ಸಾಲು ಸಾಲು ಹಸಿರಿನ ಸಿರಿಯಿಂದ ಪ್ರಯಾಣಿಕರ ಹೃನ್ಮನ ತಣಿಸುತ್ತಿದ್ದ ಈ ಹೆದ್ದಾರಿ ತುಂಬೆಲ್ಲ ಈಗ ಬರಿ ದೂಳು. ಹಸಿರಿನ ಜಾಗವೆಲ್ಲ ಮಾಯವಾಗಿ ಎಲ್ಲೆಡೆ ಕೆಂಪುಮಯ. ದೂರದೂರದವರೆಗೆ ಬೃಹತ್ ಬೆಟ್ಟಗುಡ್ಡಗಳಿಂದ ಜೀವತುಂಬಿಕೊಂಡಂತೆ ಕಾಣಿಸು ತ್ತಿದ್ದ ಪರಿಸರವೀಗ ಜೀವಕಳೆದುಕೊಂಡು ರಸ್ತೆಯ ಮೇಲೆ ಶವದಂತೆ ಬಿದ್ದಿರುವ ದೃಶ್ಯ ಕಾಣಿಸುತ್ತಿದೆ.
ಇಂಥ ಒಂದು ಶೋಚನೀಯ ಸ್ಥಿತಿ ಕಾಣುತ್ತಿರುವುದು, ಕರಾವಳಿಯ ಜೀವನಾಡಿ ಎನಿಸಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ–17ರಲ್ಲಿ. ಏಕೆಂದರೆ ಅಭಿವೃದ್ಧಿ ಹೆಸರಿನಲ್ಲಿ ಈ ರಸ್ತೆ ಈಗ ಬಹುದೊಡ್ಡ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದೆ. ಇದಕ್ಕೆ ಕಾರಣ ರಸ್ತೆ ವಿಸ್ತರಣೆ. ಹಲವು ರಾಜ್ಯಗಳಲ್ಲಿ ಹಾದು ಹೋಗಿರುವ ಈ ಹೆದ್ದಾರಿ ವಾಹನ ದಟ್ಟಣೆಯಿಂದ ಇತ್ತೀಚೆಗೆ ಕಿರಿದಾಗಿ ಹೋಗಿರುವ ಕಾರಣ, ರಸ್ತೆಯನ್ನು ವಿಸ್ತರಣೆ ಮಾಡುವ ಕಾರ್ಯ ಹಮ್ಮಿಕೊಳ್ಳಲಾಗಿದೆ. ಹಿಂದೆ ಇಲ್ಲಿಯ ಪಶ್ಚಿಮ ಘಟ್ಟದ ಮಡಿಲೊಳಗಿಂದ ಹಾವಿನಂತೆ ಮೆಲ್ಲಗೆ ಹರಿದು ಹೋದ ಹೆದ್ದಾರಿಯ ವಿಸ್ತರಣೆಗೆ ಇಂದು ಅಲ್ಲಲ್ಲಿ ಪರ್ವತಗಳ ರೆಕ್ಕೆಗಳನ್ನೇ ಕತ್ತರಿಸಿ ಹಾಕಲಾಗಿದೆ.
ಹಲವು ದಶಕಗಳಿಂದ ಅನೇಕ ಅಭಿವೃದ್ಧಿ ಯೋಜನೆಗಳನ್ನು ಹಿಮ್ಮೆಟ್ಟಿಸಿದ್ದ ಕರಾವಳಿ ಪ್ರದೇಶದ ( ಉತ್ತರ ಕನ್ನಡ, ಉಡುಪಿ ಜಿಲ್ಲೆಯ ಕೆಲ ಭಾಗ) ಹಾಗೂ ಪಶ್ಚಿಮ ಘಟ್ಟದ ಆವೃತ್ತ ಭಾಗಗಳಲ್ಲಿ ಈಗ ಬೃಹತ್ ಯಂತ್ರಗಳ ಕಿವಿಗಡಚಿಕ್ಕುವ ಸದ್ದು ಆರಂಭ ವಾಗಿದೆ. ಪ್ರಕೃತಿ ಸೌಂದರ್ಯದ ಬೀಡು ಎಂದೇ ಹೆಸರಾದ ಈ ಭಾಗದಲ್ಲೀಗ ಸೌಂದರ್ಯ ಸವಿಯಲು ಹೋದರೆ ಬರಿಯ ನಿರಾಸೆ.
