ಕರ್ನಾಟಕ

ಕಾರ್ಯಕಾರಿಣಿಯಲ್ಲಿ ಪ್ರಧಾನಿ ಮೋದಿ ಮನ್‌ಕಿ ಬಾತ್

Pinterest LinkedIn Tumblr

MCS_3811

ಬೆಂಗಳೂರು, ಏ.3-ಮುಂದಿನ 21ನೇ ಶತಮಾನ ಮಹಿಳೆಯರಿಗೆ ಮೀಸಲು, ಯುವಕರಿಗೆ ಉದ್ಯೋಗ ಸೃಷ್ಟಿ , ವಿಶ್ವಮಟ್ಟದಲ್ಲೇ ಭಾರತವನ್ನು ಪ್ರಬಲ ಶಕ್ತಿಯನ್ನಾಗಿ ರೂಪಿಸಲು ಪಕ್ಷದ ಸೇನಾನಿಗಳು ಸಜ್ಜಾಗುವಂತೆ ಇಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಸೂಚನೆ ನೀಡಿದ್ದಾರೆ.    ಬಿಜೆಪಿ ರಾಷ್ಟ್ರೀಯ ಕಾರ್ಯ ಕಾರಿಣಿಯ 2ನೇ ದಿನದಲ್ಲಿ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟ  ಮೋದಿ, ದೇಶದಲ್ಲಿ ಅಪಾರ ಸಂಪನ್ಮೂಲವಿದೆ. ಅದನ್ನು ಬಳಸಿಕೊಂಡು ಭಾರತ ವಿಶ್ವಮಟ್ಟದಲ್ಲೇ ಪ್ರಜ್ವಲಿಸುವಂತೆ ಮಾಡುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ.

ಅದರಂತೆ ಎಲ್ಲರೂ ಶಿಸ್ತಿನಿಂದ ಕೆಲಸ ಮಾಡಬೇಕು ಎಂದು ಆದೇಶಿಸಿದರು. ಕಳೆದ 9 ತಿಂಗಳಿನಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಬಗ್ಗೆ ಎದ್ದಿರುವ ಟೀಕೆಗಳ ಬಗ್ಗೆ ಎದೆಗುಂದದೆ ಮುನ್ನುಗುವ ಅಗತ್ಯವಿದೆ. ಭವಿಷ್ಯದಲ್ಲಿ ಯುವ ಸಮುದಾಯವನ್ನು ಬಳಸಿಕೊಳ್ಳಬೇಕಾಗಿದೆ.   ಅದರಲ್ಲೂ ವಿಶೇಷವಾಗಿ  ಮಹಿಳೆಯರ ಬಗ್ಗೆಯೂ ವಿಶೇಷ ಒತ್ತು ನೀಡಬೇಕಾಗಿದೆ ಎಂದು ಪ್ರತಿಪಾದಿಸಿದರು.

ಇದರ ಜೊತೆಗೆ ಪಕ್ಷ ಸಂಘಟನೆಗೂ ತೊಡಗಬೇಕು, ಹೊಸ ಸದಸ್ಯರಾಗಿ ಬಂದಿರುವ ಕೋಟ್ಯಾನುಕೋಟಿ ಜನರು ಬಿಜೆಪಿ ಜೊತೆ ಕೆಲಸ ಮಾಡಲು ಅವರನ್ನು ಪ್ರೇರೇಪಿಸಬೇಕು ಎಂದು ಹೇಳಿದ್ದಾರೆ.  ನಂತರ ನಡೆದ ಚಿಂತನ-ಮಂಥನದಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಿಸುವ ಮಹತ್ವದ ಉದ್ದೇಶದ ಜೊತೆಗೆ   ಈಶಾನ್ಯ ರಾಜ್ಯಗಳಲ್ಲಿ ಪಕ್ಷದ ಪಾರುಪತ್ಯ ಸ್ಥಾಪಿಸುವ ಬಗ್ಗೆ ಕಾರ್ಯತಂತ್ರ ರೂಪಿಸಲಾಗಿದೆ.  ಇಂದು ನಡೆದ 2ನೇ ದಿನದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ, ಕೇಂದ್ರ ಸಚಿವರಾದ ರಾಜನಾಥ್‌ಸಿಂಗ್, ಸುಷ್ಮಾಸ್ವರಾಜ್, ಅರುಣ್‌ಜೈಟ್ಲಿ, ಸೇರಿದಂತೆ ಬಹುತೇಕ ಎಲ್ಲ ಕೇಂದ್ರ ಸಚಿವರು ಇಂದು ಪಾಲ್ಗೊಂಡಿದ್ದು ವಿಶೇಷ.

