ಕರ್ನಾಟಕ

ಪರಿಸರದ ಒಡನಾಡಿಗಳಿವರು

Pinterest LinkedIn Tumblr

kdec31 naveen1_0

-ಎಂ. ನವೀನ್‌ ಕುಮಾರ್‌
‘ನೀವು ಮುಂದೆ ಏನಾಗುತ್ತೀರಿ?’ ಎಂದು ಇಂದಿನ ವಿದ್ಯಾರ್ಥಿಗಳನ್ನು ಕೇಳಿದರೆ ‘ಡಾಕ್ಟರ್, ಎಂಜಿನಿಯರ್‌, ಉದ್ಯಮಿ, ಉಪನ್ಯಾಸಕ ಆಗುತ್ತೇನೆ’ ಎಂಬ ಉತ್ತರ ಬರುವುದು ಸಾಮಾನ್ಯ.

ಆದರೆ ಉಡುಪಿ ಜಿಲ್ಲೆಯ ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿದ್ಯಾರ್ಥಿಗಳ ಮುಂದೆ ಈ ಪ್ರಶ್ನೆ ಇಟ್ಟರೆ ಬಹುತೇಕ ವಿದ್ಯಾರ್ಥಿಗಳ ಬಾಯಲ್ಲಿ ಬರುವುದು ‘ನಾನು ಕೃಷಿಕನಾಗುತ್ತೇನೆ’ ಎನ್ನುವ ಉತ್ತರ! ಇದಕ್ಕೆ ಕಾರಣ, ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಕೃಷಿ ಮತ್ತು ಶ್ರಮದ ಮಂತ್ರವನ್ನು ಬೋಧಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿರುವುದು.

ಶಾಲೆಯ ಆವರಣದಲ್ಲಿ ತರಕಾರಿ ಬೆಳೆಸಿ ಅದನ್ನು ಬಿಸಿಯೂಟಕ್ಕೆ ಬಳಸುತ್ತಿರುವ ಶಾಲೆಗಳು ಹಲವಾರು ನಮ್ಮಲ್ಲಿವೆ. ಆದರೆ ಶೇ100ರಷ್ಟು ವೃತ್ತಿಪರವಾಗಿ ಕೃಷಿ ಮಾಡುವ ವಿಧಾನವನ್ನು ವಿವೇಕ ಪ್ರೌಢಶಾಲೆಯಲ್ಲಿ ಹೇಳಿಕೊಡುತ್ತಿರುವುದು ವಿಶೇಷ. ಶಾಲೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಅನೂಚಾನವಾಗಿ ನಡೆದುಕೊಂಡು ಬಂದಿರುವ ಕೃಷಿ ತರಬೇತಿ ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ. ಭಾರತೀಯರ ಪ್ರಮುಖ ವೃತ್ತಿ ಕೃಷಿ. ಆದರೆ ಹಲವು ಸಮಸ್ಯೆಗಳನ್ನು ಈ ಕ್ಷೇತ್ರ ಎದುರಿಸುತ್ತಿ ರುವುದರಿಂದ ಕೃಷಿ ಮಾಡುವವರ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ.

ಉಡುಪಿಯಿಂದ ಕುಂದಾಪುರಕ್ಕೆ ಹೋಗುವ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲೇ  ವಿವೇಕ ಪದವಿ ಪೂರ್ವ ಕಾಲೇಜು ಇದೆ. ಕಾಲೇಜಿನ ಹಿಂಭಾಗದ ಆವರಣಕ್ಕೆ ಹೋದರೆ ವಿದ್ಯಾರ್ಥಿಗಳು ಗಿಡಗಳಿಗೆ ನೀರುಣಿಸುವ, ಕಳೆ ತೆಗೆಯುವ, ಗೊಬ್ಬರ ಹಾಕಿ ಪೋಷಣೆ ಮಾಡುವ ದೃಶ್ಯ ಕಾಣಿಸುತ್ತದೆ. ವೃತ್ತಿಪರ ಕೃಷಿಕರಿಗಿಂತ ತಾವೇನೂ ಕಡಿಮೆ ಇಲ್ಲ ಎಂಬಂತೆ ವಿದ್ಯಾರ್ಥಿಗಳು ಕೃಷಿ ಕಾಯಕದಲ್ಲಿ ತೊಡಗಿರುತ್ತಾರೆ.

