ಕರ್ನಾಟಕ

ರಕ್ಷಣೆಯ ಬತ್ತಳಿಕೆಗೆ ಇನ್ನೊಂದು ಆ್ಯಪ್

Pinterest LinkedIn Tumblr

hh_0

ಬೆಂಗಳೂರು ನಗರಿ ಸ್ಟಾರ್ಟ್‌ಅಪ್‌ಗಳ ಸ್ವರ್ಗ. ಹೊಸ ಆಲೋಚನೆಯೊಂದಿಗೆ ಮೈದಳೆದ, ವಿಭಿನ್ನ ಸೇವೆ ಒದಗಿಸುವ ಪುಟ್ಟ ಕಂಪೆನಿಗಳು ಇಲ್ಲಿ ಸಾಕಷ್ಟಿವೆ. ಈ ಪಟ್ಟಿಗೆ ಹೊಸ ಸೇರ್ಪಡೆ ‘ತಾತ್ಯ ಟೆಕ್‌ ಪ್ರೈವೇಟ್‌ ಲಿಮಿಟೆಡ್‌’. ಕಳೆದ ವರ್ಷ ಆರಂಭಗೊಂಡ ಈ ಕಂಪೆನಿ ಶಾಲಾ ಮಕ್ಕಳು, ಪೋಷಕರು ಹಾಗೂ ಶಿಕ್ಷಕರಿಗೆ ಅನುಕೂಲವಾಗುವಂತಹ ಆ್ಯಪ್‌ ಒಂದನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ ಹಲವು ದೇಶಗಳಿಂದ ಬೇಡಿಕೆ ಕುದುರಿದೆಯಂತೆ.

ನಮ್ಮ ದೇಶದಲ್ಲಿ ಹಲವು ಜ್ವಲಂತ ಸಮಸ್ಯೆಗಳಿವೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವೂ ಅವುಗಳಲ್ಲಿ ಒಂದು. ಇತ್ತೀಚಿನ ದಿನಗಳಲ್ಲಿ ಈ ಬಗೆಯ  ಪ್ರಕರಣಗಳು ಸಾಕಷ್ಟು ವರದಿಯಾಗುತ್ತಿವೆ. ಇಂತಹ ಘಟನೆಗಳನ್ನು ಕೇಳಿದ, ನೋಡಿದ ಪೋಷಕರು, ‘ಶಾಲೆಯಲ್ಲಿ ನಮ್ಮ ಮಗು ಎಷ್ಟು ಸುರಕ್ಷಿತ?’ ಎಂದು ಆತಂಕದಲ್ಲೇ ಪ್ರಶ್ನಿಸಿಕೊಳ್ಳುವಂತಾಗಿದೆ.

‘ಇಂದಿನ ಶಾಲೆಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಬೆಳಿಗ್ಗೆ ಶಾಲೆ ಪ್ರವೇಶಿಸಿದ ಮಗು ಶಾಲೆ ಬಿಡುವವರೆಗೆ ಪೋಷಕರ ಸಂಪರ್ಕದಿಂದ ದೂರವೇ ಇರುತ್ತದೆ. ಈಗ ಶಾಲೆಗಳಲ್ಲಿ ಮೊಬೈಲ್‌ ಬಳಕೆಗೆ ನಿಷೇಧ ಹೇರಲಾಗಿದೆ. ಪರಿಸ್ಥಿತಿ ಹೀಗಿರುವಾಗ ಮಕ್ಕಳು ಶಾಲೆಯಲ್ಲಿದ್ದಾಗ ಪೋಷಕರು ಅವರನ್ನು ಸಂರ್ಪಕಿಸಲು ಸಾಧ್ಯವಾಗುವುದಿಲ್ಲ. ಈ ಅಂಶವನ್ನು ಮನಗಂಡು ಶಾಲಾ ಮಕ್ಕಳಿಗಾಗಿಯೇ ನಾವು ಐ–ಕಾರ್ಡ್‌ ಒಂದನ್ನು ಅಭಿವೃದ್ಧಿಪಡಿಸಿದ್ದೇವೆ. ಈ ಐ–ಕಾರ್ಡ್‌ನಲ್ಲಿ ಒಂದು ಪ್ಯಾನಿಕ್‌ ಬಟನ್‌ ಇರುತ್ತದೆ. ಮಕ್ಕಳು ತಮಗೆ ತೊಂದರೆಯಾದಾಗ ಈ ಬಟನ್‌ ಒತ್ತಿದರೆ ಸಾಕು, ತಕ್ಷಣವೇ ಆ ಮಗುವಿನ ತಂದೆ/ತಾಯಿಗೆ ಕರೆ ಹೋಗುತ್ತದೆ. ಜೊತೆಗೆ ತೊಂದರೆಗೆ ಸಿಕ್ಕಿಹಾಕಿಕೊಂಡಿರುವ ಮಗು ಇರುವ ಸ್ಥಳದಿಂದ 15 ಅಡಿ ದೂರದವರೆಗೆ ಏನೇನು ನಡೆಯುತ್ತಿದೆ ಎಂಬುದನ್ನೂ ಕೇಳಬಹುದಾಗಿದೆ. ಅದೇ ರೀತಿ, ಮಗು ಯಾವ ಸ್ಥಳದಲ್ಲಿದೆ ಎಂಬುದನ್ನೂ ತಿಳಿಯಬಹುದಾಗಿದೆ. ಪ್ಯಾನಿಕ್‌ ಬಟನ್‌ ಒತ್ತಿದಾಗ ಪೋಷಕರಿಗೆ ಕರೆ ಹೋಗುವುದರಿಂದ ಅವರು ಆ ಕ್ಷಣವೇ  ನೇರವಾಗಿ ಶಿಕ್ಷಕರನ್ನು ಸಂಪರ್ಕಿಸಿ ತಮ್ಮ  ಮಗುವಿನ ಬಗ್ಗೆ ವಿಚಾರ ತಿಳಿದುಕೊಳ್ಳಬಹುದು’ ಎನ್ನುತ್ತಾರೆ ತಾತ್ಯ ಟೆಕ್‌ ಪ್ರೈವೇಟ್‌ ಲಿಮಿಟೆಡ್‌ನ ವಿಶ್ವನಾಥ್‌ ಬಾಳೂರ್‌.

