ಕರ್ನಾಟಕ

ಧಾರವಾಡ ವಿವಿ ಬಂಗಲೆಯಲ್ಲಿ ದೆವ್ವ-ಭೂತಗಳ ಕಾಟ..!

Pinterest LinkedIn Tumblr

Dharwad-Boota-Bangale

ಧಾರವಾಡ, ಏ.2- ಅದು ದೇಶದ ಸುಪ್ರಸಿದ್ಧ ವಿಶ್ವವಿದ್ಯಾಲಯ. ಈ ಕಾರಣಕ್ಕೆ ವಿದ್ಯಾಕಾಶಿ ಎಂಬ ನಾಮಧೇಯ ಪಡೆದಿದೆ. ಈಚೆಗೆ ಭ್ರಷ್ಟಾಚಾರ, ವಿವಿಧ ಹಗರಣಗಳು ಸೇರಿದಂತೆ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಾಗಿದೆ. ಇದೀಗ ಆ ವಿಶ್ವವಿದ್ಯಾಲಯದ ಬಂಗ್ಲೆಯೊಂದರಲ್ಲಿ ದೆವ್ವ-ಭೂತಗಳ ಕಾಟದಿಂದ ಮತ್ತೆ ಸುದ್ದಿ ಮಾಡಿದೆ. ಹೌದು… ಇದು ಕರ್ನಾಟಕ ವಿಶ್ವವಿದ್ಯಾಲಯದ ಆವರಣದ ಒಳಗಡೆ ಇರುವ ಮೌಲ್ಯಮಾಪನ ಕುಲಸಚಿವರ ವಸತಿ ಗೃಹದ ಸ್ಟೋರಿ. ಕವಿವಿ ಆವರಣದ ಕುಲಸಚಿವರ ವಸತಿ ಗೃಹ ಅಕ್ಷರಶಃ ಭೂತ ಬಂಗ್ಲೆಯಾಗಿದ್ದು, ವಿದ್ಯಾರ್ಥಿ ಸಮೂಹದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಕವಿವಿ ಎಂದರೆ ಎಲ್ಲರಿಗೂ ಹೆಮ್ಮೆಯ ವಿಷಯವೆ. ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ಕವಿವಿಯ  ಕೀರ್ತಿ ಹೆಚ್ಚಿಸಿದ್ದಾರೆ. ಇಷ್ಟೆಲ್ಲ ಘನತೆ ಹೊಂದಿರುವ ಕವಿವಿ ಮೌಢ್ಯತೆಗೆ ಶರಣಾಗಿರುವುದು ನಿಜಕ್ಕೂ ವಿಪರ್ಯಾಸವೆ ಸರಿ.

ಮೌಲ್ಯಮಾಪನ ಕುಲಸಚಿವರಿಗೆ ಮೀಸಲಾಗಿರುವ ಬಂಗ್ಲೆಯಲ್ಲಿ ಈವರೆಗೂ ಒಬ್ಬ ಕುಲಸಚಿವರೂ ನೆಲೆಸಿಲ್ಲ. ಏಕೆಂದರೆ 2007ರಲ್ಲಿ ಮೌಲ್ಯಮಾಪನ ಕುಲ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಎಸ್.ಬಿ.ಶೆಟ್ಟಪ್ಪನವರ ಈ ಬಂಗ್ಲೆಯಲ್ಲಿ ವಾಸ ಮಾಡಿದ್ದರು. ಅವರ ಪತ್ನಿ ಈ ಬಂಗ್ಲೆಯ ಕೊಠಡಿಯೊಂದರ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡರು. ಅಂದಿನಿಂದ ಈವರೆಗೆ ಬಂದ ಕುಲಸಚಿವರು ಅಲ್ಲಿ ವಾಸಿಸಲು ಹಿಂದೇಟು ಹಾಕುತ್ತಿದ್ದಾರೆ.  ಬಂಗ್ಲೆಯ ಸರಿಯಾದ ನಿರ್ವಹಣೆ ಇಲ್ಲದ ಕಾರಣಕ್ಕೆ ಸುತ್ತಲು ಮುಳ್ಳಿನ ಗಿಡಗಂಟೆ ಬೆಳೆದು ಭಯಾನಕವಾಗಿದೆ. ರಾತ್ರಿ ಹೊತ್ತಿನಲ್ಲಿ ಗೆಜ್ಜೆ ಸಪ್ಪಳ ಬರುತ್ತದೆ ಎಂದು ಕೆಲವು ವಿದ್ಯಾರ್ಥಿಗಳು ತಿಳಿಸುತ್ತಾರೆ. ಇದೇ ಕಾರಣಕ್ಕೆ ಬಂಗ್ಲೆಯ ಹತ್ತಿರ ನಾವು ಸುಳಿಯುವದಿಲ್ಲ ಎನ್ನುತ್ತಾರೆ ವಿದ್ಯಾರ್ಥಿ ಚೇತನ ಮತ್ತಿತರರು.