ಆ ನೋಟವನ್ನು ಕಣ್ತುಂಬಿಕೊಂಡು ಅಲ್ಲಿಯೇ ಇರುವ ಶಾಲಾ ತರಗತಿಯ ಕಿಟಕಿ ಕಡೆ (ಅವರ ಪ್ರಕಾರ ಅದು ಹರಾಜು ಕೇಂದ್ರ) ಕಣ್ಣಾಯಿಸಿದರೆ ತರಕಾರಿ ರಾಶಿ ಮತ್ತು ಹರಾಜಿನ ಪಟ್ಟಿ ಕಾಣಿಸುತ್ತದೆ. ತರಕಾರಿಯ ಪ್ರಮಾಣ, ಗುಣಮಟ್ಟ ನೋಡಿ ಹರಾಜು ದರ ನಮೂದಿಸಬಹುದು. ಅತ್ಯಂತ ಹೆಚ್ಚು ದರ ನಮೂದಿಸಿದವರಿಗೆ ತರಕಾರಿ ಸಿಗುತ್ತದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಹರಾಜಿನಲ್ಲಿ ಭಾಗವಹಿಸಬಹುದು.

ಪರಿಸರ ಪ್ರೇಮಿ, ಕೃಷಿಯ ಬಗ್ಗೆ ಒಲವಿದ್ದ ಕೆ.ಎಲ್‌. ಕಾರಂತರು 1949ರಲ್ಲಿ ಈ ಶಾಲೆಯನ್ನು ಆರಂಭಿಸಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಮಾತ್ರವಲ್ಲ, ಅವರಲ್ಲಿ ಪರಿಸರ ಪ್ರೀತಿ ಬೆಳೆಸಿ ಕೃಷಿಯ ಮಹತ್ವವನ್ನು ಹೇಳಿಕೊಡಬೇಕೆಂಬುದು ಅವರ ಧ್ಯೇಯವಾಗಿತ್ತು. ಆದ್ದರಿಂದ ಶಾಲೆ ಆರಂಭವಾದ ಮೊದಲ ವರ್ಷವೇ ಕೃಷಿ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾರಂಭಿಸಿದರು.  ಅಲ್ಲಿಂದ ಇಲ್ಲಿಯವರೆಗೆ ಈ ಪದ್ಧತಿ ಮುಂದುವರೆದಿದೆ.

ಕೃಷಿ ತರಬೇತಿ ಐಚ್ಛಿಕವಲ್ಲ ಎಂಬ ಅಂಶವನ್ನು ಗಮನಿಸಬೇಕು. ಶಾಲೆಯ ಎಲ್ಲ ವಿದ್ಯಾರ್ಥಿಗಳು ಕೃಷಿ ಮಾಡಲೇಬೇಕು. ಶಾಲೆಯ ವಾತಾವರಣ ಹೇಗಿದೆ ಎಂದರೆ  ಮೊದಲು ಕೃಷಿಯೆಂದರೆ ಇಷ್ಟವಿಲ್ಲದ ವಿದ್ಯಾರ್ಥಿಗಳೂ ಅದರ ಸೆಳೆತಕ್ಕೆ ಒಳಗಾಗಿ ಬಿಡುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳ ಮೇಲೆ ಕೃಷಿಯನ್ನು ಹೇರುವುದಕ್ಕಿಂತ ಅವರಲ್ಲಿ ಆಸಕ್ತಿ ಮೂಡಿಸಲಾಗುತ್ತಿದೆ ಎನ್ನುವುದೇ ಸೂಕ್ತ.

