋದಿಗೆ ರಾಜಾತಿಥ್ಯ ನೀಡಿ ರಾಜ್ಯದ ಬೇಡಿಕೆ ಮರೆತ ಬಿಜೆಪಿ ನಾಯಕರು

Pinterest LinkedIn Tumblr

BJP-in-Bangalore

ಬೆಂಗಳೂರು, ಏ.5- ಮೂರು ದಿನಗಳ ಕಾಲ ನಗರದಲ್ಲಿ ನಡೆದ ಮಹತ್ವದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಂದರ್ಭದಲ್ಲಿ ಪಕ್ಷ ಹಾಗೂ ಸರ್ಕಾರಕ್ಕೆ ಸಂಬಂಧಿಸಿದ ರಾಜ್ಯದ ಬೇಡಿಕೆಗಳನ್ನು ರಾಷ್ಟ್ರೀಯ ನಾಯಕರ ಗಮನಕ್ಕೆ  ತರುವಲ್ಲಿ ರಾಜ್ಯ ನಾಯಕರು ಸಫಲರಾಗಲಿಲ್ಲ.  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಪ್ರಧಾನಿ ನರೇಂದ್ರಮೋದಿ  ಮೂರು ದಿನಗಳ ಕಾಲ ನಗರದಲ್ಲಿದ್ದರೂ ರಾಜ್ಯ ಬಿಜೆಪಿ ನಾಯಕರು ರಾಜ್ಯದ ಯಾವುದೇ ಬೇಡಿಕೆಗಳನೂ   ಅವರ ಮುಂದಿಟ್ಟಿಲ್ಲ. ರೈಲ್ವೆ, ನೀರಾವರಿ, ಮೂಲ ಸೌಲಭ್ಯಕ್ಕೆ ಸಂಬಂಧಿಸಿದ ಯೋಜನೆಗಳ ಕುರಿತ

ಯಾವುದೇ ಬೇಡಿಕೆಯ ಪ್ರಸ್ತಾವವನ್ನು ರಾಷ್ಟ್ರೀಯ ನಾಯಕರ ಗಮನಕ್ಕೆ ತರಲಿಲ್ಲ.  ಇದಕ್ಕೆ ಪ್ರಮುಖ ಕಾರಣ ರಾಜ್ಯ ನಾಯಕಗಳ ತಮ್ಮ ತಮ್ಮ ಬೇಡಿಕೆಗಳ ಈಡೇರಿಕೆಗೆ ತಮ್ಮದೇ ಆದ ವಲಯದಲ್ಲಿ ಚರ್ಚೆಗೆ ಸೀಮಿತವಾಗಿದ್ದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಕಾಂಕ್ಷಿಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್‌ಕುಮಾರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಮ್ಮ ತಮ್ಮ ಆಪ್ತ ವಲಯದಲ್ಲಿ ಚರ್ಚೆಗೆ ಸೀಮಿತಗೊಂಡರೇ ಹೊರತು ರಾಜ್ಯದ ವಿಚಾರವನ್ನು ರಾಷ್ಟ್ರೀಯ ನಾಯಕರ ಗಮನಕ್ಕೂ ತರಲಿಲ್ಲ ಎನ್ನಲಾಗಿದೆ. ಅಲ್ಲದೆ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಸೇರಿದಂತೆ ಕೆಲವರು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದು, ಇವರು ಕೂಡ ತಮ್ಮ ಆಪ್ತ ವಲಯದ ಗುಂಪುಗಳಲ್ಲೇ ಚರ್ಚೆ ಮಾಡಿಕೊಂಡರು.

