ಕರ್ನಾಟಕ

ಸಾವಿಗೆ ಮುನ್ನ ರೋಹಿಣಿ ಸಿಂಧೂರಿಗೆ ವಿದಾಯದ ಸಂದೇಶ: ‘ನೀನಿಲ್ಲದೆ ಬದುಕು ಅಸಾಧ್ಯ’ ಎಂದಿದ್ದ ರವಿ; ಇಡೀ ಘಟನೆ ದುರದೃಷ್ಟಕರ: ರೋಹಿಣಿ

Pinterest LinkedIn Tumblr

ravi

ಬೆಂಗಳೂರು: ಐಎಎಸ್‌ ಅಧಿಕಾರಿ ಡಿ.ಕೆ.ರವಿ ಅವರು ಸಾಯುವುದಕ್ಕೂ ಮುನ್ನ ಸಹೋದ್ಯೋಗಿ ರೋಹಿಣಿ ಸಿಂಧೂರಿ ದಾಸರಿ ಅವರಿಗೆ ಕಳುಹಿಸಿದ್ದ ವಾಟ್ಸ್‌ ಆ್ಯಪ್‌ ಸಂದೇಶಗಳು ಬುಧವಾರ   ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಕೊನೆಯ ಸಂದೇಶದಲ್ಲಿ ರೋಹಿಣಿ ಅವರ ಬಳಿ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿರುವ ರವಿ, ‘ನೀನಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ’ ಎಂಬ ಖಚಿತ ನುಡಿಗಳನ್ನು  ದಾಖಲಿಸಿದ್ದಾರೆ.

ಮಾರ್ಚ್‌ 15ರಂದು  ಸಂಜೆ 4.25ಕ್ಕೆ ಕಳಿಸಿದ ಸಂದೇಶದಲ್ಲಿ, ‘ಅಹಿತಕರ ನಿರ್ಧಾರವೊಂದನ್ನು ತೆಗೆದುಕೊಳ್ಳಲು ನಿರ್ಧರಿಸಿರುವ  ದುರದೃಷ್ಟದ  ದಿನವಿದು. ನೀನು ನನ್ನನ್ನು ಮುನ್ನಡೆಸುತ್ತೀಯ ಎಂದು ನಂಬಿದ್ದೇನೆ. ನಿನ್ನ ಕರೆ ಮತ್ತು ಆಹ್ವಾನಕ್ಕಾಗಿ ರಾತ್ರಿ 9 ಗಂಟೆಯವರೆಗೂ ಕಾಯುತ್ತೇನೆ’ ಎಂದು ಹೇಳಿ ಪುನಃ ಸಂಜೆ 5.20ಕ್ಕೆ ಮತ್ತೊಂದು ಸಂದೇಶ ಕಳುಹಿಸಿ, ‘ನನಗೆ ಕರೆ ಮಾಡಬೇಡ ಅಥವಾ ಮಾತನಾಡಿಸಲು ಪ್ರಯತ್ನಿಸಬೇಡ. ನನ್ನ ಪ್ರೀತಿಯನ್ನು ಯಾರಿಗೂ ಹೇಳಬೇಡ. ಒಂದು ವೇಳೆ ಮರುಜನ್ಮವಿದ್ದರೆ ಸೇರೋಣ. ನಾನು ನಿರ್ಗಮಿಸುತ್ತಿದ್ದೇನೆ’ ಎಂದಿದ್ದಾರೆ.

ರವಿ ಅವರ ಸಂದೇಶಗಳಿಗೆ ರಾತ್ರಿ 7 ಗಂಟೆಗೆ ಉತ್ತರಿಸಿರುವ ರೋಹಿಣಿ ಸಿಂಧೂರಿ, ‘ಏನಿದು? ಅವಿವೇಕಿಯಂತೆ ವರ್ತಿಸಬೇಡ. ನಾನು ನಿನ್ನ ಜತೆ ಮಾತನಾಡುವುದು ಬೇಡ ಎನ್ನುವುದಾದರೆ ಸ್ಪಷ್ಟವಾಗಿ ಹೇಳಿಬಿಡು. ನಾನು ನಿನಗೆ  ಕರೆ ಮಾಡುವುದಿಲ್ಲ. ಏನಿದು ಹುಚ್ಚಾಟ’ ಎಂದು ಪ್ರಶ್ನಿಸಿದ್ದಾರೆ.

