ಬ್ಯಾಂಗ್ಲೋರ್ ಈಗ ಬೆಂಗಳೂರು ಆಗಿ ಬದಲಾಗಿದೆ. ಕೇವಲ ಹೆಸರು ಬದಲಾವಣೆ ಮಾತ್ರವಲ್ಲ ನಗರ ವಿಸ್ತಾರದಲ್ಲೂ ಪರಿವರ್ತನೆಯಾಗಿದೆ. ರಸ್ತೆಯ ಸಂಪರ್ಕದ ಸುಧಾರಣೆ, ಹೊಸ ಕಚೇರಿ ಕೇಂದ್ರಗಳು, ಶಾಲಾ ಕ್ಯಾಂಪಸ್, ರಿಕ್ರೇಯೆಷನ್ ಸೆಂಟರ್, ಮನರಂಜನಾ ಕೇಂದ್ರಗಳು, ಆರೋಗ್ಯ ಸೇವೆ, ಹಾಸ್ಪಿಟಾಲಿಟಿ ಮುಂತಾದ ಸೌಕರ್ಯಗಳಿಂದಾಗಿ ಉಪ ನಗರಗಳು ಕಂಗೊಳಿಸುತ್ತಿವೆ. ಹೀಗಾಗಿ ಅಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗೆ ದಿನೇ ದಿನೇ ವೇಗದ ಪ್ರಗತಿ ಕಾಣುತ್ತಿದೆ.
ಉತ್ತರ ಬೆಂಗಳೂರು : ನಗರದ ಉತ್ತರ ಭಾಗ ಬಹುತೇಕ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಲೇ ಸಾಗಿತ್ತು. ಆದರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಘೋಷಣೆ ಮತ್ತು ಕಾರ್ಯಾರಂಭದ ಬಳಿಕ ಅದು ಕೂಡ ಬೆಳೆಯಲು ಆರಂಭಿಸಿತು. ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಜಾಲ, ಬಿನ್ನಮಂಗಲ ಮತ್ತು ಬೆಗಲೂರು ನೋಡು ನೋಡುತ್ತಲೇ ರಿಯಾಲ್ಟಿ ಕ್ಷೇತ್ರದಲ್ಲಿ ನಾಗಾಲೋಟಕ್ಕೆ ಆರಂಭಿಸಿತು.
ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಕ್ಕಾಗಿ ಆಯ್ಕೆ ಮಾಡದ ಕೂಡಲೇ ದೇವನಹಳ್ಳಿಯಲ್ಲಿ ಅಭಿವೃದ್ಧಿಯ ಶಕೆ ಆರಂಭವಾಯಿತು. ನಗರದಿಂದ 42 ಕಿ.ಮೀ. ದೂರದಲ್ಲಿದ್ದರೂ, ಸಿಗ್ನಲ್ ಫ್ರೀ ಕಾರಿಡಾರ್‌ನಿಂದಾಗಿ ವಸತಿ ಮತ್ತು ಹಾಸ್ಪಿಟಾಲಿಟಿ ಕ್ಷೇತ್ರದ ವೇಗದ ಪ್ರಗತಿ ಕಾಣಲಾರಂಭಿಸಿತು. ಆರಂಭದಲ್ಲಿ ಕೆಲವು ಹಾಲಿಡೇ ರೆಸಾರ್ಟ್ ಮತ್ತು ಖಾಸಗಿ ಕ್ಲಬ್‌ಗಳಿಗೆ ಸೀಮಿತವಾಗಿದ್ದ ಈ ಪ್ರದೇಶ ರಜಾ ದಿನಗಳಲ್ಲಿ ನಗರದ ಜಂಜಾಟದಿಂದ ದೂರವಿರುವ ಸ್ಥಳ ಮಾತ್ರವಾಗಿತ್ತು. ಆದರೆ ಎಕ್ಸ್‌ಪ್ರೆಸ್ ವೇ ನಿರ್ಮಾಣವಾದ ಬಳಿಕ ರಸ್ತೆಯ ಇಕ್ಕೆಡೆಗಳಲ್ಲಿ ದಾಬಾ, ರೆಸ್ಟೋರೆಂಟ್‌ಗಳು ತಲೆಯೆತ್ತಿದವು. ಬಳಿಕ ವಸತಿ ಪ್ರದೇಶಗಳ ಅಭಿವೃದ್ಧಿಯಾಗಿ ಅಲ್ಲಿ ವಾಸ್ತವ್ಯ ಹೂಡುವವರ ಅವಶ್ಯಕತೆಗಾಗಿ ಮನರಂಜನೆ, ರಿಕ್ರಿಯೇಷನ್ ಸೆಂಟರ್‌ಗಳು ಕೂಡ ಆರಂಭವಾದವು. ಈಗ ಲುಂಬಿನಿ ಗಾರ್ಡನ್‌ನಲ್ಲಿ ಬೋಟಿಂಗ್ ಮಾಡುವ ಅವಕಾಶ, ನಂದಿ ಬೆಟ್ಟಕ್ಕೆ ಜಾಲಿ ರೈಡ್ ಕೂಡ ಆರಂಭವಾಯಿತು. ಹಲವಾರು ಬಡಾವಣೆಗಳು ಕೂಡ ಇಲ್ಲಿ ಆರಂಭವಾಯಿತು.