ಕತ್ತಲಿನಲ್ಲಿ ಬಿಡಿ, ಹಗಲು ಹೊತ್ತಿನಲ್ಲಿಯೇ ಈ ಬಂಗ್ಲೆಯ ಪಕ್ಕ ಹೋಗಲು ವಿದ್ಯಾರ್ಥಿಗಳು ಭಯ ಪಡುತ್ತಾರೆ. ಏಕೆಂದರೆ ಬಂಗ್ಲೆ ಅಷ್ಟೊಂದು ಭಯಾನಕವಾಗಿದೆ. ದೆವ್ವ-ಭೂತಗಳ ಕಾಟವಿದೆ ಎಂದು ಸುದ್ದಿ ಹರಡಿರುವುದರಿಂದ ವಿದ್ಯಾರ್ಥಿ ಸಮೂಹದಲ್ಲಿ ಸಹಜವಾಗಿ ಭಯ ಹುಟ್ಟು ಹಾಕಿದೆ.
ಆಧುನಿಕ ಜಗತ್ತಿನಲ್ಲಿ ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಮನೆಮಾಡಿರುವ ಮೂಢನಂಭಿಕೆ, ಅಜ್ಞಾನ-ಅಂಧಕಾರ, ಮೌಢ್ಯಗಳನ್ನು ತೊಡೆದು ಹಾಕಬೇಕು ಎಂಬ ಸದುದ್ದೇಶದಿಂದ ಅನೇಕ ಪವಾಡ ಬಯಲು ರಹಸ್ಯ ಕಾರ್ಯಕ್ರಮ ಅಲ್ಲಲ್ಲಿ ನಡೆಯುತ್ತಿವೆ. ಆದರೆ, ಶಿಕ್ಷಣ ನೀಡುವ ಆವರಣದಲ್ಲಿ ಭೂತಬಂಗ್ಲೆ ಬಗ್ಗೆಯೂ ಯಾರಾದರೂ ಗಮನ ಹರಿಸಿ ಭಯದ ವಾತಾವರಣ ಹೋಗಲಾಡಿಸುವ ಅಗತ್ಯವಿದೆ.

ಎಸ್.ಬಿ.ಶೆಟ್ಟಪ್ಪನವರ ಪತ್ನಿ ಬಂಗ್ಲೆಯಲ್ಲಿ ನೇಣುಹಾಕಿಕೊಂಡ ಕಾರಣಕ್ಕೆ ಅಲ್ಲಿ ಯಾರೂ ವಾಸ ಮಾಡುತ್ತಿಲ್ಲ. ವಿದ್ಯಾರ್ಥಿಗಳಲ್ಲಿರುವ ಭಯವನ್ನು ಹೋಗಲಾಡಿಸಬೇಕು ಎಂದು ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಗಿರೀಶ ಪೂಜಾರ  ಹೇಳಿದ್ದಾರೆ. ನಾನು ಕವಿವಿಯ ಉನ್ನತ ಹುದ್ದೆಯಲ್ಲಿ ಇದ್ದುಕೊಂಡು ಬಂಗ್ಲೆಯಲ್ಲಿ ದೆವ್ವ ಇದೆ ಎನ್ನುವುದನ್ನು ನಂಬುವುದಿಲ್ಲ. ವಿದ್ಯಾರ್ಥಿಗಳ ಮೌಢ್ಯತೆ ದೂರ ಮಾಡುವುದು ನಮ್ಮ ಕೆಲಸ. ಇಷ್ಟರಲ್ಲಿಯೇ ಬಂಗ್ಲೆಯ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟಿಸಲಾಗುವುದು ಕವಿವಿ ಪ್ರಭಾರ ಕುಲಪತಿ ಡಾ.ಎಸ್.ಎಸ್.ಹೂಗಾರ ಪತ್ರಿಕೆಗೆ ತಿಳಿಸಿದ್ದಾರೆ.
-ಕಲ್ಮೇಶ

Write A Comment