ಶೇ 80 ರಷ್ಟು ಭಾಗ ಅರಣ್ಯ ಪ್ರದೇಶದಿಂದ ಕೂಡಿದೆ ಎಂದು ಹೇಳಲಾಗುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗ ನಿಜಕ್ಕೂ ಅಷ್ಟು ಪ್ರಮಾಣದ ಅರಣ್ಯ ಇದೆಯೇ ಎಂಬುದು ಖಚಿತಗೊಂಡಿಲ್ಲ. ಜಿಲ್ಲೆಗೆ ಯಾವುದೇ ಯೋಜನೆ ಬಂದರೂ ಅವು ಪರಿಸರದ ಕಾರಣ ಹೊತ್ತು ಇಲ್ಲಿಯವರೆಗೆ ವಾಪಸಾಗುತ್ತಿದ್ದವು. ನಾಲ್ಕಾರು ವರ್ಷಗಳಿಂದ ಮನೆಕಟ್ಟುವ ಚಿರೆಕಲ್ಲು (ಕೆಂಪು ಕಲ್ಲು), ಜಲ್ಲಿಕಲ್ಲು, ಮಣ್ಣಿಗಾಗಿ ಇಲ್ಲಿಯ ಜನರು ಪರದಾಡುತ್ತಿದ್ದಾರೆ.
ಏಕೆಂದರೆ ಅರಣ್ಯ ಇಲಾಖೆಯ ಜಾಗದಲ್ಲಿ ಇವುಗಳಿಗೆಲ್ಲ ಅವಕಾಶವೇ ಇಲ್ಲವಾಗಿತ್ತು. ಆದರೀಗ ಕೊಂಕಣ ರೈಲು ಮಾರ್ಗ ಯೋಜನೆ ಮುಗಿದು ಕಾಲು ದಶಕದ ನಂತರ ಮತ್ತೆ ಇಲ್ಲಿಯ ಜನರು ದೊಡ್ಡ ದೊಡ್ಡ ಮರಗಳು, ಪರ್ವತ ಗಳು ಧರೆಗುರುಳುತ್ತಿರು ವುದನ್ನು ನೋಡುತ್ತಿದ್ದಾರೆ.
ಅಪರೂಪಕ್ಕೆ ಊರಿಗೆ ಬಂದವರು ತಮ್ಮ ಮನೆ ಸಮೀಪ ಹಾದು ಹೋದ ಹೆದ್ದಾರಿ ಬದಿಯ ಗುಡ್ಡ, ಮರುಗಳು ಮರೆಯಾದದ್ದನ್ನು ನೋಡಿ ಬೆರಗಾಗು ವಂತಾಗಿದೆ. ಹೆದ್ದಾರಿ ವಿಸ್ತರಣೆಯಲ್ಲಿ ಎಷ್ಟೋ ಜನರು ತಮ್ಮ ಮನೆ, ಆಸ್ತಿ ಕಳೆದುಕೊಳ್ಳುತ್ತಿದ್ದಾರೆ ನಿಜ. ಆದರೆ ಪ್ರಕೃತಿ ಸಂಪತ್ತಿನಿಂದಲೇ ಹೆಸರು ಮಾಡಿದ್ದ ಈ ಪ್ರದೇಶ ಮಾತ್ರ ಈಗ ರೆಕ್ಕೆ ಕತ್ತರಿಸಿಕೊಳ್ಳುತ್ತಿರುವ ಹಕ್ಕಿಯಂತೆ ಕಾಣುತ್ತಿದೆ.