ಬೆಂಡೆ, ಬದನೆ ಮುಂತಾದ ಬೆಳೆಗಳನ್ನು ಶಾಲೆಯಲ್ಲಿ ಬೆಳೆಯಲಾಗುತ್ತದೆ. ಶಾಲೆಯಲ್ಲಿ 8,9 ಮತ್ತು 10ನೇ ತರಗತಿಯ ಒಟ್ಟು 9 ವಿಭಾಗಗಳಿವೆ. ಪ್ರತಿ ವಿಭಾಗದಲ್ಲಿನ ವಿದ್ಯಾರ್ಥಿಗಳನ್ನು ಸುಭಾಷ, ಅಶೋಕ, ಶಿವಾಜಿ, ಪ್ರತಾಪ ಹೆಸರಿನಲ್ಲಿ ನಾಲ್ಕು ಗುಂಪುಗಳಾಗಿ ವಿಂಗಡಣೆ ಮಾಡಲಾಗುತ್ತದೆ. ನಿರ್ದಿಷ್ಟವಾದ ಭೂಮಿಯನ್ನು ಇವರಿಗೆ ನೀಡಲಾಗುತ್ತದೆ. ಆ ಭೂಮಿಯ ಜವಾಬ್ದಾರಿಯನ್ನು ಗುಂಪಿನ ವಿದ್ಯಾರ್ಥಿಗಳು ಹೊರಬೇಕು. ಅಲ್ಲಿ ಉಳುಮೆ  ಮಾಡುವುದರಿಂದ ಹಿಡಿದು ಕಟಾವು ಮಾಡುವವರೆಗಿನ ಎಲ್ಲ ಕೆಲಸಗಳನ್ನು ಅವರೇ ಮಾಡಬೇಕು. ಬೆಳೆಯನ್ನು ಅವರೇ ಹರಾಜು ಹಾಕಬೇಕು. ಅದರಿಂದ ಬಂದ ಹಣವನ್ನು ಹಂಚಿಕೊಳ್ಳಬೇಕು.

ಮಕ್ಕಳಲ್ಲಿ ಪೈಪೋಟಿ
ಹಲವು ಗುಂಪುಗಳು ಇರುವುದರಿಂದ ವಿದ್ಯಾರ್ಥಿಗಳಲ್ಲಿ ಪೈಪೋಟಿ ಇರುತ್ತದೆ. ತಮಗೆ ಸೇರಿದ ಜಾಗದಲ್ಲಿರುವ ಗಿಡಗಳನ್ನು ಉತ್ತಮವಾಗಿ ಪೋಷಣೆ ಮಾಡಿ ಹೆಚ್ಚಿನ ಫಸಲು ಬರುವಂತೆ ನೋಡಿಕೊಳ್ಳಬೇಕು ಎಂಬ ಭಾವನೆಯಿಂದ ಎಲ್ಲರೂ ಕೆಲಸ ಮಾಡುತ್ತಾರೆ. ಒಳ್ಳೆಯ ಬೆಳೆ ಬಂದು ಅದು ಉತ್ತಮ ಬೆಲೆಗೆ ಮಾರಾಟವಾದರೆ ಆದಾಯವೂ ಹೆಚ್ಚಾಗುತ್ತದೆ. ಆದ್ದರಿಂದ ಉದಾಸೀನತೆಯ ಪ್ರಶ್ನೆಯೇ ಇಲ್ಲ.