ಮರುದಿನ ಅಂದರೆ ಮಾ.16ರಂದು ಬೆಳಿಗ್ಗೆ 9.50ಕ್ಕೆ  ರೋಹಿಣಿಗೆ ಕಳುಹಿಸಿದ ಕೊನೆಯ ಸಂದೇಶದಲ್ಲಿ ರವಿ ಸಾಯುವ ಕಾರಣವನ್ನು ವಿವರಿಸಿದ್ದಾರೆ.
ಪತ್ರವನ್ನು ‘ಲೇ ಬೇಬಿ’ ಎಂದು ಆರಂಭಿಸಿದ್ದಾರೆ. ‘ಬಹುಶಃ ನನ್ನಿಂದ ನಿನಗಿದು ಕೊನೆಯ ಸಂದೇಶ. ನನ್ನ ಮನಸ್ಸು ಏನೆಂದು ಸ್ಪಷ್ಟಪಡಿಸಲಿಕ್ಕಾಗಿಯೇ ನಾನಿದನ್ನು ಬರೆಯುತ್ತಿದ್ದೇನೆ. ನಾನು ಸ್ವಾರ್ಥಿ ಅಲ್ಲ. ಸುಳ್ಳುಗಾರನಲ್ಲ. ಕಪಟಿಯೂ ಅಲ್ಲ. ನನ್ನ ಜೀವನದುದ್ದಕ್ಕೂ ಸಾಧನೆ ಮತ್ತು ಗುರಿಯ ಕಾರಣಗಳಿಗಾಗಿಯೇ ಬದುಕಿ  ದಂತಕಥೆಯಂತೆ ಬಾಳಿದ್ದೇನೆ.  ನಾನು ಯಾವುದಕ್ಕೂ ತಲೆಕೆಡಿಸಿಕೊಂಡವನಲ್ಲ. ಗ್ರಾಮೀಣ ಪ್ರದೇಶದ ಬಡ ಕುಟುಂಬದಿಂದ ಬೆಳೆದು ಬಂದ ನಾನೀಗ ಬದುಕಿನಲ್ಲಿ ಸೋತಿದ್ದೇನೆ. ಇನ್ನೂ ಬದುಕನ್ನು ಮುಂದುವರಿಸುವ ಯಾವ ಸ್ಫೂರ್ತಿಗಳೂ ನನಗೀಗ ಗೋಚರಿಸುತ್ತಿಲ್ಲ.

ಕಳೆದ ಕೆಲವು ವರ್ಷಗಳಿಂದೀಚೆಗೆ ನಾನು ಯಾರಿಗೂ ಒಳ್ಳೆಯವನಾಗಿ ಉಳಿದಿಲ್ಲ.  ನಿಜಕ್ಕೂ ನನ್ನ ಪಾಲಿಗೆ ನೀನು  ಮಾರ್ಗದರ್ಶಕಿಯಾಗಿದ್ದೆ. ನನ್ನೆಲ್ಲ ಬಯಕೆಗಳ ಸೆಳೆತವಾಗಿದ್ದೆ. ನಿನ್ನನ್ನು ನಾನು  ಅಂತರಂಗದ ಆಳಕ್ಕಿಳಿದು ಅಪಾರವಾಗಿ ಪ್ರೀತಿಸಿದ್ದೇನೆ. ನನ್ನ ಪ್ರೀತಿಯನ್ನು ಸಂಶಯಿಸಬೇಡ. ಒಂದು ವೇಳೆ ನಿನ್ನ ಸೌಂದರ್ಯಕ್ಕಾಗಿಯೇ ಪ್ರೀತಿಸುವುದಾಗಿ ದ್ದರೆ (F……) ನಿನಗಿಂತಲೂ ಮಿಗಿಲಾದ ಬಹಳಷ್ಟು ಹೆಂಗಸರಲ್ಲಿ ಯಾರಿಂದಲಾ ದರೂ ನಾನು ತೃಪ್ತಿ ಹೊಂದಬಹುದಿತ್ತು’.