ಕೇಂದ್ರ ವಿದೇಶಾಂಗ ನೀತಿಯ ಬಗ್ಗೆ ಕಾರ್ಯಕಾರಿಣಿ ಸಭೆಯಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಲಾಗಿದೆ. ಅದೇ ರೀತಿ ಸದಸ್ಯತ್ವ ಅಭಿಯಾನದ ಪ್ರಗತಿಯ ಬಗ್ಗೆಯೂ ಶ್ಲಾಘನೆ ವ್ಯಕ್ತಪಡಿಸಿದ್ದು, ಮಾಸಾಂತ್ಯದೊಳಗೆ ಗುರಿ ತಲುಪಲು ಸೂಚಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಪ್ರಸಕ್ತ ರಾಜಕೀಯ ವಿದ್ಯುನ್ಮಾನಗಳ ಬಗ್ಗೆ  ಸುದೀರ್ಘ ಚರ್ಚೆ ನಡೆಸಲಾಗಿದೆ. ದೇಶದ  ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಕೂಡ ಚರ್ಚೆ ನಡೆಸಲಾಗಿದೆ. ವಿವಿಧಗೋಷ್ಠಿಗಳನ್ನು ನಡೆಸುವ ಮೂಲಕ ವಿಷಯವಾರು ಚರ್ಚೆಗಳನ್ನು ಕಾರ್ಯಕಾರಿಣಿಯಲ್ಲಿ ನಡೆಸಲಾಗಿದೆ. ಕೇಂದ್ರ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿಧೇಯಕದ ಬಗ್ಗೆ ನಡೆಯುತ್ತಿರುವ ಅಪಪ್ರಚಾರವನ್ನು ದೂರ ಮಾಡಿ ರೈತರಿಗೆ ಮನವರಿಕೆ ಮಾಡಿಕೊಂಡಲು ದೇಶಾದ್ಯಂತ ಶಿಬಿರಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಆಯಾಯ ರಾಜ್ಯಗಳ ಪಕ್ಷದ ಸಂಘಟನೆ ಹಾಗೂ ಸದಸ್ಯತ್ವ ಅಭಿಯಾನದ ವರದಿಗಳನ್ನು ಕೂಡ ಮಂಡಿಸಲಾಗಿದೆ.

ಇತ್ತೀಚೆಗೆ ನಡೆದ ನವದೆಹಲಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷಕ್ಕಾಗಿರುವ ಭಾರಿ ಹಿನ್ನಡೆ ಹಾಗೂ ಮುಂಬರುವ ಇತರೆ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಬಗ್ಗೆಯೂ ಗಂಭೀರ ಚರ್ಚೆ ನಡೆಸಲಾಗಿದೆ. ಬಿಹಾರ, ಪಶ್ಚಿಮ ಬಂಗಾಳ, ಅಸ್ಸೊಂ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಮಾಡಬೇಕಾದ ಕಾರ್ಯತಂತ್ರ, ಸ್ಥಳೀಯವಾಗಿ ಚುನಾವಣಾ ಹೊಂದಾಣಿಕೆ ವಿಚಾರದ ಬಗ್ಗೆಯೂ  ಕೂಡ ಚರ್ಚೆ ಮಾಡಲಾಗಿದೆ.  ದೆಹಲಿಯಲ್ಲಿ ಮಾಡಿದಂತೆ ಬಿಜೆಪಿ ವಿರೋಧಿ ಬಣಗಳು ಒಗ್ಗೂಡಿ ಮಣಿಸಲು ಚುನಾವಣೆಯಲ್ಲಿ  ಯತ್ನಿಸಿದರೆ ಬಿಜೆಪಿ ಮಾಡಬೇಕಾದ ಕಾರ್ಯತಂತ್ರ ಏನು? ಅದರಿಂದಾಗುವ ಲಾಭ, ನಷ್ಟಗಳ ಲೆಕ್ಕಾಚಾರಗಳನ್ನು ಕೂಡ ಮಾಡಲಾಗಿದೆ.