ಶಾಲೆಯಿಂದಲೇ ಇವರಿಗೆ ಗಿಡಗಳನ್ನು ನೀಡಲಾಗುತ್ತದೆ. ನೈಸರ್ಗಿಕ ಗೊಬ್ಬರ ತಯಾರಿಸಲು ದೊಡ್ಡ ತೊಟ್ಟಿಯನ್ನು ನಿರ್ಮಾಣ ಮಾಡಲಾಗಿದೆ. ವಿಶಾಲ ಆವರಣ ಹೊಂದಿರುವ ಈ ಶಾಲೆಯಲ್ಲಿ ಹತ್ತಾರು ಮರಗಳಿವೆ. ಮರಗಳಿಂದ ಉದುರಿದ ಎಲೆಗಳನ್ನು ಸಂಗ್ರಹಿಸಿ ತೊಟ್ಟಿಯಲ್ಲಿ ಹಾಕಲಾಗುತ್ತದೆ. ಇದರ ಜೊತೆ ಸೆಗಣಿ, ಇನ್ನಿತರ ತ್ಯಾಜ್ಯಗಳನ್ನು ಬೆರೆಸಿ ಗೊಬ್ಬರ ತಯಾರಿಸಲಾಗುತ್ತದೆ. ಬೆಳೆಗೆ ಕೀಟಬಾಧೆ ಬರದಂತೆ ಕ್ರಮ ವಹಿಸಲಾಗುತ್ತದೆ. ವರ್ಷಕ್ಕೆ ಕನಿಷ್ಠ ಎರಡು ಬೆಳೆಯನ್ನು ತೆಗೆಯಲಾಗುತ್ತದೆ.

‘ಕೃಷಿ ತರಬೇತಿ ಈ ಶಾಲೆಯ ಪದ್ಧತಿಯೇ ಆಗಿದೆ. ಪ್ರೌಢಶಾಲೆಯ ಎಲ್ಲ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬೇಕು. ವಾರದಲ್ಲಿ ಎರಡು ಕ್ರಾಫ್ಟ್‌ ತರಗತಿ ಇರುತ್ತದೆ. ಈ ವೇಳೆ ತರಗತಿಯೊಂದರ ಅರ್ಧ ವಿದ್ಯಾರ್ಥಿಗಳು ಕ್ರಾಫ್ಟ್‌ ಕಲಿತರೆ, ಉಳಿದವರು ಕೃಷಿ ಕೆಲಸಗಳಲ್ಲಿ ತೊಡಗುತ್ತಾರೆ. ಕೃಷಿ ಮಾಡಿದವರಿಗೆ ಉಳಿದ ಇನ್ನೊಂದು ತರಗತಿಯಲ್ಲಿ ಕ್ರಾಫ್ಟ್‌ ಕಲಿಸಲಾಗುತ್ತದೆ’ ಎಂದು ಹೇಳುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ ಉಡುಪ.

‘ಶಾಲೆಯ ಈ ಪ್ರಯೋಗಕ್ಕೆ ಪೋಷಕರ ಸಂಪೂರ್ಣ ಬೆಂಬಲ ಇದೆ. ಶಾಲೆಯಲ್ಲಿ ಕೆಲಸ ಮಾಡುವ ವಿದ್ಯಾರ್ಥಿಗಳಲ್ಲಿ ಕೆಲವರು ಮನೆಯ ಕೈತೋಟದಲ್ಲಿ ಸಹ ಕೆಲಸ ಮಾಡುತ್ತಾರೆ. ಅದು ಕೃಷಿ ತರಬೇತಿಯ ಮುಂದುವರೆದ ಭಾಗವಾಗಿರುತ್ತದೆ’ ಎಂದು ಅವರು ಹೇಳುತ್ತಾರೆ. ‘ಶಾಲೆಯಲ್ಲಿ ಕೃಷಿ ಮಾಡುವುದು ನಮಗೆಲ್ಲಾ ತುಂಬಾ ಖುಷಿ. ಇದರಿಂದಾಗಿ ಕೃಷಿಯ ಬಗ್ಗೆ ನನಗೆ ಆಸಕ್ತಿ ಮೂಡಿದೆ. ನಮ್ಮ ಜಮೀನಿನಲ್ಲಿ ಮುಂದೆ ವೈಜ್ಞಾನಿಕ ಕೃಷಿ ಮಾಡುವ ಇರಾದೆ ಇದೆ’ ಎಂದು ಹತ್ತನೇ ತರಗತಿಯ ಪ್ರಜ್ವಲ್‌ ಹೇಳುತ್ತಾರೆ.