ದಕ್ಷಿಣ ಬೆಂಗಳೂರು : ಕೋರಮಂಗಲಕ್ಕೆ ಸಾಫ್ಟ್‌ವೇರ್ ಟೆಕ್ನಾಲಜಿ ಬೆಡ್ ಎಂಬ ಹೆಸರಿದೆ. ಇದಕ್ಕೆ ಕಾರಣ, ಹಲವಾರು ಸ್ಟಾರ್ಟ್‌ಅಪ್‌ಗಳು, ಹೊರಗುತ್ತಿಗೆ ಕಚೇರಿಗಳು ಇಲ್ಲಿ ಮನೆ ಮಾಡಿರುವುದು. ಈಗ ದಕ್ಷಿಣ ಬೆಂಗಳೂರು ಇಲೆಕ್ಟ್ರಾನಿಕ್ ಸಿಟಿಯವರೆಗೆ ವಿಸ್ತರಣೆಯಾಗಿದ್ದು, ಐಟಿ ಮತ್ತು ಬಯೋಟೆಕ್ನಾಲಜಿ ಕ್ಯಾಂಪಸ್‌ಗಳ ಸಮೂಹವೇ ಇಲ್ಲಿದೆ. ಇನ್ನು ಬೊಮ್ಮನಹಳ್ಳಿಯತ್ತ ನೋಡಿದರೆ ಪ್ರಿಟಿಂಗ್, ಪ್ಲೈವುಡ್, ಗ್ರಾನೈಟ್ ಮತ್ತು ಇತರ ಉತ್ಪಾದನಾ ಕೈಗಾರಿಕೆಗಳು ಇಲ್ಲಿವೆ. ಬೊಮ್ಮಸಂದ್ರ, ಅತ್ತಿಬೆಲೆ, ಹೊಸ ರಸ್ತೆ, ಹೊಸೂರು ರಸ್ತೆಗಳ ಇಕ್ಕೆಡೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯಿಂದ ರಿಯಾಲ್ಟಿ ಕ್ಷೇತ್ರ ಪ್ರಗತಿಯ ದಾಪುಗಾಲು ಹಾಕುತ್ತಿದೆ.
ಸೆಂಟ್ರಲ್ ಸಿಲ್ಕ್ ಬೌರ್ಡ್ ಜಂಕ್ಷನ್‌ನಿಂದ ಇಲೆಕ್ಟ್ರಾನಿಕ್ ಸಿಟಿಯವರೆಗೆ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾದ ಬಳಿಕ ಟ್ರಾಫಿಕ್ ಸಮಸ್ಯೆಯೂ ನಿವಾರಣೆಯಾಯಿತು. ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಗಳು, ಅತ್ಯಾಧುನಿಕ ಆಸ್ಪತ್ರೆಗಳು ವಸತಿ ಮತ್ತು ಬಾಡಿಗೆ ಮನೆಗಳ ಕ್ಷೇತ್ರದ ಪ್ರಗತಿಗೆ ಕಾರಣವಾಗಿದೆ. ಅಟೋಮೊಬೈಲ್ ಶೋರೂಮ್, ಅಂತಾರಾಷ್ಟ್ರೀಯ ಮಟ್ಟದ ಹೊಟೇಲ್, ರೆಸಾರ್ಟ್, ಐಟಿ ಕ್ಯಾಂಪಸ್ ಮತ್ತು ಮಾಲ್‌ಗಳು ಕೂಡ ಇಲ್ಲಿ ಸಾಕಷ್ಟಿವೆ.
ದಕ್ಷಿಣ ಭಾಗದಲ್ಲಿ ಈಗ ಸಾಕಷ್ಟು ಸುದ್ದಿಯಲ್ಲಿರುವುದು ಸರ್ಜಾಪುರ ರಸ್ತೆ. ಹೈಎಂಡ್ ಮನೆ, ವಿಲ್ಲಾಗಳು ಇಲ್ಲಿವೆ. ದೊಡ್ಡ ಐಟಿ ಕ್ಯಾಂಪಸ್, ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು ಇಲ್ಲಿರುವುದು ಅದಕ್ಕೆ ಕಾರಣ.