‘ನಾನು ನಿನ್ನಲ್ಲಿಟ್ಟಿರುವ ಪ್ರೀತಿ ಯಾವತ್ತೂ ಗೌರವಪೂರ್ವಕವಾಗಿಯೇ ಇರುತ್ತದೆ. ನಿನ್ನನ್ನು ಪ್ರೀತಿಸುವುದಕ್ಕೆ ಶುರು ಮಾಡಿದ ಮೇಲೂ ನೀನ್ಯಾಕೆ ಮದುವೆ
ಯಾದೆ ಎಂದು ನನ್ನನ್ನು ಕೇಳಬಹುದು. ನಿನಗೆ ಆ ಹಕ್ಕಿದೆ. ನಿನ್ನ ಪ್ರೀತಿಯಲ್ಲಿ ಕೊಚ್ಚಿ ಹೋಗಿ ಹುಚ್ಚ ನಾಗಬಾರದು ಎಂದೇ ನಾನು ಮದುವೆ ಯಾದೆ. ಆದರೇನು? ಮದುವೆಯ ನಂತರ ನಾನು ತಪ್ಪು ಮಾಡಿದೆ ಎಂಬುದು ಅರಿವಾಯಿತು. ನಿನ್ನನ್ನು ಪಡೆಯದ ಹೊರತು ನಾನು ಶಾಂತನಾಗಿ ಉಳಿಯಲು ಆಗುವುದಿಲ್ಲ. ನೀನು ನನಗೆ ವಾಸ್ತವದ ದರುಶನ ಮಾಡಿಸಿದೆ. ನಾಗರಿಕತೆಯ ಹಾದಿಯಲ್ಲಿ ನಡೆಯುವುದನ್ನು ಕಲಿಸಿಕೊಟ್ಟೆ. ನನ್ನನ್ನೊಬ್ಬ ನಾಯಕನನ್ನಾಗಿ ಮಾಡಿದೆ. ನೀನು ನನ್ನ ಪಾಲಿನ ಅದೃಷ್ಟದ ಹೆಣ್ಣು. ಆದರೆ ಸತ್ಯದ ಅರಿವಾದ ಮೇಲೂ ನಾನು ಬದುಕಿರಲು ಇಷ್ಟಪಡುವುದಿಲ್ಲ. ನಿನ್ನ ಪಾಡಿಗೆ ನೀನು ಸುಖ ಜೀವನ ನಡೆಸು. ಚಿರಶಾಂತಿಗೆ ಜಾರುತ್ತೇನೆ’.

‘ನನ್ನೀ ಅಂತ್ಯಕ್ಕೆ ಎರಡು ಕಾರಣಗಳಿವೆ. ಒಂದೋ ನಾನು ಬದುಕಬೇಕು ಅಥವಾ ನಿನ್ನನ್ನು ಪ್ರೀತಿಸುವುದನ್ನು ನಿಲ್ಲಿಸಬೇಕು.  ಆದರೆ ಎರಡನೆಯದು ಅಸಾಧ್ಯ. ನನಗೆ ಎಂದೆಂದೂ ನಿನ್ನ ಪ್ರೀತಿ ಬೇಕು. ಹಾಗಾಗಿ ಉಳಿದಿರುವ ದಾರಿ ಸಾವೊಂದೇ.  ಬದುಕಿನಲ್ಲಿ ಸೋತಿದ್ದೇನೆ ಎಂಬುದು ಅರಿವಿಗೆ ಬಂದ ಮೇಲೂ ಯಾವುದೇ ಸೆಳೆತಗಳಿಲ್ಲದೆ, ಗುರಿಯಿ ಲ್ಲದೆ, ಏನೊಂದೂ ಸಾಧಿಸದೆ ಪ್ರಾಣಿಯಂತೆ ಬದುಕುವುದು ನನಗಿಷ್ಟವಿಲ್ಲ. ನಾನು ಅಪಾರವಾಗಿ ಪ್ರೀತಿಸುವ ಹೆಣ್ಣು  ನನ್ನನ್ನು ಹೊಂದಲು ಇಷ್ಟಪಡುತ್ತಿಲ್ಲ ಎಂಬುದು ತಿಳಿದ ಮೇಲೂ  ಬದುಕಿದ್ದರೆ ಏನು ಪ್ರಯೋಜನ? ನನಗೆ ಗೊತ್ತು. ನೀನೇ ಹೇಳಿದಂತೆ ಸಾವು ಎಂಬುದು ಅಷ್ಟೊಂದು ಸುಲಭವಲ್ಲ’.