‘ಕೃಷಿ ತರಬೇತಿ ಪಡೆಯುತ್ತಿರುವುದರಿಂದ ಲಾಭವಾಗಿದೆ. ಮನೆಯಲ್ಲೂ ಹರಿವೆ, ಬಸಳೆ ಸೊಪ್ಪು ಬೆಳೆಸುತ್ತಿದ್ದೇವೆ’ ಎನ್ನುತ್ತಾರೆ ಎಂಟನೇ ತರಗತಿಯ ಸಮರ್ಥ ಮತ್ತು 10ನೇ ತರಗತಿಯ ಸುಜಿನ್‌. ಕೃಷಿ ಮಾತ್ರವಲ್ಲ ಇನ್ನೂ ಹಲವು ವಿಷಯಗಳಲ್ಲಿ ಈ ಶಾಲೆ ಮಾದರಿಯಾಗಿದೆ. ಶಾಲೆಯ ನೋಟಿಸ್‌ ಬೋರ್ಡ್‌ನಲ್ಲಿ ಪತ್ರಿಕೆಯಲ್ಲಿ ಬಂದ ಸುದ್ದಿ ಬರೆಯುವುದನ್ನು ನೋಡಿದ್ದೇವೆ.

ಆದರೆ ಇಲ್ಲಿ ಪ್ರತಿ ತರಗತಿಯಲ್ಲಿ ಆ ದಿನದ ಸುದ್ದಿಯನ್ನು ಬರೆಯಬೇಕು. ಒಂದೊಂದು ದಿನ ಒಬ್ಬೊಬ್ಬರು ಈ ಜವಾಬ್ದಾರಿ ವಹಿಸಿಕೊಳ್ಳಬೇಕು. ಸುದ್ದಿ ಬರೆದ ವಿದ್ಯಾರ್ಥಿ ಆ ದಿನ ತರಗತಿಯ ಶಿಸ್ತು ಕಾಪಾಡುವ ಕೆಲಸವನ್ನೂ (ಲೀಡರ್‌) ಮಾಡಬೇಕು. ಗಾಯನ, ನೃತ್ಯ ಮುಂತಾದ ಪಠ್ಯೇತರ ಚಟುವಟಿಕೆಗಳನ್ನೂ ಮುತುವರ್ಜಿಯಿಂದ ಆಯೋಜಿಸಲಾಗುತ್ತದೆ.

ಶಿಕ್ಷಣ ಪ್ರಮಾಣ ಪತ್ರ ಪಡೆಯುವುದು ಮಾತ್ರವಲ್ಲ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು ಎಂಬ ತತ್ವವನ್ನು ಕೋಟ ಶಾಲೆಯಲ್ಲಿ ಅಕ್ಷರಶಃ ಪಾಲಿಸಲಾಗುತ್ತಿದೆ. ಅದರಲ್ಲೂ ಕೃಷಿಗೆ ಮಹತ್ವ ನೀಡುವ ಮೂಲಕ ಈ ಶಾಲೆ ಅನನ್ಯ ಎನಿಸಿದೆ.

***
ಬೆಳೆವ ಸಿರಿ
ಕೃಷಿ ಎಂದರೆ ಅಸಡ್ಡೆ ತೋರುವ ಈ ಕಾಲದಲ್ಲಿ ಓದಿನೊಂದಿಗೆ ಮಣ್ಣಿನ ಪಾಠವನ್ನೂ ಹೇಳಿಕೊಡುತ್ತಿವೆ ಕೆಲ ಶಾಲೆಗಳು. ಈ ಮೂಲಕ ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸುವುದು ಅಲ್ಲದೆ ಪ್ರಕೃತಿಯೆಡೆಗೆ ಅವರೆದೆಯಲ್ಲೂ ಪ್ರೀತಿ ಚಿಗುರಿಸುವ ಸಣ್ಣ ಪ್ರಯತ್ನ ಮಾಡುತ್ತಿವೆ.

Write A Comment