ಕರ್ನಾಟಕ

ಕುಡುಕ ತಂದೆಯನ್ನು ಕೊಂದಿದ್ದ ಪುತ್ರರ ಬಂಧನ

Pinterest LinkedIn Tumblr

ACCUSED-PHOTO

ಮೈಸೂರು, ಮಾ.22- ಕ್ಷುಲ್ಲಕ ಕಾರಣಕ್ಕಾಗಿ ಅಪ್ಪನನ್ನು ಕೊಂದಿದ್ದ ಇಬ್ಬರು ಮಕ್ಕಳನ್ನು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಣಸೂರು ತಾಲ್ಲೂಕು ಬಿಳಿಕೆರೆ ಹೋಬಳಿ ಸಂಜೀವಿನಿ ನಗರದ ಕೆಂಡಗಣ್ಣ (29) , ಶಿವಲಿಂಗ (28) ಬಂಧಿತ ಆರೋಪಿಗಳು. ಇವರಿಬ್ಬರೂ ಸೇರಿ ತಮ್ಮ ತಂದೆ ದೇವರಸಯ್ಯನನ್ನು ಕೊಲೆ ಮಾಡಿದ್ದರು. ವಿವರ: ಮಾರ್ಚ್ 19ರಂದು ಪಿರಿಯಾಪಟ್ಟಣ ತಾಲ್ಲೂಕು ಹಲಗನಹಳ್ಳಿ ಗ್ರಾಮದ ಕೆರೆ ಬಳಿ ಗೋಣಿಚೀಲದಲ್ಲಿ ಶವ ದೊರೆತಿತ್ತು. ಈ ಬಗ್ಗೆ ಬೆಟ್ಟದಪುರ ಠಾಣೆ ಪೊಲೀಸರಿಗೆ ಸ್ಥಳೀಯ ಇರ್ಫಾನ್ ಪಾಷ ಎಂಬುವರು ದೂರು ನೀಡಿದ್ದರು.

ವಾರಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ 50 ವರ್ಷದ ಅಪರಿಚಿತ ವ್ಯಕ್ತಿ ಸಾವು ಎಂದು ಪ್ರಕರಣ ದಾಖಲಿಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್‌ಖರೆ ಅವರು ಹುಣಸೂರು ವಿಭಾಗದ ಪೊಲೀಸ್ ಉಪಾಧೀಕ್ಷಕ ಜಯರಾಂ, ಪಿರಿಯಾಪಟ್ಟಣ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಸನ್ನಕುಮಾರ್, ಪಿಎಸ್‌ಐಗಳಾದ ಅನಿಲ್‌ಕುಮಾರ್ ಮತ್ತು ಮುದ್ದು ಮಹದೇವ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ಕೈಗೊಂಡಾಗ ಬಿಳಿಕೆರೆ ಹೋಬಳಿ ಸಂಜೀವಿನಿ ನಗರದ ವ್ಯಕ್ತಿ ಕೊಲೆಯಾಗಿರುವುದು ಗೊತ್ತಾಗಿದೆ. ನಂತರ ದೇವರಸಯ್ಯನ ಮಕ್ಕಳಾದ ಕೆಂಡಗಣ್ಣ , ಶಿವಲಿಂಗನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಯಿತು.
ತಮ್ಮ ತಂದೆ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಎಷ್ಟೇ ಹೇಳಿದರೂ ಕೇಳುತ್ತಿರಲಿಲ್ಲ. ಇದರಿಂದ ಬೇಸರಗೊಂಡು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಯಾರಿಗೂ ಗೊತ್ತಾಗಬಾರದೆಂದು ಗೋಣಿಚೀಲದಲ್ಲಿ ಹಾಕಿ ಆಟೋದಲ್ಲಿ ಸಾಗಿಸಿ ನಮ್ಮ ಗ್ರಾಮದಿಂದ 80 ಕಿ.ಮೀ ದೂರದಲ್ಲಿರುವ ಹಲಗನಹಳ್ಳಿ ಕೆರೆ ಬಳಿ ಬಿಸಾಡಿದ್ದೆವು ಎಂದು ಮಕ್ಕಳಿಬ್ಬರೂ ತಿಳಿಸಿದ್ದಾರೆ. ಬಂಧಿತರಿಂದ ಆಪೆ ಆಟೋ ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಸ್ಪಿ ಅಭಿನವ್ ಖರೆ ಪೊಲೀಸ್ ತಂಡವನ್ನು ಶ್ಲಾಘಿಸಿದ್ದಾರೆ.

Write A Comment