ಹೆಚ್.ಡಿ.ಕೋಟೆ,ಮಾ.27-ತಾಲ್ಲೂಕಿನ ಬಸವನಗಿರಿ ಬಿ ಹಾಡಿ ಹತ್ತಿರ ಕಾಣಿಸಿಕೊಂಡ ಹುಲಿಯನ್ನು ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿದಿದ್ದು, ಸದ್ಯಕ್ಕೆ ಈ ಭಾಗದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ನಾಗರಹೊಳೆ ವನ್ಯಜೀವಿ ವ್ಯಾಪ್ತಿಯ ಮೇಟಿಕುಪ್ಪೆಅರಣ್ಯವಲಯದಿಂದ ಪ್ರಾದೇಶಿಕ ಅರಣ್ಯಕ್ಕೆ ಬಂದಿದ್ದ ಹುಲಿ ಆಗಾಗ ಬಿ ಹಾಡಿ ಬಳಿ ಕಾಣಿಸಿಕೊಂಡು ತೀವ್ರ ಆತಂಕ ಸೃಷ್ಟಿಸಿತ್ತು. ಪ್ರಾದೇಶಿಕ ಅರಣ್ಯದಿಂದ ಸೋಲಾರ್ ದಾಟಿ ಬಸವನಗಿರಿ ಬಿ ಹಾಡಿಗೆ ರಾತ್ರಿ ಸಮಯದಲ್ಲಿ ಬಂದು ಹೋಗುತಿತ್ತು ಇದನ್ನು ಕಂಡ ಹಾಡಿಯ ಗಿರಿಜನರು ಅರಣ್ಯ ಸಿಬ್ಬಂದಿಗೆ ವಿಷಯ ತಿಳಿಸಿದ್ದರು.
ಹೆಬ್ಬಾಳ ಕಾವಲಿ ದಾಟಿಬಂದ ಹುಲಿ ಪೊದೆಯಲ್ಲಿ ಅಡಗಿಕೊಂಡಿತ್ತು. ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಬಹಿರ್ದೆಸೆಗೆ ಬಂದ ಜನರು ಹುಲಿಯ ಘರ್ಜನೆ ಕೇಳಿ ದೌಡಾಯಿಸಿದ್ದಾರೆ. ಗಿರಿಜನ ಯುವಕರಾದ ಆನಂದ, ಗಣೇಶ, ಶಿವಣ್ಣ ಸ್ಥಳದಲ್ಲೆ ಇದ್ದು ಹಾಡಿಯ ಜನರು ನೀರಿನ ಹತ್ತಿರ ಬರದಂತೆ ಎಚ್ಚರಿಕೆ ನೀಡಿದ್ದರು.
ಬಸವನಗಿರಿ ಎ ಹಾಡಿಯಲ್ಲಿ ವಾಸವಿದ್ದ ಲ್ಯಾಂಪ್ಸ್ ಸೋಸೈಟಿ ಅಧ್ಯಕ್ಷ ವಿಜಯಕುಮಾರ್ ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದರು. ಹುಲಿಯ ಮುಂಭಾಗದ ಬಲಗಾಲಿನ ಎರಡು ಕಡೆ ಗಾಯವಾಗಿದ್ದರಿಂದ ಹುಲಿ ಸ್ವಲ್ಪ ನಿತ್ರಾಣವಾಗಿತ್ತು. ಸುಮಾರು 5 ಗಂಟೆಗಳ ಕಾಲ ಎದ್ದು ಓಡಾಡದೇ ಹೊಂಗೆ ಮರದ ಬುಡದ ನೆರಳಿನಲ್ಲಿ ಮಲಗಿತ್ತು. ಹುಲಿ ನೋಡಲು ಜನ ಸಾಗರವೇ ಹರಿದುಬಂದಿತು. ನಿನ್ನೆ ಬೆಳಿಗ್ಗೆ 11.15 ಸಮಯಕ್ಕೆ ಡಾ.ಉಮಾಶಂಕರ್ ಸ್ಥಳಕ್ಕೆ ಬಂದು ಹುಲಿಯ ಚಲನವಲನ ಗಮನಿಸಿ ಮೇಲಾಧಿಕಾರಿಗಳ ಆದೇಶದಂತೆ, 10 ಅಡಿ ಅಂತರದಲ್ಲಿ ಹುಲಿಗೆ ಅರವಳಿಕೆ ಚುಚ್ಚುಮದ್ದು ಹೊಡೆಯಲಾಯಿತು. ಅರಣ್ಯಸಿಬ್ಬಂದಿಗಳಾದ ಜಯಪಾಲ್, ಸಣ್ಣಪ್ಪ, ಮಂಜು ಇವರ ಮೇಲೆ ಹುಲಿ ಎರಗಲು ಮುಂದಾಯಿತು. ಅವರು ಓಡಿ ಹುಲಿ ದಾಳಿಯಿಂದ ತಪ್ಪಿಸಿಕೊಂಡರು. ಚುಚ್ಚು ಮದ್ದು ನೀಡಿದ 20 ನಿಮಿಷದ ನಂತರ ಹುಲಿ ಪ್ರe ತಪ್ಪಿತು. ಸಿಬ್ಬಂದಿ ಹುಲಿಯನ್ನು ಸೆರೆ ಹಿಡಿದು ಮೇಟಿಕುಪ್ಪೆವಲಯಾರಣ್ಯಾಧಿಕಾರಿ ಕಚೇರಿಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡಿದ ನಂತರ ಮೈಸೂರಿಗೆ ಕಳಿಸಲಾಯಿತು.
ಪ್ರಾದೇಶಿಕ ವಲಯಾರಣ್ಯಾಧಿಕಾರಿ ಪುಟ್ಟಸ್ವಾಮಿ, ಮೇಟಿಕುಪ್ಪೆ ಉಪ ವಲಯಾರಣ್ಯಾಧಿಕಾರಿ ಅಕ್ಷಯ್, ನಂದಕುಮಾರ್, ಸಿಬ್ಬಂದಿಗಳಾದ ಶಿವಲಿಂಗೇಗೌಡ, ಜಯಪಾಲ್, ಶಿವಲಿಂಗಯ್ಯ, ನಜೀರ್ ಖಾನ್, ಗಗನ್, ಶ್ರೀಕಾಂತ್, ಲಿಂಗರಾಜು, ನಾಗೇಂದ್ರ, ಜನಾರ್ದನ್, ಬಸವರಾಜು, ಸಮೀರ್ ಅಹಮದ್ ಹಾಗೂ ವಿಶೇಷ ಹುಲಿ ಸಂರಕ್ಷಣಾ ಪಡೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