ಬಹು ಉಪಯೋಗಿ ‘ಲೋಕಸ್‌’
ಈ ಆ್ಯಪ್‌ ಶಾಲಾ ಮಕ್ಕಳ ಸುರಕ್ಷತೆಯ ಜೊತೆಗೆ ಅನೇಕ ಉಪಯೋಗಗಳನ್ನು ಒದಗಿಸುತ್ತದೆ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರೊಂದಿಗೆ ಶೀಘ್ರವಾಗಿ ಸಂವಹನ ನಡೆಸಲು ಅನುಕೂಲ ಒದಗಿಸುತ್ತದೆ.
‘ಈ ಆ್ಯಪ್‌ನಿಂದ ಅನೇಕ ಉಪಯೋಗಗಳಿವೆ. ಶಿಕ್ಷಕರು ವಿದ್ಯಾರ್ಥಿಗಳ ಪೋಷಕರಿಗೆ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಸೂಚನೆ ನೀಡಬಹುದು. ಸಂದೇಶ ರವಾನಿಸಬಹುದು. ಅದೇ ರೀತಿ, ಪೋಷಕರು ತಮ್ಮ ಮಗುವಿನ ದಿನಚರಿಯನ್ನು ವೀಕ್ಷಿಸಬಹುದು. ಶಾಲಾ ಡೈರಿಯನ್ನು ಕೂಡ ನೋಡಬಹುದಾಗಿದೆ. ಹಾಗೆಯೇ, ಶಾಲೆಯಲ್ಲಿ ಏನೇನು ಚಟುವಟಿಕೆಗಳು ನಡೆಯುತ್ತಿವೆ ಎಂಬುದರ ಬಗ್ಗೆ ಪೋಷಕರು ಕ್ಷಣ ಕ್ಷಣದ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ’ ಎನ್ನುತ್ತಾರೆ ವಿಶ್ವನಾಥ್‌.

ಆ್ಯಪ್‌ನ ಆಚೆ–ಈಚೆ
‘ಲೋಕಸ್‌’ ಮಕ್ಕಳಿಗಾಗಿಯೇ ಅಭಿವೃದ್ಧಿಪಡಿಸಿರುವ ಆ್ಯಪ್‌. ಈ ಆ್ಯಪ್‌ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತದೆ. ಮಕ್ಕಳು ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಾಗ ಸೂಚನೆ ನೀಡುವ ಈ ಆ್ಯಪ್‌ ಆ ಮೂಲಕ ವಿದ್ಯಾರ್ಥಿಗಳನ್ನು ಅಪಾಯದಿಂದ ರಕ್ಷಿಸಲು ನೆರವಾಗುತ್ತದೆ. ಅಪ್ಪ–ಅಮ್ಮ ಇಬ್ಬರೂ ಕೆಲಸ ಮಾಡುತ್ತಿದ್ದರೆ ಅಂತಹವರಿಗೆ ತಮ್ಮ ಮಗುವಿನ ಕಡೆಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುವುದಿಲ್ಲ. ಆಗ ಈ ಆ್ಯಪ್‌ ಸಹಾಯಕ್ಕೆ ಬರುತ್ತದೆ. ಆನ್‌ಲೈನ್‌ ಮೂಲಕವೇ ಮಗುವಿಗೆ ಬೇಕಾದ ಪುಸ್ತಕ, ಬಟ್ಟೆ, ಶುಲ್ಕ ತುಂಬುವಂತಹ ಕೆಲಸಗಳನ್ನು ಮಾಡಬಹುದಾಗಿದೆ.
‘ಇತ್ತೀಚಿನ ದಿನಗಳಲ್ಲಿ ಎಲ್ಲ ಪೋಷಕರು ಶಾಲೆಗೆ ಹೋಗುವ ಮಗುವಿನ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ನೀಡುತ್ತಾರೆ.

