ಹಲವು ಭಾಗ್ಯಗಳ ಮೂಲಕ ಸರ್ಕಾರದ ಖಜಾನೆ ಬರಿದಾಗಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಸಾರಾಯಿ ಭಾಗ್ಯದ ಮೂಲಕ ಸರ್ಕಾರಕ್ಕೆ ಆದಾಯ ತರಲು ಮುಂದಾಗಿದ್ದಾರೆ.
ಸಾರಾಯಿ ಮಾರಾಟ ಪುನರಾರಂಭ ಅಥವಾ ಮದ್ಯದ ವಹಿವಾಟಿಗೆ ಹೊಸ ಪರವಾನಗಿ ನೀಡಲು ಸರ್ಕಾರ ಮುಕ್ತವಾಗಿದ್ದು, ಸದನ ಒಪ್ಪಿಗೆ ನೀಡಿದರೆ ಈ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಈ ಕುರಿತು ಮಾತನಾಡಿದ ಸಿದ್ದರಾಮಯ್ಯ 2007 ರಲ್ಲಿ ಸಾರಾಯಿಯನ್ನು ಎಲ್ಲರೂ ಕುಡಿದು ಕುಡಿದು ಹಾಳಾಗುತ್ತಿದ್ದು, ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರ ಸಾರಾಯಿ ಮೇಲೆ ನಿಷೇಧ ವಿಧಿಸಿತು. ಆದರೆ, ಕುಡಿಯುವುದು ಕಡಿಮೆ ಆಗಲಿಲ್ಲ. ಅಷ್ಟೇ ಅಲ್ಲ ಜನ ಹೆಚ್ಚು ಹಣ ತೆತ್ತು ಕುಡಿಯುತ್ತಿದ್ದು ಅದಕ್ಕಾಗಿ ಅಗ್ಗದ ಮದ್ಯ ಕೊಡುವುದು ಸಾಧ್ಯವಿಲ್ಲದಿದ್ದರೂ ಸಾರಾಯಿ ಮಾರಾಟ ಪುನರಾರಂಭಕ್ಕೆ ಅವಕಾಶ ನೀಡಬಹುದು ಎನ್ನುವ ಮೂಲಕ ಸಾರಾಯಿ ಆರಂಭಕ್ಕೆ ಹಸಿರು ನಿಶಾನೆ ತೋರಿದ್ದಾರೆ.