ಕಾಲೇಜು ವ್ಯಾಸಂಗ ಮಾಡುತ್ತಿದ್ದ ತನ್ನ 20 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ ತಂದೆಯೊಬ್ಬನಿಗೆ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ರೂ. ದಂಡ ವಿಧಿಸಿದೆ.
ಆದರೆ ತೀರ್ಪು ಹೊರ ಬೀಳುತ್ತಿದ್ದಂತೆಯೇ ಈ ಕುರಿತು ಪ್ರತಿಕ್ರಿಯಿಸಿರುವ ಆತನ ಪತ್ನಿ, ತಮ್ಮ ಪತಿ ಅಮಾಯಕನಾಗಿದ್ದು, ಮಗಳು ತನ್ನ ಪ್ರೇಮಿಯೊಂದಿಗೆ ಏಕಾಂತದಲ್ಲಿದ್ದ ವೇಳೆ ಸಿಕ್ಕಿ ಬಿದ್ದಿದ್ದು ಅದನ್ನು ನೋಡಿ ಆಕೆ ಮತ್ತವಳ ಪ್ರಿಯಕರನನ್ನು ಪತಿ ಥಳಿಸಿದ್ದರು. ಇದರ ಸೇಡು ತೀರಿಸಿಕೊಳ್ಳಲು ತಂದೆ ಮೇಲೆ ಇಂತಹ ಆರೋಪ ಹೊರೆಸಿದ್ದಾಳೆ ಎಂದು ಆರೋಪಿಸಿದ್ದಾರೆ.
ಮಗಳು ಮಾತ್ರ ತಾನು ಮಾಡಿದ್ದ ಆರೋಪದಲ್ಲಿ ಯಾವುದೇ ಸುಳ್ಳಿಲ್ಲ. ತಾನು ಆರನೇ ತರಗತಿಯಲ್ಲಿದ್ದಾಗಿನಿಂದಲೂ ತನ್ನ ಮೇಲೆ ತಂದೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಅಲ್ಲದೇ ಕಾಲೇಜಿನಿಂದ ಕರೆದುಕೊಂಡು ಬರುವ ನೆಪದಲ್ಲಿ ಬರುತ್ತಿದ್ದ ತಂದೆ, ಕಾಡಿನಲ್ಲಿ ತನ್ನ ಮೇಲೆ ಅತ್ಯಾಚಾರವೆಸಗುತ್ತಿದ್ದರೆಂದು ತಿಳಿಸಿದ್ದಾಳೆ. ಪ್ರಸ್ತುತ ತನ್ನ ಮನೆ ತೊರೆದಿರುವ ಈ ಯುವತಿ ಶಿಕ್ಷಕಿಯೊಬ್ಬರ ಆಶ್ರಯದಲ್ಲಿದ್ದಾಳೆ.