ಕರ್ನಾಟಕ

ಜೀಕು ಪೀಠೋಪಕರಣದ ಗಮ್ಮತ್ತು

Pinterest LinkedIn Tumblr

psmec27swing1

-ಕೆ.ಎಸ್. ಸೋಮೇಶ್ವರ
ಪೀಠೋಪಕರಣ ಪ್ರತಿ ಮನೆಯ ಬಹು ಮುಖ್ಯ ಅಗತ್ಯ. ಇವತ್ತು ಮಾರುಕಟ್ಟೆಯಲ್ಲಿ ಮನೆಯನ್ನು ಅಲಂಕರಿಸಲೆಂದೇ ಹಲವು ಬಗೆಯ ಪೀಠೋಪಕರಣಗಳಿವೆ. ಪ್ರಾಚೀನ ಕಾಲದ ಕಲಾವಂತಿಕೆಯುಳ್ಳವುಗಳಿಂದ ಹಿಡಿದು ಹೊಸತನವನ್ನು ಬಿಂಬಿಸುವ ಪೀಠೋಪಕರಣದವರೆಗೆ ವಿವಿಧ ಆಯ್ಕೆಗಳು ಗ್ರಾಹಕರಿಗೆ ಉಂಟು. ಸ್ವಿಂಗ್ ಅಥವಾ ಜೀಕುವ ಪೀಠೋಪಕರಣಕ್ಕೂ ಈಗ ಆಧುನಿಕ ಸ್ಪರ್ಶ ಸಿಕ್ಕಿದೆ.

ಹಿಂದೆ ಉಯ್ಯಾಲೆ ಇರುವ ಮನೆ ದೊಡ್ಡದೇ ಆಗಿರುತ್ತಿತ್ತು. ಸುಂದರವಾದ ಕೆತ್ತನೆಯುಳ್ಳ ಉಯ್ಯಾಲೆಗಳನ್ನು ಎರಡೂ ಬದಿಯಲ್ಲಿ ಬಲವಾದ ಚೈನುಗಳಿಂದ ನೇತುಬಿಡಲಾಗುತ್ತಿತ್ತು. ಮಾಳಿಗೆಗೆ ಭದ್ರವಾಗಿ ಕುಣಿಕೆಗಳನ್ನು ಹಾಕುವುದೂ ಒಂದು ಕಸುಬುದಾರಿಕೆಯೇ. ಈ ದಿನಮಾನದಲ್ಲಿ ನಗರಗಳಲ್ಲಿ ಅಷ್ಟು ದೊಡ್ಡ ಮನೆಗಳನ್ನು ನಿರ್ಮಿಸುವುದು ಹಣವಿದ್ದವರ ಪಾಲಿಗೂ ಕಷ್ಟವೇ ಸರಿ. ಮನೆ ವಿಶಾಲವಾಗಿ ಇಲ್ಲದಿದ್ದರೂ ಲಭ್ಯ ಅವಕಾಶದಲ್ಲಿಯೇ ಉಯ್ಯಾಲೆಗೆ ಅಥವಾ ತೂಗುಮಂಚಕ್ಕೆ ಪರ್ಯಾಯವಾದ ಜೀಕು ಪೀಠೋಪಕರಣಗಳನ್ನು ಅನೇಕರು ತಂತಮ್ಮ ಮನೆಗಳಿಗೆ ತರುತ್ತಿದ್ದಾರೆ. ವಿವಿಧ ಅಳತೆಗಳು ಹಾಗೂ ಬಗೆಗಳಲ್ಲಿ ಅವು ಮಾರುಕಟ್ಟೆಯಲ್ಲಿ ಲಭ್ಯ. ಹಿಂದೆ ಮರದ ದೊಡ್ಡ ಹಲಗೆಗಳಿಂದ ಮಾಡಿದ ಉಯ್ಯಾಲೆಗಳಷ್ಟೆ ಸಿಗುತ್ತಿದ್ದುದು.

ಈಗ ಎರಡು ಸ್ತಂಭಗಳನ್ನು ಆಧಾರವಾಗಿಸಿಕೊಂಡ, ಸುಂದರ ಕೆತ್ತನೆ ಇರುವ ಮರದ ಉಯ್ಯಾಲೆಗಳನ್ನು ಅನೇಕರು ಮನೆಗಳಿಗೆ ಕೊಂಡೊಯ್ಯುತ್ತಿದ್ದಾರೆ. ನೇತುಬಿಡುವ ಅಗತ್ಯವಿಲ್ಲದ ಇವು ಸುರಕ್ಷೆಯ ದೃಷ್ಟಿಯಿಂದ ಗ್ರಾಹಕರ ಆಯ್ಕೆಯಾಗಿವೆ. ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ನಡೆಯುವ ಕರಕುಶಲ ಪೀಠೋಪಕರಣ ಮೇಳಗಳಲ್ಲಿ ಇಂಥ ಉಯ್ಯಾಲೆ ಅಥವಾ ಜೀಕು ಪೀಠೋಪಕರಣವನ್ನು ಕಾಣಬಹುದು.