ಬಿಜೆಪಿ ವಿರೋಧಿ ಪಕ್ಷಗಳ ಶಕ್ತಿಯನ್ನು ಕುಗ್ಗಿಸಿ ಪಕ್ಷವನ್ನು ಬಲಗೊಳಿಸುವುದು ಹೇಗೆ  ಎಂಬ ಬಗ್ಗೆ ಗಂಭೀರ ಚಿಂತನ-ಮಂಥನ ಮಾಡಲಾಗಿದೆ. ಜಮ್ಮು ಮತ್ತು ಕಾಶ್ನೀರದಲ್ಲಿ ಪಿಡಿಪಿ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಬಿಜೆಪಿ ಬೆಂಬಲಿತ ಸಂಘಟನೆಗಳಿಗೆ ಮನವರಿಕೆ ಮಾಡಿಕೊಡುವ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ. ಕೇಂದ್ರ ಸರ್ಕಾರ ಮಾಡಿರುವ ಸಾಧನೆಯ ಬಗ್ಗೆ ಜನಜಾಗೃತಿ ಮೂಡಿಸುವ ಮೂಲಕ ಜನರಲ್ಲಿ ಉತ್ತಮ ಭಾವನೆ ಮೂಡಿಸುವುದು, ಭೂ ಸ್ವಾಧೀನ ತಿದ್ದುಪಡಿ ವಿಧೇಯಕದ  ರೈತರಿಗೆ ಆಗುವ ಪ್ರಯೋಜನದ ಬಗ್ಗೆ ಮನವರಿಕೆ ಮಾಡಿಕೊಡಲು ಆಂದೋಲನ ನಡೆಸುವುದು, ಕರ್ನಾಟಕ ಕೇಂದ್ರೀಕರಿಸಿಕೊಂಡು ದಕ್ಷಿಣದಿಂದ ಈಶಾನ್ಯ ರಾಜ್ಯಗಳ ವರೆಗೆ ಬಿಜೆಪಿಯನ್ನು ಬಲಗೊಳಿಸುವ ಮಹತ್ವದ ಉದ್ದೇಶದ ಬಗ್ಗೆ ಕಾರ್ಯಕಾರಿಣಿಯಲ್ಲಿ ಚರ್ಚಿಸಲಾಗಿದೆ. ದುರ್ಬಲವಾಗಿರುವ ರಾಜ್ಯಗಳಲ್ಲೂ ಬಿಜೆಪಿ ಬೇರುಗಳನ್ನು ಗಟ್ಟಿಗೊಳಿಸಿ ಅಧಿಕಾರಕ್ಕೆ ತರಲು ಮಾಡಬೇಕಾದ ಕಾರ್ಯದ ಬಗ್ಗೆಯೂ ಗಹನವಾದ ಸಮಾಲೋಚನೆ ನಡೆಸಲಾಗಿದೆ. ಇಡೀ ದಿನ ಚಿಂತನ-ಮಂಥನ ನಡೆದಿದ್ದು, ನಾಳೆ ನಿರ್ಣಯಗಳನ್ನು ಕಾರ್ಯಕಾರಿಣಿಯಲ್ಲಿ ಅಂಗೀಕರಿಸಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Write A Comment