ಈ ವಿಚಾರವನ್ನು ಕೂಡ ವರಿಷ್ಠರ ಗಮನಕ್ಕೆ ತರಲು ಸಫಲವಾಗಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಅನಂತ್‌ಕುಮಾರ್ ಮತ್ತು ಯಡಿಯೂರಪ್ಪ ಅವರನ್ನು ಹೊರತುಪಡಿಸಿದರೆ ಹೆಚ್ಚಿನ ನಾಯಕರು ಕೇವಲ ಫೋಟೋ ತೆಗೆಸಿಕೊಳ್ಳುವುದಕ್ಕೇ ಸೀಮಿತವಾದಂತಾಯಿತು. ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಬಹಿರಂಗ ಸಮಾವೇಶ ಹೊರತುಪಡಿಸಿದರೆ ಕಾರ್ಯಕಾರಿಣಿ ಸಂದರ್ಭದಲ್ಲಿ ರಾಜ್ಯದ ನಾಯಕರಿಗೆ ಯಾವುದೇ ರೀತಿಯ ಪ್ರಾಶಸ್ತ್ಯ ಸಿಗಲಿಲ್ಲ. ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಕೂಡ ಈ ಸಂದರ್ಭದಲ್ಲಿ ಮುಂಚೂಣಿಗೆ ಬರಲು ಸಾಧ್ಯವಾಗಲಿಲ್ಲ.  ರಾಷ್ಟ್ರೀಯ ನಾಯಕರು ಕೇಂದ್ರ ಸಚಿವರೂ ಸೇರಿದಂತೆ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡ ಮುಖಂಡರಿಗೆ ಆತಿಥ್ಯ ನೀಡುವುದರಲ್ಲೇ ರಾಜ್ಯ ನಾಯಕರು ಸೀಮಿತವಾಗಿದ್ದರು ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

ಮೋದಿ ಅವರೊಂದಿಗೆ ಚರ್ಚಿಸಲು ಎರಡು ಬಾರಿ ರಾಜ್ಯ ನಾಯಕರಿಗೆ ಅವಕಾಶ ಸಿಕ್ಕಿತ್ತು. ಶಾಸಕರು, ಸಂಸದರೊಂದಿಗಿನ ಔತಣಕೂಟ ಹಾಗೂ ಮಾಜಿ ಶಾಸಕರು, ಮಾಜಿ ಸಂಸದರೊಂದಿಗೆ ನಡೆದ ಮತ್ತೊಂದು ಔತಣ ಕೂಟ ಸಮಾರಂಭದಲ್ಲಿ ರಾಜ್ಯದ ಬೇಡಿಕೆಗಳನ್ನು ಪ್ರಸ್ತಾಪಿಸಬಹುದಿತ್ತು.  ಪಕ್ಷ ಹಾಗೂ ಸರ್ಕಾರಕ್ಕೆ ಸಂಬಂಧಿಸಿದ ಬೇಡಿಕೆಗಳ ಬಗ್ಗೆ ಮೋದಿ ಹಾಗೂ ಅಮಿತ್ ಷಾ ಅವರ ಗಮನ ಸೆಳೆಯುವ ಅವಕಾಶ ಸಿಕ್ಕಿದರೂ ಬಳಸಿಕೊಂಡಿಲ್ಲ ಎಂಬ ಅಸಮಾಧಾನ ಹೊಗೆಯಾಡುತ್ತಿದೆ. ರಾಜ್ಯ ಬಿಜೆಪಿ ಘಟಕದಿಂದಲೂ ಅಂತಹ ಯಾವುದೇ ಯತ್ನ ಮಾಡಿದಂತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಪಕ್ಷದಲ್ಲಿ ಒಗ್ಗಟ್ಟು ಮತ್ತು ಸಂಘಟನೆಗೆ ಅನಂತ್‌ಕುಮಾರ್ ಹಾಗೂ ಯಡಿಯೂರಪ್ಪ ಅವರಿಗೆ ಸೂಚ್ಯವಾಗಿ ಹೇಳಿದ್ದಾರೆ. ಒಂದು ವೇಳೆ ರಾಜ್ಯದ ಬೇಡಿಕೆ ಬಗ್ಗೆ ಗಮನ ಸೆಳೆದಿದ್ದರೆ ಪರೋಕ್ಷ ಇಲ್ಲವೆ ಸೂಚ್ಯವಾಗಿಯಾದರೂ ಆ ಬಗ್ಗೆ ರಾಷ್ಟ್ರೀಯ ನಾಯಕರಿಂದ ಸುಳಿವು ದೊರೆಯುತ್ತಿತ್ತು ಎಂಬ ಅಭಿಪ್ರಾಯ  ಕೇಳಿಬರುತ್ತಿದೆ.

Write A Comment