‘ಬೇಬಿ, ನಿನಗೆ ನನಗಿಂತಲೂ ಈ ಪ್ರಪಂಚ ಚೆನ್ನಾಗಿ ಗೊತ್ತಿದೆ. ಯಾರೂ ಕೂಡಾ ಇನ್ನೊಬ್ಬರಿಗಾಗಿ ಸಾಯುವುದಿಲ್ಲ. ನಾನು ಸತ್ತರೆ ನನ್ನೊಂದಿಗೆ ಯಾರೂ ಸಾಯುವುದಿಲ್ಲ. ಯಾರು ನನ್ನನ್ನು ಬಲ್ಲರೋ ಅಂಥವರು ನಾನು ಸತ್ತಮೇಲೆ ಒಂದೆರಡು ದಿನ ಅಳಬಹುದು ಅಷ್ಟೇ. ಆದರೆ ನೀನು ಮಾತ್ರ ಸಂತೋಷವಾಗಿ ನೆಮ್ಮದಿಯಿಂದ ಕೊನೆ ತನಕ ಬದುಕಿರುತ್ತೀಯ.  ನನ್ನ ಆತ್ಮಕ್ಕೂ ಶಾಂತಿ ಸಿಗುತ್ತದೆ’.

‘ನೀನು ನನ್ನ ಒಬ್ಬ ಅತ್ಯುತ್ತಮ ಗೆಳತಿಯಾಗಿದ್ದಕ್ಕೆ ವಂದನೆ. ನನ್ನನ್ನೊಂದು ಶಿಲ್ಪಕೃತಿಯಾಗಿಸಿದ್ದಕ್ಕೆ, ನೀನು ನನ್ನೊಂದಿಗೆ ಪ್ರತಿಯೊಂದನ್ನೂ ಹಂಚಿಕೊಂಡಿ
ದ್ದಕ್ಕೆ, ನನಗೇನು ಬೇಕು ನನ್ನ ಭವಿಷ್ಯವೇನು…? ಎಂಬುದನ್ನೆಲ್ಲಾ ಅರಿತು ಕೊಂಡಿದ್ದಕ್ಕೆ ಅನಂತ ನಮನಗಳು. ನೀನೆಂದೂ ಕೊರಗಬೇಡ. ನನ್ನ ಸಾವಿನ ನಂತರವೂ ನೀನು ಚೆನ್ನಾಗಿರಬೇಕೆಂಬುದೇ ನನ್ನಾಸೆ. ಅದಕ್ಕೆಂದೇ ನಾನು ನನ್ನ ಮೊಬೈಲ್‌ನಲ್ಲಿ ನಿನಗೆ ಸಂಬಂಧಿಸಿದಂತೆ ಇದ್ದ ಎಲ್ಲ ಚಿತ್ರ ಮತ್ತು ಸಂದೇಶಗಳನ್ನು ಅಳಿಸಿ ಹಾಕಿದ್ದೇನೆ.   ನಿನ್ನ ಯಶಸ್ಸಿನಲ್ಲಿ ಪಾಲ್ಗೊಳ್ಳಲು ನನ್ನ ಆತ್ಮ ನಿನ್ನೊಂದಿಗೆ ಇರುತ್ತದೆ. ನನ್ನ ಕೊನೆಯ ಆಸೆ ಎಂದರೆ ನಾನು ನಿನ್ನನ್ನು ನೋಡಬೇಕು, ಚುಂಬಿಸಬೇಕು. ಆದರೆ ಅದರಿಂದ ತೃಪ್ತಿಯಾಗುವುದಿಲ್ಲ. ನನ್ನ ಸಾವಿನ ಸುದ್ದಿ ತಿಳಿದ ಕೂಡಲೇ ಸಾಧ್ಯವಾದರೆ ಬಂದು ನನ್ನನ್ನು ಆಲಂಗಿಸಿಕೊ. ಚುಂಬಿಸು. ಈ ರವಿಗೆ ಚಿರಶಾಂತಿ ಸಿಗಲಿ ಎಂದು ಆ ಶಿವನನ್ನು ಪ್ರಾರ್ಥಿಸು !!!’