ಬೆಂಗಳೂರಿನಲ್ಲಿ 200ಕ್ಕಿಂತಲೂ ಅಧಿಕ ಹೈಟೆಕ್‌ (ಹೆಚ್ಚು ಶುಲ್ಕ ಬೇಡುವ) ಸ್ಕೂಲ್‌ಗಳಿವೆ. ನಾವು ಇಂತಹ ಶಾಲೆಗಳಿಗೆ ಹೋಗಿ ನಮ್ಮ ಆ್ಯಪ್‌ನ ಅನುಕೂಲದ ಬಗ್ಗೆ ವಿವರಿಸಿದ್ದೇವೆ. ಅನೇಕ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸೇವೆ ಪಡೆಯಲು ಇಚ್ಛಿಸುವ ಶಾಲೆಗಳ ಲೋಗೋ, ಬಣ್ಣಕ್ಕೆ ಹೊಂದುವ ರೀತಿಯಲ್ಲಿಯೇ ನಾವು ಐ–ಕಾರ್ಡ್‌, ಆ್ಯಪ್‌ ಮಾಡಿಕೊಡುವ ಯೋಚನೆ ಹಾಕಿಕೊಂಡಿದ್ದೇವೆ. ಪೋಷಕರು ಈಗ ವರ್ಷಕ್ಕೆ ಏನಿಲ್ಲವೆಂದರೂ ಎರಡು ಲಕ್ಷ ರೂಪಾಯಿಯಷ್ಟು ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯಯಿಸುತ್ತಾರೆ. ಸುರಕ್ಷತೆ ದೃಷ್ಟಿಯಿಂದ ನೋಡುವುದಾದರೆ ನಮ್ಮ ಸೇವೆಗೆ ವಿಧಿಸುವ ಶುಲ್ಕ ಕಡಿಮೆ ಇದೆ. ಅಂದರೆ, ಈ ಸೇವೆ ಪಡೆದುಕೊಂಡರೆ, ತಿಂಗಳಿಗೆ ₨600 ಖರ್ಚು ಬರುತ್ತದೆ. ಈ ಮೊತ್ತ ಮಾಲ್‌ಗೆ ಹೋಗಿ ಒಂದು ಊಟ ಮಾಡುವುದಕ್ಕಿಂತಲೂ ಕಮ್ಮಿ ಎಂದು ಹೇಳಬಹುದು’ ಎಂಬುದು ರಿತೇಶ್‌ ಅವರ ಅಭಿಪ್ರಾಯ.

ಅಂದಹಾಗೆ, ಈ ಬಗೆಯ  ಆ್ಯಪ್‌ ಅಭಿವೃದ್ಧಿಗೊಂಡಿರುವುದು ಇದೇ ಮೊದಲು. ಈ ಶೈಕ್ಷಣಿಕ ವರ್ಷದಿಂದ ನಗರದ ವಿವಿಧ ಶಾಲೆಗಳಲ್ಲಿ ಇದರ ಬಳಕೆ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸುವ ರಿತೇಶ್‌ ಮತ್ತು ವಿಶ್ವನಾಥ್‌, ನಮ್ಮ ನೆರೆಹೊರೆಯ ಶಾಲೆಯಲ್ಲಿ ಕಾಣುವಂತಹ ಸಮಸ್ಯೆಗಳನ್ನೇ ಎದುರಿಸುತ್ತಿರುವ ವಿದೇಶಿ ಶಾಲೆಗಳಿಂದಲೂ ಈ ಆ್ಯಪ್‌ಗೆ ಬೇಡಿಕೆ ಬಂದಿದೆ ಎನ್ನುತ್ತಾರೆ.

Write A Comment