ಪೂರ್ವ ಬೆಂಗಳೂರು : 1998ರಲ್ಲಿ ಏಷ್ಯಾದಲ್ಲೇ ಮೊದಲ ಬಾರಿಗೆ ಐಟಿ ಪಾರ್ಕ್ ಬೆಂಗಳೂರಿನಲ್ಲಿ ಆರಂಭವಾಯಿತು. ಬಳಿಕ ಸಿಲಿಕಾನ್ ಸಿಟಿ ಎಂಬ ಅನ್ವರ್ಥನಾಮವನ್ನೂ ತನ್ನ ಜೊತೆಗೆ ಸೇರಿಸಿಕೊಂಡಿತು. ಉದ್ಯೋಗಾವಕಾಶ ಸೃಷ್ಟಿಯಾದ ಹಿನ್ನೆಲೆಯಲ್ಲಿ ವಲಸಿಗರ ಪ್ರಮಾಣ ಹೆಚ್ಚಿತು. ಅದಕ್ಕೆ ತಕ್ಕಂತೆ ಅವಶ್ಯಕ ಮೂಲಸೌಕರ್ಯಗಳನ್ನೂ ಒದಗಿಸಿತು. ವೈಟ್‌ಫೀಲ್ಡ್‌ನಂತಹ ಪ್ರದೇಶಗಳಲ್ಲಿ ವಿಶ್ವ ಪರ್ಯಟನದ ಜೀವನ ಶೈಲಿ ರೂಢಿಸಿಕೊಂಡಿರುವ ಇಲ್ಲಿನ ಜನತೆಗೆ ಬೇಕಾದ ಲಗ್ಷುರಿ ಮನೆಗಳ ನಿರ್ಮಾಣವಾಯಿತು.
ಮಾರತ್‌ಹಳ್ಳಿ, ಹಳೆ ಮದ್ರಾಸ್‌ರಸ್ತೆ, ಮಹದೇವಪುರ, ಕಾಡುಗೋಡಿ ಮತ್ತು ವರ್ತೂರು ನಿಧಾನವಾಗಿ ಸ್ವಾವಲಂಬಿ ಪ್ರದೇಶಗಳಾಗಿ ಮಾರ್ಪಟ್ಟವು. ಹಿಂದೆ ಹೊರವಲಯದ ಹಣೆಪಟ್ಟಿ ಹೊತ್ತಿದ್ದ ಈ ಪ್ರದೇಶಗಳು ಈಗ ನಗರದ ಭಾಗವಾಗಿ ಪರಿಗಣಿತವಾಗಿದೆ.
ಪಶ್ಚಿಮ ಬೆಂಗಳೂರು : ಇದು ಒಂದು ರೀತಿಯಲ್ಲಿ ಬೆಂಗಳೂರಿನ ಸಂಸ್ಕೃತಿ, ಪರಂಪರೆಯನ್ನು ಪ್ರತಿನಿಧಿಸುವ ಪ್ರದೇಶ. ಮಲ್ಲೇಶ್ವರಂ ಅದರ ಕೇಂದ್ರ. ಹಸಿರಿನಿಂದ ತುಂಬಿರುವ ಈ ಪ್ರದೇಶವು ಸಂಗೀತ, ನಾಟಕ, ನೃತ್ಯ ಮತ್ತು ಭಾಷೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಈಗಲೂ ಪ್ರಸಿದ್ಧ. ಮೆಟ್ರೊ ರೈಲು ಕಾರ್ಯಾರಂಭ ಮಾಡಿದ ಬಳಿಕ ಮತ್ತಷ್ಟು ಕಳೆ ಈ ಪ್ರದೇಶಕ್ಕೆ ಬಂದಿದೆ. ಸಂಪಿಗೆ ಮತ್ತು ಮರ್ಗೋಸಾ ರಸ್ತೆಗಳಲ್ಲಿ ಶಾಪಿಂಗ್, ತಿಂಡಿ-ತಿನಸು, ಮನರಂಜನೆ ಹೀಗೆ ಏನಕ್ಕೂ ಇಲ್ಲಿ ಕೊರತೆಯಿಲ್ಲ. ಸಮೀಪದಲ್ಲೇ ರಾಜಾಜಿನಗರ, ಗಾಂಧಿ ನಗರ, ಶೇಷಾದ್ರಿಪುರ ಇರುವುದು ಇಲ್ಲಿ ಪ್ರಾಪರ್ಟಿ ಬೇಡಿಕೆ ಏರಲು ಕಾರಣವಾಗಿದೆ.