ಇಡೀ ಘಟನೆ ದುರದೃಷ್ಟಕರ: ರೋಹಿಣಿ
ರೋಹಿಣಿ ಸಿಂಧೂರಿ ಅವರು, ಮಾರ್ಚ್‌ 18ರಂದು ‘ಸಂಬಂಧಿಸಿದ ಅಧಿಕಾರಿಗಳಿಗೆ’ ಎಂಬ ತಲೆಬರಹದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಸಲ್ಲಿಸಿರುವ ಲಿಖಿತ ಹೇಳಿಕೆಯಲ್ಲಿ ತಮ್ಮ ಮತ್ತು ಡಿ.ಕೆ.ರವಿ ನಡುವಿನ ಬಾಂಧವ್ಯದ ಕುರಿತಾಗಿ ವಿವರಿಸಿದ್ದಾರೆ.

‘ನಾನು, ರವಿ ಹಾಗೂ ಇತರ ಐವರು 2009ರ ತಂಡದಲ್ಲಿ ಐಎಎಸ್‌ ಪಾಸು ಮಾಡಿದವರು.  ರವಿ ಮತ್ತು ನನ್ನ  ನಡುವೆ ಸಹೋದ್ಯೋಗಿಗಳ ನಡುವೆ ಇದ್ದಿರಬಹುದಾದ ಸೌಹಾರ್ದ ಸಂಬಂಧ ಇತ್ತು’  ಎಂದು ತಿಳಿಸಿದ್ದಾರೆ.

ಐಎಎಸ್‌ ಪಾಸು ಮಾಡಿದ ನಂತರ ಎಲ್ಲೆಲ್ಲೆ ಸೇವೆ ಸಲ್ಲಿಸಿದ್ದೆ ಎಂಬ ವಿವರಗಳ ಜೊತೆಗೆ, ‘ರವಿ ಅವರ ಸಾಧನೆಗಳ ಬಗ್ಗೆ ನಾನು ಆಗಾಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದೆ . ನಮ್ಮಿಬ್ಬರ ಕುಟುಂಬಗಳ ನಡುವೆ ಉತ್ತಮ ಸ್ನೇಹವಿತ್ತು’ ಎಂದು ಹೇಳಿದ್ದಾರೆ.

‘ಇತ್ತೀಚಿನ ಕೆಲವು ವಾರಗಳ ಹಿಂದೆ ರವಿ ಅವರು ನನ್ನ ಬಗ್ಗೆಗೆ ಹೊಂದಿದ್ದ ದೃಷ್ಟಿಕೋನ ಬದಲಾಗಿತ್ತು.  ನಾನಿದನ್ನು  ಅವರ ಗಮನಕ್ಕೆ ತಂದಾಗ ಅವರು ಕ್ಷಮೆ ಯಾಚಿಸಿದ್ದರು.  ಮತ್ತೆ ನಮ್ಮ ಗೆಳೆತನ ಮುಂದುವರಿದಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಅವರ ವರ್ತನೆ ಸಂಪೂರ್ಣ ಅಸ್ಥಿರವಾಗಿತ್ತು. ಇದನ್ನು ನಾನು ನನ್ನ ಪತಿಯ ಗಮನಕ್ಕೆ ತಂದೆ. ಆದರೆ ಅಂತಿಮವಾಗಿ ನಾನು ಮತ್ತು ನನ್ನ ಪತಿ ಇಬ್ಬರೂ ಈ ಸಂಗತಿಯನ್ನು ಉಪೇಕ್ಷಿಸುವ ತೀರ್ಮಾನ ಕೈಗೊಂಡಿದ್ದೆವು’ ಎಂದಿದ್ದಾರೆ.