ಈ ಕಾಲದ ಟ್ರೆಂಡ್
ಎರಡೂ ಬದಿಯಲ್ಲಿ ಉಕ್ಕಿನ ಆಧಾರ ಇರುವ ಸೋಫಾ ತರಹದ ಜೀಕು ಪೀಠೋಪಕರಣ ಈ ಗೊತ್ತಿನ ಟ್ರೆಂಡ್. ಇಂಗ್ಲಿಷ್‌ನ ಎ ಆಕಾರದ ಫ್ರೇಮ್‌ಗಳೇ ಆಧಾರಗಳಾಗಿ ಇರುತ್ತವೆ. ಎರಡು ಅಥವಾ ಮೂರು ಜನ ಕುಳಿತುಕೊಳ್ಳುವಂತೆ ಇವನ್ನು ಸಿದ್ಧಪಡಿಸಿರುತ್ತಾರೆ. ಅತಿ ಚಿಕ್ಕ ಆಕಾರಗಳಲ್ಲಿ ಒಬ್ಬರು ದೊಡ್ಡವರು ಅಥವಾ ಒಂದು ಮಗು ಕುಳಿತುಕೊಳ್ಳುವಂತೆ ಅಗತ್ಯಕ್ಕೆ ತಕ್ಕಂತೆ ಈ ಜೀಕು ಪೀಠೋಪಕರಣ ಸಿದ್ಧಪಡಿಸಿಕೊಡುವವರೂ ಇದ್ದಾರೆ. ಮನೆಯಲ್ಲಿ ಕಡಿಮೆ ವಿಸ್ತೀರ್ಣದ ಜಾಗದಲ್ಲಿ ಇಡಲು ತಕ್ಕಂತೆ ಇವನ್ನು ಗ್ರಾಹಕರ ಅಗತ್ಯ ಮನಗಂಡು ರೂಪಿಸಿಕೊಡುವ ಕಸುಬುದಾರರಿದ್ದಾರೆ. ಬಾಲ್ಕನಿ, ಮನೆ ಮುಂದಿನ ಕೈತೋಟದ ನಡುವಿನ ಹುಲ್ಲುಗಾವಲಿನಲ್ಲಿ ಕೂಡ ಇವನ್ನು ಇಡಬಹುದು. ಇನ್ನು ಕೆಲವರು ಪೀಠೋಪಕರಣವನ್ನು ಪ್ರತ್ಯೇಕ ಚಾವಣಿ ಮೂಲಕ ಕಾಪಾಡಿಕೊಳ್ಳುತ್ತಾರೆ.

ಬಿದಿರಿನಿಂದ ಮಾಡಿದ ಜೀಕು ಪೀಠೋಪಕರಣಕ್ಕೂ ಈ ದಿನಮಾನದಲ್ಲಿ ಬೇಡಿಕೆ ಇದೆ. ತೂಕ ತಾಳಿಕೊಳ್ಳಬಲ್ಲ ಗಟ್ಟಿಯಾದ ಸ್ಪ್ರಿಂಗ್‌ಗೆ ಜೋತುಹಾಕಿದ ಬಿದಿರಿನ ಜೀಕುಕುರ್ಚಿ ಮೇಲೆ ಒಬ್ಬರೇ ಕುಳಿತುಕೊಳ್ಳುವುದು ಅನೇಕರ ಪಾಲಿಗೆ ಸುಖದಾಯಕ. ತೆರೆದ ಬಾಲ್ಕನಿ, ಕೋಣೆ ಎಲ್ಲಿ ಬೇಕಾದರೂ ಇದನ್ನು ನೇತುಹಾಕಬಹುದು. ಅಲಂಕಾರ, ಉಪಯೋಗ ಎರಡೂ ದೃಷ್ಟಿಯಿಂದ ಇದು ಬಹುಜನರ ಆಯ್ಕೆಯಾಗಿದೆ.

ಲೋಹದ ಜೀಕು ಪೀಠೋಪಕರಣವನ್ನು ಕಡಿಮೆ ಬೆಲೆಯಲ್ಲಿಯೇ ಮಾಡಿಸಿ, ಅದನ್ನು ಸೊಗಸಾದ ಕುಷನ್ ಅಥವಾ ಮೆತ್ತೆಯಿಂದ ಅಲಂಕರಿಸುವುದು ಇನ್ನು ಕೆಲವರ ಆಯ್ಕೆ.
ಜೀಕು ಪೀಠೋಪಕರಣದಲ್ಲಿ ಕೂರುವುದರಿಂದ ಯೌವನ ಮರುಕಳಿಸುತ್ತದೆ, ಖುಷಿಯಾಗುತ್ತದೆ ಎಂದು ಅನೇಕರು ಅಭಿಪ್ರಾಯ ಪಡುತ್ತಾರೆ. ಜೀಕು ಪೀಠೋಪಕರಣ ಇವತ್ತಿನ ಮುಖ್ಯ ಅಲಂಕಾರಿಕ ಪರಿಕರವಾಗಿದೆ ಎನ್ನುವ್ಯದಂತೂ ಸತ್ಯ.

Write A Comment