‘ಮಾರ್ಚ್‌ 15ರಂದು ರವಿ ನನಗೆ ಮೊಬೈಲ್‌ನಲ್ಲಿ ಸಂದೇಶಗಳನ್ನು ಕಳುಹಿಸಿದರು. ಆಗ ನಾನು ಫೋನ್‌ ಮಾಡಿ ಏನು ವಿಷಯ ಎಂದು ವಿಚಾರಿಸಿದೆ. ನಿನ್ನನ್ನು ಭೇಟಯಾಗಬೇಕು ಎಂದು ಕೇಳಿದರು. ನಾನು ಇದನ್ನು ನಿರಾಕರಿಸಿದೆ. ಇದಕ್ಕೆ ಅವರು ಗಲಿಬಿಲಿಗೊಂಡರು.  ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಿಲ್ಲ’ ಎಂದು ಹೇಳಿದ್ದಾರೆ.

‘ಸೋಮವಾರ ಮಾ.15ರಂದು ಬೆಳಿಗ್ಗೆ ಅವರು ನನಗೊಂದು ಸುದೀರ್ಘ ಸಂದೇಶ ಕಳುಹಿಸಿದ್ದರು. ನನಗದನ್ನು ಓದಲು ಆಗಲೇ ಇಲ್ಲ. ಇದನ್ನು ನನ್ನ ಪತಿಯ ಗಮನಕ್ಕೆ ತಂದೆ. ರವಿ ಅವರ ಇಂತಹ ಮನಃಸ್ಥಿತಿಯನ್ನು ನಾನೆಂದೂ ಈ ಹಿಂದೆ ಕಂಡಿರಲಿಲ್ಲ. ಆ ನಂತರ ನಾನು ಮತ್ತು ನನ್ನ ಪತಿ ರವಿ ಅವರೊಂದಿಗೆ ಚರ್ಚಿಸಲು ನಿರ್ಧರಿಸಿದೆವು. ಅಷ್ಟರಲ್ಲೇ 11 ಗಂಟೆ ವೇಳೆಗೆ ರವಿ ಫೋನ್‌ ಮಾಡಿದರು. ಆಗ ನಾನು ಫೋನನ್ನು ನನ್ನ ಪತಿಗೆ ನೀಡಿ ಎಂದಿನಂತೆ ಕೆಲಸಕ್ಕೆ ತೆರಳಿದೆ.

ರಾತ್ರಿ 8ರಿಂದ 8.30ರ ಅವಧಿಯಲ್ಲಿ ಮನೆಗೆ ಮರಳಿದೆ. ಆಗ ರವಿ ಅವರ ಸಾವಿನ ಸುದ್ದಿ ನನ್ನ ಆಪ್ತ ಸೇವಕರಿಂದ ಗೊತ್ತಾಯಿತು’ ಎಂದು ಹೇಳಿದ್ದಾರೆ.
ಮಂಗಳವಾರ ನಾನು ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ಅವರಿಗೆ ಫೋನಾಯಿಸಿದೆ. ಸಂಜೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದು ಗೊತ್ತಾಯಿತು. ನಂತರ ಮಾರ್ಚ್‌ 18ರಂದು ನಾನು ಡಿಐಜಿ ಸೋಮೇಂದು ಮುಖರ್ಜಿ ಅವರ ಜೊತೆ ಫೋನಿನಲ್ಲಿ ಮಾತನಾಡಿ ನನ್ನ ಮೊದಲ ಹೇಳಿಕೆ ದಾಖಲಿಸಿದೆ.
‘ಏನು ನಡೆದಿದೆಯೋ ಅದೆಲ್ಲವೂ ದುರದೃಷ್ಟಕರ. ಒಬ್ಬ ಒಳ್ಳೆಯ  ಸಹೋದ್ಯೋಗಿಯನ್ನು ಕಳೆದುಕೊಂಡ  ದುಃಖದಲ್ಲಿದ್ದೇನೆ. ಈ ಪ್ರಕರಣದ ಮುಕ್ತ ತನಿಖೆ ನಡೆಯಬೇಕು’ ಎಂದು ಅವರು  ಕೋರಿದ್ದಾರೆ.

Write A Comment